ಮೈಸೂರು:
ನಿಷೇಧಾಜ್ಞೆಯ ನಡುವೆಯೂ ಮೈಸೂರಿನ ಪುರಭವನದಲ್ಲಿ ಇಂದು ಮಹಿಷ ದಸರಾ ಮಹಿಷ ಮಂಡಲೋತ್ಸವದ ಹೆಸರಿನಲ್ಲಿ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಯೋಗೇಶ್ ಮಾಸ್ಟರ್ “ಮಹಿಷಾಸುರ ನನ್ನು ರಾಕ್ಷಸ ಎನ್ನುತ್ತಾರೆ ಆದರೆ ರಾಕ್ಷಸ ಎಂದರೆ ರಕ್ಷಕ, ಅಸುರ ಎಂದರೆ ಸುರರಲ್ಲದವರು. ಈ ನಿಟ್ಟಿನಲ್ಲಿ ಇತಿಹಾಸವನ್ನು ಹೀಗೆಯೇ ನಾವು ಪುನರ್ ಅವಲೋಕಿಸಬೇಕು. ‘ಅವರು’ ಹೇಳಿಕೊಟ್ಟ ಇತಿಹಾಸವನ್ನು ಕಟ್ಟಿದ ಕತೆಗಳನ್ನು ಸಾವಧಾನದಿಂದ ಸಮಚಿತ್ತದಿಂದ ಪುನರ್ ವಿಮರ್ಶಿಸಬೇಕು. ಅಂತಹ ವಿಮರ್ಶಕ ವೈಚಾರಿಕ ಶಕ್ತಿ ಪಡೆಯುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ” ಎಂದು ತಿಳಿಸಿದರು.
ಮುಖ್ಯ ಭಾಷಣ ಮಾಡಿದ ಖ್ಯಾತ ಲೇಖಕ ಶಿವಸುಂದರ್ ನಿಷೇಧಾಜ್ಞೆ ಹೇರಿರುವ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡು ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಕಟ್ಟಿಹಾಕುವ ಕೆಲಸವಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು. ಹಾಗೆಯೇ ಅಂಬೇಡ್ಕರರು “ಭಾರತದ ಇತಿಹಾಸವನ್ನು ಬೌದ್ಧ ಧರ್ಮಕ್ಕು ಬ್ರಾಹ್ಮಣ ಧರ್ಮಕ್ಕು ನಡೆದಿರುವ ಕಾಳಗ” ಎಂದಿದ್ದಾರೆ. ಈ ನಿಟ್ಟಿನಲ್ಲಿ ಇಂದು ನಡೆದಿರುವ ಕಾರ್ಯಕ್ರಮ ಅಂತಹ “ಯುದ್ಧದ ಮುಂದುವರಿದ ಭಾಗ” ಎಂದು ಶಿವಸುಂದರ್ ತಿಳಿಸಿದರು.
ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಹಿಷ ದಸರಾ ಸಮಿತಿಯ ಅಧ್ಯಕ್ಷ ಮಾಜಿ ಮೇಯರ್ ಪುರುಷೋತ್ತಮ ಪ್ರಸ್ತಾವಿಕ ನುಡಿಗಳನ್ನು ನುಡಿದರೆ, ಲೇಖಕ ಕೃಷ್ಣಮೂರ್ತಿ ಚಮರಂ ನಿರೂಪಿಸಿದರು. ಅಂದಹಾಗೆ ವರ್ಷದಿಂದ ವರ್ಷಕ್ಕೆ ಭಾವನಾತ್ಮಕ ರೂಪ ಪಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಮಹಿಷನ ಅಭಿಮಾನಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ಜಿಲ್ಲಾಡಳಿತದ ಅನುಮತಿ ಮೇರೆಗೆ ಚಾಮುಂಡಿ ಬೆಟ್ಟಕ್ಕೆ ತೆರಳಿದ ಸಮಿತಿಯ ಮುಖಂಡರುಗಳು ಅಲ್ಲಿ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ ಮೂಲಕ ತಮ್ಮ ಗೌರವ ಸಲ್ಲಿಸಿದರು.
ಇತಿಹಾಸವನ್ನು ತಮಗೆ ಬೇಕಾದ ಅನುಕೂಲದ ರೀತಿ ತಿರುಚಿದಂತಹ ವೈದಿಕರಿಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ಈ ಕಾರ್ಯಕ್ರಮವಾಗಿದೆ…. “ಸುಳ್ಳಿಗೆ ಜಯವಿಲ್ಲ! ಸತ್ಯಕ್ಕೆ ಸಾವಿಲ್ಲ!”