ಬೀದರ
ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಕಾನೂನು ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಬಸವಪರ ಸಂಘಟನೆಗಳು ನಗರದಲ್ಲಿಂದು ಪ್ರತಿಭಟನಾ ಮೆರವಣಿಗೆ ನಡೆಸಿದವು.
ಮೆರವಣಿಗೆಯಲ್ಲಿ ಧಿಕ್ಕಾರ ಧಿಕ್ಕಾರ ಯತ್ನಾಳಗೆ ಧಿಕ್ಕಾರ, ಲಿಂಗಾಯತ ವಿರೋಧಿ ಯತ್ನಾಳಗೆ ಧಿಕ್ಕಾರ, ಮನುವಾದಿ ಯತ್ನಾಳಗೆ ಧಿಕ್ಕಾರ, ಬಸವವಿರೋಧಿ ಯತ್ನಾಳಗೆ ಧಿಕ್ಕಾರ, ಧರ್ಮದ್ರೋಹಿ ಯತ್ನಾಳಗೆ ಧಿಕ್ಕಾರ, ಯತ್ನಾಳರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂಬ ಘೋಷಣೆಗಳನ್ನು ಹಾಕಲಾಯಿತು.
ಕರ್ನಾಟಕ ಸರ್ಕಾರ, ವಿಧಾನ ಸಭೆಯ ಸಭಾಪತಿ ಯು.ಟಿ. ಖಾದರ್ ಅವರಿಗೆ ಬರೆದ ಮನವಿ ಪತ್ರವನ್ನು ಪ್ರತಿಭಟನಾಕಾರರು, ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಕಾರ್ಯಾಲಯದವರೆಗೆ ಮೆರವಣಿಗೆ ಸಾಗಿ, ಮನವಿ ಅರ್ಪಿಸಲಾಯಿತು. ಸಹಾಯಕ ಆಯುಕ್ತ ಶಕೀಲ್ ಅವರು ಮನವಿಪತ್ರ ಸ್ವೀಕರಿಸಿದರು.

ಲಿಂಗಾಯತ ಸಮನ್ವಯ ಸಮಿತಿ ಅಧ್ಯಕ್ಷ, ಶ್ರೀಕಾಂತಸ್ವಾಮಿ, ಪೂಜ್ಯ ಚನ್ನಬಸವಾನಂದ ಸ್ವಾಮೀಜಿ, ಪೂಜ್ಯ ಪ್ರಭುದೇವ ಸ್ವಾಮೀಜಿ, ಪೂಜ್ಯ ಸತ್ಯಾದೇವಿ ಮಾತಾಜಿ ಈ ಸಂದರ್ಭದಲ್ಲಿ ಮಾತನಾಡಿದರು.
ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಇತ್ತೀಚೆಗೆ ತಮ್ಮ ಪಕ್ಷದ ವತಿಯಿಂದ ಬೀದರ್‌ನಲ್ಲಿ ವಕ್ಫ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಲಿಂಗೈಕ್ಯದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿ ಬಸವಣ್ಣನವರಿಗೆ ಅವಮಾನವೆಸಿಗಿದ್ದಾರೆ.
ವಿಶ್ವಗುರು ಬಸವಣ್ಣನವರು ಹೊಳೆಗೆ ಹಾರಿ ಪ್ರಾಣಬಿಟ್ಟರು ಎಂಬ ಆಧಾರರಹಿತ ಸುಳ್ಳನ್ನು ತಮ್ಮ ಭಾಷಣದಲ್ಲಿ ಬಳಸಿ, ಬಸವಣ್ಣನವರು ಓರ್ವ ಹೇಡಿಯಾಗಿದ್ದರು ಎನ್ನುವ ಅರ್ಥದಲ್ಲಿ ಮಾತನಾಡಿ ಗುರು ಬಸವಣ್ಣನವರಿಗೆ ಅವಮಾನ ಮಾಡಿದ್ದಾರೆ.

ಲಿಂಗಾಯತಧರ್ಮ ಸಂಸ್ಥಾಪಕರಾದ ವಿಶ್ವಗುರು ಬಸವಣ್ಣನವರನ್ನು ಅವಮಾನ ಮಾಡಿರುವ ಬಸನಗೌಡ ಪಾಟೀಲ ಯತ್ನಾಳರಿಗೆ ಇನ್ನು ಮುಂದೆ ಪಕ್ಷ ಹಾಗೂ ಸರಕಾರದ ವತಿಯಿಂದ ಲಿಂಗಾಯತ ಮೀಸಲಾತಿ ಕೋಟಾದಲ್ಲಿ ಯಾವುದೇ ಸೌಲಭ್ಯಗಳನ್ನು ನೀಡಬಾರದು ಹಾಗೂ ಅವರ ವಿರುದ್ಧ ಕಾನೂನು ಶಿಸ್ತು ಕ್ರಮ ಕೈಗೊಂಡು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಅಕ್ಕನಾಗಲಾಂಬಿಕಾ ಮಹಿಳಾಗಣ, ಬಸವ ಕೇಂದ್ರ, ಬಸವ ಪ್ರತಿಷ್ಠಾನ, ಬಸವ ಬಳಗ ಮತ್ತೀತರ ಬಸವಪರ ಸಂಘಟನೆಗಳು ಒತ್ತಾಯಿಸಿವೆ.
ಹೋರಾಟದ ನೇತೃತ್ವವನ್ನು ಓಂಪ್ರಕಾಶ ರೊಟ್ಟೆ, ಮಹಾರುದ್ರಪ್ಪ ಡಾಕಳಗಿ, ಶರಣಪ್ಪ ಮಿಠಾರೆ, ಶಿವರಾಜ ಪಾಟೀಲ ಅತಿವಾಳ, ಚನ್ನಬಸವ ಹಂಗರಗಿ, ಅಕ್ಕಮಹಾದೇವಿ ಮತ್ತೀತರರು ವಹಿಸಿದ್ದರು. ನೂರಾರು ಜನ ಪ್ರತಿಭಟನೆಯಲ್ಲಿದ್ದರು.

ಈ ಹೋರಾಟದ ಅವಶ್ಯಕತೆ ಇತ್ತು. ಗುರು ಬಸವಣ್ಣನವರು ಹೇಡಿ ಎಂದು ಹೇಳಿಕೆ ನೀಡಿದ ಪ್ರಖರ ಜ್ಞಾನಿ ಯತ್ನಾಳ್ ವಿರುಧ್ದ ಹೋರಾಟ ನಡೆಸಲೇಬೇಕು, ಇಲ್ಲದಿದ್ದರೆ ಇನ್ನೂ ಅದೇನೇನೋ ಮಾತನಾಡುತ್ತಾನೋ ಹಾಗಾಗಿ ಹೋರಾಟದ ಮೂಲಕ ಧ್ವನಿ ಎತ್ತಿದ ಎಲ್ಲ ಶರಣ ಬಂಧುಗಳಿಗೆ ಶರಣು ಶರಣಾರ್ಥಿಗಳು
ಯತ್ನಾಳರ ವಿರುದ್ಧ ಶಿಸ್ತುಕ್ರಮವನ್ನ ಬಿಜೆಪಿ ತೆಗೆದುಕೊಳ್ಳದಿದ್ದರೆ ಮತ್ತು ಯತ್ನಾಳರು ಕ್ಷಮೆ ಕೇಳದಿದ್ದರೆ ಲಿಂಗಾಯತರು ಯಾವುದೇ ಕಾರಣಕ್ಕೂ ಬಿಜೆಪಿಗೆ ಒಂದು ಮತವನ್ನು ಹಾಕದಂತೆ ತಡೆಯಬೇಕಿದೆ