ಮಂತ್ರಾಲಯ
ಬಿ.ಎಸ್.ಯಡಿಯೂರಪ್ಪ ಮತ್ತವರ ಕುಟುಂಬ ರಾಘವೇಂದ್ರ ಸ್ವಾಮಿಗಳ ಅಪ್ಪಟ ಭಕ್ತರು, ಇದು ಎಲ್ಲರಿಗೂ ತಿಳಿದಿರುವ ವಿಷಯ.
ಅವರ ಹಿರಿಯ ಮಗ ಬಿ.ವೈ.ರಾಘವೇಂದ್ರ ಮಂಗಳವಾರ ಮಂತ್ರಾಲಯಕ್ಕೆ ಭೇಟಿ ನೀಡಿ ಮಠದಲ್ಲಿ ಗುರು ರಾಯರ ದರ್ಶನ ಪಡೆದರು. ಅಲ್ಲಿ ನಡೆಯುತ್ತಿರುವ 353ನೇ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ, ನಂತರ ಕನ್ನಡಪ್ರಭದೊಡನೆ ಮಾತನಾಡಿ ತಮ್ಮ ಕುಟುಂಬದ ರಾಯರ ಭಕ್ತಿಯನ್ನು ವಿವರಿಸಿದರು.
ಕನ್ನಡ ಪ್ರಭದ ಈ ವರದಿ ಈಗ ವೈರಲ್ ಆಗಿದೆ.
“ನಮ್ಮ ಕುಟುಂಬಕ್ಕೆ ಮೊದಲಿನಿಂದಲೂ ಗುರು ರಾಘವೇಂದ್ರ ರಾಯರ ಮೇಲೆ ಅಪಾರ ಭಕ್ತಿ. ತಂದೆ ಬಿ.ಎಸ್.ಯಡಿಯೂರಪ್ಪ ರಾಯರನ್ನು ನೆನೆಯದೆ ಯಾವುದೇ ಮಹತ್ಕಾರ್ಯ ಆರಂಭಿಸುವುದಿಲ್ಲ.
ನನ್ನ ತಂದೆಗೆ ಮೂವರು ಹೆಣ್ಣುಮಕ್ಕಳು. ಬಳಿಕ ತಂದೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳಲ್ಲಿ ಗಂಡು ಮಗು ಕರುಣಿಸುವಂತೆ ಹರಕೆ ಮಾಡಿಕೊಂಡಿದ್ದರಂತೆ. ಮುಂದೆ ನಾನು ಜನಿಸಿದ್ದಕ್ಕೆ ರಾಯರ ಸ್ಮರಣೆಗಾಗಿ ನನ್ನ ಹೆಸರನ್ನು ರಾಘವೇಂದ್ರ ಎಂದೇ ನಾಮಕರಣ ಮಾಡಿದರು.
ನನ್ನ ತಮ್ಮ ಜನಿಸಿದ ಬಳಿಕ ರಾಯರ ಗುರುಗಳಾದ ವಿಜಯೇಂದ್ರರ ಹೆಸರನ್ನು ಇಟ್ಟರು. ನಾನು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಯವಾದಾಗ ಮಂತ್ರಾಲಯಕ್ಕೆ ತೆರಳಿ ರಾಯರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದೆ.
ಗುರು ರಾಘವೇಂದ್ರರ ಕೃಪಾಶೀರ್ವಾದದಿಂದ ನಮ್ಮ ಕುಟುಂಬಕ್ಕೆ ಸಕಲವೂ ಒಳ್ಳೆಯದಾಗಿದೆ. ಅನೇಕ ಕಷ್ಟಗಳು ಮಂಜಿನಂತೆ ಕರಗಿಹೋಗಿವೆ. ಈಗಲೂ ನಮ್ಮ ಕುಟುಂಬದವರು ಯಾವುದೇ ಶುಭಕಾರ್ಯ ಕೈಗೊಳ್ಳುವ ಮುನ್ನ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಮಂತ್ರಾಲಯಕ್ಕೆ ತೆರಳಿ ರಾಯರಿಗೆ ಪೂಜೆ ಸಲ್ಲಿಸುವುದು ಪದ್ಧತಿಯಾಗಿಬಿಟ್ಟಿದೆ.
ತಂದೆ ಯಡಿಯೂರಪ್ಪ, ನಾನು, ಸಹೋದರ ವಿಜಯೇಂದ್ರ ಎಲ್ಲರೂ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೂ ಗುರುವಾರವನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಅದು ರಾಯರ ವಾರವಾದ್ದರಿಂದ ಶುಭವಾಗುತ್ತದೆಂಬ ನಂಬಿಕೆ ನಮ್ಮೆಲ್ಲರದು.”