21 ದಿನಗಳ ಶಿವಯೋಗ ಸಾಧನೆ, ಮೌನ ಅನುಷ್ಠಾನ ಪೂರೈಸಿದ ಪ್ರಭುದೇವ ಶ್ರೀ

ಬೀದರ

ಶುಚಿಗೊಂಡ ಮನದಲ್ಲಿ ಪರಮಾತ್ಮನ ದರ್ಶನ ಸಾಧ್ಯವಿದೆ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಲಿಂಗಾಯತ ಮಹಾ ಮಠದ ವತಿಯಿಂದ ನಗರದ ಬಸವಗಿರಿಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಭುದೇವ ಸ್ವಾಮೀಜಿ ಅವರ 21 ದಿನಗಳ ಶಿವಯೋಗ ಸಾಧನೆ ಹಾಗೂ ಮೌನ ಅನುಷ್ಠಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪರಮಾತ್ಮನ ಒಲುಮೆಯಾಗಲು ಮನಸ್ಸೆಂಬ ಮನೆಯನ್ನು ಖಾಲಿ ಮಾಡಬೇಕು, ಎಂದು ತಿಳಿಸಿದರು.

ತನ್ನೊಳಗಿನ ಕಸಗುಡಿಸಿಕೊಳ್ಳಲು ಅನುಷ್ಠಾನ ಸಹಾಯಕ. ಅಂತರಂಗದ ವಿಕಾಸ ಮತ್ತು ಸಮಾಜ ಸೇವೆಗೆ ಹೆಚ್ಚು ಸದೃಢವಾಗಲು ಅನುಷ್ಠಾನ ಕೈಗೊಳ್ಳಲಾಗಿದೆ. ಗುರು ಕೃಪೆಯಿಂದ ಅನುಷ್ಠಾನ ಯಶಸ್ವಿಯಾಗಿದೆ ಎಂದು ಹೇಳಿದರು.

ವಚನಗಳಲ್ಲಿ ಎಲ್ಲದಕ್ಕೂ ಮಾರ್ಗದರ್ಶನ ಇದೆ. ಸಂಸಾರಿಗೆ ಆದರ್ಶ ಸಂಸಾರ, ಸಾಧಕರಿಗೆ ಸಾಧನೆ ಹಾಗೂ ಯೋಗಿಗಳಿಗೆ ಯೋಗದ ಮಾರ್ಗದರ್ಶನ ಇದೆ. ದೇಹಭಾವ ತೊರೆದು ಜೀವ ಭಾವ ತಳೆದಾಗ ಮಾತ್ರ ಭಕ್ತಿ ಅಳವಡುತ್ತದೆ. ಭಕ್ತಿ ಇಲ್ಲದೆ ಸತ್ಯ ಗೋಚರಿಸುವುದಿಲ್ಲ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ಪ್ರಭುದೇವ ಸ್ವಾಮೀಜಿ ಅವರಲ್ಲಿ ಅದ್ಭುತ ಪ್ರತಿಭೆ ಇದೆ. ಕಿರಿಯ ವಯಸ್ಸಿನಲ್ಲೇ ಈ ಭಾಗದ ಅತ್ಯುತ್ತಮ ಪ್ರವಚನಕಾರರಲ್ಲಿ ಒಬ್ಬರಾಗಿ ಹೊರ ಹೊಮ್ಮಿದ್ದಾರೆ. ಸಮಾಜದಲ್ಲಿನ ಮೌಢ್ಯ, ಮೂಢನಂಬಿಕೆ, ಕಂದಾಚಾರಗಳನ್ನು ಕಳೆಯುತ್ತಿದ್ದಾರೆ ಎಂದು ತಿಳಿಸಿದರು.

ಅಕ್ಕ ಅನ್ನಪೂರ್ಣತಾಯಿ ಅವರಂತೆ ಸೇವೆಗೈಯುವ ಮೂಲಕ ಎತ್ತರಕ್ಕೆ ಏರಿದ್ದಾರೆ. ಜನಹಿತ ಮತ್ತು ಲೋಕ ಕಲ್ಯಾಣಕ್ಕೆ ಶ್ರೀಗಳ ಅನುಷ್ಠಾನ ಉಪಯೋಗವಾಗಲಿದೆ. ಬಹಿರಂಗಕ್ಕಿಂತ ಅಂತರಂಗದ ಶ್ರೀಮಂತಿಕಿಗೆ ಅವರು ಗಮನ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಅವರು ಬಸವತತ್ವದ ಧೃವತಾರೆಯಾಗಿ ಬೆಳಗಿದವರು. ಅವರ ಕರಕಮಲ ಸಂಜಾತರಾದ ಪ್ರಭುದೇವರು ಅದೇ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದರು.

ಈಗಿನ ದಿನಮಾನಗಳಲ್ಲಿ ಲಿಂಗಾಂಗ ಸಾಮರಸ್ಯದತ್ತ ಮುಖ ಮಾಡುವವರು ಅಪರೂಪ. ಅದೇ ಆಧ್ಯಾತ್ಮದ ಕೊನೆ. ಅದರಿಂದ ಜಗತ್ತು ಬೆಳಗುವ ಶಕ್ತಿ ಲಭಿಸುತ್ತದೆ ಎಂದು ಹೇಳಿದರು.

ಬರುವ ಜಗಣತಿಯಲ್ಲಿ ಲಿಂಗಾಯತರು ಉಪ ಜಾತಿಗಳನ್ನು ಬರೆಸದೆ ಲಿಂಗಾಯತ ಎಂದೇ ಬರೆಸಬೇಕು. ಲಿಂಗಾಯತ ಯಾವತ್ತೂ ಸ್ವತಂತ್ರ ಧರ್ಮ. ನಾವು ನಡೆಸುತ್ತಿರುವ ಹೋರಾಟ ಯಾರ ವಿರುದ್ಧವೂ ಅಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಮಾತ್ರ ಎಂದು ತಿಳಿಸಿದರು.

ಸಾಹಿತಿ ರಮೇಶ ಮಠಪತಿ ಮಾತನಾಡಿ, ಬಸವ ಧರ್ಮ ನಡೆ-ನುಡಿ ಸಿದ್ಧಾಂಥದ ಧರ್ಮ. ನಡೆದು ತೋರಿಸಿದವರಿಗೆ ನುಡಿಯುವ ಹಕ್ಕು ಇರುತ್ತದೆ. ತನ್ನ ವಿಕಾಸದ ಮೂಲಕ ಸಮಾಜದ ವಿಕಾಸಕ್ಕಾಗಿ ನಾಲ್ಕನೇ ಸಲ ಅನುಷ್ಠಾನ ಕೈಗೊಳ್ಳುವ ಮೂಲಕ ಪ್ರಭುದೇವ ಸ್ವಾಮೀಜಿ ಮೇಲ್ಪಂಕ್ತಿ ಹಾಕಿದ್ದಾರೆ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಬಾಬುರಾವ್ ರಾಜೋಳೆ ಗೋರಟಾ, ಯೋಗಗುರು ಲೋಕೇಶ, ಪರುಷಕಟ್ಟೆ ಚನ್ನಬಸವಣ್ಣ ಇದ್ದರು.

ಗುರುಶ್ರೀ, ಸಂತೋಷಿ, ಏಕನಾಥ ಸಂಗೀತ ನಡೆಸಿಕೊಟ್ಟರು. ಗುರುದಾಸ್ ತಬಲಾ ಸಾಥ್ ನೀಡಿದರು. ಕಮಲಾಬಾಯಿ ಕಾರ್ತಿಕ ಸ್ವಾಮಿ ಭಕ್ತಿ ದಾಸೋಹಗೈದರು.

ಇದಕ್ಕೂ ಮುನ್ನ ಅನುಷ್ಠಾನದ ಗುಡಿಸಲಿನಲ್ಲಿ ಭಕ್ತಾದಿಗಳಿಂದ ಅಕ್ಕನ ಯೋಗಾಂಗ ತ್ರಿವಿಧಿಗಳ ಸಾಮೂಹಿಕ ಪಾರಾಯಣ ನಡೆಯಿತು. ಮಲ್ಲಿಕಾರ್ಜುನ ಔರಾದೆ ಷಟ್‍ಸ್ಥಲ ಧ್ವಜಾರೋಹಣಗೈದರು. ಬಳಿಕ ಪ್ರಭುದೇವ ಸ್ವಾಮೀಜಿ ಅವರು ಅಕ್ಕನ ಐಕ್ಯ ಮಂಟಪದಲ್ಲಿ ಗುರು ದರ್ಶನ ಪಡೆದು, ಗುರುಬಸವ ಮಂತ್ರ ಹಾಗೂ ವಚನ ಪಠಣಗೈದು ಮೌನ ಅನುಷ್ಠಾನ ಕೊನೆಗೊಳಿಸಿದರು. ಆಗ ನೆರೆದ ಶರಣ-ಶರಣೆಯರು ಬಸವ ಜಯಘೋಷ ಮೊಳಗಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *