(ಕರೋನ ಸಮಯದಲ್ಲಿ ಶುರುವಾಗಿ, ಪ್ರತಿ ಗುರುವಾರ ಎಡಬಿಡದೆ, ಆನ್ಲೈನ್ ವಚನೋತ್ಸವ ನಡೆದುಕೊಂಡು ಬಂದಿದೆ. ಯಾವುದೇ ಪ್ರಚಾರ, ಹಣ ಸಂಗ್ರಹಣೆಯಿಲ್ಲದೆ, ಶರಣರ ಚಿಂತನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದೆ. ಧಾರವಾಡದ ವಚನೋತ್ಸವ ಬಳಗ ನಡೆದು ಬಂದ ದಾರಿಯನ್ನು ಶಿವಾನಂದ ನಾಗೂರ ಪರಿಚಯ ಮಾಡಿಕೊಡುತ್ತಿದ್ದಾರೆ.)
ನನ್ನ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ೨೦೧೬ ರಲ್ಲಿ ಸ್ವಂತ ಮನೆ ಬಿಟ್ಟು ಧಾರವಾಡದ ಹೊಸಯಲ್ಲಾಪುರದ ಹಿರೇಮಠ ಓಣಿಯ ಸಾಬಳೆ ಒಠಾರದಲ್ಲಿ ಬಾಡಿಗೆ ಮನೆಯಲ್ಲಿ ಇರುವಾಗ, ಅಲ್ಲಿರುವ ರಾಮನಗರ ಬಸವ ಕೇಂದ್ರದ ಒಡನಾಟ ಬೆಳೆಯಿತು. ಅಲ್ಲಿ ಪ್ರತಿ ಗುರುವಾರ ಒಬ್ಬೊಬ್ಬರ ಮನೆಯಲ್ಲಿ ವಚನೋತ್ಸವ ನಡೆಯುತ್ತಿತ್ತು. ಅದರಲ್ಲಿ ವಚನ ಪ್ರಾರ್ಥನೆ, ಅನುಭಾವ, ಚರ್ಚೆಗಳು ನಡೆಯುತ್ತಿದ್ದವು. ಹೀಗೆ ಪ್ರತಿ ಗುರುವಾರ ನಾನು ವಚನೋತ್ಸವದಲ್ಲಿ ಪಾಲ್ಗೊಂಡು ಬಸವಾದಿ ಶರಣರ ವಿಚಾರಗಳನ್ನು ತಿಳಿದುಕೊಳ್ಳಲು ಆರಂಭಿಸಿದೆನು.
ಹೀಗೆ ಮೂರು ವರ್ಷ ಕಳೆಯುವ ಅಷ್ಟರಲ್ಲಿ ಇಡೀ ಪ್ರಪಂಚಕ್ಕೆ ಕರೋನಾ ಎಂಬ ಕಂಟಕ ವಕ್ಕರಿಸಿತು. ಆಗ ಯಾರೂ ಯಾರನ್ನೂ ಸಂಪರ್ಕಿಸುವ, ಯಾರ ಮನೆಗಳಿಗೂ ಹೋಗದ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಪ್ರತಿ ಗುರುವಾರ ನಡೆಯುವ ವಚನೋತ್ಸವ ನಿಂತು ಹೋಯಿತು. ಆಗ ರಾಮನಗರ ಬಸವ ಕೇಂದ್ರದ ಸದಸ್ಯರು ಮೊಬೈಲಲ್ಲಿ ಕಾನ್ಫರೆನ್ಸ್ ಕಾಲ್ ಮೂಲಕ ಪ್ರತಿ ಗುರುವಾರ ವಚನೋತ್ಸವ ಮಾಡುವ ಪ್ರಯತ್ನ ಮಾಡಿದರು. ಆದರೆ ಇದು ತೀರಾ ಅನಾನುಕೂಲ ಆಯಿತು.
ನಾನೊಬ್ಬ ಹೈಸ್ಕೂಲ್ ಶಿಕ್ಷಕನಾಗಿ ಕರೋನ ಕಾಲದಲ್ಲಿ ಇಲಾಖೆಯ ಮಾರ್ಗದರ್ಶನದೊಂದಿಗೆ ಗೂಗಲ್ ಮೀಟ್ ಆನ್ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದೆನು. ಆಗ ನನಗೆ ಹೊಳೆದದ್ದು, ಪ್ರತಿ ಗುರುವಾರ ಗೂಗಲ್ ಮೀಟ್ ಲ್ಲಿ ಆನ್ಲೈನ್ ಮೂಲಕ ವಚನೋತ್ಸವ ಆರಂಭಿಸುವುದು ಸೂಕ್ತ ಎನಿಸಿತು. ಆಗ ಬಸವ ಕೇಂದ್ರದ ಇನ್ನುಳಿದ ಸದಸ್ಯರೊಂದಿಗೆ ಈ ವಿಷಯವನ್ನು ಚರ್ಚಿಸಿ ಆರಂಭ ಮಾಡಲಾಯಿತು.
ಬಸವ ಕೇಂದ್ರದ ಸದಸ್ಯರು ಬಹಳಷ್ಟು ಜನ ಹಿರಿಯರಿದ್ದು ಮೊಬೈಲ್ ಫೋನ್ ಗಳನ್ನು ಉಪಯೋಗಿಸುವುದು ತಿಳಿದಿರಲಿಲ್ಲ. ನಾಲ್ಕಾರು ವಾರಗಳ ವರೆಗೆ ಅವರಿಗೆ ಮೊಬೈಲ್ ಬಳಸುವುದನ್ನು ತಿಳಿಸಿಕೊಡಲಾಯಿತು. ಆದಾಗ್ಯೂ ಹಲವರಿಗೆ ಮೊಬೈಲ್ ಮೂಲಕ ವಚನೋತ್ಸವದಲ್ಲಿ ಪಾಲ್ಗೊಳ್ಳುವುದು ಅಷ್ಟಾಗಿ ಅನುಕೂಲವಾಗಲಿಲ್ಲ. ಹೀಗಾಗಿ ಬಹಳಷ್ಟು ಜನ ಪಾಲ್ಗೊಳ್ಳುವುದನ್ನು ನಿಲ್ಲಿಸಿದರು. ಮೊದಮೊದಲು, ಹೊಸಯಲ್ಲಾಪುರ ರಾಮನಗರಕ್ಕೆ ಮಾತ್ರ ಸೀಮಿತಗೊಂಡು ಆನ್ಲೈನ್ ವಚನೋತ್ಸವವನ್ನು ಆರಂಭಿಸಲಾಗಿತ್ತು.
ನಂತರದಲ್ಲಿ ವಚನೋತ್ಸವದ ಲಿಂಕನ್ನು ಬೇರೆ ಬೇರೆ ವಾಟ್ಸಪ್ ಗ್ರೂಪ್ ಗಳಿಗೆ ಕಳಿಸಲಾಯಿತು. ಆಗ ಧಾರವಾಡ ಹಾಗೂ ಇನ್ನಿತರ ಊರುಗಳಿಂದ ಬಸವ ಅಭಿಮಾನಿಗಳು ಪಾಲ್ಗೊಳ್ಳಲು ಆರಂಭಿಸಿದರು. ಕ್ರಮೇಣ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಾಗಿ ಪ್ರತಿ ಗುರುವಾರವು ವಚನೋತ್ಸವವನ್ನು ಮುಂದುವರಿಸುವುದು ನನಗೆ ಅನಿವಾರ್ಯವೆನಿಸತೊಡಗಿತು. ಇದರಲ್ಲಿ ಮಕ್ಕಳು,ವೃದ್ಧರು, ಹಿರಿಯರು ಹಲವಾರು ಜನರು ಪಾಲ್ಗೊಳ್ಳತೊಡಗಿದರು. ಅದೇನು ಗೊತ್ತಿಲ್ಲ ಬಸವಾದಿ ಶರಣರ ಅನುಗ್ರಹದಿಂದ ಪ್ರತಿ ಗುರುವಾರ ಆನ್ಲೈನ್ ಮೂಲಕ ವಚನೋತ್ಸವವನ್ನು ಮಾಡತೊಡಗಿದೆನು.
ಕರೋನಾ ಕರಾಳತೆ ಮುಗಿದ ನಂತರವೂ ಪ್ರತಿ ಗುರುವಾರ ವಚನೋತ್ಸವವನ್ನು ಮುಂದುವರಿಸುವಂತೆ ಸಾಕಷ್ಟು ಶರಣ ಬಂಧುಗಳು ವಿನಂತಿಸತೊಡಗಿದರು. ಹಾಗಾಗಿ ನನ್ನ ವೃತ್ತಿ, ಇನ್ನಿತರ ಕೌಟುಂಬಿಕ ಕೆಲಸ ಕಾರ್ಯದ ನಡುವೆಯೂ ಪ್ರತಿ ಗುರುವಾರ ಆನ್ಲೈನ್ ವಚನೋತ್ಸವವನ್ನು ನಡೆಸುವುದು ರೂಢಿಯಾಯಿತು. ಆರಂಭದಲ್ಲಿ ಒಂದು ನಿಗದಿತ ವಚನವನ್ನು ಮಾತ್ರ ನಿರ್ವಚನ ಮಾಡಲು ಹೇಳಲಾಗುತ್ತಿತ್ತು.
ಬರುಬರುತ್ತಾ ಒಂದು ನಿರ್ದಿಷ್ಟ ವಿಷಯವನ್ನು ನಿಗದಿ ಮಾಡಿ ಅದಕ್ಕೆ ಪೂರಕವಾಗಿರುವ ಶರಣರ ವಚನಗಳು,ಸಂದೇಶಗಳು ಒಳಗೊಂಡ ಅನುಭವವನ್ನು ಮಾಡಲು ಆರಂಭಿಸಲಾಯಿತು. ಕಾಲಕ್ರಮೇಣ ವಚನೋತ್ಸವದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಾಗಿ ಬೇರೆ ಬೇರೆ ಊರುಗಳಿಂದ ಕರ್ನಾಟಕ ರಾಜ್ಯ ಹೊರತುಪಡಿಸಿ ಬೇರೆ ರಾಜ್ಯ ದೇಶಗಳಿಂದಲೂ ಪಾಲ್ಗೊಳ್ಳತೊಡಗಿದರು. ಪ್ರತಿ ಗುರುವಾರ ನಾನು ಆಯೋಜಿಸುತ್ತಿರುವ ಆನ್ಲೈನ್ ವಚನೋತ್ಸವವು ಯಾವುದೇ ನಿರ್ದಿಷ್ಟ ಬಸವ ಕೇಂದ್ರ, ಸಮಿತಿ ಸಂಘ ಸಂಸ್ಥೆಗಳಿಗೆ ಸೀಮಿತ ಗೊಳ್ಳದೆ ವಿಶ್ವವ್ಯಾಪಿಯಾಗಿ ಬೆಳೆಯಿತು. ಹಾಗಾಗಿ ವಚನೋತ್ಸವ ಬಳಗ ಧಾರವಾಡ ಎಂದು ಹೆಸರು ಇಡಲಾಯಿತು.
ಇದುವರೆಗೆ ನಿರಂತರ 273 ಗುರುವಾರಗಳನ್ನು ಪೂರೈಸಲಾಗಿದೆ. ಇದರಲ್ಲಿ ಯಾವುದೇ ಭೇದ ಭಾವ ತೋರದೆ,ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಕೂಡ ಸಮಾನ ಅವಕಾಶಗಳನ್ನು ನೀಡಲಾಗುತ್ತಿದೆ. ವಚನೋತ್ಸವ ಬಳಗ ಧಾರವಾಡ ಇದನ್ನು ನೋಂದಾಯಿಸುವ ಗೋಜಿಗೆ ಇದುವರೆಗೂ ಹೋಗಿಲ್ಲ, ಹಾಗೂ ಇದುವರೆಗೆ ಯಾರಿಂದಲೂ ಯಾವುದೇ ರೀತಿಯ ಮಾಧ್ಯಮ ಪ್ರಕಟಣೆ,ಪ್ರಚಾರ ಮಾಡಿರುವುದಿಲ್ಲ. ಯಾರಿಂದಲೂ ಹಣವನ್ನು ಸಂಗ್ರಹಿಸಿಲ್ಲ, ಅದರ ಅಗತ್ಯವೂ ಬಂದಿರುವುದಿಲ್ಲ. ಕೇವಲ ಪ್ರತಿ ಗುರುವಾರ ಶರಣರ ಚಿಂತನೆಗಳನ್ನು ಮೆಲುಕು ಹಾಕುವುದು ವಚನೋತ್ಸವ ಬಳಗ ದ ಉದ್ದೇಶವಾಗಿದೆ.
ಗಡಿಬಿಡಿ ಇಂದಿನ ಬದುಕಿನಲ್ಲಿ ಬಸವಾದಿ ಶರಣರ ಚಿಂತನೆಗಳನ್ನ ವಿಚಾರಗಳನ್ನ ಓದಿ ಅಧ್ಯಯನ ಮಾಡಿ ತಿಳಿದುಕೊಳ್ಳುವ ವ್ಯವಧಾನ ಯಾರಿಗೂ ಇಲ್ಲದಂತಾಗಿದೆ, ಹಾಗಾಗಿ ಪ್ರತಿ ಗುರುವಾರ ಆಯೋಜನೆ ಮಾಡುತ್ತಿರುವ ವಚನೋತ್ಸವದ ಮೂಲಕ ಹತ್ತು ಹಲವು ಶರಣರ ವಿಚಾರಧಾರೆಗಳನ್ನು ತಿಳಿದುಕೊಳ್ಳುವ ಸುವರ್ಣ ಅವಕಾಶ ಇಲ್ಲಿದೆ. ವಚನೋತ್ಸವ ಬಳಗ ಧಾರವಾಡ ನಡೆಸುತ್ತಿರುವ ಪ್ರತಿ ಗುರುವಾರದ ವಚನೋತ್ಸವದ ಮೂಲಕ ಸಾಕಷ್ಟು ಜನ ಮಕ್ಕಳು, ವೃದ್ಧರು,ಹಿರಿಯರು ಅನುಭಾವಿಗಳು ತಮ್ಮ ಮನೆಗಳಲ್ಲೇ ಕುಳಿತುಕೊಂಡು ವಚನ ಗಾಯನ, ವಚನ ನಿರ್ವಚನ, ಅನುಭಾವ, ಚರ್ಚೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಎಲ್ಲ ಜಾತಿ,ಧರ್ಮದವರೂ ಪಾಲ್ಗೊಳ್ಳುತ್ತಿದ್ದಾರೆ.
ಪ್ರತಿ ಐವತ್ತು ವಾರ ಅಂದರೆ ವರ್ಷಕ್ಕೆ ಒಂದು ಸಾರಿ ವೇದಿಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಆನ್ಲೈನ್ ನಲ್ಲಿ ಪಾಲ್ಗೊಳ್ಳುವ ಶರಣ ಬಂಧುಗಳ ಮುಖಮುಖಿ ಸಮಾಗಮವನ್ನು ಆಯೋಜಿಸಬೇಕೆಂಬ ಯೋಜನೆ, ಯೋಚನೆ ಇದೆ. ವಚನೋತ್ಸವ ಬಳಗ ಧಾರವಾಡ ಆಯೋಜಿಸುವ ಪ್ರತಿ ಗುರುವಾರದ ವಚನೋತ್ಸವಕ್ಕೆ ಬಸವಾದಿ ಶರಣರ ಸಂದೇಶಗಳನ್ನು ಸಾರುವ ಎಲ್ಲ ಸಂಘ ಸಂಸ್ಥೆಗಳು ಬೆಂಬಲಿಸುತ್ತಿವೆ, ಸಹಕರಿಸುತ್ತಿವೆ. ತಮ್ಮೆಲ್ಲರ ಸಹಕಾರ ಸಹಭಾಗಿತ್ವದಲ್ಲಿ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಯೋಜನೆಗಳನ್ನು ಹಮ್ಮಿಕೊಂಡು ಶರಣ ಚಿಂತನೆ ಹೇಗೆ ವೇದಿಕೆಗಳನ್ನು ಕಲ್ಪಿಸಿಕೊಡಲಾಗುವುದು.
ವಚನೋತ್ಸವ ನಡೆದು ಬಂದ ಕುರಿತು ಲೇಖನ ಪ್ರಕಟಿಸಿದ ಬಸವ ಮೀಡಿಯಾ ಗೆ ಅನಂತಾನಂತ ಶರಣು ಶರಣಾರ್ಥಿಗಳು 🙏