ಗದಗ
ವಿವಾದಿತ ‘ವಚನ ದರ್ಶನ’ ಪುಸ್ತಕವನ್ನು ಸರ್ಕಾರ ಕೂಡಲೇ ನಿಷೇಧಿಸಬೇಕೆಂದು ಬಸವಪರ ಸಂಘಟನೆಗಳು ತೀವ್ರವಾಗಿ ಒತ್ತಾಯಿಸಿವೆ.
ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಕೆಲದಿನಗಳ ಹಿಂದೆ ಜನಮೇಜಯ ಉಮರ್ಜಿ ಸಂಪಾದಕತ್ವ, ಗದಗ ಶ್ರೀ ಸದಾಶಿವಾನಂದ ಸ್ವಾಮಿಗಳ ಗೌರವ ಸಂಪಾದಕತ್ವ, ಪ್ರಜ್ಞಾಪ್ರವಾಹ, ಅಯೋಧ್ಯಾ ಪ್ರಕಾಶನದ ವತಿಯಿಂದ ಪ್ರಕಟಗೊಂಡ ‘ವಚನ ದರ್ಶನ’ ಪುಸ್ತಕವು ಬಸವಾದಿ ಶರಣರ ಆಶಯಗಳಿಗೆ, 12ನೇ ಶತಮಾನದ ವಚನ ಸಾಹಿತ್ಯ ಚಳುವಳಿಗೆ, ಶರಣ ಸಿದ್ಧಾಂತಕ್ಕೆ ಮತ್ತು ವಚನಗಳ ಮೂಲ ಚಿಂತನೆ-ಆದರ್ಶಗಳಿಗೆ ಧಕ್ಕೆ ತರುವಂಥದ್ದಾಗಿದೆ. ಶರಣ ಪರಂಪರೆಗೆ ಅಪಚಾರವೆಸಗಿ, ಉದ್ದೇಶಪೂರ್ವಕವಾಗಿ ಶರಣರಿಗೆ ಲಿಂಗಾಯತ ಸಮಾಜದವರ ಮುಖಕ್ಕೆ ಮಸಿ ಬಳಿದು ಮೋಜು ನೋಡುವ ದುರುದ್ದೇಶದಿಂದ ಬರೆದ ಕೃತಿ ಇದಾಗಿದೆ. ಇದು ಲಿಂಗಾಯತ ಜೀವನ ದರ್ಶನ – ತತ್ತ್ವಗಳಿಗೆ, ಮೇಲಾಗಿ ಅಸಂಖ್ಯಾತ ಬಸವಾಭಿಮಾನಿಗಳ ಭಾವನೆಗೆ ತುಂಬಾ ನೋವನ್ನುಂಟು ಮಾಡಿದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.
ಪ್ರಕಾಶಕ, ಸಂಪಾದಕ, ಲೇಖಕರು ಬರೆದ ಶರಣರ ಕುರಿತಾದ ಅಭಿಪ್ರಾಯಗಳು ಅತ್ಯಂತ ಕೀಳು ಅಭಿರುಚಿಯ ಮನಸ್ಥಿತಿಗೆ ದ್ಯೋತಕವಾಗಿವೆ. ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಎಲ್ಲರನ್ನೂ ಶಿವಭಕ್ತರೆಂಬೆ’, ‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ’, ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ’ ಎಂಬ ವೇದ ವಿರೋಧಿ ನಿಲುವನ್ನು ತಾಳಿದವರು ಶರಣರು, ಮಾದಾರನೆಂಬೆನೆ ಚನ್ನಯ್ಯನ, ಡೋಹಾರನೆಂಬೆನೆ ಕಕ್ಕಯ್ಯನ’ ಎನ್ನುವುದರೊಂದಿಗೆ ಅಸ್ಪೃಶ್ಯತೆ ನಿವಾರಿಸಲು ಪ್ರಯತ್ನಿಸಿ ಸಮಸಮಾಜ ನಿರ್ಮಾಣದ ನಿಜಕ್ರಾಂತಿಗೈದವರು ಬಸವಾದಿ ಶಿವಶರಣ-ಶರಣೆಯರು. ಇಂತಹ ಶರಣರ ದಂಡನಾಯಕ ವಿಶ್ವಗುರು ಬಸವೇಶ್ವರರನ್ನು ಕರ್ನಾಟಕ ಸರ್ಕಾರವು ಸಾಂಸ್ಕೃತಿಕ ನಾಯಕನೆಂದು ಪೋಷಿಸಿದೆ.
ಬಸವಾದಿ ಪ್ರಮಥರ ತತ್ವ, ಜಾತ್ಯತೀತ, ಮಾನವೀಯ, ವೈಚಾರಿಕ ನಿಲುವುಗಳನ್ನು ಹಗುರವಾಗಿ ಭಾವಿಸಿ, ಉಡಾಫೆಯಿಂದ ವರ್ತಿಸಿದ “ಶರಣರೊಂದಿಗೆ ಸರಸವಾಡಿದರೆ, ಸುಣ್ಣದ ಕಲ್ಲು ಕಟ್ಟಿಕೊಂಡು ಮಡುವಿಗೆ ಬಿದ್ದಂತೆ” ಎಂಬುದು ಇವರಿಗೆ ತಿಳಿದಿರಬೇಕು. ಈ ಎಚ್ಚರಿಕೆಯನ್ನು ಪುಸ್ತಕ ಪ್ರಕಟನಾ ಕಾರ್ಯಗೈದ ಸಮಸ್ತರಿಗೆ ನೀಡುತ್ತಿದ್ದೇವೆ. ಜಾಗತಿಕ ದಾರ್ಶನಿಕರ ಅಭಿಪ್ರಾಯದಂತೆ ಬಸವೇಶ್ವರರು ಬರೀ ಭಾರತ ದೇಶಕ್ಕಷ್ಟೇ ಸೀಮಿತವಾಗಿಲ್ಲ. ವಿಶ್ವಕ್ಕೆಲ್ಲ ಅತ್ಯಗತ್ಯವಾಗಿರಬೇಕಾದ ಭುವನದ ಬೆಳಕು, ವಿಶ್ವಗುರು ಇವರು. ಹೀಗಿರುವಾಗ ‘ವಚನ ದರ್ಶನ’ದ ಆಶಯವು ಅತ್ಯಂತ ಕೀಳುಮಟ್ಟದಲ್ಲಿರುವುದಾಗಿದೆ.
ಇದು ಬರಿ ಬಸವಾದಿ ಶರಣರಿಗೆ, ಲಿಂಗಾಯತ ಸಮುದಾಯಕ್ಕೆ ಅಷ್ಟೇ ಅಲ್ಲ, ನಾಡಿಗೆ-ದೇಶಕ್ಕೆ-ವಿಶ್ವಕ್ಕೆ ಮಾಡಿದ ಅಕ್ಷಮ್ಯ ಅವಮಾನವಾಗಿದೆ. ಕಾರಣ ಮಾನ್ಯರು ‘ವಚನ ದರ್ಶನ’ ಪುಸ್ತಕವನ್ನು ನಿಷೇಧಿಸಬೇಕೆಂದು ಸರ್ಕಾರವನ್ನು ಸಂಘಟನೆಗಳು ವಿನಂತಿಸಿಕೊಂಡಿವೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಗದಗ ಜಿಲ್ಲಾಧ್ಯಕ್ಷರಾದ ಕೆ.ಎಸ್. ಚೆಟ್ಟಿ, ಕಾಯ೯ದಶಿ೯ ಶೇಖಣ್ಣ ಎಂ. ಕವಳಿಕಾಯಿ, ಗದಗ ಬಸವದಳದ ಅಧ್ಯಕ್ಷ ವಿ.ಕೆ. ಕರೇಗೌಡ್ರ, ಬಸವಕೇಂದ್ರದ ಮುಖಂಡರಾದ ಎನ್.ಎಚ್. ಹಿರೇಸಕ್ಕರಗೌಡ್ರ, ಎಸ್.ಎನ್. ಹಕಾರಿ, ಶಿವನಗೌಡ ಗೌಡರ, ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಶೇಖಣ್ಣ ಕಳಸಾಪೂರಶೆಟ್ರ, ಸಿದ್ದು ಅಂಗಡಿ, ಗದಗ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ ಅಸುಂಡಿ ಹಾಗೂ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿಷೇಧದ ಒತ್ತಡ ಜೋರಾಗಲಿ..
ನಿಜ ದರ್ಶನದ ಅರಿವಾಗಲಿ..
ಶರಣಾರ್ಥಿ
ವಚನ ದಶ೯ನ ಪುಸ್ತಕ ನಿಷೆದಿಸಬೇಕು