ಇತ್ತೀಚಿನ ಬೆಳವಣಿಗೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಶರಣ ವೀರಭದ್ರಪ್ಪ ಕುರಕುಂದಿ: ನಮ್ಮೆದೆಯಲ್ಲಿ ಬದುಕಿಸಿಕೊಳ್ಳೋಣ
ಬಸವಧರ್ಮದ ಕಟ್ಟಾಳು ಸಿಂಧನೂರಿನ ಶರಣ ಜಂಗಮ ವೀರಭದ್ರಪ್ಪ ಕುರಕುಂದಿ ಇಲ್ಲಿನ ಮಣಿಪಾಲ ಆಸ್ಪತ್ರೆಯಲ್ಲಿ ಇಂದು ಸಂಜೆ 04.25ಕ್ಕೆ ಬಯಲಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಹಲವಾರು ದಿನಗಳಿಂದ ಸಾವು–ಬದುಕಿನ ನಡುವೆ ಹೋರಾಟ ನಡೆಸಿದ್ದ ಶರಣರು ಕೊನೆಗೂ ಮರಳಿ ಬಾರದ ಲೋಕಕ್ಕೆ ಪಯಣಿಸಿದರು. ಪತ್ನಿ, ಎರಡು ಹೆಣ್ಣು ಎರಡು ಗಂಡು ಮಕ್ಕಳನ್ನು, ನಾಡಿನ ಅಪಾರ ಶರಣ ಸಮೂಹವನ್ನು ಅವರು ಅಗಲಿದ್ದಾರೆ.
ಯಾರೇ ಕರೆದರೂ ಹೋಗಿ, ಕುರಕುಂದಿ ಅವರು ನಾಡಿನಾದ್ಯಂತ ತಮ್ಮ ಸ್ವಂತ ಖರ್ಚಿನಲ್ಲಿಯೇ ಬಸವತತ್ವ ಪ್ರಸಾರ ಮಾಡುತ್ತಿದ್ದರು.
“ಬಸವ ಧರ್ಮದ ಪ್ರಸಾರದ ಸಾರಥ್ಯವನ್ನು ವಹಿಸಿಕೊಳ್ಳುವ ಹಾಗೂ ಈ ಧರ್ಮವನ್ನು ಬದುಕಿಸುವ ಸಂಕಲ್ಪವನ್ನು ನಾವೆಲ್ಲ ಹೊಂದಬೇಕೆಂಬುದೇ ಅವರ ಅಂತಿಮ ಸಂದೇಶವಾಗಿದೆ,” ಎಂದು ಬಹಳ ವರ್ಷಗಳಿಂದ ಅವರ ಒಡನಾಟದಲ್ಲಿದ್ದ ಅಶೋಕ ಬರಗುಂಡಿ ಹೇಳಿದ್ದಾರೆ.
ಶರಣರ ಪಾರ್ಥೀವ ಶರೀರವನ್ನು ಬೆಂಗಳೂರಿನಿಂದ ಸಿಂಧನೂರಿಗೆ ಸದ್ಯದಲ್ಲೇ ತೆಗೆದುಕೊಂಡು ಹೋಗಲಾಗುತ್ತದೆ.
ಶರಣರಿಗೆ ಶ್ರದ್ಧಾಂಜಲಿ
ಇಂದು ರಾತ್ರಿ ಸಿಂಧನೂರಿಗೆ ಪ್ರಯಾಣ
ಶರಣರ ಪ್ರಾರ್ಥೀವ ಶರೀರವನ್ನು ಇಂದು ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಸಿಂಧನೂರಿಗೆ ತೆಗೆದುಕೊಂಡು ಹೋಗಲಾಗುವುದು. ನಾಳೆ ಮಧ್ಯಾಹ್ನ ಸಿಂಧನೂರಿನಲ್ಲಿ 3 ಗಂಟೆಗೆ ಅಂತ್ಯಕ್ರಿಯೆ .
ವೀರಗಣಾಚಾರಿ, ಬಸವನಿಷ್ಠ, ಶರಣ ಜಂಗಮ, ವೀರಭದ್ರಪ್ಪ ಕುರುಕುಂದರವರು ಲಿಂಗೈಕ್ಯರಾದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ಆಘಾತವಾಯಿತು, ಶರಣ ಚಳುವಳಿಯ ಅನುಭಾವಿ ಹಿರಿಯ ಜೀವಿಯನ್ನು ಕಳೆದುಕೊಂಡಂತಾಯಿತು. ಸಂಚಾರಿ ಶಿವಾನುಭವದ ಮುಖಾಂತರ ಬಸವ ತತ್ವವನ್ನು ಹಳ್ಳಿಹಳ್ಳಿಗೆ ಮುಟ್ಟಿಸುವ ಕಾರ್ಯ ಮಾಡಿ ಅದರ ಮುಖಾಂತರ ಸಿಂಧನೂರಿನಲ್ಲಿ ಹಾಸ್ಟೆಲ್ ಸ್ಥಾಪನೆ ಮಾಡಿ ವಿದ್ಯಾರ್ಥಿಗಳಿಗೆ ಉಚಿತ ದಾಸೋಹ ಸೇವೆಗೈದು ಜೊತೆಗೆ ಶರಣ ಧರ್ಮದ ಸಂಸ್ಕಾರವನ್ನು ಕೊಟ್ಟು ಉತ್ತಮ ಮನುಷ್ಯರಾಗಿ ಬದುಕಲು ದಾರಿ ತೋರಿದಂತ ಮಹಾನ ವ್ಯಕ್ತಿಯಾಗಿದ್ದರು,
ಆ ಮಹಾನ ಶರಣ ಶಕ್ತಿಗೆ ಭಾವಪೂರ್ವಕ ಕೋಟಿ ಕೋಟಿ ನಮನಗಳು.
ಅಂತಿಮ ಶರಣು ಶರಣಾಥಿ೯ಗಳು ಅಪ್ಪಾರ 🙏🙏