ಸಾಣೇಹಳ್ಳಿ
ನೈತಿಕತೆಯು ಕೇವಲ ರಾಜಕಾರಣಕ್ಕೆ ಸೀಮಿತವಲ್ಲ. ಸ್ವಾಮಿಗಳಿಗೆ, ವ್ಯಾಪಾರಸ್ಥರಿಗೆ, ಸಾಹಿತಿಗಳಿಗೆ, ರೈತರಿಗೆ ನೈತಿಕತೆ ಬೇಡವೆ? ಪ್ರತಿಯೊಬ್ಬರಿಗೂ ಅವಶ್ಯಕತೆಯಿದೆ. ನೈತಿಕತೆ ಇಲ್ಲದಿದ್ದರೆ ಬದುಕು ನಾಶವಾಗುತ್ತದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಎಚ್ಚರಿಸಿದರು.
ನೈತಿಕತೆಗೆ ನಮ್ಮ ಮನೆ ಶುದ್ಧವಾಗಬೇಕು. ಮನೆಗಿಂತ ನಮ್ಮ ಮನಗಳು ಶುದ್ಧವಾಗಬೇಕು. ಇದರಿಂದ ಸಮಾಜ ಶುದ್ಧವಾಗುತ್ತದೆ. ಇದನ್ನೇ ಬಸವಣ್ಣನವರು ಅಂತರಂಗ ಶುದ್ದಿ, ಬಹಿರಂಗ ಶುದ್ಧಿ ಎಂದು ಹೇಳಿದರು. ಇದನ್ನು ಮನಗಾಣಬೇಕು ಎಂದರು.
ರಾಜಕಾರಣ ಕುಲಗೆಟ್ಟಿದೆ ಎಂದಾಗ ಸ್ವಾಮಿಗಳಲ್ಲಿ ಕುಲಗೆಟ್ಟವರಿಲ್ಲವೆ ಎಂದು ಪ್ರಶ್ನಿಸುತ್ತಾರೆ. ಆದರೆ ನೈತಿಕತೆಯನ್ನು ಉಳಿಸಿಕೊಂಡಿದ್ದೇವೆ ಎನ್ನುವ ಕಾರಣಕ್ಕೆ ನಿಷ್ಠುರವಾಗಿ ನಮಗೆ ಮಾತನಾಡಲು ಸಾಧ್ಯವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ರಾಜಕೀಯದಲ್ಲಿ ರಾ ಎಂದರೆ ರಾವಣ, ಜ ಎಂದರೆ ಜರಾಸಂಧ, ಕೀ ಎಂದರೆ ಕೀಚಕ ಹಾಗೂ ಯ ಎಂದರೆ ಯಮಧರ್ಮ. ಹೀಗೆಂದಾಗ ರಾಜಕೀಯ ಕ್ಷೇತ್ರಕ್ಕೆ ಬರುವವರ ತಪ್ಪಲ್ಲ. ಅವರನ್ನು ಆಯ್ಕೆಗೊಳಿಸುವವರಾದ ನಮ್ಮದು ತಪ್ಪು. ಆದರೂ ಆದರ್ಶ ರಾಜಕಾರಣ ಉಳಿಸಿಕೊಂಡವರಿದ್ದಾರೆ. ಇದಕ್ಕೆ ಜಗಳೂರು ಶಾಸಕ ದೇವೇಂದ್ರಪ್ಪ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಚುನಾವಣೆ ಕಾರಣಕ್ಕೆ ನಮ್ಮ ರಾಷ್ಟ್ರೀಯ ನಾಟಕೋತ್ಸವಕ್ಕೆ ರಾಜಕಾರಣಿಗಳು ಬರುತ್ತಿಲ್ಲ. ಕೇವಲ ಮತ ಮತ್ತು ಹಣವನ್ನು ಪ್ರಧಾನ ಮಾಡಿಕೊಂಡರೆ ವ್ಯಕ್ತಿತ್ವ ಅಧೋಗತಿಗಿಳಿಯುತ್ತದೆ. ಸಾಣೇಹಳ್ಳಿಗೆ ಬರದಿದ್ದರೆ ರಾಜಕಾರಣಿಗಳಿಗೇ ನಷ್ಟ ಎಂದರು.
ಜೈಲಿಗೆ ಹೋಗಿಬಂದವರ ಹೆಸರು ನಾವು ಆಯೋಜಿಸಿದ ಕಾರ್ಯಕ್ರಮದ ಆಹ್ವಾನಪತ್ರದಲ್ಲಿತ್ತು. ಈ ಕುರಿತು ಮಹಿಳೆಯರು ಪ್ರಶ್ನಿಸಿದಾಗ ಆಹ್ವಾನಪತ್ರ ಪ್ರಕಟವಾದಾಗ ಅವರು ಜೈಲಿಗೆ ಹೋಗಿರಲಿಲ್ಲ ಎಂದು ಉತ್ತರಿಸಿದೆವು. ಹೀಗೆಂದಾಗ ನಮ್ಮದು ಕಸಗುಡಿಸುವ ಕೆಲಸ ಅಂದರೆ ಸ್ವಚ್ಛಗೊಳಿಸುವುದು ಮುಖ್ಯವಾಗಬೇಕು. ಈ ಕ್ಷೇತ್ರಕ್ಕೆ ಬಂದವರು ಬದಲಾಗಲಿ ಎನ್ನುವ ಉದ್ದೇಶವಿದೆ ಎಂದರು.
ಲಿಂಗ ಕಟ್ಟಿದೆ ಎನ್ನುವುದು ಮುಖ್ಯವಲ್ಲ. ಲಿಂಗವಂತ ಅಥವಾ ಭಕ್ತನಿಗೆ ಸತ್ಯ, ಸದ್ಭಾವನೆ, ಸದ್ವರ್ತನೆ ಅಗತ್ಯ ಎಂದರು.
ಪ್ಲಾಸ್ಟಿಕ್ ಮುಕ್ತ ವೇದಿಕೆ
ಸಾಣೇಹಳ್ಳಿಯಲ್ಲಿ ನಡೆಯುವ ವೇದಿಕೆ ಮೇಲೆ ಪ್ಲಾಸ್ಟಿಕ್ ಹಾರವಿಲ್ಲ, ಲೋಟ, ಬಾಟಲಿಗಳಿಲ್ಲ.
ಇದು ಸಾಣೇಹಳ್ಳಿ ಶ್ರೀಗಳ ಮಾದರಿ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್.ಆರ್.ಸ್ವಾಮಿ ಹೇಳಿದರು.
ನಮ್ಮ ಪರಿಸರವನ್ನು ಪ್ಲಾಸ್ಟಿಕ್ಮುಕ್ತ ಮಾಡಬೇಕು. ಆದರೆ ಗ್ರಾಮೀಣರು ಕೈ ಬೀಸಿಕೊಂಡು ನಗರಗಳಿಗೆ ಹೋಗಿ ಪ್ಲಾಸ್ಟಿಕ್ ಚೀಲಗಳನ್ನು ತರುತ್ತೀರಿ. ಅವುಗಳು ಮುಂದೆ ಹೊಲಗಳನ್ನು ಸೇರುತ್ತವೆ ಎಂದು ಎಚ್ಚರಿಸಿದರು.
ಅಲೆಮಾರಿ ಸಮುದಾಯದಲ್ಲಿ ಬೆಳೆದವನಾದ ನಾನು, ಚಿಕ್ಕಜಾಜೂರಿನ ಸಿದ್ಧರಾಮೇಶ್ವರ ಪ್ರೌಢಶಾಲೆಯಲ್ಲಿ ಕಲಿತೆ. ವೃತ್ತಿಜೀವನ ಶುರುವಾಗಿದ್ದು ಅರಸೀಕೆರೆಯಲ್ಲಿ ಎಂದರು.
ಶೌಚಾಲಯಗಳನ್ನು ಹೇಗೆ ಬಳಸಬೇಕು ಎಂಬುದನ್ನು ಮಕ್ಕಳಿಗೆ ಕಲಿಸಬೇಕಿದೆ. ಇದರೊಂದಿಗೆ ಬೇಸಾಯ ಮಾಡುವುದನ್ನು ಮಕ್ಕಳಿಗೆ ಕಲಿಸಿ ಜೊತೆಗೆ ಓದುವ ಸಂಸ್ಕೃತಿ ಹೆಚ್ಚಬೇಕಿದೆ ಎಂದು ಕಿವಿಮಾತು ಹೇಳಿದರು.
ಯಾವುದು ಇಲ್ಲವೊ ಅದರ ಕುರಿತು ಹೆಚ್ಚು ಮಾತನಾಡುತ್ತೇವೆ. ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮಾದರಿಗಳು ನಮ್ಮ ಮುಂದಿವೆ. ಈ ಸಮಾಜಕ್ಕೆ ಹೊಸ ಬೆಳಕನ್ನು ತರಬೇಕೆಂದು ಸರ್ವೋದಯ ವಿಚಾರಧಾರೆಗಳನ್ನು ತರಬೇಕು. ಈ ನಿಟ್ಟಿನಲ್ಲಿ ಲೇಖಕರು, ವೈದ್ಯರು, ಕಲಾವಿದರು ಮೊದಲಾದವರು ಕೈ ಜೋಡಿಸುತ್ತಿದ್ದಾರೆ. ಇದಕ್ಕೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನಮ್ಮೊಂದಿಗಿದ್ದಾರೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕಂದರಾಜ್ ಹೇಳಿದರು.
ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಆರ್.ಸ್ವಾಮಿ, ವೀರಸಂಗಯ್ಯ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕತ ಎಚ್.ಎಸ್. ದ್ಯಾಮೇಶ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಬಂದಿರುವುದು ನನಗಲ್ಲ. ಇಲ್ಲಿನ ಮಣ್ಣಿಗೆ ಸಲ್ಲಬೇಕು ಎಂದು ಸನ್ಮಾನಿತರ ಶಿಕ್ಷಕ ಎಚ್.ಎಸ್.ದ್ಯಾಮೇಶ್ ಹೇಳಿದರು.
ಕಳೆದ ೨೫ ವರ್ಷಗಳ ಬೇಸಿಗೆ ಶಿಬಿರಗಳಲ್ಲಿ ೬೦ ಮಕ್ಕಳ ನಾಟಕಗಳು ಇಲ್ಲಿ ಪ್ರದರ್ಶನಗೊಂಡಿವೆ. ಶಿವಸಂಚಾರಕ್ಕಾಗಿ ೧೫ ನಾಟಕಗಳ ರಚನೆಗಳಾಗಿವೆ ಎಂಬುದನ್ನು ಗಮನಿಸಬೇಕು. ಹೀಗೆ ಸಾಣೇಹಳ್ಳಿ ಕೇವಲ ರಂಗಭೂಮಿಗೆ ಸೀಮಿತಗೊಂಡಿಲ್ಲ. ಇಲ್ಲಿ ನಡೆಯುವ ಇತರ ಚಟುವಟಿಕೆಗಳನ್ನು ಗಮನಿಸಬೇಕು. ೩೫೦-೪೦೦ ಸಸ್ಯಪ್ರಭೇದಗಳು ಈ ಸಾಣೇಹಳ್ಳಿಯಲ್ಲಿವೆ. ಇದು ಕೂಡಾ ಮಾದರಿಯಾದುದು ಎಂದರು.