ವಚನ ದರ್ಶನ ಕೃತಿ ಮುಟ್ಟುಗೋಲಿಗೆ ಸಾಣೇಹಳ್ಳಿ ಶ್ರೀಗಳ ಒತ್ತಾಯ

ಸಾಣೇಹಳ್ಳಿ

ಬಸವಣ್ಣನವರ ವಚನಗಳನ್ನು ತಿರುಚಿ ರಚಿಸಿದ ವಚನ ದರ್ಶನ ಕೃತಿಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಬೇಕೆಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಶನಿವಾರ ನಡೆದ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ವಚನ ದರ್ಶನ ಕೃತಿಯು ಕಳಪೆಯಾಗಿದೆ. ಬಸವಣ್ಣನವರು ಸನಾತನ ಪರಂಪರೆಯನ್ನು ಮುಂದುವರೆಸಿಕೊಂಡು ಬರಲಿಲ್ಲ. ಆದರೆ ಸನಾತನ ಪರಂಪರೆ ಮುಂದುವರೆಸಿಕೊಂಡು ಬಂದರೆಂದು ಈ ಕೃತಿಯ ಮೂಲಕ ಸಂಚು ರೂಪಿಸಲಾಗುತ್ತಿದೆ. ವಿವಿಧೆಡೆಗಳಲ್ಲಿ ಬಿಡುಗಡೆ ಸಮಾರಂಭಕ್ಕೆ ಐದಾರು ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇಂಥ ಕೃತಿಯನ್ನು ರಾಜ್ಯ ಸರ್ಕಾರವು ಕೂಡಲೇ ಮುಟ್ಟುಗೋಲು ಹಾಕಬೇಕೆಂದು ಒತ್ತಾಯಿಸಿದರು.

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಬಸವಣ್ಣನವರ ಆದರ್ಶಗಳನ್ನು ಪಾಲಿಸಿಕೊಂಡು ಹೋಗುವ ಕಾರ್ಯ ಚಟುವಟಿಕೆಗಳು ನಡೆಯುತ್ತಿಲ್ಲ. ಇದರೊಂದಿಗೆ ರಾಜ್ಯದ ೩೦೦ ಶಾಲೆ, ಕಾಲೇಜುಗಳಲ್ಲಿ ನಮ್ಮ ಸಂಘದಿಂದ ಶರಣರ ಕುರಿತ ನಾಟಕ, ವಚನ ಕಮ್ಮಟ, ಶರಣರ ಕುರಿತು ವಚನ ಉಪನ್ಯಾಸ ಏರ್ಪಡಿಸಲು ಅಗತ್ಯವಾದ ಅನುದಾನ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಇದುವರೆಗೆ ಸಕಾರಾತ್ಮಕವಾಗಿ ಉತ್ತರ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿ ವರ್ಷ ರಂಗಶಾಲೆ, ಶಿವಸಂಚಾರದ ಜೊತೆಗೆ ಇತರ ರಂಗ ಚಟುವಟಿಕೆಗಳಿಗೆ ರಾಜ್ಯ ಸರ್ಕಾರವು ೫೦ ಲಕ್ಷ ರೂಪಾಯಿ ಅನುದಾನ ಸಿಗುತ್ತಿತ್ತು. ಕ್ರಮೇಣ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿ ಅವರು, ನಮ್ಮ ಶಿವಕುಮಾರ ರಂಗಶಾಲೆಗೆ ಪ್ರತಿ ವರ್ಷ ಅನುದಾನ ಸಿಗುವ ಹಾಗೆ ಆಗಲಿ ಎಂದು ಆಶಿಸಿದರು.

ರಾಜ್ಯದಲ್ಲಿ ಆರು ರಂಗಾಯಣಗಳಿವೆ. ಮೈಸೂರು ಹೊರತುಪಡಿಸಿ ಉಳಿದ ರಂಗಾಯಣಗಳಿಗೆ ಅನುದಾನ ಕೊರತೆ ಕಾಡುತ್ತಿದೆ. ರಾಜ್ಯ ಸರ್ಕಾರವು ಕೂಡಲೆ ಆರ್ಥಿಕ ಸಂಪನ್ಮೂಲ ಒದಗಿಸಬೇಕು. ವಯಸ್ಸಾದ ರಂಗ ಕಲಾವಿದರು ಬದುಕುವುದು ಕಷ್ಟವಿದೆ. ಅಂಥವರಿಗೆ ನಿವೃತ್ತಿ ವೇತನ ಹೆಚ್ಚಿಸಲಿ ಎಂದು ಕೋರಿದರು.

ರಾಜ್ಯದ ಪ್ರತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಂಗಶಿಕ್ಷಕರನ್ನು ನೇಮಿಸಲಿ. ಶಾಸಕರ ಅನುದಾನವು ಹೆಚ್ಚಾಗಿ ದೇವಸ್ಥಾನಗಳಿಗೆ ಹೋಗುತ್ತದೆ. ಶಾಲೆಯ ಕಟ್ಟಡಕ್ಕೆ, ರಂಗಚಟುವಟಿಕೆಗಳಿಗೆ ಅನುದಾನ ಸಿಗಲಿ. ಇದರಿಂದ ಮಕ್ಕಳ ಬೌದ್ಧಿಕತೆ ಹೆಚ್ಚುತ್ತದೆ.

ಶರಣರ ಐತಿಹಾಸಿಕ ಸ್ಥಳಗಳು ಉಪೇಕ್ಷಿತವಾಗಿದ್ದು, ಅವುಗಳನ್ನು ಅಭಿವೃದ್ಧಿಗೊಳಿಸಬೇಕು. ಅಕ್ಕ ನಾಗಮ್ಮನ ತರಿಕೇರಿ ಅಭಿವೃದ್ಧಿಗೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಹತ್ತು ಲಕ್ಷ ರೂಪಾಯಿ ಅನುದಾನವನ್ನು ಘೋಷಿಸಿದ್ದರು. ಆದರೆ ಇದುವರೆಗೆ ಹತ್ತು ರೂಪಾಯಿ ಬಂದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆಚರಿಸುತ್ತಿರುವ ಗಣ್ಯರ ಜಯಂತಿಗಳಿಗೆ ಆರ್ಥಿಕ ನೆರವು ಕೊಡಬೇಕಾದ ಅಗತ್ಯವಿಲ್ಲ ಎಂದ ಅವರು, ನಾಟಕೋತ್ಸವವು ಜನರ ಉತ್ಸವವಾಗಿದೆ. ಈ ವರ್ಷವೂ ನಾಟಕೋತತ್ಸವವು ಯಶಸ್ವಿಯಾಗಿದೆ ಎಂದರು.

ಪ್ರತಿಯೊಬ್ಬರೂ ಶರಣರಾಗಬೇಕು. ತಮ್ಮ ಬದುಕಿನಲ್ಲಿ ಎಲ್ಲ ರೀತಿಯ ಅನಿಷ್ಟಗಳನ್ನು ದೂರ ಮಾಡಿ, ಅರಿವು-ಆಚಾರ ಒಂದು ಮಾಡಿಕೊಂಡರೆ ಶರಣರಾಗಬಹುದು. ೧೨ನೇ ಶತಮಾನದಲ್ಲಿ ಸಾಮಾನ್ಯರೂ ಶರಣರಾದರು.

ಕುಡಿತವು ಬದುಕನ್ನು ನರಕ ಮಾಡುತ್ತದೆ. ಆರೋಗ್ಯ, ಆಯುಷ್ಯವನ್ನು ಕುಡಿತವು ಕಳೆಯುತ್ತದೆ. ಇನ್ನು ಮುಂದೆ ಮದ್ಯ ಕುಡಿಯುವುದಿಲ್ಲವೆಂದು ಪ್ರಮಾಣ ಮಾಡಿ. ಸ್ವಲ್ಪೇ ಕುಡಿಯುವುದಿದ್ದರೂ ಇನ್ನು ಮುಂದೆ ಕುಡಿಯಬೇಡಿ ಎಂದು ಕಿವಿಮಾತು ಹೇಳಿದರು.

Share This Article
1 Comment

Leave a Reply

Your email address will not be published. Required fields are marked *