‘ಬಸವ ತತ್ವವನ್ನು ಗಾಳಿಗೆ ತೂರಿರುವ ಕಾಡಸಿದ್ದೇಶ್ವರ ಶ್ರೀ’

ಬಸವ ಮೀಡಿಯಾ
ಬಸವ ಮೀಡಿಯಾ

ಕನೇರಿ ಮಠ 15 ನೆಯ ಶತಮಾನದ ಬಸವಾದಿ ಶರಣರ ತತ್ವಗಳನ್ನು ಮುಂದುವರೆಸಿದ ಮಹಾಶರಣ ಕಾಡಸಿದ್ದೇಶ್ವರರವರು ಕಟ್ಟಿದ ಮಠ. ಕಾಡಸಿದ್ದೇಶ್ವರರು ಬರೆದ ಸುಮಾರು 500 ವಚನಗಳು ದೊರೆತಿವೆ.

ವಿಜಯಪುರ

ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಇಂದು ಸ್ವಾಮೀಜಿಗಳಾಗಲು ಅವಕಾಶ ಹಾಗೂ ಹಕ್ಕನ್ನು ನೀಡಿರುವುದು ಬಸವಣ್ಣನವರ ಸಮಾನತೆಯ ಧರ್ಮವೇ ಹೊರತು ಸನಾತನ ಹಿಂದೂ ಧರ್ಮವಲ್ಲ, ಇದನ್ನು ಶ್ರೀಗಳು ಮರೆಯಬಾರದು ಎಂದು ಸೋಮವಾರ ವಿಜಯಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಬಸವ ಸೇನಾ ಜಿಲ್ಲಾಧ್ಯಕ್ಷ ಡಾ. ರವಿಕುಮಾರ ಬಿರಾದಾರ ಹೇಳಿದರು.

ಕನೇರಿ ಮಠ 15 ನೆಯ ಶತಮಾನದ ಬಸವಾದಿ ಶರಣರ ತತ್ವಗಳನ್ನು ಮುಂದುವರೆಸಿದ ಮಹಾಶರಣ ಕಾಡಸಿದ್ದೇಶ್ವರರವರು ಕಟ್ಟಿದ ಮಠ. ಕಾಡಸಿದ್ದೇಶ್ವರರು ಬರೆದ ಸುಮಾರು 500 ವಚನಗಳು ದೊರೆತಿವೆ. ಆದರೆ ಈಗಿನ ಕನೇರಿ ಸ್ವಾಮಿಗಳು ತಮ್ಮ ಮಠದ ಸಂಪ್ರದಾಯಗಳನ್ನು ಮರೆತು, ಹಿಂದಿನ ಶರಣರ ಒಂದೂ ವಚನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿಲ್ಲ. ಆರೆಸ್ಸೆಸ್, ಬಿಜೆಪಿಯವರ ಜೊತೆ ಸೇರಿ ತಮ್ಮ ಮಠದ ಪರಂಪರೆಯನ್ನು ಧಿಕ್ಕರಿಸಿ, ಸಮಾಜದಲ್ಲಿ ಕೋಮು ಸಾಮರಸ್ಯ ಕದಡುವ ಭಾಷಣಗಳನ್ನು ಮಾಡುತ್ತಾ ರಾಜಕೀಯ ಮಾಡುತ್ತಿದ್ದಾರೆ.

ನಿಲುವು ಬದಲಿಸಿಕೊಳ್ಳಲಿ

ಬಸವಣ್ಣನವರ ತತ್ವಗಳಾದ ಸಮಸಮಾಜ, ಕೋಮು ಸಾಮರಸ್ಯಗಳನ್ನು ಗಾಳಿಗೆ ತೂರಿ ವಿಪರೀತ ನಡುವಳಿಕೆ ಪ್ರದರ್ಶಿಸುತ್ತಿದ್ದಾರೆ. ಅವರು ಈಗಲೂ ಕೂಡಾ ಸನಾತನ, ಹಿಂದೂ ಧರ್ಮದ ಸ್ವಾಮಿಗಳೆಂಬ ಭ್ರಮೆಯಲ್ಲಿದ್ದರೆ, ಅದೇ ಸನಾತನ ಧರ್ಮದ ಉಡುಪಿಯ ಅಷ್ಟ ಮಠದ ಸ್ವಾಮೀಜಿಗಳ ಜೊತೆ ಸಹಪಂಕ್ತಿ ಭೋಜನ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

ಆದ್ದರಿಂದ ಶ್ರೀಗಳು ಕೂಡಲೇ ತಮ್ಮ ನಿಲುವುಗಳನ್ನು ಬದಲಿಸಿಕೊಂಡು, ಬಸವಾದಿ ಶರಣರ ಹಾದಿಯಲ್ಲಿ ಮುನ್ನೆಡೆಯಬೇಕೆಂದು ಎಂದು ಅವರು ಸಲಹೆ ನೀಡಿದರು.

ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಒಂದು ಸಮುದಾಯದ ಬಗ್ಗೆ ಕೀಳುಮಟ್ಟದ ಪದ ಪ್ರಯೋಗಿಸುತ್ತಿರುವ ಕನೇರಿ ಶ್ರೀಗಳು ಕಾವಿ ತ್ಯಜಿಸಿ ರಾಜಕಾರಣಕ್ಕೆ ಬರಲಿ, ಅವರ ವಿರುದ್ಧ ನಾವು ಅಖಾಡಕ್ಕೆ ಸಿದ್ದ ಎಂದರು.

ನಾಲಿಗೆ ಹರಿಬಿಡಬೇಡಿ

ವಕ್ಫ್ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಮಾತನಾಡಿದ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿದ ಅವರು, ಕಾವಿಗೆ ಭವ್ಯ ಪರಂಪರೆ ಇದೆ, ಸನ್ಯಾಸತ್ವಕ್ಕೆ ತಲೆ ಬಾಗುವುದು ನಮ್ಮ ಭಾರತೀಯ ಸಂಸ್ಕೃತಿ, ಶ್ರೀಗಳು ಕಾವಿ ಬಿಟ್ಟು ರಾಜಕಾರಣಕ್ಕೆ ಬರಬೇಕು, ಅಖಾಡಕ್ಕೆ ನೇರವಾಗಿಯೇ ಬನ್ನಿ, ನಾವು ಸಹ ಸಿದ್ದ, ನಿಮಗಿಂತ ಹೆಚ್ಚಾಗಿ ನಮಗೆ‌ ಮಾತನಾಡಲು ಬರುತ್ತದೆ, ನೀವು ಕಾವಿ ಹಾಕಿದ್ದೀರಿ ಎಂದು ನಾವು ನಿಮ್ಮನ್ನು ಗೌರವಿಸುತ್ತಿದ್ದೇವೆ ಎಂದರು.

ರೈತರ ಹಿತಕ್ಕಾಗಿ ಅನೇಕ ಕಾರ್ಯಕ್ರಮ ಯೋಜಿಸಿದ ಶ್ರೀಗಳ ಬಗ್ಗೆ ಅಪಾರ ಗೌರವವಿತ್ತು. ಆದರೆ ಈ ರೀತಿ ನಾಲಿಗೆ ಹರಿಬಿಟ್ಟಿರುವುದು ಸರಿಯಲ್ಲ ಎಂದರು. ಬಸನಗೌಡ ಯತ್ನಾಳರು ಹೇಳಿದ ಮಾತಿಗೆ ತಲೆಗೊಟ್ಟು ಬೆಂಬಲಿಸಿ ಮುಸ್ಲಿಂರಿಗೆ ಐವತ್ತು ಹೆಂಡರು ಎಂಬಿತ್ಯಾದಿ ಒಂದು ಸಮುದಾಯಕ್ಕೆ ನೋವು ತರುವ ರೀತಿಯಲ್ಲಿ ಶ್ರೀಗಳು ನಡೆದುಕೊಂಡಿರುವುದು ಸರಿಯಲ್ಲ ಎಂದರು.

ಹಿಂದುಗಳ ಟ್ಯಾಕ್ಸ್ ನೀಡಿದ ರಸ್ತೆಯಲ್ಲಿ ಮುಸ್ಲಿಂರ ಸಂಚಾರ ಮಾಡುತ್ತಾರೆ ಎಂದು ಹೇಳಿದ್ದಾರೆ, ಮುಸ್ಲಿಮರು ಸಹ ಈ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ,‌ ಮಡಿದಿದ್ದಾರೆ, ಈ ದೇಶ ನಮ್ಮದು, ಹಿಂದೂ ತೆರಿಗೆ,‌ಮುಸ್ಲಿಂ ತೆರಿಗೆ ಎಂದು ನಮ್ಮ ಸಂವಿಧಾನ ಬೇರೆ ಬೇರೆ ಮಾಡಿಲ್ಲ, ಮುಸ್ಲಿಂರು ಸಹ ತೆರಿಗೆ ಕಟ್ಟುತ್ತಾರೆ ಎಂದರು.

ಸನ್ಯಾಸ್ವತ್ವ ಶಬ್ದದ ಅರ್ಥ ಕನೇರಿ ಶ್ರೀಗಳಿಗೆ ಗೊತ್ತಿಲ್ಲ, ಅರಿಷಡ್ವರ್ಗಗಳನ್ನು ತ್ಯಜಿಸಿ, ದಹಿಸಿ ಕಾವಿ ಧರಿಸಬೇಕಾಗುತ್ತದೆ, ಆದರೆ ಕನೇರಿ ಶ್ರೀಗಳು ಕಾವಿತ್ವ ಹಾಗೂ ಬಸವಾದಿ ಶರಣರಿಗೆ ಅವಮಾನ ಮಾಡುತ್ತಿದ್ದಾರೆ ಎಂದರು.

ರೈತರ ಪರ ಹೋರಾಟಕ್ಕೆ ಬಂದಿದ್ದರೋ ಅಥವಾ ಮುಸ್ಲಿಂರ ವಿರುದ್ದ ‌ಮಾತನಾಡಲು ಬಂದಿದ್ದರೋ? ಹೋರಾಟದಲ್ಲಿ ರೈತರ ಹೆಸರು ತೆಗೆದುಕೊಳ್ಳಲಿಲ್ಲ, ಅವರು ಯಾವ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂಬ ಪರಿಜ್ಞಾನ ಸಹ ಅವರಿಗೆ ಇರಲಿಲ್ಲ ಎಂದರು.

ಅಹಿಂದ ಮುಖಂಡರಾದ ಫಯಾಜ್ ಕಲಾದಗಿ, ನಾಗರಾಜ ಲಂಬು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share This Article
6 Comments
  • ಒಲೈಕೆಯೊಂದೇ ಇವರ ಗುರಿ ಇರಬಹುದು.

    ಭವ್ಯ ಭಾರತವನ್ನ ಸರ್ವ ರೀತಿಯಲ್ಲೂ ಸಧೃಡ ಮಾಡಲು ಈ ದೇಶದಲ್ಲಿ ಇರುವ ತತ್ವಸಿದ್ದಾಂತಗಳೆಂದರೇ ಅದುವೇ ಬಸವಪ್ರಣೀತ ಶರಣ ಧರ್ಮದಲ್ಲಿ ಮಾತ್ರ ಅದನ್ನ ಅರಿಯುವತ್ತಾ ಶ್ರೀಗಳು ಗಮನಹರಿಸಬೇಕು….ರೈತರಿಗೆ ಒಳ್ಳೆಯ ಕೆಲಸವನ್ನ ಮಾಡುತ್ತೀರುವುದು ಸಂತೋಷದ ವಿಷಯ ಅದಕ್ಕೆ ಅವರಿಗೆ ಗೌರವ ನೀಡೋಣ ಆದರೆ ಒಲೈಕೆ ಮಾಡಲು ಸತ್ಯವನ್ನ ಮರೆಮಾಚುವ ವಿಷಯ ಸಲ್ಲದು.

  • ಅವನನ್ನು ಮಠದಿಂದ ಕಾವಿ ಕಳಚಿ ಹೊರ ಹಾಕಬೇಕು ಮನುವಾದಿಯ ಹಾಗೆ ವತಿ೯ಸುವನು RSS ಗುಲಾಮನ ಆಗಿರುವನು ಭಕ್ತರು ಅವನನ್ನು ಬಹಿಕ್ಷರಿಸಿ

  • ಆ ಸ್ವಾಮಿ ಮೊದಲಿನಿಂದಲೋ ಆರ್ ಎಸ್ ಎಸ್ ನ ನೇರ ಸಂಪರ್ಕವನ್ನು ಹೊಂದಿದ್ದಾರೆ. ಇವರಿಗೆ ತಿಳಿ ಹೇಳುವದು ನಾಯಿ ಬಾಲ ಸರಿ ಮಾಡಿದಂತೆ. ಮೈಮೇಲೆ ಹಾಕಿದ ಬಟ್ಟೆಯನ್ನು ಮರೆತು ಮಾತನಾಡುತ್ತಾರೆ. .

  • ಲಿಂಗಾಯತ ಧರ್ಮೀಯರಿಗೆ ನನ್ನದೊಂದು ಪ್ರಶ್ನೆ ಇದೆ. ಸಮಾಜದ ಸೇವೆಗಾಗಿ ಲಿಂಗಾಯತ ಧರ್ಮೀಯರು ಸಾವಿರಾರು ಮಠಗಳನ್ನು ಸ್ಥಾಪಿಸಿದರು. ಬಸವಣ್ಣನವರ ಮುಂದಾಳತ್ವದಲ್ಲಿ ಕಲ್ಯಾಣದಲ್ಲಿ ನಡೆದ ಶರಣ ಕ್ರಾಂತಿಯ ಸಾಮಾಜಿಕ ಕಾಳಜಿಯ ಮತ್ತು ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶಗಳನ್ನಿಟ್ಟುಕೊಂಡು ಮಠ ಮತ್ತು ಮಠಾಧೀಷರುಗಳನ್ನು ನೇಮಿಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗಿದೆ. ಆದರೆ, ಬದಲಾದ ಕಾಲಮಾನದಲ್ಲಿ ಸಂಘಪರಿವಾರ ತನ್ನ ಹಿಂದುತ್ವ ರಾಜಕೀಯವನ್ನು ಮುಂದುಮಾಡಿ ಹಲವು ಬಸವಪ್ರಣೀತ ಮಠಗಳು ಮತ್ತು ಮಾತಾಧೀಶರುಗಳನ್ನು ಹೈಜಾಕ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಜವಾಬ್ದಾರಿಗಳು ಏನು? ಈ ಪ್ರಶ್ನೆಯನ್ನು ಬಾಸವಪ್ರಣೀತ ಲಿಂಗಾಯತ ಸಮಾಜ ಗಂಭೀರವಾಗಿ ಯೋಚಿಸುವ ಕಾಲ ಬಂದಿದೆ. ಗಂಭೀರವಾಗಿ ಯೋಚಿಸಿ ಸೂಕ್ತ ಕ್ರಮಗಳನ್ನು ರೂಪಿಸದಿದ್ದರೆ ಬಸವಣ್ಣ, ಶರಣರು ಮತ್ತು ಅವರ ವಚನಗಳನ್ನು ಲಿಂಗಾಯತರ ಜೊತೆಯಲ್ಲಿ ಆಪೋಶನ ತೆಗೆದುಕೊಳ್ಳುತ್ತಾರೆ.

Leave a Reply

Your email address will not be published. Required fields are marked *