ಮಂಡ್ಯದಲ್ಲಿ ನೆಲಕಚ್ಚಿದ ರೇಣುಕಾಚಾರ್ಯ ಬಸವಣ್ಣನವರ ಜಂಟಿ ಜಯಂತೋತ್ಸವ

ಮಂಡ್ಯ

ವೀರಶೈವ ಪ್ರಭಾವ ಇರುವ ಅನೇಕ ಸಂಘಟನೆಗಳು ರೇಣುಕಾಚಾರ್ಯರ ಮತ್ತು ಬಸವಣ್ಣನವರ ಜಯಂತೋತ್ಸವವನ್ನು ನಗರದಲ್ಲಿ ಒಟ್ಟಿಗೆ ಆಚರಿಸುವ ಪ್ರಯತ್ನ ಇದೇ ತಿಂಗಳ 19ರಂದು ನಗರದಲ್ಲಿ ನಡೆಸಿದ್ದವು. ಬಸವಣ್ಣನವರನ್ನು ಹಿನ್ನಲೆಗೆ ತಳ್ಳಿ, ರೇಣುಕಾಚಾರ್ಯರನ್ನು ಮುನ್ನೆಲೆಗೆ ತರುವ ಈ ಸಾಹಸಕ್ಕೆ ತೀಕ್ಷ್ಣ ಪ್ರತಿರೋಧ ಎದುರಾಯಿತು.

  • > ಅಹ್ವಾನ ಪತ್ರಿಕೆಯಲ್ಲಿ ಮೂರು ವಿರಕ್ತ ಮಠಗಳ ಸ್ವಾಮೀಜಿಗಳ ಹೆಸರು ಹಾಕಲಾಗಿತ್ತು. ಇದರಲ್ಲಿ ಇಬ್ಬರು ಜಂಟಿ ಜಯಂತೋತ್ಸವಕ್ಕೆ ಹೋಗದೆ ಬಹಿಷ್ಕರಿಸಿದರು (ಬೇಬಿ ಮಠ ಮತ್ತು ಗವಿ ಮಠ). ಮೂರನೆಯವರು ತಾವು ಹೋಗಲಿಲ್ಲ, ಅವಶ್ಯವಿಲ್ಲದ ಜಾಣತನ ತೋರಿಸಿ ತಮ್ಮ ಕಿರಿಯ ಶ್ರೀಗಳನ್ನು ಕಳಿಸಿದರು (ದೇಗುಲ ಮಠ). ಇವರ ಜೊತೆ ಇನ್ನಿಬ್ಬರು ವಿರಕ್ತ ಸ್ವಾಮಿಗಳು ಹೋಗಿದ್ದರು. ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮಿಕ್ಕವರೆಲ್ಲಾ ವೀರಶೈವ ಸ್ವಾಮಿಗಳು ಮಾತ್ರ.
  • > ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ಲಿಂಗಾಯತ ಮಹಾಸಭಾ ಮುಂತಾದ ಬಸವ ಪರ ಸಂಘಟನೆಗಳು ಕಾರ್ಯಕ್ರಮವನ್ನು ನೇರವಾಗಿ ವಿರೋಧಿಸಿದವು. ಜಂಟಿ ಜಯಂತೋತ್ಸವಕ್ಕೆ ಆಯೋಜಕರು ಪ್ರತಿಭಟನೆಯಾಗಬಹುದೆಂದು ಹೆದರಿ ಪೊಲೀಸ್ ತಕ್ಷಣೆ ಕೇಳಿದ್ದರು ಎಂಬ ಮಾತೂ ಇದೆ.
  • > ಕಾರ್ಯಕ್ರಮದ ಅಂಗವಾಗಿ ಮಠಾಧಿಪತಿಗಳ ಸಮಾವೇಶ ಕೂಡ ನಡೆಯುವುದೆಂದು ಅಹ್ವಾನ ಪತ್ರಿಕೆಯಲ್ಲಿತ್ತು. ಮಂಡ್ಯದಲ್ಲಿ ಒಕ್ಕಲಿಗರ, ದಲಿತರ, ಕುರುಬರ, ಹಿಂದುಳಿದವರ ಮಠಗಳಿವೆ. ಆದರೆ ಇವರಲ್ಲಿ ಯಾರಿಗೂ ಅಹ್ವಾನವಿರಲಿಲ್ಲ. ಕೇವಲ ಬೆರಳೆಣಿಕೆಯ ವೀರಶೈವ ಮಠಾದೀಶ್ವರರ ಕಾರ್ಯಕ್ರಮವಾಗಿತ್ತು.
  • > ಸಿದ್ದಗಂಗಾ, ಸುತ್ತೂರು ಶ್ರೀಗಳನ್ನು ಆಹ್ವಾನಿಸದೇ ಇದ್ದುದ್ದು ಎಲ್ಲಾ ಲಿಂಗಾಯತರನ್ನು ಕೆರಳಿಸಿದವು. ಈ ಪ್ರದೇಶದಲ್ಲಿ ಪ್ರಭಾವವಿರುವ ಮಠಗಳು ಇವು. ಇದರ ವಿರುದ್ಧವಾಗಿ ಒಂದು ಸುದ್ದಿಘೋಷ್ಠಿಯೂ ನಡೆಯಿತು. ನಂತರ ಇಬ್ಬರೂ ಶ್ರೀಗಳ ಫೋಟೋಗಳನ್ನು ರಾತ್ರೋ ರಾತ್ರಿ ರಸ್ತೆಯಲ್ಲಿ ಹಾಕಿಸಿದರು.
  • > ಜಂಟಿ ಜಯಂತೋತ್ಸವ ನಡೆಸಲು ದೊಡ್ಡ ದೊಡ್ಡ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಸಂಘಟನೆಗಳು ಕೈಜೋಡಿಸಿದ್ದವು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, ವೀರಶೈವ ವಿದ್ಯಾರ್ಥಿ ನಿಲಯ ಟ್ರಸ್ಟ್, ವೀರಶೈವ ಲಿಂಗಾಯತ ನೌಕರರ ಸಂಘ ಇತ್ಯಾದಿ. ಇವೆಲ್ಲ ಸೇರಿ ಕಾರ್ಯಕ್ರಮದಲ್ಲಿ 150 ಜನ ಸೇರಿಸಲಾಗಲಿಲ್ಲ. ಪ್ರಸಾದ ವ್ಯವಸ್ಥೆ ಇಲ್ಲದಿದ್ದರೆ ಇನ್ನೂ ಕಡಿಮೆ ಜನ ಬರುತ್ತಿದ್ದರೇನೋ.

ಈ ಅಸಂಬದ್ಧ ಜಂಟಿ ಜಯಂತೋತ್ಸವಕ್ಕೆ ಒಂದು ಹಿನ್ನಲೆ ಇದೆ. ಸುಮಾರು 80 ಕೋಟಿ ಆಸ್ತಿಯಿರುವ ವೀರಶೈವ ವಿದ್ಯಾರ್ಥಿ ನಿಲಯ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿದೆ, ಇಲ್ಲಿ ಒಂದು ವರ್ಷದ ಹಿಂದೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪುತ್ತಳಿ ಸ್ಥಾಪಿಸಲು ಹಲವಾರು ಪ್ರಗತಿಪರ ಸಂಘಟನೆಗಳು ನಿಲಯದ ಟ್ರಸ್ಟಿನ ಅಧ್ಯಕ್ಷರಿಗೆ ಮನವಿ ಕೊಟ್ಟಿದ್ದರು. ಟ್ರಸ್ಟಿನಲ್ಲಿರುವ ಒಂದಿಬ್ಬರು ವೀರಶೈವ ಸದಸ್ಯರು ಇದಕ್ಕೆ ಅಡ್ಡಗಾಲು ಹಾಕಿ ಬಸವಣ್ಣನವರ ಜೊತೆ ರೇಣುಕಾಚಾರ್ಯರ ಜಂಟಿ ಪ್ರತಿಮೆಯನ್ನೂ ಹಾಕಬೇಕೆಂದು ಹಠಹಿಡಿದು ಕುಳಿತಿದ್ದಾರೆ. ಅವರ ಮುಂದುವರೆದ ಪ್ರಯತ್ನವೇ ಈ ಜಂಟಿ ಜಯಂತೋತ್ಸವ.

ಈ ವಿಲಕ್ಷಣ ಜಂಟಿ ಜಯಂತೋತ್ಸವದ ಹಿಂದಿರುವ ಅನೇಕ ವೀರಶೈವರು ಬಸವಣ್ಣನವರ ಹೆಸರಿರುವ ಸಂಸ್ಥೆಗಳನ್ನು ನಡೆಸುತ್ತಾರೆ. ಇವರಿಗೆ ಜನ ಸೇರಿಸಲು, ದುಡ್ಡು ಮಾಡಲು ಬಸವಣ್ಣನವರ ಹೆಸರು ಬೇಕು. ಆದರೆ ಬಸವಣ್ಣನವರ ಪ್ರಭಾವ ಬೆಳೆಯಬಾರದು. ಅದಕ್ಕೆ ಜಂಟಿ ಪ್ರತಿಮೆಯ ವಿಷಯದಲ್ಲಾಗಲಿ ಅಥವಾ ಜಂಟಿ ಜಯಂತೋತ್ಸವದಲ್ಲಾಗಲಿ ನಿರಂತರವಾಗಿ ಬಸವಣ್ಣನವರ ಹೆಗಲ ಮೇಲೆ ರೇಣುಕಾಚಾರ್ಯರನ್ನು ಕೂರಿಸುವ ಪ್ರಯತ್ನ ಮಾಡುತ್ತಾರೆ.

ಬಸವಣ್ಣನವರು ನಮ್ಮ ನಿಮ್ಮ ಹಾಗೆ ಒಬ್ಬ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರು. ಇತಿಹಾಸ ನಿರ್ಮಿಸಿದವರು, ಇತಿಹಾಸದಲ್ಲಿ ದಾಖಲಾದವರು. ರೇಣುಕಾಚಾರ್ಯ ಎಷ್ಟೋ ಲಕ್ಷ ವರ್ಷಗಳ ಹಿಂದೆ ಲಿಂಗೋದ್ಭವವಾಗಿ ಇತ್ತೀಚಿನ ಪುರಾಣಗಳಲ್ಲಿ ಕಾಣಿಸಿಕೊಳ್ಳುವ ಕಾಲ್ಪನಿಕ ವ್ಯಕ್ತಿ. ಇವರಲ್ಲಿ ಒಬ್ಬರು ಜಾತ್ಯತೀತ, ವೈಚಾರಿಕ, ಸಮಾನತೆ ಸಾರುವ ಪರಂಪರೆ ಸೃಷ್ಟಿಸಿದರು. ಇನ್ನೊಬ್ಬ ಹೆಸರಿನಲ್ಲಿ ಮೂಢನಂಬಿಕೆ, ಜಾತೀಯತೆ ಬಿತ್ತುವ ಕೆಲಸ ನಡೆದು ಬಂದಿದೆ. ಇವರಿಬ್ಬರನ್ನೂ ಸಮೀಕರಿಸುವ ಕುತಂತ್ರ ಮಂಡ್ಯದ ಲಿಂಗಯತ ಸಮಾಜಕ್ಕೆ ಅರಿವಾಗದಿರುವುದು ನಿಜಕ್ಕೂ ದುರ್ದೈವ.

ಜಿಲ್ಲೆಯಲ್ಲಿ ಮೂರುವರೆ ಲಕ್ಷ ಲಿಂಗಾಯತರಿದ್ದಾರೆ. ವೀರಶೈವರು ಬೆರಳಣಿಕೆಯಷ್ಟು ಮಾತ್ರ. 100 ಲಿಂಗಾಯತರಿಗೆ ಒಬ್ಬ ವೀರಶೈವ ಸಿಗುವುದು ಕಷ್ಟ ಇಲ್ಲಿ. ಆದರೂ ಬಸವ ತತ್ವ ಪ್ರಚಾರಕ್ಕೆ ಅಡ್ಡವಾಗಿ ನಿಂತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರಲ್ಲಿರುವ ಪ್ರಭಾವಕ್ಕಿಂತ ನಿರ್ಲಿಪ್ತವಾಗಿ ಆಳವಾದ ನಿದ್ರೆಯಲ್ಲಿರುವ ಲಿಂಗಾಯತ ಸಮುದಾಯ.

ಮಂಡ್ಯದಲ್ಲಿ ನಾಲ್ಕು ಪಂಚಪೀಠಗಳ ಶಾಖೆಗಳಿವೆ. 40 ಲಿಂಗಾಯತ ಮಠಗಳಿವೆ. ಆದರೆ ಆದರೆ ಇವು ಯಾವುವೂ ಬಸವ ನಿಷ್ಟೆಯಿಂದ ಕೆಲಸ ಮಾಡುತ್ತಿಲ್ಲ. ಕೆಲವರು ಹಣ ಮಾಡಲು ಕುಂಕುಮ ಇಟ್ಟುಕೊಂಡಿದ್ದಾರೆ, ಏನೇನೋ ದಂದೆಗಳನ್ನೂ ನಡೆಸುತ್ತಾರೆ. ಇದು ಮಂಡ್ಯದ ಮುಖ್ಯ ಸಮಸ್ಯೆ.

Share This Article
1 Comment
  • ವೀರಶೈವರು ಯಾರು ಇಲ್ಲ ವೀರಶೈವರು ಇಷ್ಟಲಿಂಗ ಧರಿಸುವುದಿಲ್ಲ ಮತ್ತು ವೀರಶೈವರು ಲಿಂಗಾಯತರಾಗಲು ಸಾಧ್ಯವಿಲ್ಲ. ಆದ್ದರಿಂದ ಅವರ ಜೊತೆ ಬಸವಣ್ಣನವರ ಜಯಂತಿ ಮಾಡುವ ಅವಶ್ಯಕತೆಯಿಲ್ಲ .
    ಆದರೆ ವಿಪರ್ಯಾಸವೆಂದರೆ ಎಲ್ಲರೂ ಲಿಂಗಾಯತರೆ ಆದರೆ ಯಾಕೆ ವೀರಶೈವ ಪದಕ್ಕೆ ತಲೆಕೆಡಿಸಿಕೊಂಡಿದ್ದಾರೆ ಅವರನ್ನ ಬಿಟ್ಟೆ ಕಾರ್ಯಕ್ರಮ ಮಾಡೋಣ ಯಾಕೆ ಚಿಂತೆ….ಅವರು ಬೇಕಾದರೆ ರೇಣುಕಾಚಾರ್ಯರರನ್ನ ಪ್ರತ್ಯೇಕ ಮಾಡಿಕೊಳ್ಳಲಿ. ಆಗ ನೋಡೋಣ ಮುಂದಿನ ದಿನಗಳಲ್ಲಿ ಅವರ ಅಸ್ಥಿತ್ವವು ಎಷ್ಷಮಟ್ಟರ ಮಟ್ಟಿಗೆ ನಿಲ್ಲಬಹುದು ಅಂತ..

    ಆಗಿನ ವೀರಶೈವರು ಲಿಂಗಾಯತ ತತ್ವಸಿದ್ದಾಂತಗಳನ್ನ ಒಪ್ಪಿ ಲಿಂಗಾಯತರಾಗಿದ್ದಾರೆ ಅದರ ಅರಿವು ಅವರು ಪಡೆದು ಬಸವಣ್ಣನವರನ್ನ ಒಪ್ಪಿ ಬಂದರೆ ಒಟ್ಟಿಗೆ ಅಂದರೆ ಬಸವಣ್ಣನವರ ಜಯಂತಿ ಅಥವಾ ಬಸವನ ಅರಿವಿನ ಕಾರ್ಯಕ್ರಮ ಮಾಡೋಣ

Leave a Reply

Your email address will not be published. Required fields are marked *

ಲೇಖಕರು ಸಂಚಾರಿ ಜಂಗಮರು +91 8123676900