ಗೋಕಾಕ
ಗೊಕಾಕ ತಾಲ್ಲೂಕಿನ ಬೂದಿಹಾಳ ಗ್ರಾಮದಲ್ಲಿ ಲಿಂಗಾಯತರ ಧರ್ಮ ನಿಜಾಚರಣೆಯಂತೆ ಶತಾಯುಷಿ ಶರಣೆಯೊಬ್ಬರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನೆರವೇರಿತು.
104 ವರ್ಷದ ಶರಣೆ ಶ್ರೀಮತಿ ಸಿದಲಿಂಗವ್ವ ನಿಂಗಪ್ಪ ದೊಡ್ಡಮನಿ ಇವರ ಜನ್ಮ ಶತಮಾನೋತ್ಸವವನ್ನು ಅವರ ಮಕ್ಕಳು ಮತ್ತು ಸೊಸೆಯಂದಿರಾದ ಶರಣೆ ಕಾಶವ್ವ ಮತ್ತು ಶರಣ ಬಸಲಿಂಗಪ್ಪ ನಿಂ. ದೊಡ್ಡಮನಿ, ಶರಣೆ ಸಾವಿತ್ರಮ್ಮ ಮತ್ತು ಶರಣ ಬಾಳಪ್ಪ ನಿಂ. ದೊಡ್ಡಮನಿಯವರು ಸುಲದಾಳ ಗ್ರಾಮದ ಶ್ರೀ ಜಡಿ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದರು.

ಜನ್ಮ ಶತಮಾನೋತ್ಸವದ ನಿಮಿತ್ತ ಇಷ್ಟಲಿಂಗ ಪೂಜೆ ಹಾಗೂ ಇಷ್ಟ ಲಿಂಗ ದೀಕ್ಷೆ ಕಾರ್ಯಕ್ರಮ
ನಡೆಯಿತು. ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಸಂಚಾರಿ ಗುರುಬಸವ ಬಳಗದ ಬೆಳಗಾವಿ ಜಿಲ್ಲಾ ಸಂಚಾಲಕ ಶರಣ ಮಹಾಂತೇಶ ತೋರಣಗಟ್ಟಿ ನೆರವೇರಿಸಿದರು.

ನಂತರ ಶ್ರೀ ಜಡೆ ಸಿದ್ದೇಶ್ವರ ಕರ್ತೃ ಗದ್ದಿಗೆಯಿಂದ ಕಲ್ಯಾಣ ಮಂಟಪದವರೆಗೂ ಅಜ್ಜಿಯನ್ನು ವಚನ ಪಠಣ ಹಾಗೂ ಗುರು ಮಂತ್ರದೊಂದಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮುಖ್ಯ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ಜಗಜ್ಯೋತಿ ಶ್ರೀ ಬಸವೇಶ್ವರರ ಭಾವಪೂಜೆ ಹಾಗೂ ಷಟಸ್ಥಲ ಧ್ವಜಾರೋಹಣ, ಸಂಚಾರಿ ಗುರುಬಸವ ಬಳಗದ ಶರಣೆಯರಿಂದ ವಚನ ಪ್ರಾರ್ಥನೆ, ವಚನ ಗಾಯನ, ಕವನಗಳ ವಾಚನ, ವಚನಧಾರಿತವಾಗಿ ಅಜ್ಜಿಯ ಗುಣಗಾನ ಹೀಗೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದ ಎಲ್ಲಾ ನಿರ್ವಹಣೆಯನ್ನು ಸಂಚಾರಿ ಗುರು ಬಸವ ಬಳಗ ಬೆಳಗಾವಿ ಇವರಿಂದ ನಡೆಯಿತು. ಇದೇ ಸಂದರ್ಭದಲ್ಲಿ ಕವನ ವಾಚನವನ್ನು ಡಾ. ಅಡಿವೇಶ ಇಟಗಿ, ಆನಂದ ಕೊಂಡಗುರಿ ಗೈದರು. ವಚನ ಗಾಯನವನ್ನು ವಕೀಲ ಬಿ.ಪಿ. ಜೇವಣಿ ಮಾಡಿದರು.
ಅತಿಥಿಗಳಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಹಾಂತೇಶ ಭಜಂತ್ರಿ ಅವರು ಅನುಭವ ನುಡಿಗಳನ್ನು ಆಡಿದರು.

ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತುಗಳನ್ನು ಬಾಳಗೌಡ ಪಾಟೀಲ ಆಡಿದರು. ಸಿ. ಎಂ. ಬೂದಿಹಾಳ, ಪ್ರವೀಣ ರೊಟ್ಟಿ, ಅಶೋಕ ಯಾಳಗಿ, ಮಲ್ಲಿಕಾರ್ಜುನ, ಸಂಚಾರಿ ಗುರು ಬಸವ ಬಳಗ, ಜಾಗತಿಕ ಲಿಂಗಾಯತ ಮಹಾಸಭೆಯ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ದೊಡ್ಡಮನಿ ಕುಟುಂಬದ ಬಂಧು-ಬಾಂಧವರು ಉಪಸ್ಥಿತರಿದ್ದರು.



ಶರಣು
ಶರಣುಗಳು🙏🙏