ಮೈಸೂರಿನಲ್ಲಿ ಟಿಪ್ಪು ಮಸೀದಿಯಿಂದ ಬಸವ ಕೇಂದ್ರಕ್ಕೆ ಸೌಹಾರ್ದ ಪಾದಯಾತ್ರೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಮೈಸೂರು

ಮೈಸೂರಿನ ಬಸವ ಧ್ಯಾನ ಮಂದಿರದ 15ನೇ ವಾರ್ಷಿಕೋತ್ಸವವು ರವಿವಾರ ನಡೆಯಿತು. ನಗರದ ರಮ್ಮನಹಳ್ಳಿಯಲ್ಲಿರುವ ಭಾವೈಕ್ಯತೆ ಕೇಂದ್ರದ ಉತ್ಸವದ ಅಂಗವಾಗಿ ಹಲವಾರು ಸೌಹಾರ್ದತೆ ಸಾರುವ ಕಾರ್ಯಕ್ರಮಗಳು ನಡೆದವು.

ಮುಂಜಾನೆ ಆರು ಗಂಟೆಗೆ ಬಸವ ಧ್ಯಾನ ಮಂದಿರದ ಮುಖ್ಯಸ್ಥರಾದ ಶ್ರೀ ಬಸವಲಿಂಗ ಮೂರ್ತಿ ಶರಣರು ಇಷ್ಟಲಿಂಗ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು ಇಷ್ಟಲಿಂಗದ ಮಹತ್ವ, ಪ್ರಯೋಜನ ಕುರಿತು ಸೇರಿದ್ದ ಭಕ್ತಾದಿಗಳಿಗೆ ತಿಳಿಸುತ್ತಾ, ಇಷ್ಟಲಿಂಗವು ಜಗತ್ತಿನ ಶ್ರೇಷ್ಠ ದೃಷ್ಟಿಯೋಗವಾಗಿದೆ. ಭಾರತದ ಯಾವುದೇ ಸಂಪ್ರದಾಯದಲ್ಲೂ ಇಂತಹ ವೈಜ್ಞಾನಿಕ ಆಚರಣೆ ಕಂಡುಬಂದಿಲ್ಲ. ಲಿಂಗಾಯತ ಧರ್ಮದ ಶ್ರೇಷ್ಠತೆಯಿದು. ಲಿಂಗಾಯತ ಧರ್ಮದ, ಬಸವಾದಿ ಶರಣರು ರಚಿಸಿದ ವೈಚಾರಿಕ, ವೈಜ್ಞಾನಿಕತೆಯ ವಚನಗಳಿಂದ ಸಹಸ್ರಾರು ಜನ ಬೆಳಕು ಕಂಡಿದ್ದಾರೆ, ಆ ಬೆಳಕಿನ ದಾರಿಯಲ್ಲಿ ಅವರೆಲ್ಲ ನಡೆಯುತ್ತಿದ್ದಾರೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಭಾವಿತರಾದ 12 ಜನ ಭಕ್ತರು ಶರಣರಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದುಕೊಂಡರು. ನಂತರದಲ್ಲಿ ಸಿ.ಎಫ್.ಟಿ. ಆರ್.ನ ನಿವೃತ್ತ ಖ್ಯಾತ ವಿಜ್ಞಾನಿಗಳಾದ ಅಂಕಪ್ಪನವರು ಕಾರ್ಯಕ್ರಮದ ವಚನ ಪಠಣ ನಡೆಸಿಕೊಟ್ಟರು.

ಒಂಭತ್ತು ಗಂಟೆಗೆ ಬಸವದ್ವಜಾರೋಹಣ ನಡೆಯಿತು. ಉರಲಿಂಗಪೆದ್ದಿ ಮಠದ ಪೂಜ್ಯ ಜ್ಞಾನಪ್ರಕಾಶ ಸ್ವಾಮಿಗಳು ಧ್ವಜಾರೋಹಣವನ್ನು ನೆರವೇರಿಸಿದರು. ಆ ಸಂದರ್ಭದಲ್ಲಿ ಅವರು ಮಾತನಾಡಿ, ಲಿಂಗಾಯತ ಧರ್ಮ ಜಗತ್ತಿನ ವೈಜ್ಞಾನಿಕ ಧರ್ಮವಾಗಿದೆ. ಇದರ ನೆರಳಿನಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಷಟಸ್ಥಲ, ಪಂಚಾಚಾರ, ಅಷ್ಟಾವರ್ಣ ತತ್ವಗಳು ನಮ್ಮ ಜೀವಾಳವಾಗಿವೆ. ಇವನ್ನು ಅರಿತು ಆಚರಿಸಿದರೆ ಪ್ರತಿಯೊಬ್ಬ ಮಾನವ ಯಾವುದೇ ಗೊಂದಲಕ್ಕೆ ಈಡಾಗದೆ ಆನಂದವಾಗಿರಬಹುದು. ಸರಳ, ಆಡಂಬರರಹಿತ ಜೀವನ ಸಾಗಿಸಬಹುದು ಎಂದು ತಿಳಿಸಿದರು.

ನಂತರದಲ್ಲಿ ಟಿಪ್ಪು ಮಸೀದಿಯಿಂದ ಆರಂಭವಾದ ಸೌಹಾರ್ದ ಪಾದಯಾತ್ರೆಗೆ ಜ್ಞಾನಪ್ರಕಾಶ ಸ್ವಾಮೀಜಿ ಚಾಲನೆ ನೀಡಿದರು. ಭಾವೈಕ್ಯತೆಯ, ಸೌಹಾರ್ದತೆಯ ಮಹತ್ವ ಕುರಿತು ಮಾತನಾಡಿದರು. ಪಾದಯಾತ್ರೆ ಬಸವ ಧ್ಯಾನ ಮಂದಿರದವರೆಗೆ ನಡೆಯಿತು.

ಶ್ರೀ ಬಸವಲಿಂಗ ಮೂರ್ತಿ ಶರಣರು, ಜ್ಞಾನಪ್ರಕಾಶ ಮಹಾಸ್ವಾಮಿಗಳು, ಸೂಫಿ ಸಂತರು, ದಾನಿಗಳಾದ ಸಲ್ಮಾ ಸಿದ್ದಿಖ, ಟಿಪ್ಪು ಟ್ರಸ್ಟ್ ಮುಖ್ಯಸ್ಥ ಕೆ. ಅಬ್ದುಲ್ ಅಜೀಜ್, ಮೈಸೂರಿನ ಉಪಮೇಯರ್ ಮೊಹಮ್ಮದ್ ಶಫಿ, ಲಿಂಗಾಯತ, ಹಿಂದೂ, ಮುಸ್ಲಿಂ ನಾಯಕರು, ಮಕ್ಕಳು, ಸಾರ್ವಜನಿಕರು ಯಾತ್ರೆಯಲ್ಲಿ ಸೌಹಾರ್ದ ಹೆಜ್ಜೆ ಹಾಕಿದರು.

ಸಭಾ ಕಾರ್ಯಕ್ರಮವು ಪೂಜ್ಯ ಜಯದೇವಿ ತಾಯಿಯವರು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಸರ್ವಧರ್ಮ ಪ್ರಾರ್ಥನೆ ಸಹ ನಡೆಯಿತು.

ಈ ಸಂದರ್ಭದಲ್ಲಿ ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡುತ್ತ, ಇಂತಹ ಭಾವೈಕ್ಯತೆಯ ಕಾರ್ಯಕ್ರಮಗಳು ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ನಡೆಯಬೇಕು. ಸೌಹಾರ್ದತೆಗೆ ಬೆಂಕಿ ಹಚ್ಚುವವರು ಹೆಚ್ಚಾಗಿದ್ದಾರೆ,‌ ಜ್ಯೋತಿ ಬೆಳಗುವವರು ಕಡಿಮೆಯಾಗಿದ್ದಾರೆ. ಮೈಸೂರಿನ ಈ ಬಸವ ಧ್ಯಾನ ಮಂದಿರವು ಜ್ಯೋತಿಯಿಂದ ಜ್ಯೋತಿಯನ್ನು ಹೊತ್ತಿಸಿ, ಸಮಾಜಕ್ಕೆ ಬೆಳಕನ್ನು ಕೊಡುವಂತಹ ಕಾರ್ಯಕ್ರಮಗಳನ್ನು ಕಳೆದ 16 ವರ್ಷಗಳಿಂದ ನಡೆಸುತ್ತ ಬಂದಿದೆ. ಸಮಾಜಸೇವೆಗಾಗಿ ಶ್ರೀ ಬಸವಲಿಂಗ ಮೂರ್ತಿ ಶರಣರು ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಈ ಬಸವ ಭಾವೈಕ್ಯ ಕೇಂದ್ರದಲ್ಲಿ ಅಂತರ್ಜಾತಿ ವಿವಾಹಗಳು, ಅಂತರ್ಧರ್ಮಿಯ ವಿವಾಹಗಳು ನಡೆದಿವೆ. ಎಷ್ಟೋ ಹಿಂದೂ-ಮುಸ್ಲಿಮರ ನಡುವಿನ ಜಗಳಗಳನ್ನು ಬಗೆಹರಿಸಲಾಗಿದೆ. ಇಂತಹ ಧ್ಯಾನ ಮಂದಿರ ಊರಿಗೊಂದು ಇದ್ದರೆ ಸಮಾಜದಲ್ಲಿ ಹಲವು ಪ್ರಗತಿಪರವಾದ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ ಎಂದರು.

ಎವರೆಸ್ಟ್ ಶಿಖರಾರೋಹಿಗಳಾದ ಹಿಮಾಲಯನ್ ಪಾಷಾ ಅವರು ಮಾತನಾಡಿ, ಇಂಥ ಭಾವೈಕ್ಯತಾ ಕಾರ್ಯಕ್ರಮವನ್ನು ನಾನು ಎಲ್ಲೂ ನೋಡಿರಲಿಲ್ಲ. ಇದೇ ಪ್ರಥಮ ಬಾರಿಗೆ ಇಂತಹ ಕಾರ್ಯಕ್ರಮವನ್ನು ನೋಡುತ್ತಿದ್ದೇನೆ ಎಂದು ಖುಷಿ ಪಟ್ಟರು.

ಮೈಸೂರಿನ ಬೌದ್ಧ ಬಿಕ್ಕು ಡಾ. ಕಲ್ಯಾಣಸಿರಿ ಬಂತೆಜಿ ಸಹ ಮಾತನಾಡಿದರು.

ಸ್ಥಳದಾನಿಗಳಾದ ಸಲ್ಮಾ ಸಿದ್ದಿಕ್, ವಕೀಲ ಅಂಬಳೆ ಶಿವಾನಂದ ಸ್ವಾಮಿ, ಶ್ರೀನಿವಾಸರಾವ್,
ಅನೇಕ ಸೂಫಿ ಸಂತರು ಮಾತನಾಡಿದರು.

ಬಸವ ಧ್ಯಾನ ಮಂದಿರಕ್ಕೆ ಸ್ಥಳ ದಾನ ಮಾಡಿರುವ, ಖ್ಯಾತ ಹಿಂದುಸ್ತಾನಿ ಹಾಗೂ ಗಜಲ್ ಗಾಯಕ ದಿವಂಗತ ಜಾಹಿದುಲ್ಲಾ ಖಾನ್ ಅವರಿಗೆ ನುಡಿನಮನ ಸಲ್ಲಿಸಲಾಯಿತು. ನಾಡಿನಲ್ಲಿ ಸಮಾಜಸೇವೆಯಲ್ಲಿ ತೊಡಗಿದ ಹಲವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಕಾರ್ಯಕ್ರಮದ ಕೊನೆಗೆ ಲಿಂಗಾಯತ, ಹಿಂದೂ, ಮುಸ್ಲಿಂ ಕ್ರಿಶ್ಚಿಯನ್, ಬೌದ್ಧರ ಸಹಪಂಕ್ತಿ ಭೋಜನ ಭೋಜನ ನಡೆಯಿತು. ಭೋಜನ ಪ್ರಸಾದವನ್ನು ಸ್ವೀಕರಿಸಿದ ಎಲ್ಲರೂ ಸಂತಷಪಟ್ಟರು. ಇಂತಹ ಕಾರ್ಯಕ್ರಮಗಳು ಎಲ್ಲಾಕಡೆ ಹೆಚ್ಚೆಚ್ಚು ನಡೆಯಲೆಂದು ಅಭಿಪ್ರಾಯಪಟ್ಟರು.

ಮುಡುಕುತೊರೆ ಉರಲಿಂಗಪೆದ್ದಿ ಶಾಖಾ ಮಠದ ಸಿದ್ದರಾಮಯ್ಯ ಸ್ವಾಮಿಗಳು, ತುರುವೇಕೆರೆ ಅಲ್ಲಮಪ್ರಭು ಮಹಾಸಂಸ್ಥಾನ ಮಠದ ತಿಪ್ಪೇರುದ್ರ ಸ್ವಾಮಿಗಳು, ಕೆ. ಆರ್. ನಗರದ ಗುರುಮಲ್ಲೇಶ್ವರ ದಾಸೋಹ ಮಠದ ಜಯದೇವಿ ತಾಯಿ, ರಾಷ್ಟ್ರೀಯ ಬಸವದಳದ ಮೈಸೂರಿನ ಸಂಚಾಲಕ ಜಯಣ್ಣ, ಚಂದ್ರಪ್ಪ,
ಮೈಸೂರಿನ ಖ್ಯಾತ ಸೂಫಿ ಸಂತರಾದ ಕ್ವಾಜಾ ಅಜೀಮ್ ಅಲಿಷ ಚಿಸ್ತಿ, ಹಲವಾರು ಸೂಫಿ ಸಂತರು, ರಾಷ್ಟ್ರೀಯ ಬಸವದಳದ ಕಾರ್ಯಕರ್ತರು, ಬಸವಭಕ್ತರು, ಬಸವಪ್ರೇಮಿಗಳು ಉಪಸ್ಥಿತರಿದ್ದರು.

Share This Article
3 Comments
  • ದೇಶದಲ್ಲಿನ ಹಾಗು ಪ್ರಪಂಚದಲ್ಲಿ ಕ್ರೌರ್ಯ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳ ಸಂದರ್ಭದಲ್ಲಿ ಈ ಬೆಳವಣಿಗೆ ಶ್ಲಾಘನೀಯವಾದದ್ದು

  • ಎಂಥಹ ಅಧ್ಬುತ ಸಂದೇಶ‌ ಕೊಟ್ಟಿದಾರೆ ಇವರೆಲ್ಲ , ಅನುಕರಣೀಯ , ಎಲ್ಲ ಧರ್ಮದ ಅನುಯಾಯಿಗಳು ಸೇರಿ ಸಹಪಂಕ್ತಿ ಭೋಜನ , ಬಸವ ಕೇಂದ್ರಕ್ಕೆ ಜಾಗಕೊಟ್ಟವರ ಹೆಸರನ್ನು ವೇದಿಕೆಗೆ ಇಟ್ಟಿದಾರೆ ,ಇವೇ ನಮ್ಮ ಭಾವೈಕ್ಯದ ಆಚರಣೆಗಳು ಮಾನವೀಯತೆಯನ್ನು ಜೀವಂತ ಇಟ್ಟಿವೆ, ಎಲ್ಕರಿಗೂ ಶರಣು ಶರಣಾರ್ಥಿಗಳು.

  • ದಯವೆ ಧಮ೯ದ ಮೂಲವಯ್ಯ ಎನ್ನುವ ವಾತಾವರಣ ಆರಂಭವಾಗುದನ್ನು ನೆನಪಿಸುವ ಕಾಯ೯ಕ್ರಮವಾಗಿದೆ ಇವನಾರವ ಎನ್ನದೆ ಇವ ನಮ್ಮವನೆಂದು ಸವ೯ರನ್ನು ಇಂಬಿಟ್ಟುಕೊಳ್ಳುವ ಸಂಸ್ಕ್ರತಿಯನ್ನು ಉಳಿಸಿ ಬೆಳಸಲು ಮುಂದಾಗೋಣ.

Leave a Reply

Your email address will not be published. Required fields are marked *