ಬೆಳಗಾವಿ
ಹುನಗುಂದದ ಪ್ರಗತಿಪರ ರೈತರು, ಸಾಂಸ್ಕೃತಿಕ ಶಕ್ತಿ, ಜನಪದ ವಿದ್ವಾಂಸರು,ಆಧ್ಯಾತ್ಮಿಕ ಜೀವಿ, ಬೇಸಾಯದ ವಿಜ್ಞಾನಿಯಾಗಿ ಹಲವು ಕ್ಷೇತ್ರದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಧೀಮಂತ, ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಡಾ. ಮಲ್ಲಣ್ಣ ನಾಗರಾಳ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
ತಮ್ಮ ಸಂಪರ್ಕಕ್ಕೆ ಬಂದ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಘನಮಠದ ನಾಗಭೂಷಣ ಶಿವಯೋಗಿಗಳು ತಾವು ಬರೆದ ಕೃಷಿ ಜ್ಞಾನ ಪ್ರದೀಪಿಕೆ ಎಂಬ ಮಹಾ ಗ್ರಂಥದ ಒಂದು ಪ್ರತಿಯನ್ನು ನಾಗರಾಳ ಮನೆತನಕ್ಕೆ ಕೊಟ್ಟಿದ್ದರು ಎಂಬುದು ಗಮನಾರ್ಹ ಸಂಗತಿ. ಇದೇ ಹಸ್ತಪ್ರತಿಯನ್ನು ಡಾ. ಫ. ಗು. ಹಳಕಟ್ಟಿ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ.
ಮಲ್ಲಣ್ಣನವರು ಕೃಷಿ ಜ್ಞಾನ ಪ್ರದೀಪಿಕೆ, ಶರಣ ಸಾಹಿತ್ಯ ಮತ್ತು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಶ್ರೀ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಕುರಿತು ತಾಸಾನುಗಟ್ಟಲೆ ಮಾತನಾಡುತ್ತಿದ್ದರು. ನಮ್ಮಂತಹ ಸಣ್ಣವರು ಬರೆದ ಲೇಖನ ಪುಸ್ತಕ ಓದಿ ಆ ಕುರಿತು ಫೋನ್ ಮಾಡಿ ಬಹಳ ಹೊತ್ತು ಮಾತಾಡುತ್ತಿದ್ದರು. ಚರ್ಚೆ ಮಾಡುತ್ತಿದ್ದರು. ಅವರೊಂದಿಗೆ ಮಾತಾಡಿದರೆ ಹತ್ತಾರು ಪುಸ್ತಕಗಳನ್ನು ಓದಿದ ಅನುಭವ ಆಗುತ್ತಿತ್ತು. ಅಷ್ಟೊಂದು ಆಳವಾದ ವಿದ್ವತ್ತು ಅವರಲ್ಲಿತ್ತು. ಆ ವಿದ್ವತ್ತಿಗೆ ತಕ್ಕಂತಹ ವಿನಯತೆ ನಮ್ರತೆ ಅವರಲ್ಲಿತ್ತು.
ತಾನು ಮಹಾಜ್ಞಾನಿ ಎಂಬ ಅಹಂಕಾರ ಅವರಲ್ಲಿ ಇರಲಿಲ್ಲ. ಕೃಷಿ ಜ್ಞಾನ ಕುರಿತು ನಾಡಿನ ತುಂಬ ನೂರಾರು ಉಪನ್ಯಾಸ ನೀಡಿದರು. ಕೃಷಿ ಕುರಿತು ಅವರಿಗೆ ಎಷ್ಟು ಹೇಳಿದರೂ ಬೇಸರವಾಗುತ್ತಿರಲಿಲ್ಲ. ಅಷ್ಟೊಂದು ಪ್ರೀತಿ ಕೃಷಿ ಕುರಿತು ಅವರಿಗಿತ್ತು.
ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಕುರಿತು ನಾನು ಬರೆದ ಸಂಪಾದಿಸಿದ ಕೃತಿಗಳನ್ನು ಓದಿ ಹೃದಯ ತುಂಬಿ ನನ್ನನು ಹರಸಿದ್ದರು. ಇಂತಹ ಹದುಳ ಹೃದಯಿಗಳು ಇಂದು ಸಿಗುವುದು ತುಂಬ ದುರ್ಲಭ.
ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾ. ಸಿದ್ಧರಾಮ ಮಹಾಸ್ವಾಮಿಗಳು ಅವರನ್ನು ಸತ್ಕರಿಸಿದರು. ಆಗ ಭೇಟಿ ಆಗಿ, ಪರಿಚಿತರಾಗಿದ್ದ ಮಲ್ಲಣ್ಣನವರು ನಾನು ಬರೆದ ಲೇಖನಗಳು ಓದಿ ತುಂಬ ಖುಷಿ ಪಟ್ಟು ತಕ್ಷಣ ಫೋನ್ ಮಾಡಿ ಖುಷಿ ಹಂಚಿಕೊಳ್ಳುತ್ತಿದ್ದರು.
ಇಂತಹ ಅಪರೂಪದ ಕೃಷಿ ಸಾಧಕರೊಬ್ಬರು ಇಂದು ಲಿಂಗೈಕ್ಯರಾಗಿದ್ದಾರೆ. ಇದರಿಂದ ಕನ್ನಡ ನಾಡು ಅಕ್ಷರಶಃ ಒಬ್ಬ ಕೃಷಿ ಸಂತನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
