ವಿವಾದದ ನಂತರ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಬಸವ ಸ್ಮರಣೆ

ಮಂಜು ಕಲಾಲ
ಮಂಜು ಕಲಾಲ

ಬಸವನಬಾಗೇವಾಡಿ

ಆಮಂತ್ರಣ ಪತ್ರಿಕೆಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಬಿಟ್ಟು ವಿವಾದವೆಬ್ಬಿಸಿದ್ದ ಬಸವನಬಾಗೇವಾಡಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಬಸವ ಸ್ಮರಣೆಯೊಂದಿಗೆ ಶುರುವಾಯಿತು.

ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಂಡು ಸರಿ ಸಮಾನತೆಯ ಬೀಜವನ್ನು ಬಿತ್ತಿದರು. ಬಸವಣ್ಣ ಬಿತ್ತಿದ ಬೆಳೆಯು ಇಂದಿಗೂ ಜಗವನ್ನು ಬೆಳಗುತ್ತಿದೆ ಎಂದು ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಿದ್ಧರಾಮ ಬಿರಾದಾರ ಹೇಳಿದರು.

ತಾಲ್ಲೂಕಿನ ಇವಣಗಿ ಗ್ರಾಮದ ವರದಾನಿ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ಕಟ್ಟಿ ಕನ್ನಡವನ್ನು ಗಟ್ಟಿಗೊಳಿಸಿ ವಚನ ಸಾಹಿತ್ಯವನ್ನು ರಚಸಿದ ವಚನಕಾರರು ಕನ್ನಡವನ್ನು ಸರಳ ಮಾಡಿ ಕೊರಳ ಹಾರವನ್ನಾಗಿಸಿ ಬೆರಳ ಕಚ್ಚುವಂತೆ ಮಾಡಿದ್ದು ನಿಜಕ್ಕೂ ಅದ್ಭುತ ಎಂದು ಹೇಳಿದರು.

ಬಸವನಬಾಗೇವಾಡಿ ತಾಲ್ಲೂಕಿನ ಇತಿಹಾಸ ಬಹಳ ಪುರಾತನ ಅಷ್ಟೇ ಗಟ್ಟಿಯಾಗಿದೆ. ಇಲ್ಲಿನ ಶಾಸನಗಳು ಮತ್ತು ಪ್ರಾಚೀನ ಗ್ರಂಥಗಳು ನಾಡಿನ ಹಿರಿಮೆ ಗರಿಮೆ ಸಾರಿ ಹೇಳಿವೆ. ಈ ನೆಲದ ಭಾಷೆಯ ಸೊಗಡು ಎಲ್ಲರನ್ನೂ ಮುದಗೊಳಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ನಾಡು, ನುಡಿ, ನೆಲ, ಜಲದ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಪಡಬೇಕು ಎಂದು ಹೇಳಿದರು.

ವಕೀಲ ಚಂದ್ರಶೇಖರ ಸುಭಾನಪ್ಪರ ಮಾತನಾಡಿ, ಸಾಹಿತ್ಯ ಸಮ್ಮೇಳನಗಳಲ್ಲಿ ನಾಡು, ನುಡಿ, ನೆಲ, ಜಲ, ಸಾಹಿತ್ಯದ ಬಗ್ಗೆ ಗೋಷ್ಢಿಗಳು ನಡೆಯುವ ಹಾಗೆ ರೈತರ ಕುರಿತಾದ ಗೋಷ್ಠಿಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಸಾನಿಧ್ಯ ವಹಿಸಿದ್ದ ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಬಸವನಬಾಗೇವಾಡಿಯ ಸಿದ್ಧಲಿಂಗ ಸ್ವಾಮೀಜಿ, ಆನಂದ ದೇವರು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ, ವಕೀಲ ಬಿ.ಕೆ.ಕಲ್ಲೂರ, ಡಿ.ಎಸ್.ಎಸ್ ಮುಖಂಡ ಅಶೋಕ ಚಲವಾದಿ, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ‌ ಹಾರಿವಾಳ, ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಡೋಣೂರ ಮಾತನಾಡಿದರು.

ಗ್ರಾ.ಪಂ ಅಧ್ಯಕ್ಷ ಅಣ್ಣುಗೌಡ ಬಿರಾದಾರ, ಬಿಇಓ ವಸಂತ ರಾಠೋಡ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಈರಣ್ಣ ಬೆಕಿನಾಳ ಇದ್ದರು.

ವೈ.ಎನ್.ಮಿಣಜಗಿ ಸ್ವಾಗತಿಸಿದರು, ಭೀಮರಾಯ ಚಕ್ರಮನಿ ನಿರೂಪಿಸಿದರು, ಶಿವು ಮಡಿಕೇಶ್ವರ ವಂದಿಸಿದರು.

ಭವ್ಯ ಮೆರವಣಿಗೆ: ಸಮ್ಮೇಳನಾಧ್ಯಕ್ಷರ ಮರವಣಿಗೆ ಸಡಗರ ಸಂಭ್ರಮದಿಂದ ನಡೆಯಿತು. ಮೆರವಣಿಗೆಗೆ ತಹಶೀಲ್ದಾರ ವೈ.ಎಸ್.ಸೋಮನಕಟ್ಟಿ ಚಾಲನೆ ನೀಡಿದರು.

ನಂತರ ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷ ಸಾಹಿತಿ ಸಿದ್ಧರಾಮ ಬಿರಾದಾರ ಅವರನ್ನು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಮ್ಮೇಳನದ ವರದಾನಿ ಲಕ್ಕಮ್ಮ ಮುಖ್ಯ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ಮೆರವಣಿಗೆಯಲ್ಲಿ ನರಸಲಗಿ, ಬಸವನಬಾಗೇವಾಡಿ ಎಲ್.ಟಿ-3 ರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರ ಲಂಬಾಣಿ ನೃತ್ಯ, ಸಾರವಾಡದ ಗೊಂಬೆ ಕುಣಿತ, ಶಕ್ತಿ ಜಗ್ಗಹಲಗಿ ಕಲಾತಂಡ, ಮುರಾಳ ಗ್ರಾಮದ ಕರಡಿ ಮಜಲು, ಡೊಳ್ಳುಕುಣಿತ, ಹಲಗೆ ವಾದ್ಯ, ಕುಂಭಮೇಳ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿತು.

ಹೋಳಿಗೆ ಊಣಬಡಿಸಿದ ಗ್ರಾಮಸ್ಥರು: ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಜನರಿಗೆ ಗ್ರಾಮಸ್ಥರು ಹೂರಣದ ಹೋಳಿಗೆ, ಚಪಾತಿ, ಬದನೆಕಾಯಿ ಪಲ್ಲೆ, ಅನ್ನ, ಸಾಂಬಾರ ಊಣಬಡಿಸಿದರು. 50ಕ್ಕೂ ಹೆಚ್ಚು ಮಹಿಳೆಯರು ಹೋಳಿಗೆ ತಯಾರಿಸಿದರು. ಸಮ್ಮೇಳನದ ವ್ಯವಸ್ಥೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

Share This Article
Leave a comment

Leave a Reply

Your email address will not be published. Required fields are marked *