ನೆನ್ನೆ ನಗರದಲ್ಲಿ ಪ್ರತಿಭಟನೆ, ಆರ್ಚ್ ಬಿಷಪ್ ಅವರಿಂದ ಘಟನೆಯ ಖಂಡನೆ
ಬೆಂಗಳೂರು
ವೀರಭದ್ರನಗರ ಬಸ್ ನಿಲ್ದಾಣದ ಬಳಿ ಇರುವ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ವಿರೂಪಗೊಳಿಸಿದ್ದ ಆರೋಪದ ಅಡಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಆಂಧ್ರ ಪ್ರದೇಶ ಮೂಲದ ಶಿವಕೃಷ್ಣ (34) ಎಂಬಾತನನ್ನು ವ್ಯಕ್ತಿಯನ್ನು ಗಿರಿನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬ್ಯಾಡರಹಳ್ಳಿಯ ಭರತ್ನಗರ ನಿವಾಸಿ ಶಿವಕೃಷ್ಣ ಅವಿವಾಹಿತನಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಏಳು ವರ್ಷಗಳ ಹಿಂದೆ ಶಿವಕೃಷ್ಣ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ. ನವೆಂಬರ್ 29 ವೀರಭದ್ರನಗರಕ್ಕೆ ಹೋಗಿದ್ದಾಗ ಪುತ್ಥಳಿ ಗಮನಿಸಿದ್ದ. ನವೆಂಬರ್ ನ.30ರಂದು ತಡ ರಾತ್ರಿ ಅಲ್ಲಿಗೆ ಹೋಗಿ ಸುತ್ತಿಗೆಯಿಂದ ಪುತ್ಥಳಿ ಪುತ್ಥಳಿ ವಿರೂಪಗೊಳಿಸಿ ಪರಾರಿ ಆಗಿದ್ದ, ಎಂದು ಪೊಲೀಸರು ತಿಳಿಸಿದರು.
ವೈದ್ಯಕೀಯ ತಪಾಸಣೆ
ಮಾಧ್ಯಮಗಳೊಂದಿಗೆ ಮಾತನಾಡಿದ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಆರೋಪಿಯನ್ನು ವಿಚಾರಣೆ ಮಾಡಿದಾಗ ನಾನು ಮಾನಸಿಕವಾಗಿ ಸರಿ ಇರಲಿಲ್ಲ ಅಂತಾ ಹೇಳಿಕೊಂಡಿದ್ದಾನೆ. ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ವೈದ್ಯಕೀಯ ವರದಿಗಾಗಿ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಈತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ವಿಚಿತ್ರವಾಗಿ ವರ್ತಿಸುತ್ತಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಏಸು ಆರಾಧನೆ ಮಾಡ್ತಿರೋ ಆರೋಪಿಗೆ ಹಿಂದೂ ದೇವರ ವಿಗ್ರಹ ಪೋಟೋ ಪುತ್ಥಳಿ ಕಂಡ್ರೆ ವಿಚಿತ್ರ ವರ್ತನೆ ತೋರುತ್ತಿದ್ದನು ಎಂದು ಹೇಳಲಾಗುತ್ತಿದೆ.
ಈತನಿಗೆ ಕಳೆದ ಆರು ತಿಂಗಳ ಹಿಂದೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಹೇಳಿಕೊಂಡಿದ್ದು, ತಾನು ಬದುಕುಳಿಯಲು ಜೀಸ್ ಕಾರಣವೆಂದು ಹೇಳಿದ್ದಾನೆ.
ಭಯಾನಕ ಕೃತ್ಯ: ಆರ್ಚ್ ಬಿಷಪ್
ಶಾಂತಿ ಕರುಣೆ ಮತ್ತು ಜಾತ್ಯತೀತ ಮೌಲ್ಯಗಳ ಸಂಕೇತವಾಗಿ ಪೂಜಿಸಲ್ಪಟ್ಟ ಸ್ವಾಮೀಜಿ ಅಸಂಖ್ಯಾತ ವ್ಯಕ್ತಿಗಳಿಗೆ ಸ್ಪೂರ್ತಿ ಆಗಿದ್ದಾರೆ. ಅವರ ಪುತ್ಥಳಿ ವಿರೂಪಗೊಳಿಸಿರುವುದು ದುರದೃಷ್ಟಕರ ಹಾಗೂ ಆಘಾತಕಾರಿ ಘಟನೆ, ಎಂದು ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾಡೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಪ್ರಭು ಏಸು ಕ್ರಿಸ್ತರು ಕನಸಿನಲ್ಲಿ ಬಂದು ತನ್ನನ್ನು ಪ್ರೇರೇಪಿಸಿದರು ಎಂದು ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂತಹ ಹೇಳಿಕೆಗಳು ಧರ್ಮನಿಂದನೆಯಷ್ಟೇ ಮಾತ್ರವಲ್ಲ ಸಮಾಜದಲ್ಲಿ ಅಶಾಂತಿ ವೈಷಮ್ಯ ಬಿತ್ತುವ ಹಾಗೂ ಕೋಮುಗಲಭೆ ಸೃಷ್ಟಿಸುವ ಪ್ರಯತ್ನ. ಆತನ ತಪ್ಪೊಪ್ಪಿಗೆಯು ಆಧಾರರಹಿತ ಹಾಗೂ ಭಯಾನಕವಾಗಿದೆ,’ ಎಂದು ತಿಳಿಸಿದ್ದಾರೆ.
‘ಘಟನೆ ಕುರಿತು ಪೊಲೀಸರು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಗಿರಿನಗರದ ಜನರು ಶಾಂತಿ ಕಾಪಾಡಬೇಕು. ಸಮಾಜದ ಶಾಂತಿಗೆ ಭಂಗ ತರುವ ಇಂತಹ ಯಾವುದೇ ಪ್ರಚೋದನಕಾರಿ ಕ್ರಮಗಳಿಗೆ ಅವಕಾಶ ನೀಡಬಾರದು’ ಎಂದು ಮನವಿ ಮಾಡಿದ್ದಾರೆ.
ಪ್ರತಿಭಟನೆ
ಘಟನೆ ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾ ನಗರ ಘಟಕದಿಂದ ಗುರುವಾರ ಪ್ರತಿಭಟನೆ ನಡೆಯಿತು.
ಬಿಜೆಪಿ ಮುಖಂಡರಾದ ಎಚ್.ಆರ್.ಮಲ್ಲಿಕಾರ್ಜುನ್ ,ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಘಟಕದ ಅಧ್ಯಕ್ಷ ಬಿ.ಆರ್.ನವೀನ್ ಕುಮಾರ್, ಮಾಜಿ ಉಪ ಮೇಯರ್ ಬಿ.ಎಸ್.ಪುಟ್ಟರಾಜು, ವೀರಶೈವ ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ್, ಉಪಾಧ್ಯಕ್ಷ ಗುರುಮೂರ್ತಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
‘ಶಿವಕುಮಾರ ಸ್ವಾಮೀಜಿ ಅವರ ನಿಸ್ವಾರ್ಥ ಸೇವೆ ನೋಡಿದ ಭಕ್ತರೇ ಅವರಿಗೆ ನಡೆದಾಡುವ ದೇವರು ಎಂಬ ಬಿರುದು ನೀಡಿದ್ದರು. ಸಮಾಜದಲ್ಲಿ ಅಶಾಂತಿ ಮೂಡಿಸಲು ಕೆಲವು ಕಿಡಿಗೇಡಿಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ’ ಎಂದು ಪ್ರತಿಭಟನಕಾರರು ಹೇಳಿದರು.