ಹಸಿದವರಿಗೆ ಅನ್ನ, ಜ್ಞಾನ ಮತ್ತು ಆಶ್ರಯ ನೀಡಿದ ಲಿಂಗಾಯತ ಮಠಗಳು: ವಿ ಸೋಮಣ್ಣ

“ಒಂದು ಬಾಡಿಗೆ ಮನೆಯಿಂದ ಪ್ರಾರಂಭವಾದ ಡಾ. ಶಿವಬಸವ ಮಹಾಸ್ವಾಮಿಗಳವರ ಸೇವಾ ಕಾರ್ಯ ಇಂದು ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ಅನ್ನ ಆಶ್ರಯ ನೀಡುವಷ್ಟು ಬೆಳೆದಿದೆ…”

ಬೆಳಗಾವಿ

ರಾಜ್ಯದಲ್ಲಿ ಲಿಂಗಾಯತ ಮಠಗಳು ಶಾಲಾ-ಕಾಲೇಜುಗಳನ್ನು ಪ್ರಾರಂಭಿಸದೆ ಹೋಗಿದ್ದರೆ ರಾಜ್ಯದ ಬಹುತೇಕ ಜನತೆ ಶಿಕ್ಷಣ, ಸಂಸ್ಕೃತಿ, ಸಂಸ್ಕಾರಗಳಿಂದ ವಂಚಿತರಾಗುತ್ತಿದ್ದರು. ಮಠಗಳು ಬಸವಾದಿ ಶಿವಶರಣರ ತತ್ವಗಳನ್ನು ಅಳವಡಿಸಿಕೊಂಡಿದ್ದರಿಂದಲೇ ಈ ಕಾರ್ಯ ಮಾಡಲು ಸಾಧ್ಯವಾಯಿತು. ಹಸಿದವರಿಗೆ ಅನ್ನ, ಜ್ಞಾನ ಮತ್ತು ಆಶ್ರಯಗಳನ್ನು ನೀಡುತ್ತಾ ಸಮಾಜದಲ್ಲಿ ಸಮಾನತೆಯನ್ನು ತರಲು ಪ್ರಯತ್ನಿಸುತ್ತಿರುವ ಮಠಗಳು ಅದರಲ್ಲೂ ಅನ್ನ, ಅಕ್ಷರ ದಾಸೋಹಕ್ಕೆ ಲಿಂಗಾಯತ ಮಠಗಳ ಕೊಡುಗೆ ಅಪಾರ ಎಂದು ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅಭಿಪ್ರಾಯಪಟ್ಟರು.

ಅವರು ನಾಗನೂರು ರುದ್ರಾಕ್ಷಿ ಮಠದ ಅನುಭವ ಮಂಟಪದಲ್ಲಿ ಜರುಗಿದ ಡಾ. ಶಿವಬಸವ ಮಹಾಸ್ವಾಮಿಗಳವರ 135ನೇ ಜಯಂತಿ ಮಹೋತ್ಸವ ಹಾಗೂ ಹಾನಗಲ್ಲ ಕುಮಾರ ಶಿವಯೋಗಿಗಳ ಕಂಚಿನ ಪುತ್ತಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ಬಾಡಿಗೆ ಮನೆಯಿಂದ ಪ್ರಾರಂಭವಾದ ಡಾ. ಶಿವಬಸವ ಮಹಾಸ್ವಾಮಿಗಳವರ ಸೇವಾ ಕಾರ್ಯ ಇಂದು ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ಅನ್ನ ಆಶ್ರಯ ನೀಡುವಷ್ಟು ಬೆಳೆದಿದೆ ಎಂದರೆ ಅದಕ್ಕೆ ಶ್ರೀಗಳ ತಪಸ್ಸಿನ ಶಕ್ತಿಯೇ ಕಾರಣ. ಬೆಳಗಾವಿ ರೈಲು ನಿಲ್ದಾಣಕ್ಕೆ ಡಾ. ಶಿವಬಸವ ಮಹಾಸ್ವಾಮಿಗಳವರ ಹೆಸರಿಡಲು ಜಿಲ್ಲೆಯ ಬಹುತೇಕ ಭಕ್ತರ ಒತ್ತಾಯವಿದ್ದು, ಇದನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು.

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನೈಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಹವಾ ನಿಯಂತ್ರಿತ ಸಭಾಭವನ ಉದ್ಘಾಟಿಸಿದರು.

ಯಡಿಯೂರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಆನಂದಪುರ ಮುರುಗಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕಟ್ಕೋಳ ಕುಮಾರೇಶ್ವರ ಮಠದ ಸಚ್ಚಿದಾನಂದ ಮಹಾಸ್ವಾಮಿಗಳು, ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಇದೇ ಸಂದರ್ಭದಲ್ಲಿ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.

ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಕನ್ನಡಪರ ಹೋರಾಟಗಾರ ಪಾಲನೇತ್ರ, ಸಮಾಜಸೇವಕ ಕೆಂಪಣ್ಣ ರಾಮಪುರ, ಸಾಹಿತಿ ಶೈಲಜಾ ಬಿಂಗೆ ಹಾಗೂ ತಬಲವಾದಕ ಸತೀಶ ಗಚ್ಚಿ ಅವರಿಗೆ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಖ್ಯಾತ ಸಾಹಿತಿ ಫ.ಗು. ಸಿದ್ದಾಪುರ ರಚಿಸಿದ “ಮಹಾದಾಸೋಯಿ ಶಿವಬಸವ” ಎಂಬ ಚೌಪದಿ ಮಹಾಕಾವ್ಯ ಲೋಕರ್ಪಣೆಗೊಂಡಿತು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತಿಸಿದರು. ರಾಜಶೇಖರ ಪಾಟೀಲ ನಿರೂಪಿಸಿದರು. ಏ.ಕೆ. ಪಾಟೀಲ ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *