ಪಂಡಿತಾರಾಧ್ಯ ಸ್ವಾಮೀಜಿ ಪೀಠವೇರಿ 47 ವಸಂತಗಳು

ಸಾಣೇಹಳ್ಳಿ

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಾಣೇಹಳ್ಳಿ ಮಠದ ಪಟ್ಟಾಧ್ಯಕ್ಷರಾಗಿ 47 ವರ್ಷಗಳು ಗತಿಸಿ 48ನೆಯ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಇಂದು ಅವರ ಬಿಡಾರದಲ್ಲಿ ಪೂಜ್ಯರನ್ನು ಸಾಂಕೇತಿಕವಾಗಿ ಗೌರವಿಸಲಾಯಿತು.

ಇಂದೇ ಮಾದಾರ ಚೆನ್ನಯ್ಯನವರ ಜಯಂತಿ. ಶ್ರೀಗಳವರ ಪಟ್ಟಾಭಿಷೇಕವಾಗಿದ್ದೂ ಈ ಜಯಂತಿಯಂದೆ. ಶಾಂತಿದೂತ ಏಸುಕ್ರಿಸ್ತರ ನೆನಪಿನ ದಿನವೂ ಇಂದೇ. ಪೂಜ್ಯರು ೪೭ ವರ್ಷಗಳ ಕಾಲ ಆತ್ಮಕಲ್ಯಾಣ ಜೊತೆ ಲೋಕಕಲ್ಯಾಣದ ಕಾರ್ಯವನ್ನು ನಿಷ್ಠೆ ಮತ್ತು ನಿಷ್ಠುರತೆಯಿಂದ ಮಾಡುತ್ತ ಬಂದಿದ್ದಾರೆ. ಗೊಡ್ಡು ಸಂಪ್ರದಾಯಗಳ ವಿರುದ್ದ ಇಂದಿನ ಕಷ್ಟದ ಪರಿಸ್ಥಿತಿಯಲ್ಲೂ ಯಶಸ್ಸಿನ ಹೆಜ್ಜೆಗಳನ್ನು ಈ ನಾಡೇ ಕಾಣುವಂತೆ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಸವಾದಿ ಪ್ರಮಥರ ಕಲ್ಯಾಣದ ಬೆಳಕನ್ನು ಹರಡುವುದೆಂದರೆ ಸತ್ಯಗಳ ಜೊತೆ ಪ್ರಯೋಗಕ್ಕಿಳಿಯುವುದು. ಬಸವಾದಿ ಶರಣರು ತೋರಿಸಿದ್ದ ನ್ಯಾಯ ಮತ್ತು ನಿಷ್ಠೂರದ ಹಾದಿಯಲ್ಲಿ ಒಂದು ಮಠವನ್ನು ಕಟ್ಟುವುದು, ಅದೇ ತತ್ವಗಳಲ್ಲಿ ಸಮಾಜವನ್ನು ಮುನ್ನಡೆಸುವುದು ಸುಲಭದ ಕಾರ್ಯ ಅಲ್ಲ. ಮತ್ತೆ ಕಲ್ಯಾಣ ಪೂಜ್ಯರ ಸ್ಮರಣೀಯ ಕಾರ್ಯಕ್ರಮ.

ನ್ಯಾಯ ಮತ್ತು ಸತ್ಯದ ಹಾದಿಯಲ್ಲಿ ಬದುಕಿನುದ್ದಕ್ಕೂ ನಡೆಯುವುದು ಕಷ್ಟ ಎನ್ನುವುದನ್ನು ಸುಲಭ ಮಾಡಿಕೊಂಡು ಬದುಕುತ್ತಿರುವ ಬೆರಳೆಣಿಕೆ ಶ್ರೀಗಳಲ್ಲಿ ಇವರು ಒಬ್ಬರು. ಸ್ವಾಮೀಜಿ‌ ಅಂದರೆ ಕಾವಿಯಷ್ಟೇಯಲ್ಲ, ಸ್ವಾಮೀಜಿ ಅಂದರೆ ಸರ್ವರಿಗೂ ಲೇಸನ್ನು ಬಯಸುವ, ಬದುಕಿನ ಅಹಿಂಸಾ ಸಿದ್ಧಾಂತವನ್ನು ಬಸವಾದಿ ಶರಣರ ಚಿಂತನೆಗಳೊಂದಿಗೆ ತಾನು ಮೊದಲು ಬೆಸೆದುಕೊಂಡು, ಅದರಂತೆ ಬದುಕಿ, ನುಡಿದಂತೆ ನಡೆದು, ನಡೆದಂತೆ ನುಡಿದು ಜನ ಕಲ್ಯಾಣಕ್ಕಾಗಿ ಸವೆಯುತ್ತಿರುವ ಸಾಣೇಹಳ್ಳಿ ಪೂಜ್ಯರ ಸೇವೆ ಸಾರ್ಥಕ.

ದೇವರು ಮತ್ತು ಧರ್ಮದ ಹೆಸರಿನಲ್ಲಿ ಮನುಷ್ಯ ಕೋಳ ತೊಡದೇ ಬಂಧಿ ಆಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ವೇದಗಳ ಹಿಂದೆ ಹರಿಯದೇ, ಶಾಸ್ತ್ರಗಳ ಹಿಂದೆ ಸುಳಿಯದೇ, ಪುರಾಣಗಳ ಹಿಂದೆ ಬಳಲದೇ ಬಸವಾದಿ ಶರಣರ ಅಂಗಳದಲ್ಲಿದ್ದುಕೊಂಡು ದಯವಿಲ್ಲದ ಧರ್ಮಗಳಿಂದ ದೂರ ಸರಿದು, ತನಗೆ ಮುನಿದವರಿಗೆ ತಾನು ಮುನಿಯದೇ, ಕಾಯಕ ದಾಸೋಹ ಜಂಗಮ ಸೇವೆಯಂತಹ ತತ್ವಗಳ ಉತ್ಸವವನ್ನು ನಿತ್ಯೋತ್ಸವವನ್ನಾಗಿಸಿದ ಬಸವಜೀವಿ ಪೂಜ್ಯ ಪಂಡಿತಾರಾಧ್ಯರು “ಮತ್ತೆ ಕಲ್ಯಾಣಕ್ಕಾಗಿ” ವಿಶ್ರಮಿಸದೇ ಹೋರಾಡುತ್ತಿದ್ದಾರೆ.

ಪೂಜ್ಯರು ಬಸವ ಸಂಜೀವಿನಿಯಾಗಿ ಸಮಾಜದ ಕಲ್ಯಾಣಕ್ಕಾಗಿ ಹೀಗೆ ಧಾರ್ಮಿಕ ನಾಯಕತ್ವವನ್ನು ಬಸವಾದಿ ಶರಣರ ಸತ್ವತತ್ವದಲ್ಲಿ ಸಾಗಲೆಂದು ಬಸವಾದಿ ಶರಣರಲ್ಲಿ ಪ್ರಾರ್ಥಿಸೋಣ ಎನ್ನುವುದೇ ಹಲವು ಭಕ್ತರ ಪ್ರಾರ್ಥನೆ.

Share This Article
Leave a comment

Leave a Reply

Your email address will not be published. Required fields are marked *