ಹಾವೇರಿ
ಬಸವಾದಿ ಶರಣರ ವೈಚಾರಿಕ ನಿಲುವುಗಳಿಂದ ಪ್ರೇರಿತರಾಗಿದ್ದ ರಾಷ್ಟ್ರಕವಿ ಕುವೆಂಪು ದೇವರು ಮತ್ತು ಧರ್ಮದ ಕುರಿತು ವಿಭಿನ್ನ ಚಿಂತನೆಯ ಮೂಲಕ ವಿಶ್ವಮಾನವರಾಗಿ ಗುರುತಿಸಿಕೊಂಡರು ಎಂದು ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಮಠದ ಬಸವ ಕೇಂದ್ರದಲ್ಲಿ ಜರುಗಿದ ಶರಣ ಸಂಗಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬುದ್ಧನ ಜ್ಞಾನೋದಯ, ಬಸವನ ವಿಶ್ವೋದಯ, ಗಾಂಧೀಜಿಯವರ ಸರ್ವೋದಯ ತತ್ವದಡಿ ಬದುಕು ಸವೆಸಿದ ಕುವೆಂಪು ಶ್ರೇಷ್ಠ ಮಾನವರಾಗಿ ರೂಪುಗೊಂಡರು.
ಸಾಮಾಜಿಕ ಸಂಘರ್ಷಗಳಿಗೆ ಪ್ರತ್ಯುತ್ತರ ಕೊಡುತ್ತ ಸಾಗಿದರು. ತಮ್ಮ ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಗಳಿಂದ ಪ್ರಗತಿಪರರಿಗೆ ಪ್ರಭಾವ ಬೀರಿದರು. ಅವರ ಬದುಕು ಹಾಗೂ ಬರಹ ಅನುಕರಣೀಯ ಎಂದರು.
ಲೇಖಕ ಲಿಂಗರಾಜ ಸೊಟ್ಟಪ್ಪನವರ ಮಾತನಾಡಿ, ಜೀವಪರ ಹಾಗೂ ಪ್ರಗತಿಪರ ಚಿಂತನೆಗಳಿಂದ ಭಾರತೀಯ ಪರಂಪರೆಯ ವಿಚಾರವಾದವನ್ನು ಭಿನ್ನ ನಿಲುವುಗಳಿಂದ ತೋರಿಸಿಕೊಟ್ಟ ಕುವೆಂಪು ವಿಶ್ವಮಾನವ ಪ್ರಜ್ಞೆಯನ್ನು ವಿಭಿನ್ನವಾಗಿ ಆಲೋಚಿಸಿದರು. ತಮ್ಮ ಬರವಣಿಗೆಯ ಮೂಲಕ ಸಂಘರ್ಷಗಳಿಗೆ ಉತ್ತರ ನೀಡಿದರು. ಈ ಹಿನ್ನೆಲೆಯಲ್ಲಿ ಅವರ ಚಿಂತನೆಗಳು ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲವು ಎಂದರು.
ಸಾಹಿತಿ ವೆಂಕಟೇಶ ಈಡಿಗೇರ ಮಾತನಾಡಿ, ಮಾನವ ಕುಲದ ಪರವಾಗಿ ನಿಂತ ಬಸವಣ್ಣನವರು ಪ್ರತಿ ಜೀವಿಗೂ ಬದುಕುವ ಹಕ್ಕಿದೆ ಎಂದು ತೋರಿಸಿದ ಪರಿಣಾಮ ಎಂಟು ಶತಮಾನ ಕಳೆದರೂ ಪ್ರಸ್ತುತ ಆಗುವರು. ಶರಣರ ಹಾದಿ ನಮಗೆ ಮಾರ್ಗದರ್ಶಿ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಲಾಯಿತು. ಅಭಿವೃದ್ಧಿ ಹಾಗೂ ಪರಿಸರ ಪತ್ರಿಕೋದ್ತಮ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ಪತ್ರಕರ್ತ ಮಾಲತೇಶ ಅಂಗೂರ ಅವರನ್ನು ಶ್ರೀ ಮಠದಿಂದ ಸನ್ಮಾನಿಸಿ, ಗೌರವಿಸಲಾಯಿತು.
ಹೊಸಮಠದ ಅಂಗಳದಲ್ಲಿ ಬೆಳೆದ ನನಗೆ ಮಠದ ಮೇಲೆ ಅನ್ನದ ಋಣವಿದೆ. ಅಂಥ ಸಂದರ್ಭದಲ್ಲಿ ಶ್ರೀ ಮಠದಿಂದ ಗೌರವ ಸನ್ಮಾನ ಲಭಿಸಿರುವುದು ನನ್ನ ಸಂತಸವನ್ನು ಇಮ್ಮಡಿಗೊಳಿಸಿದೆ, ಎಂದು ಅಂಗೂರ ಹೇಳಿದರು.
ಗುರು ಅಂಗಡಿ, ಚಂದ್ರಿಕಾ ಅಂಗಡಿ, ಪ್ರಭಾವತಿ ತಿಳವಳ್ಳಿ, ಹನುಮಂತಗೌಡ ಗೊಲ್ಲರ, ನಾಗರಾಜ ಹುಡೇದ ಉಪಸ್ಥಿತರಿದ್ದರು. ಅಕ್ಕನ ಬಳಗದವರು ವಚನ ಗಾಯನ ಪ್ರಸ್ತುತ ಪಡಿಸಿದರು. ಜಿ.ಎಂ.ಓಂಕಾರಣ್ಣನವರ ಸ್ವಾಗತಿಸಿದರು. ಗೂಳಪ್ಪ ಅರಳಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.