ಕಲಬುರಗಿ
ಬಸವ ಸೇವಾ ಪ್ರತಿಷ್ಠಾನದ ಅಡಿಯಲ್ಲಿ ಕಳೆದ 25 ವರ್ಷಗಳಿಂದ ವಚನ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬರಲಾಗುತ್ತಿದ್ದು, ಫೆ. 10, 11 ಹಾಗೂ 12ರಂದು ಬೀದರ ನಗರದ ಬಸವಗಿರಿಯಲ್ಲಿ ನಡೆಯಲಿದೆ. ಅದಕ್ಕಾಗಿ ಬಸವಪರ ಸಂಘಟನೆಗಳ ಸಹಾಯ, ಸಹಕಾರ ಅಗತ್ಯವಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾಂಬಿಕಾ ಅಕ್ಕ ಮನವಿ ಮಾಡಿದರು.
ನಗರದ ಅನುಭವ ಮಂಟಪದಲ್ಲಿ ಭಾನುವಾರ ಜರುಗಿದ ಕ್ಯಾಲೆಂಡರ್ ಬಿಡುಗಡೆ ಹಾಗೂ ವಚನ ವಿಜಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕರೊನಾ ತರುವಾಯ ವಚನ ವಿಜಯೋತ್ಸವ ಕಾರ್ಯಕ್ರಮ ಸ್ವಲ್ಪ ಮಂಕಾಗಿತ್ತು.
ನಾಲ್ಕು ವರ್ಷ ಸರಳ ಆಚರಣೆ ಮಾಡಲಾಗಿದೆ. ಈಗ ಪುನಃ ವಚನ ವಿಜಯೋತ್ಸವ ಆರಂಭ ಮಾಡಲಾಗುತ್ತಿದೆ. ಬಸವಾಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಕೋರಿದರು.

ವಚನ ಸಾಹಿತ್ಯದ ಕಾಲ ಸುವರ್ಣಯುಗ. ಬಸವಣ್ಣನವರು ಸಮಾನತೆ ತತ್ವ, ದರ್ಶನ ಸಾಹಿತ್ಯ, ಅನುಭವ ಮಂಟಪ ಮೂರು ತತ್ವಗಳನ್ನು ಜಾರಿಗೆ ತಂದಿದ್ದರು. ಬಸವಾದಿ ಶರಣರ ವಾರಸುದಾರರಾದ ನಾವೆಲ್ಲ ಅವರ ವಿಚಾರಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ವಿಶ್ರಾಂತ ಪ್ರಾಧ್ಯಾಪಕಿ ಡಾ. ಜಯಶ್ರೀ ದಂಡೆ ಮಾತನಾಡಿದರು. ಬಸವ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ವರಿ ಪಾಟೀಲ ಪ್ರಾರ್ಥನೆ ಗೀತೆ ಹಾಡಿದರು. ಜಯಶ್ರೀ ಚಟ್ನಳ್ಳಿ ನಿರೂಪಿಸಿದರು. ಬಸವರಾಜ ಚಟ್ನಳ್ಳಿ ಸ್ವಾಗತಿಸಿದರು. ಬಸವರಾಜ ದೂಳಾಗುಂಡಿ, ಜಗನ್ನಾಥ ರಾಚಟ್ಟೆ, ರಾಜಶೇಖರ ಯಂಕಂಚಿ, ರಾಜೇಶ್ವರಿ ಪಾಟೀಲ ಅಭಿಪ್ರಾಯ ಹಂಚಿಕೊಂಡರು.