ಸ್ವಾಭಿಮಾನಿ ಶರಣ ಮೇಳದ ಪೋಸ್ಟರ್ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಮಂಡ್ಯ

ವಿಶ್ವಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮದಲ್ಲಿ ಪ್ರತಿ ವರ್ಷದಂತೆ ಜನವರಿ 12, 13 ಮತ್ತು 14 ರಂದು ಮೂರನೇ ವರ್ಷದ ಸ್ವಾಭಿಮಾನಿ ಶರಣ ಮೇಳವು ಭಕ್ತಿ ನಡೆಯಲಿದ್ದು, ಬಸವಾಭಿಮಾನಿಗಳು ಶರಣತತ್ವಗಳ ಜನಜಾಗೃತಿಗೆ ಹಲವಾರು ಐತಿಹಾಸಿಕ ನಿರ್ಣಯ ತೆಗೆದುಕೊಳ್ಳುವರು ಎಂದು ಲಿಂಗಪಟ್ಟಣದ ಕಲ್ಯಾಣಬಸವೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಓಂಕಾರೇಶ್ವರ ಸ್ವಾಮೀಜಿ ಶುಕ್ರವಾರ ಹೇಳಿದರು.

ನಗರದ ಹಿಂದಿಭವನದಲ್ಲಿ ಸ್ವಾಭಿಮಾನಿ ಶರಣಮೇಳದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಕೇಂದ್ರ ಸರ್ಕಾರ ಆಚರಿಸಬೇಕು, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ, ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಗುರುಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸುವುದು ಸೇರಿದಂತೆ ಹಲವಾರು ಮಹತ್ತರ ನಿರ್ಣಯವನ್ನು ಶರಣಮೇಳದಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಹಳೆಮೈಸೂರು ಭಾಗದಿಂದ ಸಹಸ್ರಾರು ಮಂದಿ ಬಸವಭಕ್ತರು ಶರಣಮೇಳದಲ್ಲಿ ಪಾಲ್ಗೊಳ್ಳಲಿದ್ದು ಸಚಿವ ಸತೀಶ ಜಾರಕಿಹೊಳಿ ಬಸವ ಜ್ಯೋತಿ ಬೆಳಗಿಸಿ ಜ.13ರಂದು ಬೆಳಿಗ್ಗೆ 11 ಗಂಟೆಗೆ ಶರಣ ಮೇಳ ಉದ್ಘಾಟಿಸಲಿದ್ದಾರೆ ಎಂದರು.

ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಬಸವ ಧ್ವಜಾರೋಹಣ ಮಾಡಲಿದ್ದಾರೆ. ಬಸವ ತತ್ವ ಚಿಂತಕರಾದ ಕಲಬುರ್ಗಿಯ ಶರಣೆ ಮೀನಾಕ್ಷಿ ಬಾಳಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು. ಸಮ್ಮುಖವನ್ನು ಕ್ರಾಂತಿ ಗಂಗೋತ್ರಿ ಮಹಿಳಾ ಗಣದ ರಾಷ್ಟ್ರೀಯ ಅಧ್ಯಕ್ಷರಾದ ಪೂಜ್ಯ ಸದ್ಗುರು ಮಾತೆ ಸತ್ಯಾದೇವಿಯವರು ವಹಿಸಲಿದ್ದು, ಕುಣಿಗಲ್ ಅರೆಶಂಕರ ಮಠದ ಶ್ರೀ ಸಿದ್ಧರಾಮ ಚೈತನ್ಯ ಸ್ವಾಮಿಗಳು, ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಶ್ರೀ ಜಯಬಸವಾನಂದ ಸ್ವಾಮಿಗಳು, ಮಂಡ್ಯದ ಓಂಕಾರೇಶ್ವರ ಸ್ವಾಮಿಗಳು, ಚಳ್ಳಕೆರೆಯ ಗುರು ಸ್ವಾಮಿಗಳು, ಧಾರವಾಡದ ಶ್ರೀ ಅಬ್ದುಲ್ ರಜಾಕ ಖಾದ್ರಿ ಸೂಫಿ ಸಂತರು ಸಾನಿಧ್ಯ ವಹಿಸಲಿದ್ದಾರೆ. ಚಿಕ್ಕಮಗಳೂರು ರಾಷ್ಟ್ರೀಯ ಬಸವದಳದ ಗಣನಾಯಕರಾದ ಬಾಣೂರು ಚನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಜ. 12 ರಂದು ಬೆಳಿಗ್ಗೆ 10-30 ಗಂಟೆಗೆ ಲಿಂಗಾಯತ ಧರ್ಮ ಮಹಾಸಭಾದ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಅವರ ಅಧ್ಯಕ್ಷತೆಯಲ್ಲಿ ಚಿಂತಾಗೋಷ್ಠಿ-1 ನಡೆಯಲಿದೆ. ಬಸವಧರ್ಮ ಪೀಠದ ವಿವಾದ ಬಗೆಹರಿಸಿಕೊಂಡು ಒಂದಾಗುವ ಕುರಿತು ಮತ್ತು ಧರ್ಮಗ್ರಂಥ ಬಿಡುಗಡೆ, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಮುಂದೆ ರೂಪಿಸಬೇಕಾದ ಹೋರಾಟದ ಕುರಿತು ಚರ್ಚೆ ನಡೆಯಲಿದೆ.

ಜ. 14 ಬಸವ ಕ್ರಾಂತಿಯ ದಿನದಂದು ಲಿಂಗಾಯತ ಧರ್ಮ ಸಂಸ್ಥಾಪನ ದಿನಾಚರಣೆ ನಿಮಿತ್ಯ ಸಮುದಾಯ ಪ್ರಾರ್ಥನೆ, ವಚನ ಪಠಣ, ಸಾಮೂಹಿಕ ಇಷ್ಟಲಿಂಗಪೂಜೆ ಹಾಗೂ ಶರಣವ್ರತಧಾರಿಗಳಿಗೆ ಆಶೀರ್ವಾದ ಮಾಡುವ ಕಾರ್ಯಕ್ರಮ ನಡೆಯಲಿದೆ.

ಮೂರು ದಿನಗಳ ಕಾಲ ನಡೆಯಲಿರುವ ಉತ್ಸವಕ್ಕೆ ಆಗಮಿಸುವ ಎಲ್ಲ ಭಕ್ತರಿಗಾಗಿ ವಸತಿ ಮತ್ತು ಪ್ರಸಾದದ ವ್ಯವಸ್ಥೆಯನ್ನು ಸ್ವಾಭಿಮಾನಿ ಶರಣಮೇಳ ಉತ್ಸವ ಸಮಿತಿ ವತಿಯಿಂದ ಮಾಡಲಾಗಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಬಸವ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಕರ್ನಾಟಕ, ಮಹಾರಾಷ್ಟ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಬಸವ ಭಕ್ತರು ಲಿಂಗಾಯತ ಬಾಂಧವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್. ಮಂಜುನಾಥ್‌ ಬೆಟ್ಟಹಳ್ಳಿ, ಬಿಜೆಪಿ ಮುಖಂಡ ಜಿ.ಮಹಾಂತಪ್ಪ, ಯೋಗಶಿಕ್ಷಕ ಎಚ್.ವಿ.ಶಿವರುದ್ರಸ್ವಾಮಿ, ಬೆಳ್ಳಪ್ಪ, ಬೇವುಕಲ್ಲು ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *