ಸಮಾಜ ಜಾಗೃತಿಗೆ ಬಸವಣ್ಣ ಅನುಭವ ಮಂಟಪ ಸ್ಥಾಪಿಸಿದರು: ಬಸವಾನಂದ ಶ್ರೀ

ನರಗುಂದ

೧೨ ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ಆ ಮೂಲಕ ಜಗತ್ತಿಗೆ ಸಾಮಾಜಿಕ ಜಾಗೃತಿಯ ಸಂದೇಶವನ್ನು ಸಾರಿದರು. ಅಲ್ಲಿ ಜಾತಿ ಬೇಧವನರಿಯದೆ ಸರ್ವ ಜನಾಂಗದವರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ಅನುಭಾವದ ನುಡಿಗಳೆ ವಚನಗಳು ಎಂದು ಮನಗುಂಡಿಯ ಖ್ಯಾತ ನಿಸರ್ಗ ತಜ್ಞರು ಪೂಜ್ಯ ಬಸವಾನಂದ ಶ್ರೀಗಳು ನುಡಿದರು.

ಅವರು ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ ಹಾಗೂ ಶ್ರೀ ದೊರೆಸ್ವಾಮಿ ವಿವಿದೋದ್ಧೇಶ ಟ್ರಸ್ಟಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೩೬೬ ನೇ ಮಾಸಿಕ ಶಿವಾನುಭವ ಹಾಗೂ ಕುಮಾರವ್ಯಾಸರ ಜಯಂತಿ ಮತ್ತು ವಿಶ್ವಚೇತನ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸತ್ಯ ಶುದ್ಧ ಕಾಯಕ, ನಿತ್ಯದಾಸೋಹ ಮತ್ತು ಲಿಂಗಾರ್ಚನೆಯನ್ನು ಮಾಡಿದರೆ ಭಗವಂತ ನಮ್ಮನ್ನೆ ಹುಡುಕಿಕೊಂಡು ಬರುತ್ತಾರೆ. ಆ ಹಿನ್ನೆಲೆಯಲ್ಲಿ ಕಾಯಕ-ದಾಸೋಹದ ಪರಿಕಲ್ಪನೆ ಪ್ರತಿಯೊಬ್ಬರಲ್ಲಿಯೂ ಮೂಡಬೇಕಿದೆ, ಎಲ್ಲರೂ ನಮ್ಮವರೆ ಎಂಬ ನಿಶ್ವಾರ್ಥ ಭಾವನೆ ಬರಬೇಕು, ಅಂದಾಗ ಮಾತ್ರ ಬಸವಣ್ಣನವರ ಸಮ ಸಮಾಜದ ಕನಸು ಸಾಕಾರವಾಗಲು ಸಾದ್ಯ.

ಇಂತಹ ಒಂದು ಪುಟ್ಟ ಹಳ್ಳಿಯಲ್ಲಿ ಭೈರನಹಟ್ಟಿ ಶ್ರೀಗಳು ಸುಮಾರು ೩೫ ವರ್ಷಗಳಿಂದ ಶಿವಾನುಭವವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾದುದು. ಅದು ಅವರ ನಿರಂತರ ಪರಿಶ್ರಮದ ಫಲ ಎಂದು ಬಣ್ಣಿಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ವಿಶ್ರಾಂತ ಮುಖ್ಯೋಪಾದ್ಯಾಯ ವೀರಯ್ಯ ಸಾಲಿಮಠ ಅವರು ಮಾತನಾಡಿ, ಕನ್ನಡ ಸಾಹಿತ್ಯ ದಿಗ್ಗಜರಲ್ಲಿ ಒಬ್ಬರಾದ ಕುಮಾರವ್ಯಾಸರದು ಕನ್ನಡ ಸಾಹಿತ್ಯದ ಮೇಲೆ ಅಪಾರ ಪ್ರಭಾವ ಬೀರಿದೆ. ಕುಮಾರವ್ಯಾಸನ ಅತ್ಯುತ್ತಮ ಗ್ರಂಥವಾದ ಗಮಕ ಶೈಲಿಯಲ್ಲಿರುವ ಕುಮಾರವ್ಯಾಸ ಭಾರತ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದ ಕೃತಿಯಾಗಿದೆ. ೧೫ ನೇ ಶತಮಾನದ ಶ್ರೇಷ್ಠ ಕವಿಯಾದ ಅವರು ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಕುಮಾರವ್ಯಾಸ ಭಾರತದ ಮೂಲಕ ಸಂಸ್ಕೃತದಲ್ಲಿದ್ದ ಮಹಾಭಾರತವನ್ನು ಕನ್ನಡಕ್ಕೆ ನೀಡಿದ ಮಹಾನ್ ಅನುಭಾವಿ ಕವಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪ್ರೊ. ರಮೇಶ ಐನಾಪೂರ, ಪ್ರೊ. ಆರ್. ಬಿ. ಚಿನಿವಾಲರ, ಮಹಾಂತೇಶ ಹಿರೇಮಠ, ಪ್ರಮುಖರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *