RSS ಜೊತೆ ಸೇರಿಕೊಂಡು, ಪಂಚಮಸಾಲಿ ಮೀಸಲಾತಿ ನೆಪದಲ್ಲಿ, ಪಂಚಪೀಠಗಳ ಹೆಸರಿನಲ್ಲಿ ಧರ್ಮ ಒಡೆಯುತ್ತಿರುವವರು ನೀವು, ಎಂದು ಮಾತಾಜಿ ಹೇಳಿದ್ದಾರೆ.
ಬೀದರ್
ಕೆಚ್ಚಲ ಮೇಲಿನ ಉಣ್ಣೆಯಂತೆ ಬಸವಣ್ಣನವರ ರಕ್ತ ಹೀರಬೇಡ್ರಿ, ಅದರ ಬದಲು ಅವರ ಜ್ಞಾನದ ಹಾಲನ್ನು ಕುಡಿಯಿರಿ, ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರಿಗೆ ಬೀದರಿನ ಬಸವ ಮಂಟಪದ ಪೂಜ್ಯ ಸತ್ಯದೇವಿ ಮಾತಾಜಿ ಹೇಳಿದ್ದಾರೆ.
ಇತ್ತೀಚೆಗೆ ತುಂಗಳದಲ್ಲಿ ಮಾತನಾಡುತ್ತ ಯತ್ನಾಳ್ ಅವರು ಲಿಂಗಾಯತ ಸಮಾಜದಲ್ಲಿ ಪಂಚಪೀಠದವರನ್ನು ವಿರೋಧ ಮಾಡುವ ಒಂದು ‘ಕಟ್ಟರ್’ ಗುಂಪು ತಯಾರಾಗಿದೆ. ವೀರಶೈವರನ್ನು ದೂರ ಮಾಡಿ ವ್ಯವಸ್ಥಿತವಾಗಿ ಧರ್ಮ ಒಡೆಯುವ ಕೆಲಸ ‘ಕಟ್ಟರ್ ಲಿಂಗಾಯತರು’ ಮಾಡುತ್ತಿದ್ದಾರೆ, ಎಂದು ಆಪಾದಿಸಿದರು.
ಯತ್ನಾಳ್ ಹೇಳಿಕೆಗೆ ತಕ್ಷಣವೇ ತೀಕ್ಷ್ಣವಾದ ಪ್ರತಿಕ್ರಿಯೆ ಬಂದಿತ್ತು. ಆದರೆ ಸ್ವಾಭಿಮಾನಿ ಶರಣ ಮೇಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾತಾಜಿ ಈಗ ಬಿಡುವು ಮಾಡಿಕೊಂಡು ಒಂದು ವಿಡಿಯೋ ಸಂದೇಶದ ಮೂಲಕ ಯತ್ನಾಳ್ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಲಿಂಗಾಯತರು ಯಾರನ್ನೂ ವಿರೋಧಿಸುತ್ತಿಲ್ಲಾ, ಬಸವಣ್ಣ ಕೊಟ್ಟ ಇಷ್ಟಲಿಂಗ ಹಾಕಿಕೊಂಡು, ಸಮಾಜದ ಗುರು ಸ್ಥಾನದಲ್ಲಿ ಕುಳಿತುಕೊಂಡು ಪಂಚ ಪೀಠದವರು ಬಸವಣ್ಣನವರನ್ನು ವಿರೋಧಿಸುತ್ತಿದ್ದಾರೆ.
ವೀರಶೈವ ಒಂದು ಪಂಥ, ಹಿಂದೂ ಒಂದು ಸಂಸ್ಕೃತಿ. ಇವೆರಡೂ ಧರ್ಮವಲ್ಲ, ಅವುಗಳನ್ನು ಯಾರೂ ಒಡೆಯುವ ಪ್ರಶ್ನೆಯೇ ಬರುವುದಿಲ್ಲ. RSS ಜೊತೆ ಸೇರಿಕೊಂಡು, ಪಂಚಮಸಾಲಿ ಮೀಸಲಾತಿ ನೆಪದಲ್ಲಿ, ಪಂಚಪೀಠಗಳ ಹೆಸರಿನಲ್ಲಿ ಧರ್ಮ ಒಡೆಯುತ್ತಿರುವವರು ನೀವು, ಎಂದು ಮಾತಾಜಿ ಹೇಳಿದ್ದಾರೆ.
ನೀವು ಬಸವಣ್ಣ ವೀರಶೈವ ಧರ್ಮದ ಸುಧಾರಕರು ಎಂದು ಹೇಳಿದ್ದೀರ. ಅದಕ್ಕೇನು ದಾಖಲೆ ಇದೆ. ನೀವು ಬೇಕಾದರೆ ವೀರಶೈವರಾಗಿ ಬದುಕಿ, ಆದರೆ ಜನರನ್ನು ತಪ್ಪು ದಾರಿಗೆ ಎಳೆಯಬೇಡಿ ಲಿಂಗಾಯತರಿಗೂ ವೀರಶೈವರಿಗೂ ಸಂಬಂಧವಿಲ್ಲ.
ಬಸವಣ್ಣನವರ ಹೆಸರನ್ನು ರಾಜಕೀಯವಾಗಿ ಬಳಸಬೇಡಿ. ಅವರ ಮೇಲೆ ಅಭಿಮಾನವಿದ್ರೆ ಅವರ ಮೇಲೆ ಅಗೌರವದಿಂದ ಮಾತನಾಡಬೇಡಿ. ಹುಚ್ಚು ಹುಚ್ಚಾಗಿ ಒದರಿದರೆ, ಚೀಮಾರಿ ಹಾಕಿಸಿಕೊಳ್ತೀರಾ, ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಯತ್ನಾಳ್ ಅವರು ಬಸವಣ್ಣನವರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿದಾಗಲೂ ಮಾತಾಜಿ ಶಾಸಕರನ್ನು ತೀವ್ರವಾಗಿ ಖಂಡಿಸಿದ್ದರು.