ಹಿಂದೂ ಸಂವಿಧಾನ ಬಂದರೆ ಲಿಂಗಾಯತರು ಎಲ್ಲಿಗೆ ಹೋಗಬೇಕು: ನಿಡುಮಾಮಿಡಿ ಶ್ರೀ

ಕೂಡಲಸಂಗಮ

ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ಹಿಂದೂ ಸಂವಿಧಾನ ಜಾರಿಗೆ ತರುತ್ತೇವೆ ಎಂದು ಕೆಲವರು ಹೇಳುತ್ತಿರುವುದು ಖಂಡನೀಯ. ಬಹುತ್ವ ಭಾರತದಲ್ಲಿ ಹಿಂದೂ ಸಂವಿಧಾನ ಜಾರಿಗೆ ತರಲು ಬಿಡುವುದಿಲ್ಲ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಕೂಡಲಸಂಗಮ ಬಸವ ಸಭಾಭವನದಲ್ಲಿ ಭಾನುವಾರ ನಡೆದ ಹಂಡೆವಜೀರ ಸಮಾಜದ ೩ನೇ ರಾಜ್ಯಮಟ್ಟದ ಸಮಾವೇಶ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ, ಸಾವಿರಾರು ವರ್ಷದ ಗುಲಾಮಗಿರಿಗೆ ಅಂತ್ಯ ಹಾಡಿ ಜಾತ್ಯಾತೀತ ಸಂವಿಧಾನವನ್ನು ಜಾರಿಗೆ ತಂದ ಭಾರತದಲ್ಲಿ ಹಿಂದೂ ಸಂವಿಧಾನ ಜಾರಿಗೆ ತರಲು ಬಿಡುವುದಿಲ್ಲ. ಹಿಂದೂ ಸಂವಿಧಾನ ಬಂದರೆ ದೇಶದಲ್ಲಿಯ ಜೈನ, ಬೌದ್ಧ, ಕ್ರೈಸ್ತ, ಮುಸ್ಲಿಂ, ವೀರಶೈವ-ಲಿಂಗಾಯತ ಮುಂತಾದ ಧರ್ಮದವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ತಾರತಮ್ಯ ಹೋಗಲಾಡಿಸಿ, ಸಮಾನತೆ ಹಕ್ಕು ನೀಡಿದ ನಮ್ಮ ಸಂವಿಧಾನ ಬದಲಾವಣೆಗೆ ನಾಡಿನ ಜನ ಅವಕಾಶ ಕೊಡಬಾರದು. ಪ್ರಜಾಪ್ರಭುತ್ವ ನಾಶಕ್ಕೆ ಹೊರಟವರನ್ನು ವಿರೋಧಿಸುವ ಕಾರ್ಯ ನಡೆಯಬೇಕು. ವೈಷ್ಣವರ ದಬ್ಬಾಳಿಕೆ, ಅಕ್ರಮ ತಡೆಯಲು ಶೈವರು ಒಂದಾಗಬೇಕು. ವೀರಶೈವದಿಂದ ಲಿಂಗಾಯತ, ಲಿಂಗಾಯತದಿಂದ ವೀರಶೈವ ತೆಗೆದರೆ ಸಮಾಜಕ್ಕೆ ನಷ್ಟ. ನಾವು ಒಂದಾಗದಿದ್ದರೆ ಮುಂದೊಂದು ದಿನ ದುರ್ಬಲರಾಗುತ್ತೆವೆ.

ಭಿನ್ನಾಬಿಪ್ರಾಯ ಬಿಟ್ಟು ಒಗ್ಗೂಡಿ ನಡೆದರೆ ಸಮಾಜಕ್ಕೆ ಭವಿಷ್ಯ ಇದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಧರ್ಮವನ್ನು ಒಡೆಯುವ ಕಾರ್ಯವನ್ನು ಯಾರು ಮಾಡಬಾರದು. ಬ್ರಾಹ್ಮಣರನ್ನು ಹೊರತುಪಡಿಸಿ ಹಿಂದೂ ಧರ್ಮವನ್ನು, ಜಂಗಮರನ್ನು ಹೊರತುಪಡಿಸಿ ವೀರಶೈವ ಲಿಂಗಾಯತ ಧರ್ಮವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬ್ರಾಹ್ಮಣರು ಹಿಂದೂ ಧರ್ಮಕ್ಕೆ, ಜಂಗಮರು ವೀರಶೈವ ಲಿಂಗಾಯತ ಧರ್ಮಕ್ಕೆ ತ್ಯಾಗ, ಸೇವೆ ಮಾಡಿದ್ದಾರೆ. ಎಲ್ಲರನ್ನು ಬಳಸಿಕೊಂಡು ಧರ್ಮ ಕಟ್ಟುವ ಕಾರ್ಯವನ್ನು ಮಾಡಬೇಕು.

ಹಂಡೆ ವಜೀರ ಸಮಾಜದ ಹನಮಪ್ಪ ನಾಯಕನ ಜಯಂತಿಯನ್ನು ಪ್ರತಿವರ್ಷ ಎಪ್ರಿಲ್ ೯ ರಂದು ಸರ್ಕಾರಿ ಜಯಂತಿಯಾಗಿ ಆಚರಿಸಬೇಕು. ಹಂಡೆವಜೀರ ಸಮಾಜವನ್ನು ಸಾಂಸ್ಥಿಕವಾಗಿ ಬಲಗೊಳಿಸಬೇಕು. ವಿಜಯಪುರ ಅಥವಾ ಬಾಗಲಕೋಟೆ ಜಿಲ್ಲೆಯಲ್ಲಿ ಸರ್ಕಾರ ೧೦ ಎಕರೆ ಭೂಮಿಯನ್ನು ಸಮಾಜದ ಟ್ರಸ್ಟಿಗೆ ನೀಡಬೇಕು. ರಾಜ್ಯಕೀಯ ಪಕ್ಷಗಳು ಸಮಾಜದ ನಾಯಕರಿಗೆ ರಾಜಕೀಯ ಪ್ರಾತಿನಿಧ್ಯ ಒದಗಿಸಬೇಕು ಎಂದರು.

ಸಕ್ಕೆರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸಮಾವೇಶ ಉದ್ಘಾಟಿಸಿ ಮಾತನಾಡಿ, ಗುರು-ವಿರಕ್ತರಲ್ಲಿ ಭಿನ್ನಾಭಿಪ್ರಾಯ ಇದೆ, ವೀರಶೈವ ಲಿಂಗಾಯತರು ಒಗ್ಗಟ್ಟಾಗಿ ಬದುಕುತ್ತಿಲ್ಲ. ಒಗ್ಗಟ್ಟಾದರೆ ದೇಶವನ್ನೇ ಆಳುತ್ತೆವೆ. ಸರ್ಕಾರದ ಸೌಲಭ್ಯ ಪಡೆಯಲು ಒಗ್ಗಟ್ಟು, ಹೋರಾಟ ಅನಿವಾರ್ಯ. ಹನಮಪ್ಪ ನಾಯಕನ ಜಯಂತಿಯನ್ನು ಸರ್ಕಾರಿ ಜಯಂತಿಯನ್ನಾಗಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ತಿಳಿಸುತ್ತೆನೆ, ಇಂದಿನ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ನಮ್ಮ ಸರ್ಕಾರ ಈಡೇರಿಸುವ ಕಾರ್ಯ ಮಾಡುತ್ತದೆ ಎಂದು ಭರವಸೆ ಕೊಟ್ಟರು.

ಸಮಾವೇಶದಲ್ಲಿ ಹೊಸಪೇಟೆ ಕೊಟ್ಟೂರುಸ್ವಾಮಿ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ತು ಸದಸ್ಯ ಪಿ.ಎಚ್.ಪೂಜಾರಿ, ಶಾಸಕ ವಿಜಯಾನಂದ ಕಾಶಪ್ಪನವರ, ರಾಜುಗೌಡ ಪಾಟೀಲ, ಮಾಜಿ ಶಾಸಕ ಎಸ್.ಕೆ. ಬೆಳ್ಳುಬ್ಬಿ, ಎ.ಎಸ್. ಪಾಟೀಲ ನಡಹಳ್ಳಿ ಮತ್ತಿತರರು ಇದ್ದರು.

Share This Article
Leave a comment

Leave a Reply

Your email address will not be published. Required fields are marked *