ದಾವಣಗೆರೆ
ಕನ್ನಡ ನಾಡಿನ ಶರಣರು ಅತ್ಯಂತ ಪ್ರಗತಿಪರ ಚಿಂತಕರು ಆಗಿದ್ದರು ಎಂಬುದು ಅವರ ವಚನಗಳ ಆಧಾರದಲ್ಲಿ ನಾವು ತಿಳಿಯಬಹುದು. ಇಂಥಹ ಶರಣ ಪರಂಪರೆಯ ಮಠಾಧೀಶರು ಇತ್ತೀಚೆಗೆ ಉತ್ತರ ಪ್ರದೇಶದ ಕುಂಬಮೇಳದಲ್ಲಿ ಮಿಂದು ಪುನೀತರಾಗಿ ಬಂದಿದ್ದಾರೆ. ಅವರಿಗೆ ಕೆಲವು ಪ್ರಶ್ನೆಗಳು.
ಶರಣರ ವಿಚಾರಗಳನ್ನು ಜನಮಾನಸಕ್ಕೆ ಮುಟ್ಟಿಸುವ ಮಹತ್ವದ ಜವಬ್ದಾರಿ ಹೊತ್ತಿರುವ ಸುತ್ತೂರು ಶ್ರೀಗಳು ಬಸವಣ್ಣನವರು ಈ ವಚನದ ಬಗ್ಗೆ ಏನು ಹೇಳುವರು:
ನೀರ ಕಂಡಲ್ಲಿ ಮುಳುಗುವರಯ್ಯಾ, ಮರನ ಕಂಡಲ್ಲಿ ಸುತ್ತುವರಯ್ಯಾ. ಬತ್ತುವ ಜಲವ, ಒಣಗುವ ಮರನ ಮಚ್ಚಿದವರು ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ.
ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದು ಈಗ ಹಿಂದೆ ಸರಿದು ಈಗ ಮುಳುಗಿ ಬಂದ ಜಯ ಮೃತ್ಯುಂಜಯ ಶ್ರೀಗಳು ಈ ವಚನದ ಬಗ್ಗೆ ಏನು ಹೇಳುವಿರಿ:
ಸುತ್ತಿಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ. ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ. ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ. ನಿಚ್ಚಕ್ಕಿನ ಗಮನವಂದಂದಿಗೆ; ಅತ್ತಲಿತ್ತ ಹರಿವ ಮನವ ಚಿತ್ರದಲಿ ನಿಲಿಸಬಲ್ಲಡೆ ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು.
ಹೆಸರಿನಲ್ಲಿಯೇ ವಚನ ಎಂಬ ದೊಡ್ಡ ಹೆಸರನ್ನು ಹೊಂದಿರುವ ವಚನಾನಂದ ಶ್ರೀಗಳು ಈ ವಚನದ ಬಗ್ಗೆ ಏನು ಹೇಳುವರು:
ಮಂಡೆ ಮಾಸಿದಡೆ ಮಹಾಮಜ್ಜನವ ಮಾಡುವುದು; ವಸ್ತ್ರ ಮಾಸಿದಡೆ ಮಡಿವಾಳರಿಗಿಕ್ಕುವುದು; ಮನದ ಮೈಲಿಗೆಯ ತೊಳೆಯಬೇಕಾದಡೆ ಕೂಡಲಚೆನ್ನಸಂಗಯ್ಯನ ಶರಣರ ಅನುಭಾವವ ಮಾಡುವುದು
ಕುರುಬ ಗೊಲ್ಲಾಳೇಶರ ಗುರು ರೇವಣಸಿದ್ಧರ ಪರಂಪರೆಯ ಕಾಗಿನೆಲೆಯ ಶ್ರೀಗಳು ಈ ವಚನದ ಬಗ್ಗೆ ಏನು ಹೇಳುವರು:
ಆವ ವಿದ್ಯೆಯ ಕಲಿತಡೇನು ಸಾವ ವಿದ್ಯೆ ಬೆನ್ನಬಿಡದು. ಅಶನವ ತೊರೆದಡೇನು, ವ್ಯಸನವ ಮರೆದಡೇನು? ಉಸುರ ಹಿಡಿದಡೇನು, ಬಸುರ ಕಟ್ಟಿದಡೇನು? ಚೆನ್ನಮಲ್ಲಿಕಾರ್ಜುನದೇವಯ್ಯಾ, ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು?
ದೇವರಿಗೆ ಅಂಬಲಿ ರುಚಿ ತೋರಿಸಿದ ಬಸವಣ್ಣನವರ ಗೌರವಕ್ಕೆ ಪಾತ್ರರಾದ ಮಾದಾರ ಚನ್ನಯ್ಯ ಮಠದ ಮಾದಾರ ಚನ್ನಯ್ಯ ಶ್ರೀಗಳು ಈ ವಚನದ ಬಗ್ಗೆ ಏನು ಹೇಳುವರು:
ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ ತೊರೆಯಿಂ ಭೋ, ತೊರೆಯಿಂ ಭೋ ಪರನಾರಿಯರ ಸಂಗವ ತೊರೆಯಿಂ ಭೋ ! ಪರಧನದಾಮಿಷವ ತೊರೆಯಿಂ ಭೋ ! ಇವ ತೊರೆಯದೆ ಹೋಗಿ ತೊರೆಯ ಮಿಂದಡೆ ಬರುದೊರೆ ಹೋಹುದು, ಕೂಡಲಸಂಗಮದೇವಾ.
ಈ ನಾಡಿನಲ್ಲಿ ಅತ್ಯಂತ ವೈಚಾರಿಕ ಮನೋಭಾವದ ವಿಚಾರಗಳನ್ನು ಹೊಂದಿದ್ದ ಕುವೆಂಪು ಅವರು ವಿಚಾರ ಕ್ರಾಂತಿಗೆ ಆಹ್ವಾನ ಕೊಟ್ಟಿದ್ದಾರೆ ಇಂಥಹ ವೈಚಾರಿಕ ನಾಯಕನ ವಾರಸುದಾರರಾದ ಒಕ್ಕಲಿಗ ಮಠದ ನಿರ್ಮಲಾನಂದ ಸ್ವಾಮಿಗಳು ಕುಂಬಮೇಳದಲ್ಲಿ ಮಿಂದು ಶುದ್ಧರಾಗಿ ಬಂದಿದ್ದಾರೆ
ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ,
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ,
ವ್ಯವಹರಿಸುವುದಕ್ಕೆ ವೈಶ್ಯನಲ್ಲ.
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.
ಶರಣ ಒಕ್ಕಲಿಗರ ಮುದ್ದಣ್ಣನವರ ಈ ವಚನವನ್ನು ಸೇರಿದಂತೆ ಅವರ ವಚನಗಳನ್ನು ಜನರಿಗೆ ಮುಟ್ಟಿಸ ಬೇಕಾದವರೇ ಹೀಗೆ ಮಾಡಿದರೆ ಹೇಗೆ?
ಇನ್ನೂ ಬೇರೆ ಸ್ವಾಮಿಗಳು ಕುಂಬಮೇಳದಲ್ಲಿ ಮಿಂದು ಶುದ್ಧರಾಗಿ ಬಂದವರಿದ್ದರೆ ದಯಮಾಡಿ ಈ ಕೆಳಗಿನ ಕೆಲವು ವಚನಗಳನ್ನು ವಿವರಿಸಿದರೆ ಸಾಕು
ಗಂಗಾನದಿಯಲ್ಲಿ ಮಿಂದು ಗಂಜಳದಲ್ಲಿ ಹೊರಳುವರೆ ?ಚಂದನವಿದ್ದಂತೆ ದುರ್ಗಂಧವ ಮೈಯಲ್ಲಿ ಪೂಸುವರೆ ?ಸುರಭಿ ಮನೆಯಲ್ಲಿ ಕರೆವುತ್ತಿರೆ, ಹರಿವರೆ ಸೊಣಗನ ಹಾಲಿಂಗೆ ?ಬಯಸಿದಮೃತವಿದ್ದಂತೆ,ಅಂಬಿಲವ ನೆರೆದುಂಬ ಭ್ರಮಿತಮಾನವಾ, ನೀನು ಕೇಳಾ.ಪರಮಪದವಿಯನೀವ ಚೆನ್ನಸೊಡ್ಡಳನಿದ್ದಂತೆ,ಸಾವದೇವರ ನೋಂತರೆ, ಕಾವುದೆ ನಿನ್ನ ?
ಸೊಡ್ಡಳ ಬಾಚರಸ
ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು ! ನಿಮಗೆರಗದ ಕಾರಣ ಕೊರಳಲ್ಲಿ ನೇಣು ! ಹಿಂಡಲೇಕೋ ತೊಳೆಯಲೇಕೋ ! ಮುಳುಗಿ ಮುಳುಗಿ ಮೂಗ ಹಿಡಿಯಲೇಕೋ ! ಕೂಡಲಸಂಗನ ಶರಣರಲ್ಲಿ ಡೋಹರ ಕಕ್ಕಯ್ಯನಾವ ತೊರೆಯಲಿ ಮಿಂದ
ಬಸವಣ್ಣ
ಬಸವಣ್ಣನವರ ವಚನಗಳು ಬಾಷಣ ಕ್ಕೆ ಸೀಮಿತ, ಅವರ ತತ್ವ ಸಿದ್ಧಾಂತ ಗಳನ್ನು ಅಳವಡಿಸಿಕೊಳ್ಳುವ ಒಬ್ಬ ಸ್ವಾಮೀಜಿ ಯೂ ಸಿಗುವುದಿಲ್ಲ ಬಿಡಿ
ಇವರು ಶುದ್ದರಾಗಲೂ ಹೋದವರಲ್ಲ. ಕೇಂದ್ರ ಸರ್ಕಾರ ಮತ್ತು ಆರ್.ಎಸ್ ಎಸ್ ಓಲೈಕೆಗಾಗಿ ಹೋಗಿರುವುದು. ಮತ್ತು ಕರ್ನಾಟಕದಿಂದ ಹೋಗಿದ್ದ ಜನರನ್ನ ತಮ್ಮ ಮಠಗಳತ್ತ ಸೆಳೆಯಲು ಹೋಗಿದ್ದ ಸ್ವಾಮೀಜಿಗಳಿವರು.
ಅಷ್ಟೇಯಲ್ಲದೆ ಗಂಗೆಯಲ್ಲೆ ಮುಳುಗಿದರೆ ಪಾಪ ಪರೀಹಾರವಾಗುವುದಾದರೆ ಜೈಲಿನಲ್ಲಿರುವ ಕೈದಿಗಳನ್ನ ಗಂಗೆಯಲ್ಲಿ ಮುಳುಗಿಸಿ ಬಿಡುಗಡೆ ಮಾಡಿದರೆ ಅವರ ಅಪರಾಧಗಳೆಲ್ಲಾ ಮನ್ನಾ ಮಾಡಬಹುದಲ್ಲವೆ.ಈ ಅಜ್ಞಾನದಿಂದ ತುಂಬಿರುವ ಭಾರತ ಮುಂದೂವರಿದ ದೇಶವೆನಿಕೊಳ್ಳಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ ಕೇವಲ ಮುಂದುವರಿಯುತ್ತಿರುವ……..ಎನಿಸಿಕೊಳ್ಳಲು ಮಾತ್ರ ಸಾಧ್ಯ
ಇವರುಗಳೆಲ್ಲಾ ಲಿಂಗಾಯತ ಧರ್ಮಕ್ಕೆ ಬಸವ/ಶರಣ ತತ್ವಕ್ಕೆ ತಗುಲಿರುವ ವ್ಯಾಧಿಗಳು. ಸಾಧ್ಯವಿದ್ದರೆ ಇವರುಗಳಿಗೆ ತಗುಲಿರುವ ವ್ಯಾಧಿಯನ್ನು ಗುಣಪಡಿಸಲು ಸಾಧ್ಯವಿದ್ದರೆ ಆ ಪ್ರಯತ್ನ ಮಾಡಬಹುದು. ನಾನಗನ್ನಿಸುವಂತೆ ಇವೆಲ್ಲಾ ಗುಣಪಡಿಸಲಾಗದ ವ್ಯಾಧಿಗಳು. ಇವರ ಬಗ್ಗೆ ಚರ್ಚೆ ಮಾಡಿ ಸಮಯ ವ್ಯರ್ಥ ಮಾಡುವುದಕ್ಕಿಂತ ಇವರನ್ನು ದಾಟಿ ಮತ್ತು ಇವರುಗಳನ್ನು ಬಿಟ್ಟು ನಾವು ಬಸವ ತತ್ವವನ್ನು ಮುಂದೆ ತೆಗೆದುಕೊಂಡು ಹೋಗುವ ಕೆಲಸ ಮಾಡೋಣ.
ಸೂಕ್ತ ಅಭಿಪ್ರಾಯ.
ಲಿಂಗಾಯತರು ಎಂದು ಹೇಳಿಕೊಳ್ಳುವ ನಾವೆಲ್ಲಾ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮನ್ನಣೆ ದೊರಕಿಸಿಕೊಳ್ಳಲು ಯಾವ ಮಠ ಮಾನ್ಯ ಗಳು ಮತ್ತು ಸಮಾಜದ ಧುರಿಣರು ಯಾವ ಪ್ರಯತ್ನ ವ ನ್ನು ಮಾಡುತ್ತಲೇ ಇಲ್ಲಾ. ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮನ್ನಣೆ ದೊರೆತು ಇಂಡಿಯನ್ ಗೇಜೆಟ್ಟ್ ನಲ್ಲಿ ಆದೇಶ ಪ್ರಕಟ ವಾಗುವ ವರೆಗೆ ನಾವೆಲ್ಲಾ ಹಿಂದು ಧರ್ಮದ ಅನುಯಾಯಿಗಳೇ. ಅದಕ್ಕೆ ನಮ್ಮ ಪೀಠಾಧಿಪತಿಗಳು ಗಂಗೆ ಯಲ್ಲಿ ಮಿಂದು ಏಳುತ್ತಿರುವುದು.
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ !
ನಿಜವಾಗಿಯೂ ಸ್ವಾಮಿಗಳಾಗಿದ್ದರೆ, ಲಿಂಗಾಯತ ಧರ್ಮ ದೀಕ್ಷೆ ತೆಗೆದುಕೊಂಡಿದ್ದರೆ ಈ ಸ್ವಾಮಿಗಳು ಉತ್ತರಿಸಲಿ
ಬಸವಣ್ಣನವರ ಹೆಸರಿನಲ್ಲಿ ರಾಜಕರಣ ಮಾಡುವ ಬಹುತೇಕ ಸ್ವಾಮೀಜಿಗಳು ಅವರು ತಿರಸ್ಕರಿಸಿದ ವೈದಿಕ ಪರಂಪರೆಯ ಗುಲಾಮರಾಗಿದ್ದಾರೆ. ಶೂದ್ರರನ್ನು ದಾರಿತಪ್ಪಿಸುತ್ತಿರುವ ಇಂತಹ ಆಷಾಢಬೂತಿಗಳನ್ನು ಜನಸಾಮಾನ್ಯರು ದೂರವಿಡಬೇಕು.
ಎಲ್ಲಾ ಸ್ವಾಮೀಜಿಗೆ ತಿಳಿದ ವಚನಗಳು ಹಣಕ್ಕಾಗಿ ತಮ್ಮನ್ನು ಮಾರಿಕೊಂಡಿದ್ದಾರೆ