ಬಸವನ ಬಾಗೇವಾಡಿಯಲ್ಲಿ ಹಿಂದೂ ಧರ್ಮ ಉಳಿಸಲು ಈಶ್ವರಪ್ಪ ಪಣ

ಬಸವ ಮೀಡಿಯಾ
ಬಸವ ಮೀಡಿಯಾ

ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದೆ: ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಯಲ್ಲಿ ಕಾಡಸಿದ್ದೇಶ್ವರ ಶ್ರೀ

ಬಸವನ ಬಾಗೇವಾಡಿ

ಬಸವನ ಬಾಗೇವಾಡಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ನೇತೃತ್ವದ ಕ್ರಾಂತಿವೀರ ಬ್ರಿಗೇಡ್‌ಗೆ ಮಂಗಳವಾರ ಅದ್ದೂರಿ ಚಾಲನೆ ದೊರೆಯಿತು.

ಪಟ್ಟಣದ ತಾಳಿಕೋಟೆ ರಸ್ತೆಯ ಶ್ರೀಗುರು ಕೃಪಾ ವಿದ್ಯಾ ಸಂಸ್ಥೆ ಶಾಲಾ ಆವರಣದಲ್ಲಿ 1008 ಸಾಧು-ಸಂತರ ಪಾದಪೂಜೆ, 1008 ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ಮತ್ತು ಗೋವನ್ನು ಪೂಜಿಸುವ ಮೂಲಕ ಬ್ರಿಗೇಡ್‌ ಅಸ್ತಿತ್ವಕ್ಕೆ ಬಂತು.

ಬ್ರಿಗೇಡ್‌ ಸಂಚಾಲಕ ಕೆ.ಎಸ್‌. ಈಶ್ವರಪ್ಪ ಮಾತನಾಡಿ 1008 ಸ್ವಾಮೀಜಿಗಳು ದೇವರ ಸ್ವರೂಪ. ಈ ಸ್ವಾಮೀಜಿಗಳ ಪಾದ ಮುಟ್ಟಿ ಹೇಳುತ್ತೇನೆ. ಹಿಂದೂ ಧರ್ಮ, ಹಿಂದುತ್ವ ಉಳಿಸಲು ಬ್ರಿಗೇಡ್‌ ಸ್ಥಾಪಿಸಲಾಗಿದೆ ಎಂದರು.

ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ದೇಶದಲ್ಲಿ ದಿನದಿಂದ ದಿನಕ್ಕೆ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹಿಂದೂಗಳ ಜನಸಂಖ್ಯೆ ಶೇ.50ಕ್ಕಿಂತ ಕಡಿಮೆಯಾದರೆ ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆ ಉಳಿಯಲ್ಲ. ಇದಕ್ಕೆ ಬಾಂಗ್ಲಾದೇಶ ಸೂಕ್ತ ಉದಾಹರಣೆ, ಎಂದು ಹೇಳಿದರು.

ಈಶ್ವರಪ್ಪ ರಕ್ತದ ಕಣದಲ್ಲಿ ಹಿಂದುತ್ವ, ದೇಶ, ಧರ್ಮ ಇದೆ. ಇಂತಹ ಕ್ರಾಂತಿವೀರ ಬ್ರಿಗೇಡ್‌ ಮಾಡಲು ಸಾಹಸ ಹಾಗೂ ಎದೆಗಾರಿಕೆ ಬೇಕು. ಈ ಬ್ರಿಗೇಡ್‌ ರಾಜ್ಯಕ್ಕೆ ದಿಸೆ ನೀಡುತ್ತದೆ ಎಂದರು.

ಕಾಗಿನೆಲೆ ಕನಕ ಗುರುಪೀಠ ತಿಂಥಣಿ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಮಾತನಾಡಿ
ಜಾತೀಯತೆ ಬದಲಾಗಿ ಹಿಂದೂ ಧರ್ಮ ಅನುಸರಿಸಬೇಕು. ಆದರೆ, ಜಾತೀಯತೆ ಹೆಸರಿನಲ್ಲಿ ಸಂವಿಧಾನ ತರುತ್ತೇವೆ ಎಂಬುವುದನ್ನು ಖಂಡಿಸಬೇಕು, ಎಂದರು.

ವೇದಿಕೆ ಕಾರ್ಯಕ್ರಮದಲ್ಲಿ ಬ್ರಿಗೇಡ್ ನ ಲಾಂಛನ ಹಾಗೂ ಗೀತೆಯನ್ನು ಬಿಡುಗಡೆಗೊಳಿಸಲಾಯಿತು. ಕನಕಗುರು ಪೀಠದ ತಿಂಥಣಿ ಶಾಖಾ ಮಠದ ಸಿದ್ದರಾಮಾನಂದಪೂರಿ ಸ್ವಾಮೀಜಿ, ಸೋಮಲಿಂಗೇಶ್ವರ ಸ್ವಾಮೀಜಿ, ಇಂಗಳೇಶ್ವರ ಸ್ವಾಮೀಜಿ, ಬ್ರಿಗೇಡ್ ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ, ಕಾರ್ಯಾಧ್ಯಕ್ಷ ರಾಕೇಶ ಈಶ್ವರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಶಿಲ್ಪಾ ಕುದರಗೊಂಡ, ರಾಜೇಶ್ವರಿ ಸೇರಿದಂತೆ ಅನೇಕ ನಾಯಕರು, ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದಾರೆ.

Share This Article
3 Comments
  • ಸ್ವಾಮಿ ಈಗ ನಿಮಗೆ ಮತ್ತು ನಿಮ್ಮ ಮಗನಿಗೆ ಬಿಜೆಪಿಯವರು ಟಿಕೆಟ್ ಕೊಡಲಿಲ್ಲ ಅಂತ ಇಷ್ಟೆಲ್ಲಾ ಆವಾಂತರ ಮಾಡಿ ನಿಜವಾದ ಹಿಂದುತ್ವವಾದಿಗಳಿಗೆ ಮುಂದೆ ಹೋಗಿ ಕಟ್ಟರ್ ಹಿಂದುತ್ವವಾದಿ ಆಗಿದ್ದೀರ. ಸನಾತನ ಸಂವಿಧಾನದ ಪ್ರಕಾರ ನಿಮಗೆ ರಾಜ್ಯ ಆಳುವ ಅಧಿಕಾರವೇ ಇರುವುದಿಲ್ಲ. ಅದನ್ನು ಸ್ವಲ್ಪ ಆಳವಾಗಿ ಅಧ್ಯಯನ ಮಾಡಿ ಕುರುಬ ಸಮೂಹದ ಯುವಕರನ್ನು ಹೇಗೆ ಕಾಪಾಡುವುದು ಅಂತ ಸ್ವಲ್ಪ ಕಾರ್ಯಕ್ರಮ ರೂಪಿಸಿ.

  • ಇವನಿಗೆ ರಾಜಕೀಯ ಅಸ್ಥಿರತೆ ಕಾಡತೋಡಗಿದಾಗ ಈ ಆಲೋಚನೆ ಬಂದಿದೆ. ನಿಜವಾಗಲೂ ಈ ದೇಶ ರಕ್ಷಣೆಗೆ ಬಸವಣ್ಣನವರ ಸಿದ್ದಾಂತವನ್ನ ಅನುಸರಿಸಬೇಕಿತ್ತು ಮತ್ತು ಬಸವ ಬ್ರಿಗೇಡ್ ಸ್ಥಾಪನೆ ಮಾಡಬೇಕಿತ್ತು. ಕಾಡಸಿದ್ದೇಶ್ವರ ಶ್ರೀಗಳು ಹೇಳಿದಂತೆ ಹಿಂದೂಗಳ ಸಂಖ್ಯೆ ಏಕೆ ಕ್ಷೀಣಿಸುತ್ತಿದೆ?? ಯೋಚಿಸಬೇಕಿತ್ತಲ್ಲವೆ .ಯಾಕಂದ್ರೆ ಹಿಂದೂವಿನೊಳಗೆ ಜಾತಿ, ವರ್ಗ, ಕರ್ಮ ,ಪುಣ್ಯದ ಹೆಸರಿನಲ್ಲಿ ಶೋಷಣೆ ಮಾಡಿದ ಕಾರಣ ಹಿಂದೂಗಳು ಹೊರ ಬಂದು ಸ್ವತಂತ್ರ ಜೀವನಕ್ಕಾಗಿ ಬೇರೆ ಧರ್ಮ ಅನುಸರಿಸುತಿದ್ದಾರೆ.

  • ಈಶ್ವರಪ್ಪ ನವರೇ ಹಾಲುಮತದ ಕುರುಬ ಸಮುದಾಯದ
    ವರನ್ನು ಹಿಂದೂ ಧರ್ಮ ಶೂದ್ರ ಸ್ಥಾನದಲ್ಲಿ ಇಟ್ಟು ಗುಲಾಮರಾಗಿ ನಡೆಸಿಕೊಳ್ಳುತ್ತಿದೆ , ನಿಮ್ಮ ಸಮಾಜದ
    ಯುವಕರ ಕೈಗೆ‌ ಉದ್ಯೋಗ ನೀಡುತ್ತಿಲ್ಲ, ನಿಮ್ಮ ಪರಂಪರೆಯ ಬೀರಲಿಂಗೇಶ್ವರ ಶರಣರು, ಕುರುಬ
    ಗೊಲ್ಲಾಳ್ಳೇಶ್ವರ ಶರಣರು ಬಸವಣ್ಣನವರ ನಾಯಕತ್ವದಲ್ಲಿ
    ಅಸಮಾನತೆಯ ವೈದಿಕ (ಹಿಂದೂ) ಧರ್ಮದ ವಿರುದ್ಧ
    ಹೋರಾಟ ಮಾಡಿ ಪ್ರಜಾ ಧರ್ಮ ನೀಡಿದ್ದಾರೆ.
    ಇಂಥ ಪರಂಪರೆಯ ಹೊಂದಿದ ನೀವುಗಳು
    ಈ ಪ್ರಜಾ ವಿರೋಧಿ ಧರ್ಮದ ಪರವಾಗಿ ನಿಲ್ಲುವದು
    ಸರಿಯೇ? ?

Leave a Reply

Your email address will not be published. Required fields are marked *