ಡಾ. ಹೇಮಾ ಪಟ್ಟಣಶೆಟ್ಟಿ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ
ಬೆಂಗಳೂರು
ರಾಜ್ಯ ಸರ್ಕಾರ ನೀಡುವ 2024-25ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಧಾರವಾಡದ ಡಾ. ಎಸ್.ಆರ್. ಗುಂಜಾಳ ಅವರು ಭಾಜನರಾದರೆ, ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿಗೆ ಮುಂಬೈನಾ ಬೇಗಂ ಪರ್ವೀನ್ ಸುಲ್ತಾನ ಅವರುಗಳು ಭಾಜನರಾಗಿದ್ದಾರೆ.
ಅಕ್ಕಮಹಾದೇವಿ ಪ್ರಶಸ್ತಿಗೆ ಧಾರವಾಡದ ಡಾ. ಹೇಮಾ ಪಟ್ಟಣಶೆಟ್ಟಿ ಆಯ್ಕೆಗೊಂಡಿದ್ದಾರೆ.
ನಾಲ್ಕು ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ 19 ಪ್ರಶಸ್ತಿಗಳಿಗೆ ಸಾಧಕರ ಆಯ್ಕೆಗಾಗಿ ನೇಮಕ ಮಾಡಿದ್ದ ಸಮಿತಿಗಳು ಸಾಧಕರನ್ನು ಆಯ್ಕೆಗೊಳಿಸಿವೆ.
ರಾಷ್ಟ್ರೀಯ ಪ್ರಶಸ್ತಿಗೆ ತಲಾ 10 ಲಕ್ಷ ರೂ. ನಗದು ಮತ್ತು ಇತರೆ ಪ್ರಶಸ್ತಿಗಳಿಗೆ ತಲಾ 5 ಲಕ್ಷ ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಫಲತಾಂಬೂಲ ನೀಡಲಾಗುವುದು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಈ ಬಗ್ಗೆ ಮಾಹಿತಿ ನೀಡಿದರು.
ಮಾರ್ಚ್ 3ರಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಉಪಸ್ಥಿತರಿದ್ದರು.