ಕಲಬುರಗಿ ರಸ್ತೆಗೆ ರೇಣುಕಾಚಾರ್ಯರ ಹೆಸರಿಡಲು ಬಸವ ಸಂಘಟನೆಗಳ ತೀವ್ರ ವಿರೋಧ

ಬಸವ ಮೀಡಿಯಾ
ಬಸವ ಮೀಡಿಯಾ

“ರಸ್ತೆಗೆ ಲಿಂಗದಿಂದ ಉದ್ಭವಿಸಿದ್ದಾರೆ ಎನ್ನಲಾಗುವ ಪೌರಾಣಿಕ ವ್ಯಕ್ತಿಯ ಹೆಸರಿಟ್ಟರೆ ಸಮಾಜದಲ್ಲಿ ಮೌಢ್ಯತೆ ಬೆಳೆಯಲು ಪ್ರೋತ್ಸಾಹ ನೀಡಿದಂತೆ. ಈ ಕೆಲಸ ಯಾವುದೇ ಸರಕಾರ ಮಾಡಬಾರದು.”

ಕಲಬುರಗಿ

ನಗರದಿಂದ ಹುಮನಾಬಾದಗೆ ಹೋಗುವ ಮುಖ್ಯ ರಸ್ತೆಗೆ ಜಗದ್ಗುರು ರೇಣುಕಾಚಾರ್ಯ ಮಾರ್ಗವೆಂದು ನಾಮಕರಣ ಮಾಡಲು ಮಹಾನಗರ ಪಾಲಿಕೆಯ ಮುಂದಿರುವ ಪ್ರಸ್ತಾವನೆಯನ್ನು ಬಸವ ಸಂಘಟನೆಗಳು ವಿರೋಧಿಸಿವೆ.

ಈ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ, ಡಾ. ಎಂ.ಎಂ. ಕಲ್ಬುರ್ಗಿ ವಿಚಾರ ವೇದಿಕೆ ಮತ್ತು ಇತರ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳನ್ನು ಪಾಲಿಕೆಯ ವಲಯ ಕಚೇರಿ-3 ರಲ್ಲಿ ಫೆಬ್ರವರಿ 17ರಂದು ಸಂಜೆ 4 ಗಂಟೆಗೆ ಮಾತಿಗೆ ಕರೆಯಲಾಗಿದೆ.

ನಗರದಿಂದ ಹುಮನಾಬಾದಗೆ ಹೋಗುವ ಮುಖ್ಯ ರಸ್ತೆಗೆ ಜಗದ್ಗುರು ರೇಣುಕಾಚಾರ್ಯ ಮಾರ್ಗ ಎಂದು ಹೆಸರಿಡಬೇಕು ಎಂದು ವಾರ್ಡ್ ನಂ. 31ರ ಸದಸ್ಯೆ ಶಾಂತಾಬಾಯಿ ಚ.‌ ಹಾಲುಮಠ ಅವರು ಮನವಿ ಸಲ್ಲಿಸಿದ್ದರು ಎನ್ನಲಾಗಿದೆ.

ಅದರಂತೆ 14-11-2024ರಂದು ಪಾಲಿಕೆ ಪತ್ರಿಕಾ ಪ್ರಕಟಣೆ ಹೊರಡಿಸಿದಾಗ ಬಸವಪರ ಸಂಘಟನೆಯ ಪದಾಧಿಕಾರಿಗಳು ತಕರಾರು ಅರ್ಜಿ ಸಲ್ಲಿಸಿದ್ದರು.

ನಂತರ ವಲಯ-3ರ ಆಯುಕ್ತರು ಬಸವ ಸಂಘಟನೆಗಳ ಪದಾಧಿಕಾರಿಗಳಿಗೆ ಪತ್ರ ಬರೆದು ಆಕ್ಷೇಪಣೆ ಸಲ್ಲಿಸಲು ಫೆಬ್ರವರಿ 17ರಂದು ಅವಕಾಶ ನೀಡಿದ್ದಾರೆ. ಒಂದು ವೇಳೆ ಆಕ್ಷೇಪಣೆ ಸಲ್ಲಿಸುವವರು ಹಾಜರಾಗದಿದ್ದರೆ ತಕರಾರು ಅರ್ಜಿಯನ್ನು ಇಲ್ಲಿಂದಲೇ ಕೈ ಬಿಡಲಾಗುವುದು ಎಂದು ಕೂಡ ಆಯುಕ್ತರು ಪತ್ರದಲ್ಲಿ ಹೇಳಿದ್ದಾರೆ.

“ಕಲಬುರಗಿ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು. ಬಸವಾದಿ ಶರಣರ ವಿಚಾರಗಳು ಮುಂದಿನ ಪೀಳಿಗೆಗೆ ಪ್ರೇರಣಾದಾಯಕವಾಗಿವೆ. ಹೀಗಾಗಿ ಒಂದು ವೇಳೆ ಈ ರಸ್ತೆಗೆ ಹೆಸರು ಇಡುವುದಾದರೆ ವಿಶ್ವಗುರು ಬಸವಣ್ಣನವರ ಹೆಸರಿಡಲಿ, ಅದು ಬಿಟ್ಟು ಕಾಲ್ಪನಿಕ ವ್ಯಕ್ತಿ ರೇಣುಕಾಚಾರ್ಯರ ಹೆಸರು ಇಡುವುದು ಬೇಡ ಎಂದು ಆಕ್ಷೇಪಣೆ ಸಲ್ಲಿಸುತ್ತೇವೆ,” ಎಂದು ರಾಷ್ಟ್ರೀಯ ಬಸವ ದಳದ ಮುಖಂಡ ಆರ್.ಜಿ. ಶೆಟಗಾರ ಹೇಳಿದ್ದಾರೆ.

“ರೇಣುಕಾಚಾರ್ಯ ಕಾಲ್ಪನಿಕ ವ್ಯಕ್ತಿ ಎಂದು ಹಲವಾರು ಸಂಶೋಧಕರು ತೋರಿಸಿದ್ದಾರೆ. ಅಂತೆಯೇ ರೇಣುಕಾಚಾರ್ಯರ ಹೆಸರು ಇಡುವುದು ಬೇಡ ಎಂಬುದು ನಮ್ಮ ವಾದವಾಗಿದೆ,” ಎಂದು ಡಾ. ಎಂ.ಎಂ. ಕಲ್ಬುರ್ಗಿ ವಿಚಾರ ವೇದಿಕೆಯ ಮಹಾಂತೇಶ ಕಲ್ಬುರ್ಗಿ ಹೇಳಿದ್ದಾರೆ.

ವಿವಾದದ ಮೇಲೆ ಮಾತನಾಡುತ್ತ ಕಲಬುರಗಿಯ ಮಾಜಿ ಶಾಸಕರೊಬ್ಬರು, “ಬಸವಾದಿ ಶರಣರು ಚಾರಿತ್ರಿಕ ವ್ಯಕ್ತಿಗಳು. ನಮ್ಮಂತೆ, ನಿಮ್ಮಂತೆ ಬದುಕ್ಕಿದ್ದವರು. ಅಂತವರನ್ನು ಬಿಟ್ಟು ರಸ್ತೆಗೆ ಲಿಂಗದಿಂದ ಉದ್ಭವಿಸಿದ್ದಾರೆ ಎನ್ನಲಾಗುವ ಪೌರಾಣಿಕ ವ್ಯಕ್ತಿಯ ಹೆಸರಿಟ್ಟರೆ ಸಮಾಜದಲ್ಲಿ ಮೌಢ್ಯತೆ ಬೆಳೆಯಲು ಪ್ರೋತ್ಸಾಹ ನೀಡಿದಂತೆ. ಈ ಕೆಲಸ ಯಾವುದೇ ಸರಕಾರ ಮಾಡಬಾರದು,” ಎಂದು ಹೇಳಿದರು.

Share This Article
2 Comments
  • ಬಸವ ಪರ ಸಂಘಟನೆಗಳು ಇದೆ ತಕ್ಷಣ ಪ್ರತಿಕ್ರಿಯಿಸುವ ಕೆಲಸವಾಗುತ್ತಿರುವುದು ಉತ್ತಮ ಬೆಳವಣಿಗೆ.ಬಸವ ಪರರು ಜಾಗೃತಿಯಾಗುತಿದ್ದಾರೆ ಆದರೆ ಮತ್ತಷ್ಟು ಒಳಜಾಗೃತಿ ಆಗಬೇಕಿದೆ

  • ಮೂಡ ನಂಬಿಕೆ ಬೆಳೆಸಬೇಕು ಅನ್ನುವುದು ಆದರೆ ಅದೇ ಮೌಡ್ಯದಲ್ಲಿ ಮುಂದು ವರೆಯಬೇಕು.
    ಇಲ್ಲದೆ ಹೋದರೆ, ವಾಸ್ತವಿಕತೆ ಮತ್ತು ವೈಚಾರಿಕತೆ ಜನರಲ್ಲಿ ಬೆಳೆಸುವುದು ಆದಲ್ಲಿ ಆ ನಿಟ್ಟಿನಲ್ಲಿ ಕೆಲಸ ಮಾಡಿದ ಮಹನೀಯರ ಹೆಸರು ಇಡಬೇಕು.
    ಜೈ ಬಸವ
    ಓಂ ಬಸವ

Leave a Reply

Your email address will not be published. Required fields are marked *