ದಾವಣಗೆರೆ
ಹೋರಾಟಗಾರರೂ, ದಾವಣಗೆರೆಯ ಮೊದಲ ಪತ್ರಕರ್ತರಾಗಿ ಸರಳ ಜೀವನ ನಡೆಸಿದ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ ಅವರ ಜಯಂತಿಯನ್ನು ಸರ್ಕಾರದಿಂದಲೇ ಆಚರಣೆ ಮಾಡಬೇಕೆಂದು ವಿರಕ್ತಮಠದ ಡಾ. ಶ್ರೀ ಬಸವಪ್ರಭುಸ್ವಾಮೀಜಿ ಅಭಿಪ್ರಾಯಪಟ್ಟರು.
ಬಸವ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ವಿರಕ್ತಮಠ, ಬಸವ ಕಲಾಲೋಕದ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ ಅವರ ಜಯಂತಿ ಕಾರ್ಯಕ್ರಮದಲ್ಲಿ ಹರ್ಡೇಕರ್ ಮಂಜಪ್ಪ ಅವರ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಪ್ರತಿವರ್ಷ ಮಹಾತ್ಮರ, ದಾರ್ಶನಿಕರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತದೆ. ಅದರಂತೆ ಕರ್ನಾಟಕ ಗಾಂಧಿ ಎನಿಸಿಕೊಂಡ ಮತ್ತು ಹೋರಾಟಗಾರರೂ ಆದ ಹರ್ಡೇಕರ್ ಮಂಜಪ್ಪ ಅವರ ಜಯಂತಿ ಸಹ ಸರ್ಕಾರದಿಂದಲೇ ಆಚರಿಸುವಂತೆ ಎಲ್ಲರೂ ನಿಯೋಗದ ಮೂಲಕ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಒತ್ತಾಯಿಸಬೇಕೆಂದರು.
ಹರ್ಡೇಕರ್ ಮಂಜಪ್ಪ ಅವರ ಜೀವನದ ಆದರ್ಶಗಳು, ವಿಚಾರಧಾರೆಗಳನ್ನು ಮಕ್ಕಳಿಗೆ ಮತ್ತು ಯುವ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪಠ್ಯದಲ್ಲಿ ಅಳವಡಿಸುವ ಅಗತ್ಯವಿದೆ. ಯುವಕರೇ ದೇಶದ ಶಕ್ತಿಯಾಗಿರುವ ಕಾರಣ ಅವರಿಂದಲೇ ಆಚಾರ- ವಿಚಾರಗಳು ಉಳಿಯುವಂತಹದ್ದು ಎಂದು ಹೇಳಿದರು.

1913 ರಲ್ಲಿ ಮೊದಲ ಬಾರಿಗೆ ನಗರದ ವಿರಕ್ತಮಠದಲ್ಲಿ ಬಸವ ಜಯಂತಿಗೆ ಚಾಲನೆ ನೀಡಲಾಗಿದ್ದು, ಅಂದು ಪ್ರಾರಂಭವಾದ ಜಯಂತಿಯನ್ನು ದೇಶ, ವಿದೇಶಗಳಲ್ಲೂ ಆಚರಿಸುತ್ತಾ ಬರಲಾಗುತ್ತಿದೆ ಎಂದರು.
ಇದೇ ವೇಳೆ ಬಾಗಲಕೋಟೆಯ ಮಹಾಮಲ್ಲಪ್ಪ ಪಟ್ಟಣಶೆಟ್ಟಿ ಹರ್ಡೇಕರ್ ಮಂಜಪ್ಪ ಕುರಿತು ಮಾತನಾಡಿದರು. ಮಹಾನಗರ ಪಾಲಿಕೆ ಉಪಮೇಯರ್ ಸೋಗಿ ಶಾಂತಕುಮಾರ, ಬಸವ ಬಳಗದ ಅಧ್ಯಕ್ಷ ಹುಚ್ಚಪ್ಪ
ಮೇಷ್ಟ್ರು, ಜಾಗತಿಕ ಲಿಂಗಾಯತ ಮಹಾಸಭಾದ ಅವರಗೆರೆ ರುದ್ರಮುನಿ, ವಿರಕ್ತಮಠದ ಕಾರ್ಯದರ್ಶಿ ಕಣ್ವಕುಪ್ಪಿ ಮುರುಗೇಶಪ್ಪ, ಶರಣ ಸಾಹಿತ್ಯ ಪರಿಷತ್ ಸೇರಿದಂತೆ ಇತರೆ ಸಂಘಟನೆಗಳ ಪದಾಧಿಕಾರಿಗಳಾದ ಮಹಾಂತೇಶ ಅಗಡಿ, ಶಶಿಧರ ಬಸಾಪುರ, ಗೋಪನಾಳ್ ರುದ್ರೇಗೌಡ, ಕೆ.ಬಿ. ಪರಮೇಶ್ವರಪ್ಪ ಕಕ್ಕರಗೊಳ್ಳ, ಶಿವಾನಂದ ಗುರೂಜಿ, ಲಂಬಿ ಮುರುಗೇಶ, ಚನ್ನಬಸವ ಶೀಲವಂತ, ಮಂಜುನಾಥ, ಭುವನೇಶ್ವರಿ ತಾಯಿ, ಶಿವಬಸಮ್ಮ, ಕುಸುಮಾ ಲೋಕೇಶ, ಗಾಯತ್ರಿ ವಸ್ತ್ರದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು