ಅಣ್ಣಿಗೇರಿ
ಅಂತರರಾಷ್ಟ್ರೀಯ ಖ್ಯಾತ ಜಾನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರ ಜಾನಪದ ಲೋಕದ ಧ್ರುವತಾರೆ. ಗ್ರಾಮೀಣ ಕ್ಷೇತ್ರದ ಅಪ್ಪಟ ಪ್ರತಿಭೆ. ಅವರ ಜಾನಪದ ಕಲೆಯಲ್ಲಿ ವೈಚಾರಿಕ, ವೈಜ್ಞಾನಿಕ ಚಿಂತನೆ ಇದೆ. ನೂರಾರು ಕಲಾವಿದರನ್ನು ಹುಟ್ಟು ಹಾಕಿ ಬೆಳೆಸಿದ ಕೀರ್ತಿ ಅವರದಾಗಿದೆ. ಇಂಥವರಿಗೆ ಲಿಂಗೈಕ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರಿಂದ ಗುರುಗಳ ಆತ್ಮಕ್ಕೂ ಸಂತೋಷವಾಗಿದೆ ಎಂದು ಗದಗ – ಡಂಬಳ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.
ಸ್ಥಳೀಯ ಶ್ರೀಮತಿ ನಿಂಗಮ್ಮ ಎಸ್. ಹೂಗಾರ ಕಾಲೇಜು ಆವರಣದಲ್ಲಿ ನಡೆದ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.
ಇಲ್ಲಿಯವರೆಗೆ ಲಿಂಗೈಕ್ಯ ಶ್ರೀಗಳ ಆಸಕ್ತಿಯ ಕ್ಷೇತ್ರಗಳಾದ ಸಾಹಿತ್ಯ, ಸಂಶೋಧನೆ, ಕೃಷಿ, ಪರಿಸರ ಕ್ಷೇತ್ರಗಳಲ್ಲಿ ಸಾಧಕರನ್ನು ಗುರುತಿಸಿ ಗೌರವಿಸಲಾಗಿತ್ತು. ಈಗ ಶ್ರೀಗಳ ಆಸಕ್ತಿಯ ಮತ್ತೊಂದು ಕ್ಷೇತ್ರವಾದ ಜಾನಪದದಲ್ಲಿ ಶಂಕ್ರಣ್ಣ ಸಂಕಣ್ಣವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ತುಂಬಾ ಖುಷಿಯ ವಿಷಯ ಎಂದರು.
ಓದು ಬರಹ ಇಲ್ಲದವರು ಜಾನಪದವನ್ನು ಉಳಿಸಿಕೊಂಡು ಬಂದಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನದಂತೆ ಜಾನಪದ ಸಮ್ಮೇಳನವು ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಅಭಿನಂದನಾ ನುಡಿ ನುಡಿದ ಡಾ. ಸುಧಾ ಕೌಜಗೇರಿ ಜನಪದ ಕಲೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಸಂಕಣ್ಣವರ ಅವರದಾಗಿದೆ. ಅವರು ಹಾಡುಗಳನ್ನು ಕಟ್ಟಬಲ್ಲರು, ಬರೆಯಬಲ್ಲರು, ಅಭಿನಯಿಸಬಲ್ಲರು, ಕುಣಿಯಬಲ್ಲರು ಎಂದರು.

ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ಸಂಕಣ್ಣವರ ಅನಿಷ್ಟ ಸಂಪ್ರದಾಯಗಳ ವಿರುದ್ಧ ಜನಜಾಗೃತಿ ಮಾಡಿದ ವೈಚಾರಿಕ ತಂಡ ತಮ್ಮದು. ಶ್ರಮಪಟ್ಟು ಕೆಲಸ ಮಾಡಿದಲ್ಲಿ ದೇವರಿದ್ದಾನೆ. ಅರ್ಜಿ ಹಾಕದೆ ಪಡೆದ ಪ್ರಶಸ್ತಿ ಇದು ಎಂದು ತೋಂಟದ ಶ್ರೀಗಳನ್ನು ಸ್ಮರಿಸಿದರು.
ತೋಟದಾರ್ಯ ಶ್ರೀಗಳ ಸೇವೆಯನ್ನು ಸ್ಮರಿಸಿದ ನವಲಗುಂದ ಶಾಸಕ ಎಂ.ಎಚ್. ಕೋನರಡ್ಡಿ ನಶಿಸಿ ಹೋಗುತ್ತಿರುವ ಜನಪದ ಕಲೆ ಮತ್ತೆ ಮರುಹುಟ್ಟು ಪಡೆಯಲಿ ಎಂದು ಹಾರೈಸಿದರು.
ಆರಂಭದಲ್ಲಿ ಗಣ್ಯರೆಲ್ಲ ಸೇರಿ ಲಿಂ. ಡಾ ತೋಂಟದ ಸಿದ್ದಲಿಂಗ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದರು.
ಪ್ರೊ ಎಸ್.ಎಸ್. ಹರ್ಲಾಪುರ ಪ್ರಾಸ್ತವಿಕವಾಗಿ ಮಾತನಾಡಿದರು. ಡಾ. ಶಶಿಧರ ಹರ್ಲಾಪುರ ಪ್ರಶಸ್ತಿ ವಾಚನ ಮಾಡಿದರು. ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ. ಅಬ್ದುಲ್ ಖಾದರ್ ನಡಕಟ್ಟಿನ್, ಶ್ರೀಗಳ ರಾಜ್ಯ ಪ್ರಶಸ್ತಿ ಸಮಿತಿಯ ಮಲ್ಲಿಕಾರ್ಜುನ ಸುರಕೋಡ ಹಾಲಪ್ಪ ತುರಕಾಣಿ, ಮಲ್ಲಪ್ಪ ಹಾಳದೋಟರ ಉಪಸ್ಥಿತರಿದ್ದರು.
ಡಾ ಶಾಂತಾ ಲಕ್ಷ್ಮೇಶ್ವರ ವಚನ ಪ್ರಾರ್ಥನೆ ಮಾಡಿದರು. ಕೃಷ್ಣ ಜಿಂಗಾಡೆ ಸ್ವಾಗತಿಸಿದರು. ಅನ್ವರ್ ಹುಬ್ಬಳ್ಳಿ ನಿರೂಪಿಸಿದರು. ಸಮಾರಂಭದ ನಂತರ ಪ್ರಶಸ್ತಿ ಪುರಸ್ಕೃತ ಶಂಕ್ರಣ್ಣ ಸಂಕಣ್ಣವರ ತಮ್ಮ ತಂಡದ ಸದಸ್ಯರೊಂದಿಗೆ ಜಾನಪದ ಕಲೆ ಪ್ರದರ್ಶಿಸಿ ಎಲ್ಲರ ಮನಸೂರೆಗೊಂಡರು.