ಬಜೆಟ್ ಅನುದಾನ ಕೋರಿ ಮುಖ್ಯಮಂತ್ರಿ ಭೇಟಿಯಾದ ಸಮಾಜದ ಪ್ರಮುಖರು

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಸಾಂಸ್ಕೃತಿಕ ನಾಯಕ ಬಸವಣ್ಣ ವಿಶೇಷ ಕಾರ್ಯಯೋಜನೆ ಜಾರಿಗೆ ತರಲು ಪ್ರಯತ್ನ

ಬೆಂಗಳೂರು

ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಂದೇಶವನ್ನು ಜನಮನಕ್ಕೆ ತಲುಪಿಸಲು ಸರ್ಕಾರ ವಿಶೇಷ ಕಾರ್ಯಯೋಜನೆ ರೂಪಿಸಿ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಕೋರಿ ಲಿಂಗಾಯತ ಮಠಾಧಿಪತಿಗಳು ಹಾಗೂ ಸಮಾಜ ಗಣ್ಯರು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾರ್ಯಯೋಜನೆಯ ಆರು ಮುಖ್ಯಾಂಶಗಳಿರುವ ಮನವಿ ಪತ್ರವನ್ನು ಗದುಗಿನ ತೋಂಟದ ಸಿದ್ದರಾಮ ಶ್ರೀಗಳು ಓದಿದರು.

ಮನವಿ ಪತ್ರ

1) ಬೆಂಗಳೂರಿನ ಅಂತರರಾಷ್ಟೀಯ ವಿಮಾನ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸುವುದು.

2) ಬೆಂಗಳೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಬೃಹತ್ ‘ಶರಣ ದರ್ಶನ’ ಕೇಂದ್ರ (ಅಕ್ಷರಧಾಮ ಮಾದರಿಯಲ್ಲಿ) ಸ್ಥಾಪಿಸುವುದು.

3) ‘ಶರಣ ಸ್ಮಾರಕ ರಕ್ಷಣೆ ಪ್ರಾಧಿಕಾರ’ ರಚಿಸುವುದು.

4) ನಿರ್ಮಾಣವಾಗುತ್ತಿರುವ ಅನುಭವ ಮಂಟಪದಲ್ಲಿ ‘ವಚನ ವಿಶ್ವವಿದ್ಯಾಲಯ’ ಮತ್ತು ಸಂಶೋಧನ ಕೇಂದ್ರ ಆರಂಭಿಸುವುದು.

5) ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಬಸವ ಭವನ’ ನಿರ್ಮಿಸುವುದು. ಆ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸಬೇಕು.

6) ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರಕ್ಕಾಗಿಯೇ ಇರುವ ಸಂಸ್ಥೆಗಳಿಗೆ ಅನುದಾನ ಒದಗಿಸುವುದು (ಚಟುವಟಿಕೆಗಳು: ವಚನ ಸಾಹಿತ್ಯ ಸಂಗ್ರಹ, ಪ್ರಕಟಣೆ, ಮರು ಪ್ರಕಟಣೆ, ಹಸ್ತಪ್ರತಿಗಳ ದಾಖಲೀಕರಣ, ಶರಣ ಕ್ಷೇತ್ರಗಳ ಅಧ್ಯಯನ ಮತ್ತು ದಾಖಲೀಕರಣ, ವಿಚಾರಸಂಕಿರಣ, ಸಮ್ಮೇಳನಗಳು, ವಚನಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿ.)

ಮನವಿ ಕೇಳಿ ಮಾತನಾಡಿದ ಸಿದ್ದರಾಮಯ್ಯನವರು ನಿಮ್ಮ ಬೇಡಿಕೆಗಳು ಸೂಕ್ತವಾಗಿವೆ. ಎಲ್ಲಾ ಕಡೆಗಳಿಂದಲೂ ಒತ್ತಡಗಳಿರುವ ಕಾರಣ, ಎಲ್ಲಾ ಬೇಡಿಕೆಗಳನ್ನು ಒಮ್ಮೆಲೇ ಈಡೇರಿಸಲು ಸಾಧ್ಯವಾಗುವುದಿಲ್ಲ. ಹಂತಹಂತವಾಗಿ ಎಲ್ಲವನ್ನೂ ಪರಿಗಣಿಸುತ್ತೇವೆ, ಯೋಜನೆ ಹಾಕಿಕೊಳ್ಳುತ್ತೇವೆ, ಎಂದು ಹೇಳಿದರು.

ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರೆಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಕಾರ್ಯದರ್ಶಿ ಶಿವಾನಂದ ಸ್ವಾಮೀಜಿ ಹೇಳಿದರು.

ಗದಗ ತೋಂಟದ ಸಿದ್ಧರಾಮ ಸ್ವಾಮೀಜಿ, ಪೂಜ್ಯ ಗಂಗಾ ಮಾತಾಜಿ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಆನಂದಪುರ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಹಂದಿಗುಂದ ಶಿವಾನಂದ ಸ್ವಾಮೀಜಿ, ಬೇಲಿ ಮಠದ ಶಿವರುದ್ರಸ್ವಾಮೀಜಿ, ಇಳಕಲ್ಲ ಗುರುಮಹಾಂತ ಸ್ವಾಮೀಜಿ, ಬೈಲೂರು ನಿಜಗುಣಾನಂದ ಸ್ವಾಮೀಜಿ, ಅಥಣಿ ಪ್ರಭುಚನ್ನಬಸವ ಸ್ವಾಮೀಜಿ, ಗೊ.ರು.ಚನ್ನಬಸಪ್ಪ, ಎಂ. ಬಿ. ಪಾಟೀಲ, ಬಸವರಾಜ ರಾಯರೆಡ್ಡಿ, ಬಿ, ಆರ್. ಪಾಟೀಲ, ಈಶ್ವರ ಖಂಡ್ರೆ, ಅಶೋಕ ಪಟ್ಟಣ, ಶರಣಬಸಪ್ಪ ದರ್ಶನಾಪುರ, ವಿಜಯಾನಂದ ಕಾಶಪ್ಪನವರ, ಎಸ್. ಎಸ್. ಪಾಟೀಲ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಎಂ.ಬಿ. ಪಾಟೀಲ ನಿವಾಸದಲ್ಲಿ ಸಭೆ

ಮುಂಜಾನೆ 11 ಗಂಟೆಯಿಂದ 12 ಗಂಟೆಯವರೆಗೆ ಸಚಿವ ಎಂ.ಬಿ. ಪಾಟೀಲರ
ನಿವಾಸದಲ್ಲಿ ಲಿಂಗಾಯತ ಮಠಾಧೀಶರು ಹಾಗೂ ಗಣ್ಯರ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು. ಸಭೆಯ ನಂತರ ಇಲ್ಲಿ ಸೇರಿದವರೆಲ್ಲರೂ ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ ಪಾಲ್ಗೊಂಡರು.

ಸಭೆಯಲ್ಲಿ ಮಾತನಾಡುತ್ತ ಎಂ.ಬಿ. ಪಾಟೀಲರು ವಿಶೇಷ ಕಾರ್ಯಯೋಜನೆಗೆ 500 ಕೋಟಿ ರೂಪಾಯಿಗಳ ಅವಶ್ಯಕತೆಯಿದ್ದು ಪ್ರತಿ ವರ್ಷ 100 ಕೋಟಿ ರೂಪಾಯಿಗಳ ಅನುಧಾನ ಪಡೆದು ಎಲ್ಲಾ ಯೋಜನೆಗಳನ್ನು ಐದು ವರ್ಷಗಳಲ್ಲಿ ಜಾರಿಗೆ ತರಲು ಪ್ರಯತ್ನಿಸಲಾಗುವುದೆಂದು ಹೇಳಿದರು.

ಶಾಸಕ ಬಿ ಆರ್ ಪಾಟೀಲ್ ಸರಕಾರದ ಜೊತೆ ಕಾರ್ಯಕ್ರಮಗಳನ್ನು ಜಾರಿಗೆ ತರಲು ಮಠಗಳು ದೇಣಿಗೆ ಸಂಗ್ರಹಿಸಿ ಕೈ ಜೋಡಿಸಬೇಕೆಂದು ಸಲಹೆ ನೀಡಿದರು.

Share This Article
4 Comments
  • ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಆರು ಮನವಿಗಳು ಅತ್ಯಂತ ಸೂಕ್ತವಾಗಿವೆ.

    ಪೂರ್ವಪ್ರಾಥಮಿಕದಿಂದ (Baby class, LKG, UKG) ಹಿಡಿದು 1 ರಿಂದ 10 ನೇ ತರಗತಿಗಳವರೆಗೆ ಮತ್ತು ಪಿಯುಸಿ, ಪದವಿ, ಸ್ನಾತಕೋತ್ತರ ಪದವಿವರೆಗೆ ಕಡ್ಡಾಯವಾಗಿ ವಚನಸಾಹಿತ್ಯ ಪಠ್ಯಕ್ರಮ ಅಳವಡಿಸಬೇಕು ಎಂಬ ಮನವಿ ಸೇರಿಸಬೇಕಿತ್ತು.

    ಮುಂದಾದರೂ ಈ ಪ್ರಯತ್ನ ಮಾಡಲಿ ಎಂದು ವಿನಂತಿಸುವೆ.

    ಶರಣತತ್ವ ಬೆಳಗಲಿ. ಶರಣು ಶರಣಾರ್ಥಿಗಳು

  • 1 ರಿಂದ 10ನೆಯ ತರಗತಿಯವರೆಗೆ ವಚನ ಸಾಹಿತ್ಯದ ಪಠ್ಯಪುಸ್ತಕ ರಚನೆ ಮಾಡಲು ಮೊದಲ ಆದ್ಯತೆ ನೀಡಬೇಕಿತ್ತು… ಸರ್ ಜೈ ಬಸವಣ್ಣನವರು

  • Opportunity should not be missed.
    Karnataka Government is planning to build a second airport in Bengaluru the earlier Airport is named after Nadaprabhu Kempegowda and also previous government constructed a theme park of Nadaprabhu Kempegowda also Bengaluru Railway Station is named after Kraantiveera Sangolli Rayanna whereas Vishwa Guru Basavanna finds no place anywhere in prime hubs, in order to undo this injustice, We should take this opportunity at first and demand the Government to name Vishwa Guru Basavanna for the upcoming new airport in Bengaluru. If this opportunity is missed no one else can be blamed except us.

  • ಉತ್ತಮ ಬೆಳವಣಿಗೆ, ಧಾರ್ಮಿಕ ಆಚರಣೆಗಳ ಮುಖಂಡರ ಜೋತಗೆ ಮಾತುಕತೆ ಬಹಳ ಶೌಹಾರ್ಡವಾಗಿ ನಡೆದಂತೆಕಾಣುತ್ತದೆ. ತಮ್ಮೆಲ್ಲರ ಆಶಯದಂತೆ ಕೆಲಸಗಳು ಸಾಂಗವಾಗಿ ನೆರವೇರಲಿಯೆಂದು ಆ ಪರಮಾತ್ಮನಲ್ಲಿ ಬೇಡಿಕೊಳ್ಳುತ್ತಿರುವೆ.

Leave a Reply

Your email address will not be published. Required fields are marked *