ಲಿಂಗಾಯತರು ಹಿಂದೂಗಳಲ್ಲ: ‘ವಚನ ದರ್ಶನ: ಮಿಥ್ಯ-ಸತ್ಯ’ ಬಿಡುಗಡೆ

ಲಿಂಗಾಯತ ಧರ್ಮ, ಬಸವ ಚಳುವಳಿಯನ್ನು ನಿರಾಕರಿಸುವ ಸಂಘ ಪರಿವಾರದ ಪ್ರತಿಯೊಂದು ವಾದಕ್ಕೆ ಎಲ್ಲಾ ಲಿಂಗಾಯತ ಸಂಘಟನೆಗಳ ಒಮ್ಮತದ ಉತ್ತರ

ಬೆಂಗಳೂರು

ನಮ್ಮ ನಡಾವಳಗೆ ನಮ್ಮ ಪುರಾತರ ನುಡಿಯೇ ಇಷ್ಟವಯ್ಯಾ
ಸ್ಮೃತಿಗಳು ಸಮುದ್ರದ ಪಾಲಾಗಲಿ, ಶೃತಿಗಳು ವೈಕುಂಟವ ಸೇರಲಿ
ಪುರಾಣಗಳು ಅಗ್ನಿಯ ಸೇರಲಿ, ಆಗಮಗಳು ವಾಯುವ ಹೊಂದಲಿ
ನಮ್ಮ ನುಡಿ ಕಪಿಲಸಿದ್ಧಮಲ್ಲಿಕಾರ್ಜುನ ಮಹಾಲಿಂಗದ
ಹೃದಯದೊಳು ಗ್ರಂಥಿಯಾಗಲಿ

ಸಿದ್ಧರಾಮಣ್ಣ.

ವಚನ ಸಂಸ್ಕೃತಿಯು ಉಪನಿಷತ್ತುಗಳ ಅನುವಾದವೂ ಅಲ್ಲ ಮತ್ತು ವೇದಾಗಮಗಳ ತಾತ್ಪರ್ಯವೂ ಅಲ್ಲ. ಬಸವ ಪ್ರಣೀತ ಬಸವ ಧರ್ಮವು ಸರ್ವತಂತ್ರ ಸ್ವತಂತ್ರ ಧರ್ಮ.

ರಾಜ್ಯದ ಎಲ್ಲ ಬಸವ ಸಂಘಟನೆಗಳು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯನ್ನು ಸೇರಿಸಿಕೊಂಡು “ಲಿಂಗಾಯತವು ಹಿಂದುತ್ವದ ಭಾಗವಲ್ಲ” “ಲಿಂಗಾಯತರು ಹಿಂದೂಗಳಲ್ಲ” ಮತ್ತು “ಲಿಂಗಾಯತ ಧರ್ಮವು ಸನಾತನವಲ್ಲ” ಎಂದು, “ಲಿಂಗಾಯತವು ಸರ್ವತಂತ್ರ ಸ್ವತಂತ್ರ ಧರ್ಮ” ಎಂದು ಒಕ್ಕೊರಲಿನಿಂದ – ಒಗ್ಗಟ್ಟಿನಿಂದ, ಹೇಳುತ್ತಿವೆ.

ಇದನ್ನು ಕೇಳಿಸಿಕೊಳ್ಳದ ಕಿವುಡರು-ಕುರುಡರು ಲಿಂಗಾಯತವು ವೇದಾಗಮಗಳ – ಹಿಂದುತ್ವದ ಭಾಗ ಎನ್ನುತ್ತಿದ್ದಾರೆ. ಇದನ್ನು ಪ್ರತಿಪಾದಿಸಲಿಕ್ಕಾಗಿ ೨೦೨೪ರಲ್ಲಿ ವಿಪ್ರಕರ್ಮಿಗಳು “ವಚನ ದರ್ಶನ” ಎಂಬ ಸುಳ್ಳಿನ ಕಂತೆಯನ್ನು ಪ್ರಕಟಸಿ ಕೆಲವು ಲಿಂಗಾಯತ ಸ್ವಾಮಿಗಳಿಂದಲೇ ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ.

ಇದರಲ್ಲಿ ವಚನ ಸಾಹಿತ್ಯದ – ಬಸವ ಸಿದ್ಧಾಂತದ ಸ್ವತಂತ್ರ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ಪುರೋಹಿತಶಾಹಿ ಮಠಗಳು ಇಂತಹ ಪ್ರತಿಪಾದನೆಯ ಗುತ್ತಿಗೆ ಹಿಡಿದಿವೆ. ಕೆಲವು ಲಿಂಗಾಯತ ಮಠಗಳೂ ಸಹ ಇದರಲ್ಲಿ ಶಾಮೀಲಾಗಿವೆ.

ಕರ್ನಾಟಕದ ಒಬ್ಬ ಲಿಂಗಾಯತ ಸಂಸತ್ ಸದಸ್ಯ – ಒಕ್ಕೂಟ ಸರ್ಕಾರದ ಮಂತ್ರಿ ವಿಪ್ರಕರ್ಮದ ಜೊತೆ ಸೇರಿಕೊಂಡು “ವಚನ ದರ್ಶನ” ಕೃತಿಯನ್ನು ಅಖಿಲ ಭಾರತದ ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಳ್ಳುವ ಸಂಘಟನೆಯ ಜೊತೆ ಸೇರಿಕೊಂಡು ನವದೆಹಲಿಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಲಿಂಗಾಯತ ಸ್ವಾಮಿಗಳೊಬ್ಬರು ಇದಕ್ಕೆ ಶುಭಾಶಯ – “ಶುಭಾಂಶಸನೆ” ಬರೆದಿದ್ದಾರೆ.

ಸ್ವತಂತ್ರ ಧರ್ಮ

ಬಸವ ಪ್ರಣೀತ ಲಿಂಗಾಯತ ಧರ್ಮವು ಸನಾತನ ಧರ್ಮವಲ್ಲ. ಬಸವಾದಿ ಶರಣರು ಚಾತುರ್ವರ್ಣ ಸಿದ್ಧಾಂತವನ್ನು, ಜಾತಿ ವ್ಯವಸ್ಥೆಯನ್ನು ಮಹಿಳಾ ಅಸಮಾನತೆಯನ್ನು ತಿರಸ್ಕರಿಸಿ ಜಾಗತಿಕವಾದ ಲಿಂಗಾಯತ ಧರ್ಮವನ್ನು ಕಟ್ಟಿದ್ದಾರೆ. ಜಾಗತಿಕ ಲಿಂಗಾಯತ ಮಹಾಸಭೆಯು ಸಿದ್ಧಪಡಿಸಿರುವ “ವಚನ ದರ್ಶನ: ಮಿಥ್ಯ ವರ್ಸ್ಸ್ ಸತ್ಯ” ಕೃತಿಯಲ್ಲಿ ಹಿರಿಯ ವಿದ್ವಾಂಸರಾದ ಡಾ. ಡಿ. ಸಿ. ಪಾವಟೆ, ಡಾ ಜಿ ಎಸ್ ಶಿವರುದ್ರಪ್ಪ, ಹಿರೇಮಲ್ಲೂರ ಈಶ್ವರನ್, ಸಾಣೇಹಳ್ಳಿ ಶ್ರೀಗಳು, ತೋಂಟದ ಸಿದ್ಧರಾಮ ಸ್ವಾಮಿಗಳು, ಡಾ. ರಾಜೇಂದ್ರ ಚೆನ್ನಿ, ಡಾ. ಎಂ. ಎಸ್. ಆಶಾದೇವಿ, ಅಶೋಕ ಬರಗುಂಡಿ ಚಂದ್ರಶೇಖರ ಪಾಟೀಲ, ಡಾ. ಎಸ್. ಎಂ. ಜಾಮದಾರ್ ಮುಂತಾದವರು ಇದರಲ್ಲಿ ಲಿಂಗಾಯತವು ಸ್ವತಂತ್ರ ಧರ್ಮ ಎಂಬುದನ್ನು ಪ್ರತಿಪಾದಿಸಿದ್ದಾರೆ.

ಡಾ. ಡಿ. ಸಿ ಪಾವಟೆ

ಡಾ. ಡಿ. ಸಿ ಪಾವಟೆ ಅವರು ಒಂಭತ್ತು ವರ್ಷಗಳ ಕಾಲ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದರು. ಅವರು ೧೯೭೩ರಲ್ಲಿ ಬರೆದ “ಲಿಂಗಾಯತದ ಇತಿಹಾಸ” ಲೇಖನದಲ್ಲಿ ಲಿಂಗಾಯತ ಧರ್ಮದ ಪೀಠಾಧಿಪತಿಗಳ ಬಗ್ಗೆ ಅತ್ಯಂತ ಬೇಸರದಿಂದ “ಉಚ್ಛಸ್ಥಾನದಲ್ಲಿರುವ ಲಿಂಗಾಯತ ಧರ್ಮದ ಪೀಠಾಧಿಪತಿಗಳು ೧೯೨೦ ರಿಂದೀಚೆಗೆ ನಮ್ಮ ರಾಷ್ಟ್ರೀಯ ನೀತಿಯಾಗಿ ಅಂಗೀಕೃತವಾದ ಸಮಾಜವಾದಿ ತತ್ವ ಹಾಗೂ ಸಮಾಜ ಸುಧಾರಣೆಯನ್ನು ಅನುಸರಿಸುವ ಬಸವಾನುಯಾಯಿ ಜನಸಮೂಹದಿಂದ ಅದೇಕೆ ಪ್ರತ್ಯೇಕವಾಗುತ್ತಿದ್ದಾರೋ, ಅವರಿಗದ್ಯಾವ ಪಿಶಾಚಿ ಬಡೆದಿದೆಯೋ ನನಗಂತೂ ಅರ್ಥವಾಗುತ್ತಿಲ್ಲ. ಲಿಂಗಾಯತರೊಳಗೇ ತಾವು ಬ್ರಾಹ್ಮಣರಾಗಿರುವೆವೆಂದು ಅವರೇನಾದರೂ ತಿಳಿದುಕೊಂಡಿದ್ದರೆ ಅದರಂಥ ದುಃಖಕರ ಸಂಗತಿ ಮತ್ತೊಂದಿಲ್ಲ” ಎನ್ನುತ್ತಾರೆ(ವಚನ ದರ್ಶನ; ಮಿಥ್ಯ ವರ್ಸ್ಸ್ ಸತ್ಯ: ಪುಟ: ೪೪-೪೫)

ಎಂ. ಆರ್. ಶ್ರೀನಿನಿವಾಸಮೂರ್ತಿ

ಈ ಬಗ್ಗೆ ಪ್ರೊ. ಎಂ. ಆರ್. ಶ್ರೀನಿನಿವಾಸಮೂರ್ತಿ ಅವರು ಪಂಚಾಚಾರ್ಯರು ಕನ್ನಡನಾಡಿನವರೇ? ಕನ್ನಡಿಗರೇ? ಕನ್ನಡದಲ್ಲಿ ವಚನಗಳನ್ನು ಬರೆದಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಖಚಿತವಾಗಿ ಹೇಳಲಾರೆವು. ವಚನಕಾರರಂತೆ ಅವರು ವಿಚಾರವಾದಿಗಳಾಗಿದ್ದಾರೆಂದೂ ಹೇಳಲು ಸಾಧ್ಯವಿಲ್ಲ. ವಚನಕಾರರಿಗೂ ಪಂಚಾಚಾರ್ಯರಿಗೂ ಕೆಲವು ವಿಷಯಗಳಲ್ಲಿ ಏಕಾಭಿಪಾಯವಿದ್ದಂತೆ ತೋರುವುದಿಲ್ಲ. ವಚನಕಾರರಂತೆ ಅವರು ಜನಜಂಗುಳಿಯೊಡನೆ ಸೇರಿ. ನೀತಿಯನ್ನು ಹೇಳಿ, ತತ್ವವನ್ನು ತಿಳಿಸಿ, ಡೊಂಕುಗಳನ್ನು ತಿದ್ದಿ, ದುರಾಚಾರಗಳನ್ನು ಖಂಡಿಸಿ ಮನುಷ್ಯರೊಡನೆ ಮನುಷ್ಯರಾಗಿ ವ್ಯವಹರಿಸಿದರೆಂದು ಹೇಳಲೂ ಸಾಧ್ಯವಿಲ್ಲ” ಎಂದು ಬರೆದಿದ್ದಾರೆ. (ವಚನ ದರ್ಶನ; ಮಿಥ್ಯ ವರ್ಸ್ಸ್ ಸತ್ಯ: ಪುಟ ೫೦)

ಡಾ. ಜಿ. ಎಸ್. ಶಿವರುದ್ರಪ್ಪ

ಪ್ರಸಿದ್ಧ ಕವಿಗಳೂ ಚಿಂತಕರು ಆದ ಡಾ. ಜಿ. ಎಸ್. ಶಿವರುದ್ರಪ್ಪನವರು ವಾಸ್ತವವಾಗಿ ಆಧ್ಯಾತ್ಮ, ಆಧ್ಯಾತ್ಮ ವಿದ್ಯೆ, ಆಧ್ಯಾತ್ಮಿಕತೆ – ಈ ಪದಗಳು ಹಿಂದೂ ವೈದಿಕ ತತ್ವಜ್ಞಾನಕ್ಕೆ ಸೇರಿದವು. ನಾವು “ಶರಣ ಧರ್ಮ” ಎಂದು ಕರೆಯುವುದಾದರೆ ಇದು ಪರಂಪರಾಗತವಾದ ಹಿಂದೂ ವೈದಿಕ ಧರ್ಮಕ್ಕೆ ಬಸವಾದಿಗಳು ಹನ್ನರಡನೆಯ ಶತಮಾನದಲ್ಲಿ ತೋರಿದ ಪ್ರತಿಕ್ರಿಯೆ – ಪ್ರತಿಭಟನೆಯಿಂದ ನಿಷ್ಪನ್ನವಾದುದು.

ಈ ಧರ್ಮದ ತಾತ್ವಿಕ ನಿಲುವುಗಳನ್ನು ವಿವರಿಸಲು ಪರಂಪರಾಗತವಾದ ಹಿಂದೂ ವೈದಿಕ ಧರ್ಮದ ಸಂಸ್ಕೃತ ಭಾಷೆಯ ಪರಿಕರಗಳನ್ನು ನಿರಾಕರಿಸಿ ತಮ್ಮ ದೇಶೀಯವಾದ ಕನ್ನಡವನ್ನು ಹೊಸ ಧರ್ಮದ ಪ್ರಸಾರ ಮತ್ತು ತತ್ವಜ್ಞಾನದ ಭಾಷೆಯನ್ನಾಗಿ ಸಜ್ಜುಗೊಳಿಸಿದ್ದು ಒಂದು ಮಹತ್ವದ ಸಾಧನೆಯಾಗಿದೆ” (ವಚನ ದರ್ಶನ; ಮಿಥ್ಯ ವರ್ಸ್ಸ್ ಸತ್ಯ: ಪುಟ: ೫೫-೫೬)

ಮುಂದುವರಿದು ಅವರು “ವೈದಿಕರ ಆಧ್ಯಾತ್ಮ ಎನ್ನುವುದು ವಚನ ಸಂಸ್ಕೃತಿಯಲ್ಲಿ “ಅನುಭಾವ”ವಾಯಿತು; ದೇವರು ಅಥವಾ ಪರಬ್ರಹ್ಮ ಎಂಬುದಕ್ಕೆ ಬದಲು “ಲಿಂಗ” ಎಂಬ ಮಾತು, “ಮೋಕ್ಷ”ದ ಬದಲು “ಲಿಂಗಾಂಗ ಸಾಮರಸ್ಯ” ಎಂಬ ಮಾತು ಮತ್ತು “ತುರೀಯಾವಸ್ಥೆ” ಅಥವಾ “ಅನಿರ್ವಚನೀಯ” ಎಂಬುದು “ಬಯಲು” ಅಥವಾ “ಶೂನ್ಯಸಂಪಾದನೆ” ಎಂಬ ಮಾತು ಹುಟ್ಟಿಕೊಂಡದ್ದು ಆಂದಿನ “ದೇಶಿಯ ದಂಗೆ”ಯ ಪರಿಣಾಮಗಳೇ” (ಪುಟ: ೫೦).

ಡಾ. ಎನ್. ಜಿ. ಮಹದೇವಪ್ಪ

ಡಾ. ಎನ್. ಜಿ. ಮಹದೇವಪ್ಪ ಅವರು ನೇರವಾಗಿ ವಿಪ್ರರ ವಚನ ದರ್ಶನಕ್ಕೆ ಮುನ್ನುಡಿ ಬರೆದಿರುವ ಡಾ. ಮಲ್ಲೇಪುರಂ ವೆಂಕಟೇಶ್ ಅವರ ‘ವೈದೇಶಿಕ ಸಮಾಜ ವಿಜ್ಞಾನ ನೆಲೆಯಲ್ಲಿ ವಚನಗಳನ್ನು ವಿಶ್ಲೇಷಿಸುವುದು ಅಯುಕ್ತ:’ ಎಂಬ ನಿಲುವನ್ನು ಖಂಡಿಸಿ ತಿರಸ್ಕಸಿದ್ದಾರೆ. ಮುಂದುವರಿದು ಅವರು “ಬಸವಾದಿ ಪ್ರಮಥರು ತಮ್ಮ ಸ್ವಂತ ಲಿಂಗಾನುಭವದ ಆಧಾರದ ಮೇಲೆ ಸಿದ್ಧಾಂತಗಳನ್ನು ರೂಪಿಸಿದರೇ ಹೊರತು ಉಪನಿಷತ್ತುಗಳ ನಕಲು ಮಾಡಲಿಲ್ಲ. . . . ಉಪನಿಷತ್ತುಗಳನ್ನು ಅನುಸರಿಸಿದ್ದಕ್ಕೆ ಯಾರಿಗೂ ಶಿಕ್ಷೆಯಾಗಲಿಲ್ಲ. ಆದರೆ ಬಸವಣ್ಣನವರ ಲಿಂಗಾಯತ ಧರ್ಮವನ್ನು ಅನುಸರಿಸಿದ್ದಕ್ಕಾಗಿ ಹರಳಯ್ಯನಿಗೂ ಮಧುವರಸನಿಗೂ ಎಳೆಹೂಟೆ ಶಿಕ್ಷೆಯಾಯಿತು. ಉಪನಿಷತ್ತುಗಳಲಿದ್ದುದ್ದನ್ನೇ ಬಸವಾದಿ ಶರಣರು ಪುನರುಚ್ಚರಿಸಿದ್ದರೆ ಕಲ್ಯಾಣ ಕ್ರಾಂತಿ ಆಗುತ್ತಿರಲಿಲ್ಲ” ಎಂದು ಮಹತ್ವದ ವಿಚಾರವನ್ನು ತಮ್ಮ ಲೇಖನದಲ್ಲಿ ಮಂಡಿಸಿದ್ದಾರೆ.

೧೮ ಲೇಖನಗಳು

ಈ ಕೃತಿಯಲ್ಲಿ ೧೮ ವಿದ್ವಾಂಸರ ಲೇಖನಗಳಿವೆ. ಪ್ರತಿಯೊಂದು ಲೇಖನವೂ ಚಾತುರ್ವರ್ಣವನ್ನು, ಬ್ರಾಹ್ಮಣ್ಯದಲ್ಲಿನ ಅಸಮಾನತೆಯನ್ನು, ಮಹಿಳೆಯರಿಗೆ ಧಾರ್ಮಿಕ ಹಕ್ಕುಗಳನ್ನು ನೀಡದುದನ್ನು, ಕಾಯಕ–ದುಡಿಮೆ ವಿರೋಧಿ ಪ್ರಣಾಳಿಕೆಯನ್ನು, ಲಿಂಗಾಯತರನ್ನು ಶೂದ್ರರೆಂದು, ಸವರ್ಣೀಯರ ಸೇವೆ ಮಾಡುವುದೇ ಅವರ ಧರ್ಮ ಎಂದು ನಿಯಮ ಮಾಡಿದ್ದ ಮಾನವೀಯತೆ ವಿರೋಧಿ ನಿಲುವುಗಳನ್ನ ಇನ್ನಿಲ್ಲದಂತೆ ತಿರಿಸ್ಕರಿಸಿದ್ದಾರೆ.

ಬಸವ ಧರ್ಮದ, ವಚನ ಸಂಸ್ಕೃತಿಯ ಪ್ರಧಾನ ತತ್ವಗಳಾವುವು, ಲಿಂಗಾಯತದ ಮೌಲ್ಯಗಳಾವುವು, ಲಿಂಗಾಯತವು ಏಕೆ ಸ್ವತಂತ್ರ ಧರ್ಮ ಮತ್ತು ಗೇಹೆ ಸ್ವತಂತ್ರ ಧರ್ಮ ಎಂಬ ಸಂಗತಿಗಳನ್ನು ಇಲ್ಲಿ ಚರ್ಚೆ ಮಾಡಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ ಹೇಳಿರುವಂತೆ Brahminism – caste system is the very negation of the spirit of Equality, Liberty and Fraternity”.

ಸಮಾನತೆ, ಸ್ವಾತಂತ್ರತೆ, ಸಹೋದರತ್ವ

ಸಮಾನತೆ, ಸ್ವಾತಂತ್ರತೆ ಮತ್ತು ಸಹೋದರತ್ವ – ಈ ತತ್ವಗಳು ಲಿಂಗಾಯತ ಧರ್ಮದ ಮೂಲದ್ರವ್ಯಗಳಾಗಿವೆ. ಬಸವ ಸಂವಿಧಾನದ ಅನೇಕ ಅಂಶಗಳು ಭಾರತ ಸಂವಿಧಾನದಲ್ಲಿ ಅಡಕವಾಗಿವೆ. ವಚನ ಸಂಸ್ಕೃತಿಯನ್ನು ವಿರೋಧಿಸುವ ಶಕ್ತಿಗಳು ಇಂದು ಭಾರತದ ಸಂವಿಧಾನವನ್ನೂ ವಿರೋಧಿಸುತ್ತಿವೆ. “ವಚನ ಸಂವಿಧಾನವನ್ನು ವಿರೋಧಿಸುವುದು ಎಂದರೆ ಅದು ಭಾರತದ ಸಂವಿಧಾನವನ್ನು ವಿರೋಧಿಸಿದಂತೆ; ಭಾರತದ ಸಂವಿಧಾನವನ್ನು ವಿರೋಧಿಸುವುದು ವಿರೋಧಿಸುವುದು ಎಂದರೆ ಬಸವ ಸಂವಿಧಾನವನ್ನು ವಿರೋಧಿಸಿದಂತೆ”.

ವಿಪ್ರಕರ್ಮವು ಲಿಂಗಾಯತದ ಮೇಲೆ ದಾಳಿ ಮಾಡುತ್ತಿದೆ ನಿಜ. ಲಿಂಗಾಯತವನ್ನು ನೇರವಾಗಿ ಗುರಿಯನ್ನಾಗಿಟ್ಟುಕೊಂಡು ಬ್ರಾಹ್ಮಣ್ಯವು ದಾಳಿ ಮಾಡುತ್ತಿದೆ. ಈ ದಾಳಿಯನ್ನು, ಆಕ್ರಮಣವನ್ನು ನಾವು ವಿಸ್ಕೃತ-ವ್ಯಾಪಕ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿದೆ.

ಇದು ಲಿಂಗಾಯತದ, ಬಸವಣ್ಣನ ಮೇಲಿನ ದಾಳಿ ಮಾತ್ರವಲ್ಲ. ಈ ದಾಳಿಯು ಜನತಂತ್ರದ ಮೇಲೆ, ನಾಡಿನ “ಬಹುತ್ವ” ಸಂಸ್ಕೃತಿಯಮೇಲೆ, ಕನ್ನಡ ಭಾಷೆಯ ಮೇಲೆ ನಡೆಯುತ್ತಿದೆ. ಸಾಮಾಜಿಕ ಸೌಹಾರ್ದತೆಯ ಮೇಲಿನ ಆಕ್ರಮಣ ಇದಾಗಿದೆ. ಹಿಂದಿ ಭಾಷೆಯನ್ನು ಹೇರಲಾಗುತ್ತಿದೆ, ಸಂಸ್ಕೃತ ಭಾಷೆಯನ್ನು ವೈಭವೀಕರಿಸಲಾಗುತ್ತಿದೆ. ಈ ಬಗ್ಗೆ ಪ್ರಸ್ತುತ ಕೃತಿಯಲ್ಲಿ ಚರ್ಚೆ ಮಾಡಲಾಗಿದೆ.

ಈ ವಿಪ್ರರ ದಾಳಿಯು ಸಮಾನತೆ ವಿರುದ್ಧವಾದುದು, ಕಾಯಕ ಪ್ರಣಾಳಿಕೆ ವಿರುದ್ಧವಾದುದು, ಮಹಿಳಾ ಸ್ವಾತಂತ್ರ್ಯದ ವಿರುದ್ಧವಾದುದು. ಬಹುತ್ವ ಸಂಸ್ಕೃತಿಯ ವಿರುದ್ಧವಾದುದು. ದೇಶೀಯ ಭಾಷೆಗಳ ವಿರುದ್ಧವಾದುದು.

ನಿರಂತರ ಭೇದ

ಈ ಬಗ್ಗೆ ಪ್ರಸ್ತುತ ಕೃತಿಗೆ ಆಶೀರ್ವಾದ ನೀಡಿರುವ ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳು “ಶೃತಿ-ಸ್ಮೃತಿ ಪ್ರತಿಪಾದಿತವಾದ ವರ್ಣಭೇದ, ವರ್ಗಭೇದ, ಲಿಂಗಭೇದಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವ “ಅಜೆಂಡಾ” ಹೊಂದಿರುವ ಸನಾತನಿಗಳು ವಚನಗಳ ಆಶಯಗಳನ್ನು ಉದ್ದೇಶಪೂರ್ವಕವಾಗಿ ತಿರುಚಿದ ಗ್ರಂಥಗಳನ್ನು ಪ್ರಕಟಿಸಿ ವ್ಯಾಪಕವಾಗಿ ಪ್ರಸಾರಗೊಳಿಸುತ್ತಿದ್ದಾರೆ” ಎಂದು ಹೇಳಿ
ಈ ವಿಪ್ರಕರ್ಮದ ಅಜೆಂಡಾವನ್ನು ಲಿಂಗಾಯತರು ಅರ್ಥ ಮಾಡಿಕೊಂಡು ಅದನ್ನು ಮೂಲೆಗುಂಪಾಗಿಸುವ ಪ್ರಯತ್ನವನ್ನು ಮಾಡಬೇಕು ಎಂದು ಕರೆ ನೀಡಿದ್ದಾರೆ.

ಅಂತಹ ಉದ್ದೇಶವನ್ನಿಟ್ಟುಕೊಂಡು ಜಾಗತಕ ಲಿಂಗಾಯತ ಮಹಾಸಭೆ ಪ್ರಸ್ತುತ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯಲ್ಲಿ ವಿಪ್ರಕರ್ಮದ ಲೇಖಕರ, ದಾರಿ ತಪ್ಪಿದ ಲಿಂಗಾಯತ ಸ್ವಾಮಿಗಳ ಮತ್ತು ಇತರೆ ವಿಪ್ರ ಲೇಖಕರ ಪ್ರತಿಯೊಂದು ನಿಲುವನ್ನು ಪ್ರಶ್ನೆ ಮಾಡಲಾಗಿದೆ, ಅವೆಲ್ಲವು ಆಧಾರರಹಿತ ಎಂಬುದನ್ನು ತೋರಿಸಲಾಗಿದೆ.

ಲಿಂಗಾಯತವು ಹಿಂದುತ್ವದ ಭಾಗ ಎನ್ನುವುದು ಬ್ರಾಹ್ಮಣ್ಯದ ಕಪೋಲಕಲ್ಪಿತ ವಿಚಾರವಾಗಿದೆ. ಡಾ, ತೋಂಟದ ಸಿದ್ಧರಾಮ ಸ್ವಾಮಿಗಳು ಆಶೀರ್ವಚನದ ರೀತಿಯಲ್ಲಿ ನಮ್ಮ ಕೃತಿಗೆ ಬರೆದಿರುವ “ಭಿನ್ನಹ”ವನ್ನು ‘ಪೂರ್ವಾಗ್ರಹ ಪೀಡಿತರ ವಚನ ದರ್ಶನ’ ಎಂದು ಕರೆದಿದ್ದಾರೆ. ಸಾಣೆಹಳ್ಳಿ ಶ್ರೀಗಳು ತಮ್ಮ ಲೇಖನಕ್ಕೆ “ವೇದಶಾಸ್ತ್ರದವರ ಹಿರಿಯರೆನ್ನೇ… “ ಎಂಬ ಶೀರ್ಷಿಕೆ ನೀಡಿದ್ದಾರೆ.

“ವಚನ ದರ್ಶನ” ಎಂಬುವುದೊಂದು “ಗುಪ್ತ ಅಜೆಂಡಾ” ಎಂದು ವಿಶ್ಲೇಷಣೆ ಮಾಡಿದ್ದಾರೆ. ನಾಡೋಜ ಗೊ.ರು. ಚೆನ್ನಬಸಪ್ಪ ಅವರು ಹಿನ್ನುಡಿ ನೀಡಿದ್ದಾರೆ. ನಾಡಿನ ಪ್ರಮುಖ ಚಿಂತಕಿ ಡಾ. ಎಂ. ಎಸ್. ಆಶಾದೇವಿ ಅವರು “ನೊಂದ ನೋವ ನೋಯದವರೆತ್ತ ಬಲ್ಲರು?” ಎಂಬ ಲೇಖನವನ್ನು ನಮ್ಮ ಸಂಕಲನಕ್ಕಾಗಿಯೇ ಸಿದ್ಧಪಡಿಸಿಕೊಟ್ಟಿದ್ದಾರೆ. ಆಶಾದೇವಿ ಅವರು ‘ವಚನ ದರ್ಶನ ಎನ್ನುವ ಕೃತಿಯನ್ನು ಓದುವುದೇ ಮಹಾಹಿಂಸೆಯ ಕೆಲಸವಾಗಿದೆ’ ಎಂದು ತಮ್ಮ ಪ್ರಬಂಧವನ್ನು ಆರಂಭಿಸುತ್ತಾರೆ.

ಸುಳ್ಳು, ಭ್ರಮೆ, ಮಹಾ ಸುಳ್ಳು

ಪ್ರಸಿದ್ಧ ಚಿಂತಕ, ಬರಹಗಾರ ಡಾ. ರಾಜೇಂದ್ರ ಚೆನ್ನಿ ಅವರು ವಿಪ್ರಕರ್ಮದ ಕೃತಿ “ವಚನ ದರ್ಶನ”ದ ಕುತ್ಸಿತ ಉದ್ದೇಶಗಳನ್ನು ಹೀಗೆ ಪಟ್ಟಿ ಮಾಡಿದ್ದಾರೆ.

i) ವಚನಕಾರರು ‘ಭಾರತೀಯ’ ಪರಂಪರೆಯನ್ನು ಮುಂದುವರೆಸಿದರೆ ಹೊರತು ಮೂಲಭೂಪ್ರತವಾಗಿ ಅದನ್ನು ತೊರೆಯಲಿಲ್ಲ. (ಇದು ಸುಳ್ಳು – ಇದು ಮಿಥ್ಯ.)

ii) ವಚನಗಳಲ್ಲಿ ಇರುವ ದರ್ಶನ ಅಥವಾ ತಾತ್ವಿಕತೆಗಳಲ್ಲಿ ಉಪನಿಷತ್ತು ಮುಂತಾದ ಆಕರಗಳಲ್ಲಿ ಇರುವುದಕ್ಕಿಂತ ಭಿನ್ನವಾದದ್ದು ಯಾವುದೂ ಇಲ್ಲ. (ಇದು ಶುದ್ಧ ಸುಳ್ಳು.)

iii) ವಚನಕಾರರು ಕಾಯಕ, ಪುರೋಹಿತಶಾಹಿ, ಜಾತಿ ವ್ಯವಸ್ಥೆಗಳ ಬಗ್ಗೆ ಕೇವಲ ಅನುಷಂಗಿಕವಾಗಿ ಕೆಲವೇ ವಚನಗಳನ್ನು ಬರೆದಿದ್ದಾರೆಯೇ ಹೊರತು ಅವು ಅವರ ಪ್ರಧಾನ ಕಾಳಜಿಗಳಾಗಿರಲಿಲ್ಲ. (ಇದು ಮಹಾಸುಳ್ಳು.)

iv) ವಚನಕಾರರು ಪ್ರತ್ಯೇಕ ಧರ್ಮವನ್ನು ನಿರ್ಮಿಸಲಿಲ್ಲ. ಹೆಚ್ಚೆಂದರೆ ಅವರದು ಒಂದು ಮತ ಅಥವಾ ಸೆಕ್ಟ್ ಮಾತ್ರ. (ಇದೊಂದು ಭ್ರಮೆ.)

v) ವಚನಕಾರ ಚಳುವಳಿಯ ಬಗ್ಗೆ, ಜಾತಿ ವ್ಯವಸ್ಥೆ ವಿರೋಧಿ ನಿಲುವುಗಳ ಬಗ್ಗೆ, ಲಿಂಗತ್ವ ಸಮಾನತೆಯ ಬಗ್ಗೆ ಬರೆಯುತ್ತಿರುವ ಪ್ರಗತಿಪರರು ಪಶ್ಚಿಮದ ಸೆಕ್ಯೂಲರ್‌ವಾದ ಮುಂತಾದ ಚೌಕಟ್ಟುಗಳನ್ನು ಕೃತಿಮವಾಗಿ ಅನ್ವಯಿಸಿ ವಚನಗಳನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿದ್ದಾರೆ. (ಇದರ ಹಿಂದೆ ಪೌರ್ವಾತ್ಯವಾದ ಅಥವಾ orientalism ಪರಿಕಲ್ಪನೆಯಿದೆ.)

vi) ರಿಲಿಜನ್ ಮತ್ತು ಧರ್ಮ ಈ ಪರಿಕಲ್ಪನೆಗಳು ಭಿನ್ನವಾಗಿವೆ. ರಿಲಿಜನ್ ಅನ್ನುವ ಪರಿಕಲ್ಪನೆಯ ಹಿಂದೆ ಕ್ರಿಶ್ಚಿಯನ್ ಪ್ರೊಟೆಸ್ಟಂಟ್ ಚೌಕಟ್ಟುಗಳು ಇವೆ. ಬಸವ ಸಿದ್ಧಾಂತದ ಡಣಾಯಕರಂತೆ ಕಾರ್ಯನಿರ್ವಹಿಸುತ್ತಿರುವ ಡಾ. ಜೆ. ಎಸ್. ಪಾಟೀಲರು “ವಚನಗಳನ್ನು ಬಂಡಾಯದ ದನಿಯಾಗಿಯೇ ಅಧ್ಯಯನ ಮಾಡಬೇಕು” ಎಂದು ವಚನ ದರ್ಶನದ ಕತೃಗಳಿಗೆ ಮಾರ್ಮಿಕ ಉತ್ತರ ನೀಡಿದ್ದಾರೆ.

ಇವೆಲ್ಲವು ವಿಕೃತ ಮನಸ್ಸಿನ ಕುತ್ಸಿತ ಅಭಿಪ್ರಾಯಗಳು. ಇವೆಲ್ಲವೂ ರೋಗಗ್ರಸ್ತ ಸಮೂಹದ ಮಿಥ್ಯಗಳು.

“ವಚನ ದರ್ಶ: ಮಿಥ್ಯ ವರ್ಸ್ಸ್ ಸತ್ಯ” ಸಂಕಲದಲ್ಲಿ ಈ ಎಲ್ಲ ವಿಪ್ರಕರ್ಮದ ನಿಲುವುಗಳನ್ನು ಸೈದಾಂತಿಕವಾಗಿ ಹಾಗೂ ಆಚರಣಾತ್ಮಕವಾಗಿ ತಿರಸ್ಕರಿಸಲಾಗಿದೆ. ವಚನ ದರ್ಶನದಲ್ಲಿನ ವಿಪ್ರಕರ್ಮಿಗಳ ಪ್ರಯತ್ನವನ್ನು ಶ್ರೀ ಅಶೋಕ ಬರಗುಂಡಿ ಅವರು “ವಚನ ಸಂಸ್ಕೃತಿ ಕುರಿತು ಅತ್ಯಂತ ಅಸಹನೆಯನ್ನು ನಾಚಿಕೆ-ಭಯ ಭೀತಿಯಿಲ್ಲದೆ ವಿಪ್ರಕರ್ಮಿಗಳು ಹೊರಹಾಕಿದ್ದಾರೆ” ಎನ್ನುತ್ತಾರೆ.

ಇಂದು ಲಿಂಗಾಯತದ ಬೆಳವಣಿಗೆಗೆ ಭೂಮಿ ಫಲವತ್ತಾಗಿದೆ-ಪ್ರಶಸ್ತವಾಗಿದೆ. ಬಸವ ಸಿದ್ಧಾಂತದ ಬೆಳವಣಿಗೆಗೆ ಭೂಮಿ ಸಿದ್ಧವಾಗಿದೆ. ಇಂದಿನ ಲಿಂಗಾಯತವು ೨೦೧೭ರ ಹಿಂದಿನ ಲಿಂಗಾಯತವಲ್ಲ. ಇದು ಎಚ್ಚೆತ್ತ ಲಿಂಗಾಯತ.

Share This Article
Leave a comment

Leave a Reply

Your email address will not be published. Required fields are marked *

ಲೇಖಕರು ಅರ್ಥಶಾಸ್ತ್ರಜ್ಞರು ಮತ್ತು ಬಸವ ತತ್ವ ಚಿಂತಕರು