ಧಾರವಾಡದಿಂದ ಗರಗ: ಸುಡು ಬಿಸಿಲಿನಲ್ಲಿ ಸರ್ವೋದಯಕ್ಕಾಗಿ ನಡೆದ ಪಾದಯಾತ್ರಿಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಸಾಣೇಹಳ್ಳಿ ಶ್ರೀಗಳ ನೇತೃತ್ವದಲ್ಲಿ 18 ಕಿ.ಮೀ ಸರ್ವೋದಯ ಪಾದಯಾತ್ರೆ ಶುಕ್ರವಾರ ನಡೆಯಿತು

ಧಾರವಾಡ

ಸರ್ವೋದಯ ಸಮುದಾಯ ಕರ್ನಾಟಕ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರದಿಂದ ‘ಧಾರವಾಡದಿಂದ ಗರಗ’ ವರೆಗೆ 18 ಕಿ.ಮೀ. ‘ನಮ್ಮ ನಡೆ ಸರ್ವೋದಯದ ಕಡೆಗೆ’ ಪಾದಯಾತ್ರೆ ಶುಕ್ರವಾರ ನಡೆಯಿತು.

ಧಾರವಾಡದ ಕೋರ್ಟ್ ವೃತ್ತದ ಬಳಿಯ ಗಾಂಧಿ ಶಾಂತಿ ಪ್ರತಿಷ್ಠಾನದಿಂದ ಬೆಳಿಗ್ಗೆ 7.30ಕ್ಕೆ ಪಾದಯಾತ್ರೆ ಆರಂಭವಾಯಿತು. ಅಲ್ಲಿಂದ ಜ್ಯುಬಿಲಿ ವೃತ್ತದ ಮಾರ್ಗವಾಗಿ, ಶಿವಾಜಿ ವೃತ್ತ, ಕಿಲ್ಲಾ ಮಾರ್ಗವಾಗಿ ಸಿವಿಲ್ ಆಸ್ಪತ್ರೆ ಮೂಲಕ ಕೃಷಿ ವಿಶ್ವವಿದ್ಯಾಲಯದ ಮಾರ್ಗವಾಗಿ ನರೇಂದ್ರ, ಮಂಗಳಗಟ್ಟಿ ಗ್ರಾಮಕ್ಕೆ ತೆರಳಿತು. ಬಳಿಕ ಅಲ್ಲಿಂದ ಗರಗ ಗ್ರಾಮಕ್ಕೆ ಮಧ್ಯಾಹ್ನ 3 ಗಂಟೆಗೆ ಆಗಮಿಸಿ ಪಾದಯಾತ್ರೆ ಸಂಪನ್ನವಾಯಿತು.

ಪಾದಯಾತ್ರೆಯಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ, ಕಪ್ಪತಗುಡ್ಡ ನಂದಿವೇರಿ ಮಠದ ಶಿವಕುಮಾರ ಶ್ರೀ, ಶಿವಾನಂದ ಶೆಟ್ಟರ ಸೇರಿದಂತೆ ಹೋರಾಟಗಾರರು, ಚಿಂತಕರು, ಬರಹಗಾರರು, ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ದಾರಿಯುದ್ದಕ್ಕೂ ಬೀದಿನಾಟಕ, ಕ್ರಾಂತಿ ಗೀತೆಗಳು, ಉಪನ್ಯಾಸಗಳು ಜರುಗಿದವು. ಗಾಂಧಿ ಟೋಪಿ ಧರಿಸಿದ ಹಲವರು ‘ನಾವು ಬಯಸುವ ಬದಲಾವಣೆ ನಮ್ಮಿಂದಲೇ ಆರಂಭವಾಗಲಿ’, ‘ಅಹಿಂಸೆ, ಪ್ರೀತಿ ನಮ್ಮ ಆದರ್ಶ’ ಎಂಬ ಬಿತ್ತಿಫಲಕಗಳನ್ನು ಹಿಡಿದುಕೊಂಡು ಸುಡು ಬಿಸಿಲು ಲೆಕ್ಕಿಸದೆ ಹೆಜ್ಜೆ ಹಾಕಿದರು.

ಗರಗದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪ್ರಸ್ತುತ ಜನರಲ್ಲಿ ಪರಿಸರ, ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳೇನು? ಅವುಗಳಿಗೆ ಪರಿಹಾರಗಳೇನು? ಎಂಬುದರ ಕುರಿತು ಜನಾಭಿಪ್ರಾಯ ರೂಪಿಸಿ ಸರ್ಕಾರದ ಗಮನ ಸೆಳೆದು ಕ್ರಮಕೈಗೊಳ್ಳುವಂತೆ ಒತ್ತಡ ತರುವುದರ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಶ್ರೀಶೈಲ ಕಮತರ, ಡಾ. ಎಸ್.ಜಿ. ಸಿದ್ದರಾಮಯ್ಯ, ಮಹಿಮಾ ಪಟೇಲ್, ಹನಗವಾಡಿ ರುದ್ರಪ್ಪ, ಶಿವನಕೆರೆ ಬಸಲಿಂಗಪ್ಪ, ಡಾ. ಮಲ್ಲಿಕಾ ಘಂಟಿ, ಸವಿತಾ ನಾಗಭೂಷಣ, ಬಸವಪ್ರಭು ಹೊರಕೇರಿ, ಬಿಕೆಎಸ್ ಬರ್ಧನ್, ರುದ್ರಮುನಿ ಆವರಗೆರೆ, ಟಿ.ಎಂ. ಮರುಳಸಿದ್ದಯ್ಯ ಸೇರಿದಂತೆ ನೂರಾರು ಜನ ಗ್ರಾಮಸ್ಥರು ಇದ್ದರು.

ಮುಂದಿನ ಪಾದಯಾತ್ರೆ ಅರಸೀಕೆರೆ, ಕೊಟ್ಟೂರ ಭಾಗದಲ್ಲಿ ನಡೆಯಲಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

Share This Article
Leave a comment

Leave a Reply

Your email address will not be published. Required fields are marked *