ಚಿತ್ರದುರ್ಗ
ಡಾ. ವಿಜಯಕುಮಾರ ಕಮ್ಮಾರ ಅವರ “ವಚನ ದರ್ಶನ ಎನ್ನುವ ಅಪಸವ್ಯ ಮತ್ತು ಅಧ್ವಾನ” ಎನ್ನುವ ಕೃತಿ ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಲಿಂಗಾಯತ ಧರ್ಮಸಭಾ/ರಾಷ್ಟ್ರೀಯ ಬಸವದಳ, ಬಸವ ಸಮಿತಿ ಮತ್ತು ಇತರ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 27 ಬೆಂಗಳೂರಿನ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲೋಕಾರ್ಪಣೆಯಾಯಿತು.
ಈ ಕೃತಿ ನಾಲ್ಕು ವಿಭಾಗಗಳಲ್ಲಿ ವಿಭಾಗಿಸಲ್ಪಟ್ಟಿದೆ. ಪ್ರತಿ ವಿಭಾಗದಲ್ಲೂ ಲೇಖಕರು ಇತ್ತೀಚೆಗೆ ಬಿಡುಗಡೆಯಾದ “ವಚನ ದರ್ಶನ” ಕೃತಿಯ ಪ್ರಧಾನ ಸಂಪಾದಕರು, ಸಂಪಾದಕರನ್ನು ಮೊದಲುಗೊಂಡು ಅಲ್ಲಿರುವ ಲೇಖನಗಳ ಲೇಖಕರು ಮಾಡಿರುವ ಸಾಕಷ್ಟು ಅಪಸವ್ಯ ಮತ್ತು ಅಧ್ವಾನಗಳನ್ನು ದಾಖಲು ಸಹಿತ ಖಂಡಿಸಿದ್ದಾರೆ. ವಚನ ದರ್ಶನ ಕೃತಿಗೆ ಪ್ರತ್ಯುತ್ತರ ನೀಡುವ ಕೃತಿ ಇದಾಗಿದೆ.

ಲೇಖಕರು ಅತ್ಯಂತ ಅಧ್ಯಯನಪೂರ್ಣವಾಗಿ ದಾಖಲಾತಿಗಳನ್ನು ಕಲೆಹಾಕಿ ಲಿಂಗಾಯತ ಮತ್ತು ವೀರಶೈವ ಇವೆರಡೂ ಪದಗಳನ್ನು ಮುಖಾಮುಖಿಗೊಳಿಸುತ್ತಾ ಇವೆರಡರ ತತ್ವ ಸಿದ್ಧಾಂತ ಮತ್ತು ಇತಿಹಾಸವನ್ನೇ ಇಲ್ಲಿ ತೆರೆದಿಟ್ಟಿದ್ದಾರೆ.
ಬಸವಣ್ಣನವರನ್ನು ರಾಮನ ಅವತಾರದಲ್ಲಿ ತೋರಿಸಿ ಅವರಿಗೆ ಮತ್ತೆ ಜನಿವಾರ ತೊಡಿಸುವ ವೈದಿಕೀಕರಣದ ಹುನ್ನಾರವನ್ನು ಮುಖಪುಟ ಸಹಿತ ತೋರಿಸಿ ಖಂಡಿಸಿದ್ದಾರೆ. ಕಾಯಕ ಜೀವಿಗಳಾದ ಬಸವಾದಿ ಶರಣರ ವಿಚಾರಗಳನ್ನು ಸರಿಯಾಗಿ ಅಧ್ಯಯನ ಮಾಡದೇ ಅವರ ವಚನಗಳು ವೇದಾಗಮಗಳ ಕನ್ನಡ ಅನುವಾದ ಎಂಬ ಅಪಸವ್ಯದ ಮಾತುಗಳನ್ನು ಲೇಖಕರು ವಚನಗಳನ್ನಾಧರಿಸಿಯೇ ಇಲ್ಲಿ ಪ್ರತ್ಯುತ್ತರ ನೀಡಿದ್ದಾರೆ.
ದೇವರಿಗೂ ಕನ್ನಡವನ್ನು ಕಲಿಸಿದ ವಚನಕಾರರನ್ನು ವೈಷ್ಣವೀಕರಣಗೊಳಿಸುವ ಕುಕೃತ್ಯಕ್ಕೆ ಈ ಕೃತಿ ಸಾಕ್ಷೀ ಸಹಿತ ಉತ್ತರವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಆಂಧ್ರದಿಂದ ವಲಸೆ ಬಂದ ಶೈವ ಬ್ರಾಹ್ಮಣರು ಮಾಡಿದ ಒಳಸಂಚು ಹಾಗೂ ಒಳರಾಜಕಾರಣದ ನಿಜ ದರ್ಶನವು ಈ ಕೃತಿ ಓದಿದಾಗಲೇ ಅರ್ಥವಾಗುವುದು. ಇತ್ತೀಚೆಗೆ ಬಸವಣ್ಣನವರ ಮೇಲೆ ಆಗುತ್ತಿರುವ ಇಂತಹ ಅಪಮೌಲ್ವೀಕರಣ ದಾಳಿಯನ್ನು ಖಂಡಿಸುವ ಅತ್ಯಂತ ಪ್ರಖರ ವಿಚಾರ ಒಳಗೊಂಡ ಪ್ರಬುದ್ಧ ಕೃತಿ ಇದಾಗಿದ್ದು ಇದರಲ್ಲಿ ಲೇಖಕರ ಅಧ್ಯಯನ ಮತ್ತು ಬರವಣಿಗೆಯ ಶ್ರಮ ಸಾರ್ಥಕವಾಗಿದೆ.
ಡಾ. ವಿಜಯಕುಮಾರ ಕಮ್ಮಾರ ರ “ವಚನ ದರ್ಶನ ಎನ್ನುವ ಅಪಸವ್ಯ ಹಾಗೂ ಅಧ್ವಾನ” ಪುಸ್ತಕ ಓದಿದ ಓದುಗರಿಗೆ ಹಿಮಾಲಯದ ಛಳಿಗೆ ಬಯಲು ನಾಡಿನ ಬಿಸಿಯಿಂದ ಛಳಿ ಬಿಡಿಸುವಂತೆ ಅನುಭವ ತರುತ್ತದೆ. ‘ವಚನ ದರ್ಶನ ‘ ಪುಸ್ತಕ ಮುದ್ರಿಸಿ ವಚನಕಾರರ ಮತ್ತು ವಚನ ಸಾಹಿತ್ಯದ ನಡೆ ನುಡಿ ಸಿದ್ಧಾಂತಕ್ಕೆ ದಕ್ಕೆ ತರುವ ಬಿಸಿಲ ನಾಡಿನ ಕೆಲವು ಲಿಂಗಾಯತ ದ್ವೇಷಿ ಮನಸುಗಳಿಗೆ ಬಯಲ ನಾಡಿನಲ್ಲೇ ನಡುಕ ಹುಟ್ಟಿಸುವ ಇವರ ಪುಸ್ತಕ ನಾಡಿನೆಲ್ಲಡೆ ಪಸರಿಸಿ, ಎಲ್ಲರೊಳಗಿನ ವೈಚಾರಿಕ ಜ್ಞಾನ ಜಾಗೃತಿಯಾಗಲಿ ಎಂದು ಹಾರೈಸುವ.