ಚಿಕ್ಕಮಗಳೂರಿನಲ್ಲಿ ಬಸವತತ್ವ ಪೀಠದ ಭವ್ಯ ಬಸವ ಮಂದಿರ ಉದ್ಘಾಟನೆ

ಬಸವ ಮೀಡಿಯಾ
ಬಸವ ಮೀಡಿಯಾ

“ಬಸವತತ್ವ ಪೀಠವನ್ನು ಮೂರು ಜಿಲ್ಲೆಗಳಿಗೆ ಬಸವ ಮರುಳಸಿದ್ದ ಶ್ರೀಗಳು ವಿಸ್ತರಿಸಿದರು”

ಚಿಕ್ಕಮಗಳೂರು

ನಗರದ ಬಸವತತ್ವ ಪೀಠದಲ್ಲಿ ಬಸವತತ್ವ ಸಮಾವೇಶ ಹಾಗೂ ಶ್ರೀಮಠದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳವರ 170ನೇ ಜಯಂತಿ ಮತ್ತು ಶ್ರೀ ಜಯಚಂದ್ರಶೇಖರ ಮಹಾಸ್ವಾಮಿಗಳವರ 29ನೇ ಸಂಸ್ಮರಣೆ ಕಾರ್ಯಕ್ರಮಗಳನ್ನೂ ಆಚರಿಸಲಾಯಿತು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಸರ್ಕಾರದ ₹1.50 ಕೋಟಿ ಅನುದಾನದ ಜೊತೆಗೆ ಭಕ್ತರ ದೇಣಿಗೆಯಿಂದ ಸುಮಾರು ₹3.50 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು.

ಕೇವಲ ಚಿಕ್ಕಮಗಳೂರಿಗೆ ಸೀಮಿತವಾಗಿದ್ದ ಬಸವತತ್ವ ಪೀಠವನ್ನು ಡಾ.ಬಸವ ಮರುಳಸಿದ್ದ ಸ್ವಾಮಿಗಳು ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಈ ಮೂರು ಜಿಲ್ಲೆಗಳಿಗೆ ಶ್ರೀಗಳು ವಿಸ್ತರಿಸಿದ್ದಾರೆ ಎಂದರು.

ಭಕ್ತರ ಕಡೆ ಗುರುಗಳ ನಡಿಗೆ ಎಂಬ ಬಸವತತ್ವ ಸಮಾವೇಶ ನಡೆಸುವ ಮೂಲಕ ಜನರಲ್ಲಿ ಬಸವಾದಿ ಶರಣರ ತತ್ವಗಳನ್ನು ಬಿತ್ತಿದ್ದಾರೆ ಎಂದು ಹೇಳಿದರು.

ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿ, ಬಸವತತ್ವ ಪೀಠದ ಹಳೇ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಹಾಗೆ ಭಕ್ತರು ಹಳೆ ಮನಸ್ಸನ್ನು ಕೆಡವಿ ಹೊಸ ಮನಸ್ಸನ್ನು ಕಟ್ಟಬೇಕು ಆಗ ಮಾತ್ರ ಬಸವತತ್ವ ಸಮಾವೇಶದ ಆಶೋತ್ತರ ಪೂರೈಸಿದಂತಾಗುತ್ತದೆ ಎಂದರು.

ಸಾನ್ನಿಧ್ಯ ವಹಿಸಿ ಸುತ್ತೂರಿನ ದೇಶಿಕೇಂದ್ರ ಶ್ರೀಗಳು ಆಶೀರ್ವಚನ ನೀಡಿದರು.
ಧರ್ಮ ಎನ್ನುವುದು ಸಾವಿರಾರು ವರ್ಷಗಳ ವಿಕಾಸವಾಗಿದ್ದು ಈ ಬಗ್ಗೆ ದೊಡ್ಡ ಪರಂಪರೆ ದೇಶದಲ್ಲಿ ಬೆಳೆದಿದೆ. 12ನೇ ಶತಮಾನದಲ್ಲಿ ಆಧ್ಯಾತ್ಮಿಕ ತಿರುವು, ಆಧ್ಯಾತ್ಮಕ ಮಗ್ಗುಲು ಬದಲಿಸಿದವರು ವಿಶ್ವಗುರು ಬಸವಣ್ಣನವರು. ಅವರ ಬದುಕೇ ಒಂದು ಪ್ರಯೋಗ ಶಾಲೆಯಾಗಿತ್ತು ಎಂದು ಹೇಳಿದರು.

ಕಾನೂನಿನ ನೆರಳಿನಿಂದ ಮಾಡಲು ಅಸಾಧ್ಯವಾಗಿರುವುದನ್ನು ಹೃದಯ ವೈಶಾಲ್ಯತೆಯಿಂದ ಸಾಧ್ಯ ಎಂಬುದನ್ನು ಇಡೀ ಜಗತ್ತಿಗೆ ವಚನಗಳ ಮೂಲಕ ತೋರಿಸಿದವರು ಬಸವಣ್ಣ ಎಂದರು.

ಕರ್ನಾಟಕ ರಾಜ್ಯದ ಸಾಕ್ಷರತೆ ಗಮನಿಸಿದರೆ ಬೇರೆ ರಾಜ್ಯಗಳಿಗಿಂತ ಸಾಕ್ಷರತೆ ಪ್ರಮಾಣ ಇಲ್ಲಿ ಹೆಚ್ಚಾಗಿದೆ. ರಾಜ್ಯದ ಮಠಮಾನ್ಯಗಳ ಕೊಡುಗೆ ಸಾಕ್ಷರತೆ ಬೆಳವಣಿಗೆಗೆ ಪೂರಕವಾಗಿದ್ದು, ಮಠಮಾನ್ಯಗಳು ಲೌಕಿಕ ಬದುಕಿನ ಜೊತೆಗೆ ಅಧ್ಯಾತ್ಮಿಕತೆ ಪಸರಿಸುವ ಜವಾಬ್ದಾರಿ ಹೊಂದಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಗುರುವಿನ ನಡಿಗೆ ಭಕ್ತರ ಕಡೆಗೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಡಾ. ಬಸವ ಮರುಳಸಿದ್ದ ಸ್ವಾಮಿ ಭಕ್ತರನ್ನು ಸಂಪರ್ಕಿಸಿ ಧರ್ಮ ಜಾಗೃತಿ ಮೂಡಿಸಿ ಭಾವನಾತ್ಮಕ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಿದ್ದಸಂಸ್ಥಾನ ಮಠದ ನಿರಂಜನ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮಿ, ಶಿವಮೊಗ್ಗದ ಮುರುಘ ರಾಜೇಂದ್ರ ಸಂಸ್ಥಾನ ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿ, ಗದಗ ಸಿದ್ದರಾಮ ಸ್ವಾಮೀಜಿ, ಪುಷ್ಪಗಿರಿಯ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿ, ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ವಿಶೇಷ ಉಪನ್ಯಾಸ ನೀಡಿದರು. ವಿಧಾನಪರಿಷತ್ ಸದಸ್ಯರಾದ ಎಸ್‌. ಎಲ್. ಭೋಜೇಗೌಡ, ಡಾ.ಧನಂಜಯ ಸರ್ಜಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ, ಕೆ.ಸಿ. ವಿರೂಪಾಕ್ಷ, ಗಾಯತ್ರಿ ಶಾಂತೇಗೌಡ, ಬಿ.ಎಚ್. ಹರೀಶ್, ಎಂ.ಸಿ. ಶಿವಾನಂದಸ್ವಾಮಿ, ಮಹಡಿಮನೆ ಸತೀಶ್, ಚಿದಾನಂದ್, ಡಾ.ಎಸ್. ವಿನಾಯಕ್, ಎಚ್. ಎಸ್. ರಾಜಶೇಖರ್, ಬಿ.ಆರ್.ಲೋಕೇಶ್, ಎ.ಆರ್.ರವಿ, ಪೌರಾಯುಕ್ತ ಬಸವರಾಜ್ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *