ಹಂಪಿ
ವಿಜಯನಗರದ ಗತವೈಭವ ಸಾರುವ 3 ದಿನಗಳ ಹಂಪಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ನಟಿ ಪೂಜಾ ಗಾಂಧಿ ಎಲ್ಲರ ಗಮನ ಸೆಳೆದರು.
ಸ್ವಾಗತ ಭಾಷಣ ಮಾಡುತ್ತ ಅವರು ಇಂದು ಹಂಪಿ ಉತ್ಸವ ಎಷ್ಟು ದೊಡ್ಡದಾಗಿ ಬೆಳೆದಿದೆ ಎಂದು ತೋರಿಸಲು ಬಸವಣ್ಣನವರ ವಚನ ಬಳಸಿಕೊಂಡರು.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ…
ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ
ಈ ಪ್ರಸಿದ್ಧ ವಚನದ ಕೊನೆಯ ಎರಡು ಸಾಲು ಹೇಳದಿದ್ದರೂ ನೋಡಿಕೊಳ್ಳದೆ ನೆನಪಿನಿಂದಲೇ ಹೇಳಿದ ಅವರ ಹುರುಪಿಗೆ ಚಪ್ಪಾಳೆ ಬಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ಭಾಷಣದಲ್ಲಿ ಪೂಜಾ ಗಾಂಧಿಯವರನ್ನು ವಿಶೇಷ ಹೊಗಳಿಕೆಗೆ ಪಾತ್ರರಾಗಿಸಿದರು.
ಉತ್ಸವದಲ್ಲಿ ಸಚಿವ ಶಿವರಾಜ್ ತಂಗಡಗಿ, ಚಿತ್ರನಟಿ ಪ್ರೇಮಾ, ಶಾಸಕ ಎಚ್.ಆರ್.ಗವಿಯಪ್ಪ, ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಸಂಸದ ರಾಜಶೇಖರ್ ಹಿಟ್ನಾಳ, ಮತ್ತಿತರರಿದ್ದರು.
ಹಂಪಿ ಉತ್ಸವದಲ್ಲಿ ಪೂಜಾ ಗಾಂಧಿ ಹಾಡಿದ ‘ಕನ್ನಡ ಕಲಿಯೋ ಮೂದೇವಿ’ ಕೂಡ ವೈರಲ್ ಆಗಿದೆ.
ಪೂಜಾ ಗಾಂಧಿ ತಾವು ಲಿಂಗ ಸಮಾನತೆ ಮತ್ತು ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಬಸವಣ್ಣನವರ ಅನುಯಾಯಿ ಎಂದು ಹೇಳುತ್ತಾರೆ.
ಜನವರಿ ತಿಂಗಳಲ್ಲಿ ಸಾಣೇಹಳ್ಳಿಯ ಸರ್ವೋದಯ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ಅಕ್ಟೋಬರ್ ನಲ್ಲಿ ಜೊತೆ ಲಂಡನ್ನಿನ ಬಸವೇಶ್ವರ ಪುತ್ಥಳಿಗೆ ತಮ್ಮ ಪತಿಯ ಜೊತೆ ಗೌರವ ಸಲ್ಲಿಸಿದ್ದರು.