ಸಿದ್ದರಾಮಯ್ಯ ಲಿಂಗಾಯತ ಬೇಡಿಕೆಗಳನ್ನು ಕಡೆಗಣಿಸಿದ್ದೇಕೆ? (ಟಿ ಆರ್ ಚಂದ್ರಶೇಖರ್)

2025 ಬಜೆಟಿಗೆ ಶರಣ ಸಮಾಜದ ಪ್ರತಿಕ್ರಿಯೆ

ಬೆಂಗಳೂರು

ಬಜೆಟ್ ಕುರಿತಂತೆ ಬಸವ ಮಿಡಿಯಾ ಪ್ರಶ್ನೆಗಳಿಗೆ ಶರಣ ಸಾಹಿತಿ ಟಿ ಆರ್ ಚಂದ್ರಶೇಖರ್
ಅವರ ಅಭಿಪ್ರಾಯ

(೧) ಶರಣ ಸಮಾಜದ ಬೇಡಿಕೆಗಳ ಬಗ್ಗೆ ಬಜೆಟ್ ಸ್ಪಂದಿಸಿದೆಯೇ?

ಬಜೆಟ್ ಮಂಡನೆಗೆ ಕೆಲವು ವಾರಗಳ ಹಿಂದೆ (ಫೆಬ್ರವರಿ ೨೪, ೨೦೨೫) ಲಿಂಗಾಯತ ಮಠಾಧೀಶರು ಹಾಗೂ ರಾಜಕೀಯ ಪ್ರಮುಖರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಸವಣ್ಣ ಮತ್ತು ಲಿಂಗಾಯತಕ್ಕೆ ಸಂಬಂಧಿಸಿದಂತೆ ಕೆಲವು ಬೇಡಿಕೆಗಳನ್ನು ಮಂಡಿಸಿದ್ದರು. ಇವುಗಳಲ್ಲಿ ಎರಡು ಬೇಡಿಕೆಗಳಿಗೆ ಆಶ್ವಾಸನೆ ಬಿಟ್ಟರೆ ಉಳಿದವಕ್ಕೆ ಸರ್ಕಾರ ಸ್ಪಂದಿಸಿಲ್ಲ.

ಇಲ್ಲಿ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಮೊದಲ ಅವಧಿಯಲ್ಲಿ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮನ್ನಣೆ ನೀಡುವ ಸಾಹಸದ ಕ್ರಮ ತೆಗೆದುಕೊಂಡಿದ್ದರು. ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರಿಟ್ಟಿರು. ಈಗ ಎರಡನೆಯ ಅವಧಿಯಲ್ಲಿ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಾರೆ. ಕುಂಕುಮಧಾರಿಗಳ ಕೋಟೆ ಶಿವಮೊಗ್ಗದಲ್ಲಿ ಒಂದು ಉದ್ಯಾನಕ್ಕೆ ಅಲ್ಲಮಪ್ರಭುಗಳ ಹೆಸರಿಟ್ಟಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಾವ ಲಿಂಗಾಯತರೂ ಬಸವಣ್ಣನವರಿಗೆ ನ್ಯಾಯ ದೊರಕಿಸರಲಿಲ್ಲ. ಹಿಂದಿನ ಕುಂಕುಮಧಾರಿ ಲಿಂಗಾಯತ ಮುಖ್ಯಮಂತ್ರಿ ಕನ್ನಡವನ್ನು ಕಡೆಗಣಿಸಿ ಸಂಸ್ಕೃತ ವಿಶ್ವವಿದ್ಯಾಯವನ್ನು ಆರಂಭಿಸಿದ್ದರು. ಬಜೆಟ್ ಮಂಡನೆಯ ಸಂದರ್ಭದಲ್ಲಿ ಈ ಕುಂಕುಮಧಾರಿಯು ಬಜೆಟ್ ಫೈಲಿಗೆ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂಜೆ ಸಲ್ಲಿಸಿ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ್ದರು. ಅದೊಂದು ಮಹಾಮೌಢ್ಯದ ಆಚರಣೆಯಾಗಿತ್ತು.

ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ದಿನ ಬಸವಣ್ಣನವರ ಪ್ರತಿಮೆಗೆ ನಮಿಸಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೂ ಸಮುದಾಯದ ಬೇಡಿಕೆಗಳನ್ನು ಸಿದ್ಧರಾಮಯ್ಯ ಕಡೆಗಣಿಸಲು ಕಾರಣವೇನು?

(೨) ಸ್ಪಂದಿಸದಿರಲು ಕಾರಣವೇನು?

(ಅ) ಸಿದ್ಧರಾಮಯ್ಯನವರು ಬಸವಣ್ಣನವರ ಬಗ್ಗೆ ಮತ್ತು ಲಿಂಗಾಯತದ ಬಗ್ಗೆ ಯಾವ ಧೋರಣೆಯನ್ನು ತಳೆದಿದ್ದಾರೋ ಆ ಧೋರಣೆ ಅನೇಕ ಲಿಂಗಾಯತ ಮಠಾಧೀಶರಲ್ಲಿ ಕಾಣುತಿಲ್ಲ. ಇನ್ನೂ ಕೆಲವರು ‘ಲಿಂಗಾಯತ – ವಿರಶೈವ’ ಎಂಬ ಅಡ್ಡಗೋಡೆಯ ಮೇಲೆ ಕುಳಿತಿದ್ದಾರೆ. ಲಿಂಗಾಯತರಲ್ಲಿ ಬಹಳಷ್ಟು ಜನರು ಆರ್ ಎಸ್ ಎಸ್ ಹಿಂಬಾಲಕರು ಎಂಬುದು ಸಿದ್ಧರಾಮಯ್ಯನವರಿಗೆ ಗೊತ್ತಿದೆ.

(ಆ) ರಾಜ್ಯದ ಎರಡು ದೊಡ್ಡ ಲಿಂಗಾಯತ ಮಠಗಳು ಆರ್ ಎಸ್ ಎಸ್ ಕೃಪಾ ಪೋಷಿತವಾಗಿದೆ. ಇದರಲ್ಲಿ ಒಂದು ಮಠದ ಸ್ವಾಮಿ ವಿಪ್ರರ “ವಚನ ದರ್ಶನ”ಕ್ಕೆ ಶುಭಾಶಯ ಬರೆದಿದ್ದಾರೆ. ಅವು ಲಿಂಗಾಯತದ ಜೊತೆಯೂ ಇಲ್ಲ, ಸಿದ್ದರಾಮಯ್ಯನವರ ಜೊತೆಯಲ್ಲಿಯೂ ಇಲ್ಲ. ಇವು ಲಿಂಗಾಯತರ ಶಕ್ತಿ ಕುಂದಿಸಿವೆ.

(ಇ) ಸಿದ್ಧರಾಮಯ್ಯಮನವರ ಕ್ಯಾಬಿನೆಟ್ಟಿನಲ್ಲಿರುವ ಲಿಂಗಾಯತ ಮಂತ್ರಿಗಳು ಪೂರ್ಣ ಒತ್ತಡ ಹಾಕುವ ಸ್ಥಿತಿಯಲ್ಲಿಲ್ಲ. ಅಲ್ಲಿ ಒಳಗುಂಪುಗಳಿವೆ.

(ಈ) ಜನತಂತ್ರದಲ್ಲಿ ಸರ್ಕಾರ ಸಂಖ್ಯೆಯ ಮೇಲೆ ನಡೆಯುತ್ತದೆ. ಸದ್ಯ ಸಿದ್ಧರಾಮಯ್ಯನವರು ತಮ್ಮದೇ ಪಕ್ಷ ವಿವಿಧ ಲಾಬಿಗಳ ನಡುವೆ ಸಮನ್ವಯವನ್ನು ಸಾಧಿಸಿಕೊಳ್ಳಬೇಕಾಗಿದೆ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ತಮ್ಮದೇ ರಾಜಕೀಯ ನಡೆಸುತ್ತಿದ್ದಾರೆ. ಸಿದ್ಧರಾಮಯ್ಯನವರು ತಮ್ಮ ಬೆಂಬಲಿಗರ ನೆಲೆ ಗಟ್ಟಿಗೊಳಿಸಬೇಕಾಗಿದೆ.

(೩) ಇದಕ್ಕೆ ಬಸವ ಅನುಯಾಯಿಗಳ ಪ್ರತಿಕ್ರಿಯೆ ಹೇಗಿರಬೇಕು?

ಸಿದ್ಧರಾಮಯ್ಯನವರು ಸ್ಪಂದಿಸದಿರುವುದಕ್ಕೆ ಕಾರಣಗಳನ್ನು ಕುರಿತಂತೆ ಸೂಕ್ಶ್ಮವಾಗಿ ಅಲೋಚಿಸಿ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಬೇಕು. ಈ ಬಗ್ಗೆ ಎಚ್ಚರದಿಂದ ನಮ್ಮ ಮುಂದಿನ ನಡೆಯನ್ನು ರೂಪಿಸಬೇಕು. ಸಿದ್ಧರಾಮಯ್ಯ ಬಸವ ಪರವಿದ್ದಾರೆ ಎಂಬುದನ್ನು ಮರೆಯಬಾರದು.

ಒಂದು ಎಚ್ಚರ: ಲಿಂಗಯತರ ಹೆಸರು ಹೇಳಿಕೊಂಡು ಬಜೆಟ್ಟಿನಲ್ಲಿ ನಮ್ಮ ಬೇಡಿಕೆಗಳನ್ನು ಮನ್ನಿಸಿಲ್ಲವೆಂದು ಸಿದ್ಧರಾಮಯ್ಯನವರ ವಿರುದ್ಧ ಒಳಗೊಳಗೆ “ರಾಜಕೀಯ” ಮಾಡುವ ಜನರಿದ್ದಾರೆ. ಉದಾ: ಲಿಂಗಾಯತರ ಒಂದು ದೊಡ್ಡ ಮಠ ನಡೆಸುತ್ತಿರುವ ಸಂಸ್ಥೆಯೊಂದರ ಅಧ್ಯಕ್ಷರು ಈಗಾಗಲೆ ಅಪಸ್ವರ ಎತ್ತುತ್ತಿದ್ದಾರೆ. ಈ ಬಗ್ಗೆ ನಾವು ಎಚ್ಚರ ವಹಿಸಬೇಕು. ನಮ್ಮ ಅಸಮಧಾನವನ್ನು ಆರ್ ಎಸ್ ಎಸ್ ತನ್ನ ಉದ್ದೇಶಕ್ಕೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು.

Share This Article
7 Comments
  • ಶರಣರೇ ನಾವು ನಮ್ಮ ಧರ್ಮ ವನ್ನು ಗಟ್ಟಿಯಾಗಿ ಸಂಘಟನೆ ಮಾಡಬೇಕಾದರೆ ಮೊದಲನೇಯದು ವೀರಶೈವ. ಪದ ಬಳಸಬಾರದು ಎರಡನೇ ಯದು ಹಿಂದೂ ಧರ್ಮದ ಬಗ್ಗೆ ಟೀಕೆ ಮಾಡಬಾರದು ನಮ್ಮ ಸಂಘಟನೆ ಕೇವಲ ನಮ್ಮ ಧರ್ಮದ. ಭೋದನೆಗಳನ್ನು ಹೇಳುತ್ತಾ ಹೋಗಬೇಕು , ನಾವು.ಹೇಗೆ ಸರಳವಾಗಿ ಬದುಕಬೇಕು ಎಂಬುದನ್ನು ಹೇಳುತ್ತಾ ಸಾಗುತ್ತಾ ಹೋಗಬೇಕು ಆಗ ನಿಧಾನವಾಗಿ ನಮ್ಮ ಕಡೆ ಜನ ಸಂಘಟನೆ ಯಾಗುತ್ತಾರೆ . ಆಗ ಯಾವ ಸಕಾ೯ರವೂ ನಮ್ಮನ್ನು ಕಡೆಗಣಿಸಲು ಸಾಧ್ಯವಿಲ್ಲ ಮೊದಲು ಸಂಘಟನೆ ಗಟ್ಟಿಯಾಗುತ್ತಾ ಹೋಗಬೇಕು. ಅದು.ನಿರಂತರವಾಗಿ ನಡೆಯುತ್ತಿರಬೇಕು.

    • ಸಾಂಸ್ಕೃತಿಕ ನಾಯಕ ಘೋಷಣೆಯಾದ ಮೇಲೆ ನಾವು ಅದನ್ನ ಯಾವರೀತಿ ಸ್ವೀಕರಿಸಿದ್ದೇವೆ, ಸಿದ್ದರಾಮಯ್ಯ ಅವರನ್ನು ಯಾವ ರೀತಿ ಗೌರವಿಸಿದ್ದೇವೆ, ಸರ್ಕಾರದ ಯಾವ ಕಾರ್ಯಕ್ರಮದಲ್ಲಿಯೂ,ನಮ್ಮ ಸಮಾಜದ ಖಾಸಗಿ ಕಾರ್ಯಕ್ರಮಗಳಲ್ಲಿಯೂ ನಾಡಿನ ಸಾಂಸ್ಕೃತಿಕ ನಾಯಕನ ಪ್ರಸ್ಥಾಪವೇ ಇರುವುದಿಲ್ಲ, ಇವೆಲ್ಲವೂ ಅವರಿಗೆ ಬೇಸರ ತರಿಸಿರಬಹುದು

  • ಸರ್,
    ಮುಖ್ಮಮಂತ್ರಿಗಳನ್ನು ಭೇಟಿಯಾಗಲು ಹೋಗಿದ್ದ ಮಠಾಧೀಶರಲ್ಲಿ ಬಹಳಷ್ಟು ಸ್ವಾಮಿಗಳು ತೋರಿಕೆಗಷ್ಟೆ ಲಿಂಗಾಯತ ಎನ್ನುತ್ತಾರೆ ಒಳಗೆ ವೀರಶೈವ ಪ್ರೇಮ ಉಕ್ಕುತ್ತಿರುತ್ತದೆ. ಬಸವಣ್ಣನವರಿಗಿಂತಲೂ ಅವರಿಗೆ ಹಾನಗಲ್ ಕುಮಾರಸ್ವಾಮಿಗಳೆ ಧರ್ಮಗುರು. ಈ ಸ್ವಾಮಿಗಳು ಕುಂಭ ಮೇಳಕ್ಕೂ ಹೋಗಿ ಬಂದಿದ್ದಾರೆ. ಇವರೆಂಥಾ ಬಸವ ನಿಷ್ಠರು ?
    ಈ ವಿಷಯ ಮುಖ್ಯಮಂತ್ರಿಗಳಿಗೆ ಗೊತ್ತಿದೆ, ಇದು ಸ್ಪಂದಿಸದಿರಲು ಕಾರಣ ಆಗಿದೆ.

  • ಈ ಲೇಖನವು ಕರ್ನಾಟಕ ರಾಜ್ಯ ಬಜೆಟ್‌ ಶರಣ ಸಮುದಾಯದ ಬೇಡಿಕೆಗಳಿಗೆ ನೀಡಿದ ಪ್ರತಿಕ್ರಿಯೆಯ ಕುರಿತಂತೆ ಆಳವಾದ ವಿಮರ್ಶೆ ಮಾಡುತ್ತದೆ. ಟಿ.ಆರ್. ಚಂದ್ರಶೇಖರ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಸವ ಪರ ಧೋರಣೆಯನ್ನು ಒತ್ತಿ ಹೇಳುವ ಜೊತೆಗೆ, ಸಮುದಾಯದ ಇತ್ತೀಚಿನ ಬೇಡಿಕೆಗಳ ಸ್ಪಂದನೆ ತೀರಾ ಅಪೂರ್ಣವಾಗಿದೆ ಎಂಬುದನ್ನು ವಾಸ್ತವದ ದೃಷ್ಟಿಯಿಂದ ವಿಶ್ಲೇಷಿಸಿದ್ದಾರೆ. ಹಿಂದಿನ ಲಿಂಗಾಯತ ಮುಖ್ಯಮಂತ್ರಿಗಳು ಬಸವಣ್ಣನವರಿಗೆ ನ್ಯಾಯ ಮಾಡದ ಬಗೆ, ಲಿಂಗಾಯತ ಮಠಾಧೀಶರಲ್ಲಿನ ರಾಜಕೀಯ ಭಿನ್ನಾಭಿಪ್ರಾಯಗಳು, ಮತ್ತು ಆರ್.ಎಸ್.ಎಸ್. ನ ಲಿಂಗಾಯತ ಮಠಗಳ ಮೇಲೆ ಇರುವ ಹಿಡಿತವನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಲಿಂಗಾಯತ ಸಚಿವರ ಅಸಹಾಯಕತೆ ಮತ್ತು ಸಿದ್ಧರಾಮಯ್ಯ ರಾಜಕೀಯವಾಗಿ ಲಾಭದಾಯಕ ಸಮತೋಲನ ಸಾಧಿಸಬೇಕಾದ ಅನಿವಾರ್ಯತೆಯನ್ನೂ ಚೆನ್ನಾಗಿ ವಿವರಿಸಿದ್ದಾರೆ. ಲಿಂಗಾಯತ ಸಮುದಾಯ ತಮ್ಮ ಬೇಡಿಕೆಗಳನ್ನು ಸರಿಯಾಗಿ ಮಂಡಿಸಲು ಮತ್ತು ಬಾಹ್ಯ ರಾಜಕೀಯ ಶಕ್ತಿಗಳಿಗೆ ಶರಣ ಪರಂಪರೆಯನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡಬಾರದು ಎಂಬ ಎಚ್ಚರಿಕೆಯನ್ನು ಲೇಖನ ಸೂಕ್ಷ್ಮವಾಗಿ ಒತ್ತಿಹೇಳುತ್ತದೆ.

  • ಲಿಂಗಾಯತರಲ್ಲಿನ ಗುಂಪುಗಾರಿಕೆ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿರುವ ಪ್ರಭಾವಿ ಮಠಗಳ ಸ್ವಾಮಿಗಳು… ಇವರ ನಡೆಯನ್ನು ಪ್ರಶ್ನಿಸುವಲ್ಲಿ ಕಸುವೇ ಇಲ್ಲದಂತಿರುವ ಲಿಂಗಾಯತ ಸಮಾಜ ತೋರಿಸುತ್ತಿರುವ ನಿರ್ಲಕ್ಷ್ಯ… ಇತ್ಯಾದಿ ಮಾನ್ಯ ಸಿದ್ಧರಾಮಯ್ಯ ಸರ್ಕಾರಕ್ಕೆ ಲಿಂಗಾಯತ ಸಮಾಜದ ಮೇಲೆ ಭ್ರಮನಿರಸನ ಮೂಡಿಸಲಿರಲಿಕ್ಕೂ ಸಾಕು! ಬಸವಣ್ಣನಿಗೆ ಏನು ಮಾಡಿದರೂ ನಿರೀಕ್ಷಿಸದಷ್ಟು ಬೆಂಬಲ ಲಿಂಗಾಯಿತರಿಂದಲೇ ಇಲ್ಲವೆಂದ ಮೇಲೆ ಮುಮ ತಾನೆ ಏನು ಮಾಡಿಯಾರು?!

    ಸಾಲದ್ದಕ್ಕೆ ಇದೇ ಮಾರ್ಚಿ 13 ರಂದು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದಲೇ ರಾಜ್ಯಾದ್ಯಂತ ಪುರಾಣ ಕಲ್ಪಿತ ರೇಣುಕಾಚಾರ್ಯ ಜಯಂತಿ ಆಚರಣೆಗೆ
    ಸರ್ಕಾರ ಮುಂದಾಗಿರುವುದು…. ಬಸವಣ್ಣನ ಹೆಸರಿನಲ್ಲಿ ಲಿಂಗಾಯತರಿಗೆ ಏನು ಮಾಡಿದರೂ ಪ್ರಯೋಜನವಿಲ್ಲ ….. ಬದಲಿಗೆ ದೂರ ನಿಂತ ವೀರಶೈವರನ್ನಾದರೂ ಹತ್ತಿರ ಬರುವಂತೆ ಮಾಡೋಣ ಎಂಬ ನಡೆ ನಿಚ್ಚಳವಾಗಲಾರಂಭಿಸಿದೆ. ಇದೆಲ್ಲವನ್ನೂ ಗಮನಿಸಿದಾಗ ನಮ್ಮ ಲಿಂಗಾಯತ ಸಮಾಜದ ಬಗ್ಗೆ ಒಬ್ಬ ಲಿಂಗಾಯತನಾಗಿ ನನಗೇ ಹೇಸಿಗೆ ಹುಟ್ಟಿಸುತ್ತಿದೆ. ಕಟ್ಟಿಕೊಂಡ ಇಷ್ಟಲಿಂಗವೇ ನನ್ನನ್ನು ಸುಡಲಾರಂಭಿಸಿದೆಯೇನೋ ಎಂಬ ಸಂಶಯ !

  • ಸಿದ್ಧರಾಮಯ್ಯ ನವರ ಸರಕಾರದಲ್ಲಿಯೋ ಸಹ ಡಿಕೆಶಿ ಯಂತಹ ಧರ್ಮ ಜ್ಞಾನ ಇಲ್ಲದವರು, ಸಿದ್ಧರಾಮಯ್ಯ ನವರನ್ನು
    ಬಲಿಷ್ಠ ವಾಗಲು ಬಿಡಲಾರರು. ಹಾಗಾಗಿ ಅವರು ಜಾಣ ನಡೆ ಇಡುತ್ತಿರುವದು ಕಂಡು ಬರುತ್ತಿದೆ.

  • ಡಾ ಟಿ ಆರ್ ಚಂದ್ರಶೇಖರ್ ಸರ್ ತುಂಬಾ ಸ್ಪಷ್ಟವಾಗಿ ವಿವರಣೆಯನ್ನು ನೀಡಿದ್ದಾರೆ ಅವರಿಗೆ ಧನ್ಯವಾದಗಳು

Leave a Reply

Your email address will not be published. Required fields are marked *

ಲೇಖಕರು ಅರ್ಥಶಾಸ್ತ್ರಜ್ಞರು ಮತ್ತು ಬಸವ ತತ್ವ ಚಿಂತಕರು