ಕಾಯಕ ಜೀವಿಗಳಿಗೆ ಮಹತ್ವ ನೀಡಿದ ಬಸವಾದಿ ಶರಣರು: ನಿಜಗುಣಾನಂದ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ನ್ಯಾಮತಿ

ಬಸವಾದಿ ಶರಣರು ಕಾಯಕ ಜೀವಿಗಳಿಗೆ ಬಹುದೊಡ್ಡ ಸ್ಥಾನಮಾನ ಕೊಟ್ಟವರು. ಕಾಯಕ ಜೀವಿಗಳಿಂದಲೇ ದೇಶ ಮುನ್ನಡೆಯುವುದು ಎಂಬುದನ್ನು ಬಸವಾದಿ ಶರಣರು ಅಂದೇ ಅರಿತುಕೊಂಡಿದ್ದರು. ಕೃಷಿಕರು, ಒಕ್ಕಲಿಗರು, ಕುಂಬಾರರು, ಹಡಪದರು, ಮಾದಿಗರು, ಚಮ್ಮಾರರು, ಹೂಗಾರರು, ಅಂಬಿಗರು ಮತ್ತಿತರೆ ಕಾಯಕ ವರ್ಗದವರನ್ನು ಅನುಭವ ಮಂಟಪದಲ್ಲಿ ಬರಮಾಡಿಕೊಂಡು, ಗೌರವಿಸಿ, ಶರಣರನ್ನಾಗಿಸಿ, ಅವರು ಅತ್ಯಂತ ಉನ್ನತ ಸ್ಥಾನಮಾನಕ್ಕೆ ಏರುವಂತೆ ಅಲ್ಲಿ ಮಾಡಲಾಗಿತ್ತೆಂದು ಬೈಲೂರು-ಮುಂಡರಗಿಯ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು ಹೇಳಿದರು.

ಅವರು ನ್ಯಾಮತಿ ತಾಲೂಕು ಕೇಂದ್ರದ, ಮಹಾಂತೇಶ ವೀರಶೈವ ಕಲ್ಯಾಣ ಮಂದಿರ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ, “ಶರಣರ ಅನುಭಾವ ದರ್ಶನ” ಕಾರ್ಯಕ್ರಮದಲ್ಲಿ ಅನುಭಾವ ನೀಡುತ್ತಿದ್ದರು.

ಅನುಭವ ಮಂಟಪದಲ್ಲಿ ಕಾಯಕ ಜೀವಿ ಮಹಿಳೆಯರು ಇದ್ದರು, ಕಾಯಕದಲ್ಲಿ ನಿರತರಾಗಿದ್ದ ಪ್ರತಿಯೊಬ್ಬರು ಇದ್ದರು. ಅವರೆಲ್ಲರ ಏಳಿಗೆಗಾಗಿ ಅಲ್ಲಿ ಶ್ರಮಿಸಲಾಗಿತ್ತು. ಶರಣರು ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಲು ಅನುವು ಮಾಡಲಾಗಿತ್ತು. ಸರಳವಾದ, ಆನಂದಮಯವಾದ ಸಂಬಂಧಗಳನ್ನು ಕಟ್ಟಿಕೊಂಡು, ರಾಜ್ಯದ ಹಿತಾಸಕ್ತಿ ಕಾಪಾಡಿ, ಅಂದೇ ದೇಶಕ್ಕೆ ಭದ್ರಬುನಾದಿ ಹಾಕಿಕೊಟ್ಟವರು ಶರಣರು. ಕಾಯಕವೇ ಕೈಲಾಸವೆಂದು ಹೇಳಿ, ಕರ್ಮ ಸಿದ್ಧಾಂತದ ವಿರುದ್ಧ ಕಾಯಕ ಸಿದ್ಧಾಂತ ರೂಢಿಸಿಕೊಂಡು ಜಗತ್ತಿಗೆ ಅದನ್ನು ಸಾರಿದಂತವರು ಬಸವಾದಿ ಶರಣರು.

ಶರಣರು ಮೌಡ್ಯ, ಕಂದಾಚಾರ ಧಿಕ್ಕರಿಸಿದರು. ಸಕಲ ಜೀವಾತ್ಮರ ಲೇಸು ಬಯಸಿದರು. ದಯವೇ ಧರ್ಮದ ಮೂಲವೆಂದು ಸಾರಿದರು. ಶರಣರು ವಚನಗಳ ಮುಖಾಂತರ ಮಾನವ ಹಕ್ಕುಗಳನ್ನು ಎತ್ತಿ ಹೇಳಿದರು. ಆ ಹಕ್ಕುಗಳನ್ನು ಇವತ್ತಿನ ಸಂವಿಧಾನದಲ್ಲಿ ಅಡಕಗೊಳಿಸಿರುವುದು ನಮ್ಮೆಲ್ಲರ ಹೆಮ್ಮೆ ಎಂದು ನಿಜಗುಣಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕ ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆ, ದಲಿತ ಸಂಘಟನೆ ಹಾಗೂ ಬಸವಾಭಿಮಾನಿಗಳ ಸಂಯುಕ್ತ ಆಶಯದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ದಲಿತ ಸಂಘಟನೆ ಮುಖಂಡ ರಂಗನಾಥ, ಅಕ್ಕನ ಬಳಗದ ಅಂಬಿಕಾ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆವರಗೆರೆ ರುದ್ರಮುನಿ, ತಾಲ್ಲೂಕು ಮುಖಂಡರಾದ ಎಂ.ಜಿ. ನಂಜಪ್ಪಗೌಡ್ರು, ಪಿ. ನಾಗರಾಜ, ಎಚ್. ಮಲ್ಲೇಶಪ್ಪ, ಜಿ. ಮೇಘರಾಜ, ಎಸ್. ಕೆ. ವೀರೇಂದ್ರ, ಎ. ನಾಗರಾಜಪ್ಪ, ಎಚ್. ಎಮ್. ವಿನಯ, ಎಚ್. ಶೇಖರಪ್ಪ, ಎಚ್.ಎನ್. ಬಸವರಾಜಪ್ಪ, ಪಿ. ಆರ್. ಪ್ರವೀಣ, ಕೆ. ಚೇತನಕುಮಾರ, ಬಿ.ವಿ. ಸತೀಶ, ಕೆ. ಹಾಲೇಶಪ್ಪ ಎಮ್. ಕರಿಬಸಪ್ಪ, ಟಿ.ಎಮ್. ಪ್ರಕಾಶ, ಎಸ್‌.ಜಿ. ಪ್ರಕಾಶ, ಮಲ್ಲಿಕಾರ್ಜುನ, ಡಿ.ಪಿ. ರಂಗನಾಥ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
Leave a comment

Leave a Reply

Your email address will not be published. Required fields are marked *