ಕಾಯಕ, ದಾಸೋಹದಲ್ಲಿ ದೇವರನ್ನು ಕಾಣಬೇಕು: ಗುರುಮಹಾಂತ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಮಸ್ಕಿ

ದೇವರನ್ನು ಕಾಣೋಕೆ ಕಾಡಿಗೆ ಹೋಗೋದು ಬ್ಯಾಡ. ಹೆಂಡಿರು ಮಕ್ಕಳನ್ನು ಅನಾಥರನ್ನಾಗಿಸಿ ಕಾಡಿಗೆ ಹೋಗಿ ದೇವರನ್ನು ಹುಡುಕಿದರೆ ದೇವರು ಸಿಗೋದಿಲ್ಲ. ಸಂಸಾರದಲ್ಲಿದ್ದುಕ್ಕೊಂಡು, ಕಾಯಕ ದಾಸೋಹ ಮಾಡಿ ದೇವರನ್ನು ಕಾಣಬೇಕೆಂದು ಬಸವಾದಿ ಶರಣರು ಹೇಳಿರುವದು ಎಂದು ಇಳಕಲ್ಲ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ ಹೇಳಿದರು.

ಅವರು ಮಸ್ಕಿ ತಾಲೂಕಿನ ಹೋಗರನಾಳ ಗ್ರಾಮದಲ್ಲಿ 14 ದಿನಗಳ “ಶರಣ ಜೀವನ ದರ್ಶನ ” ಪ್ರವಚನ ಕಾರ್ಯಕ್ರಮವನ್ನು ವಿಶ್ವಗುರು ಬಸವೇಶ್ವರರು ಹಾಗೂ ಪೂಜ್ಯ ಶಾಂತವೀರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಉದ್ಘಾಟಿಸಿ ಅನುಭಾವ ನೀಡಿದರು.

ಗುರುಕೊಟ್ಟ ಕರದ ಇಷ್ಟಲಿಂಗವೇ ದೇವರು ಎಂದು ಅಲ್ಲಮಪ್ರಭು ಹೇಳಿದ್ದಾರೆ. ಇಷ್ಟಲಿಂಗ ಪೂಜೆಯಿಂದ ದೇವರನ್ನು ಕಾಣಬಹುದು. ಇಷ್ಟಲಿಂಗ ಕಾರ್ಬನ್ನಿನಿಂದ ತಯಾರಾಗಿರುತ್ತೆ. ಅದಕ್ಕೆ ಮನಸ್ಸನ್ನು ಕೇಂದ್ರೀಕರಿಸುವ ಶಕ್ತಿ ಇರುತ್ತೆ. ಮನಸ್ಸಿಗೆ ಮಾತ್ರ ದೇವರನ್ನು ಕಾಣುವ ಶಕ್ತಿ ಇದೆ, ಕಣ್ಣಿಗೆ ಇಲ್ಲ. ಇಷ್ಟಲಿಂಗ ಪೂಜೆಯಿಂದ ಮನಸ್ಸು ತಿಳಿ ನೀರಿನ ಸಾಗರದಂತೆ ಆಗುತ್ತದೆ. ಅಲ್ಲಿ ಯಾವುದೇ ದ್ವೇಷ ಅಸೂಯೆಗಳಿಗೆ ಜಾಗವಿರೋದಿಲ್ಲ, ಬದಲಾಗಿ ಅರಿವು ವಿಕಾಸ ಆಗುತ್ತದೆ. ಅದಕ್ಕೆ ನಿತ್ಯ ನಿರಂತರ ಸಾಧನೆ ಬೇಕು.

ಅರಿವು ವಿಕಾಸವಾದಂತೆ ಮಾನವ ದೇವನಾಗುತ್ತಾನೆ. ದೇವರು ಕಾಡಂಗಿಲ್ಲ, ಬೇಡಂಗಿಲ್ಲ. ಅವನು ಬೇಡೋದು ನಮ್ಮ ಮನಸ್ಸನ್ನು ಮಾತ್ರ. ಮನಸ್ಸು ಕೇಂದ್ರೀಕರಿಸಿ ನಮ್ಮ ಶರಣರು ನಡೆದಾಡುವ ದೇವರಾದರು.

ಗುಡ್ಡಾಪುರದ ದಾನಮ್ಮ, ಸಜ್ಜಲಗುಡ್ಡದ ಶರಣಮ್ಮ, ಹೇಮರೆಡ್ಡಿ ಮಲ್ಲಮ್ಮ ಶರಣೆಯರು ಇಷ್ಟಲಿಂಗ ಪೂಜೆಯಿಂದ ದೇವರಾದರು, ಶಾಶ್ವತವಾದರು ಎಂದು ಮಹಾಂತ ಶ್ರೀ ಹೇಳಿದರು.

ಶರಣ ಬಸವರಾಜಪ್ಪ ಕೋಳಿಹಾಳ ಅನುಭಾವ ನೀಡುತ್ತ, ಬಟ್ಟೆ ಮಾಸಿದರೆ ಮಾಡಿವಾಳಗೆ ನೀಡಿ ಸ್ವಚ್ಚಗೊಳಿಸಿಕೊಳ್ಳುತ್ತೇವೆ. ಹಾಗೆಯೇ ಮಂಡೆ ಮಾಸಿದಾಗ ಶರಣರ ಅನುಭಾವದ ನುಡಿಗಳು ನಮ್ಮನ್ನು ಪುನಶ್ಚೇತನಗೊಳಿಸುತ್ತವೆ. ಮರ್ತ್ಯದ ಮನದ ಮೈಲಿಗೆ ಕಳೆಯಬೇಕಾದಲ್ಲಿ ಶರಣರ ನುಡಿ ಸೋಪಾನ ಬಹಳ ಮುಖ್ಯ ಎಂದರು.

ವೇದಿಕೆಯಲ್ಲಿ ಶರಣ ಕರೇಗೌಡ ಕುರುಕುಂದ, ಬಸವರಾಜಪ್ಪ ಕುರುಕುಂದ, ಶರಣಪ್ಪ ಸಾಹುಕಾರ ತುರವಿಹಾಳ, ಪೂಜ್ಯ ಅಮರಯ್ಯಸ್ವಾಮಿ ಹಿರೇಮಠ, ನಾಗಭೂಷಣ ನವಲಿ, ಅಮರೇಶಣ್ಣ ಪಿ, ಸುತ್ತಲಿನ ಹಾಗೂ ಹೋಗರನಾಳ ಗ್ರಾಮದ ನೂರಾರು ಸದ್ಭಕ್ತರು ಉಪಸ್ಥಿತರಿದ್ದರು.

ಸಂಗೀತ ಸೇವೆಯನ್ನು ಶರಣ ಬಸವರಾಜ ವರದಪುರ, ಶರಣೇಗೌಡ ಮಾ.ಪಾ, ಶಿವರಾಜ ಕವಿತಾಳ ನೆರವೇರಿಸಿದರು.

ಶರಣರಾದ ಮಲ್ಲಿಕಾರ್ಜುನ ವಗರನಾಳ ಸ್ವಾಗತಿಸಿದರು. ರುದ್ರಪ್ಪ ಮಟ್ಟೂರು ಪ್ರಾಸ್ತಾವಿಕವಾಗಿ ಮಾತಾಡಿದರು. ಚಂದ್ರಗೌಡ ಹರಟನೂರು ನಿರೂಪಿಸಿದರು. ಬಸವಲಿಂಗಪ್ಪ ಬಾದರ್ಲಿ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾ ಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
Leave a comment

Leave a Reply

Your email address will not be published. Required fields are marked *