ಚಿತ್ರದುರ್ಗದಲ್ಲಿ ಬಸವ ಸಂಘಟನೆಗಳ ಸಹಯೋಗದಲ್ಲಿ ಮೂರು ದಿನಗಳ ಬಸವ ಜಯಂತಿ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಇದೇ ಏಪ್ರಿಲ್‍ 28, 29 ಹಾಗೂ 30 ರಂದು ಮೂರು ದಿನಗಳ ಕಾಲ ಬಸವ ಜಯಂತಿ ಆಚರಿಸುವ ಸಲುವಾಗಿ ಪೂರ್ವಭಾವಿಯಾಗಿ ಸಭೆ ಇಲ್ಲಿನ ಅನುಭವ ಮಂಟಪದಲ್ಲಿ ನಡೆಯಿತು.

ಸಮಾರಂಭದ ಸಾನಿಧ್ಯ ವಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರಸ್ವಾಮಿಗಳವರು ಮಾತನಾಡಿ, ಬಸವಣ್ಣನವರನ್ನು ಎರಡು ರೀತಿಯಲ್ಲಿ ಅನುಸಂಧಾನ ಮಾಡುವುದಿದೆ. ಒಂದು ಶೈವ ಮತ್ತೊಂದು ಶಕ್ತಿಯಾಗಿ. ಮೂರ್ತಿ ರೂಪದಲ್ಲಿ ಅವರನ್ನ ನಾಲ್ಕು ಕಾಲಿನ ಎತ್ತಿನ ರೂಪದಲ್ಲಿ ನೋಡುವುದು ಶೈವ ಪದ್ಧತಿಯಾದರೆ, ಅವರನ್ನ ಶಕ್ತಿಯಾಗಿ ನೋಡುವುದರಲ್ಲಿ ಬಸವಣ್ಣ ಎತ್ತಲ್ಲ, ಬದಲಿಗೆ, ಕೆಳಗೆ ಬಿದ್ದವರನ್ನು ತನ್ನ ಸಾಧನೆ, ಕರ್ತೃತ್ವ ಶಕ್ತಿಯಿಂದ ಅನೇಕ ಆಯಾಮಗಳಿಂದ ಬಸವಣ್ಣ ಈ ನಾಡಿಗೆ ಬಹುದೊಡ್ಡ ಕೊಡುಗೆ ನೀಡುವ ಮೂಲಕ ಸಮಾಜದ ಶಕ್ತಿಯಾಗಿದ್ದಾರೆ. ಅಂತಹ ಪ್ರಬಲ ಶಕ್ತಿ ಸದಾಕಾಲ ನಮ್ಮೊಂದಿಗಿದ್ದರೆ ನಾವು ಜೀವನದಲ್ಲಿ ಸೋಲುವುದಿಲ್ಲ. ಹಾಗೆ ನೋಡಿದರೆ ಅವರು ಕೇವಲ ಕರ್ನಾಟಕಕ್ಕೆ ಸಾಂಸ್ಕೃತಿಕ ನಾಯಕರಲ್ಲ. ಅವರು ಇಡೀ ವಿಶ್ವದ ನಾಯಕ.

ಕಳೆದ 900 ವರ್ಷಗಳ ಹಿಂದೆ ಜಗತ್ತೇ ಮೆಚ್ಚಿ ಆದರಿಸುವಂತಹ ಸಂಸತ್ತನ್ನು ನೀಡಿ ಹೋಗಿರುವುದು ಸಾಮಾನ್ಯ ಮಾತಲ್ಲ. ಅವರು ಸಂಕಷ್ಟಗಳನ್ನೆದುರಿಸಿ, ಅನುಭವಿಸಿ ಒಂದು ತತ್ವ ಸಿದ್ಧಾಂತವನ್ನು ಈ ನಾಡಿಗೆ ಕೊಟ್ಟು ಹೋಗಿದ್ದಾರೆ. ಬೃಹನ್ಮಠದ ಆಡಳಿತ ಮಂಡಳಿಯ ಅಧ್ಯಕ್ಷರ ಆಶಯದಂತೆ ಈ ಬಾರಿಯೂ ಮೂರು ದಿನಗಳ ಕಾಲ ಬಸವ ಜಯಂತಿಯನ್ನ ಅರ್ಥಪೂರ್ಣವಾಗಿ ಆದರ್ಶವಾಗಿ ಆಚರಿಸುವ ಮೂಲಕ ಅವರನ್ನು ನೆನಪಿಸಿಕೊಳ್ಳುವ ಕಾರ್ಯವಾಗಬೇಕಾಗಿದೆ. ಆ ಮೂಲಕ ಅನೇಕ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ ಪ್ರಬಂಧ, ವಚನ ಗಾಯನ, ಕಂಠಪಾಠ, ವೇಷಭೂಷಣ ಸ್ಪರ್ಧೆ, ಒಟ್ಟಿನಲ್ಲಿ ತತ್ವಾಧಾರಿತವಾಗಿ ಏನು ಬೇಕೋ ಅದನ್ನೆಲ್ಲವನ್ನು ನಾವು ನೀವೆಲ್ಲರೂ ಸೇರಿ ಮಾಡೋಣ.

ಸೇರಿದವರು ಅನೇಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಪ್ರಾಸ್ತಾವಿಕವಾಗಿ ಮಾತಾಡಿದ ಹಿರಿಯ ಸಂಶೋಧಕ, ಸಾಹಿತಿ, ವಿದ್ವಾಂಸರಾದ ಡಾ. ಬಿ. ರಾಜಶೇಖರಪ್ಪ ಅವರು, ಬಹುಹಿಂದಿನಿಂದಲೂ ಬಸವ ಜಯಂತಿಯನ್ನು ಶ್ರೀ ಮಠ ಆಚರಿಸಿಕೊಂಡು ಬಂದಿದೆ. ಆ ಎಲ್ಲ ಕಾರ್ಯಕ್ರಮಗಳು ಯಥಾವತ್ತಾಗಿ ನಡೆಯುತ್ತಾ ಬಂದಿವೆ ಎಂದರು.

ಪತ್ರಕರ್ತ, ಕವಿ, ಆಗಿರುವ ಜಿ.ಎಸ್. ಉಜ್ಜನಪ್ಪ ಮಾತನಾಡಿ ಬಸವಣ್ಣ ಅಂದರೇನೆ ಆದರ್ಶ, ಆದರ್ಶಕ್ಕೆ ಚ್ಯುತಿ ಬಾರದಂತೆ ಆಡಂಬರರಹಿತವಾಗಿ ಆದರ್ಶವೇ ಮೈವತ್ತಂತೆ ಕಾರ್ಯಕ್ರಮಗಳು ಜರುಗಬೇಕೆಂದು ಅನಿಸಿಕೆ ವ್ಯಕ್ತಪಡಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ ಮಾತನಾಡಿ ಸರ್ವರ ಸಮಾನತೆಗಾಗಿ ಶ್ರಮಿಸಿದ ಬಸವಣ್ಣನವರ ಕೊಡುಗೆ, ಆಶಯಗಳನ್ನ ಜನತೆಗೆ ತಿಳಿಸುವ ಸರ್ವರ ಸಹಭಾಗಿತ್ವದಲ್ಲಿ ಆಚರಿಸುವಂತಾಗಬೇಕೆಂದು ಸಲಹೆ ನೀಡಿದರು.

ಜಿಲ್ಲಾ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ವೀರೇಶ್ ಮಾತನಾಡಿ ಎಲ್ಲರೂ ಒಟ್ಟಾಗಿ ಆಚರಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ. ಎಲ್ಲರೂ ಸೇರಿ ಆಚರಿಸೋಣ. ಅದಕ್ಕೆ ತಕ್ಕ ವ್ಯವಸ್ಥೆ ಮಾಡಿಕೊಳ್ಳೋಣ ಎಂದು ಹೇಳಿದರು.

ಲೇಖಕ ಎಚ್. ಆನಂದಕುಮಾರ್ ಮಾತನಾಡಿ, ಚಿತ್ರದುರ್ಗ ಮುರುಘಾಮಠದಿಂದ ಬಸವ ತತ್ವ ಆಚರಣೆಗಾಗಿ ಒಂದು ಸಂದೇಶ ನೀಡಿದರೆ ಅದು ವ್ಯಾಪಕವಾಗಿ ಚರ್ಚೆಯಾಗುತ್ತದೆ. ಅಂತ ನಿಲುವು ಶ್ರೀಮಠದ್ದಾಗಿದೆ ಎಂದು ಹೇಳಿದರು.

ವೀರಶೈವ ಸಮಾಜದ ಕಾರ್ಯದರ್ಶಿ ಪಿ. ವೀರೇಂದ್ರಕುಮಾರ್ ಮಾತನಾಡುತ್ತಾ, ಶ್ರೀಮಠ ಹಾಗೂ ಸಮಾಜ ಒಂದಾಗಿ ಆಚರಿಸಿಕೊಂಡು ಬರುತ್ತಿದ್ದು, ಎಲ್ಲವೂ ಸಹ ವ್ಯವಸ್ಥಿತ ರೀತಿಯಲ್ಲಿ ಇಂದಿನ ಯುವ ಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮವನ್ನು ರೂಪಿಸಬೇಕೆಂದು ಹೇಳಿದರು.

ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೆಸ್ವಾಮಿ ಮಾತನಾಡಿ ಇನ್ನೂ ಕೆಲವು ಕಚೇರಿಗಳಲ್ಲಿ ಬಸವಣ್ಣನವರ ಫೋಟೋಗಳನ್ನು ಹಾಕಿಲ್ಲ, ಹಾಕಿಸುವ ವ್ಯವಸ್ಥೆ ಆಗಬೇಕೆಂದರು.

ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ನಾಗರಾಜ ಸಂಗಮ್ ಮಾತನಾಡಿ, ಚಿಕ್ಕಮಕ್ಕಳಿಂದ ಮುದುಕರವರೆಗೂ ಎಲ್ಲರೂ ಅನುಸರಿಸುವಂತಹ ಬಸವ ತತ್ವವನ್ನು ನಾವು ಚಿಕ್ಕ ಮಕ್ಕಳಿಗೆ ಕಡ್ಡಾಯವಾಗಿ ಹೇಳುವ, ಪಾಲನೆ ಮಾಡುವ ನಿಟ್ಟಿನಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕೆಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಿ.ಟಿ. ನಂದೀಶ್, ಡಾ. ಯಶೋಧಾ ರಾಜಶೇಖರಪ್ಪ ಸೇರಿದಂತೆ ಮತ್ತಿತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಭೆಯ ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳವರು ಮಾತನಾಡಿ, ಈ ನಾಡಿನಲ್ಲಿ ಬಸವ ಜಯಂತಿಯನ್ನು ಮೊದಲಿಗೆ ಆರಂಭಿಸಿದ ಕೀರ್ತಿ ಮುರುಘಾಮಠದ ಶಾಖಾಮಠವಾದ ದಾವಣಗೆರೆ ವಿರಕ್ತ ಮಠದಲ್ಲಿ ಮೃತ್ಯುಂಜಯ ಅಪ್ಪಗಳ ನೇತೃತ್ವದಲ್ಲಿ ಹರ್ಡೇಕರ್ ಮಂಜಪ್ಪನವರು ಆರಂಭಿಸಿದ್ದು ವಿಶೇಷ. ಶ್ರೀಮಠ ಬಸವತತ್ವಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಮುಂಚೂಣಿಯಲ್ಲಿದೆ ಎಂದರು. ಬಸವಣ್ಣ ಒಂದು ಮಹಾ ಬೆಳಕು. ಆ ಬೆಳಕಿನಲ್ಲಿ ನಾವುಗಳೆಲ್ಲರೂ ಸಾಗಬೇಕಿದೆ. ಆ ತತ್ವ ಚಿರನೂತನವಾದದ್ದು, ಅವುಗಳ ಅನುಸರಿಸರಿಕೆಯಲ್ಲಿ ನಾವು ಸದಾ ಮುಂದಿರಬೇಕೆಂದು ಕರೆ ನೀಡಿದರು.

ಶ್ರೀಮಠದ ವತಿಯಿಂದ ಈ ಹಿಂದೆ ಪ್ರಕಟಗೊಳ್ಳುತ್ತಿದ್ದ “ಸತ್ಯ ಶುದ್ಧ ಕಾಯಕ” ತ್ರೈಮಾಸಿಕ ಪತ್ರಿಕೆಯನ್ನು ಜಯಂತಿ ಸಂದರ್ಭದಲ್ಲಿ ಬಿಡುಗಡೆಗೊಳಿಸುವ ತಯಾರಿ ನಡೆದಿದೆ. ವಚನಕಾರರ ವಚನಗಳ ಕಿರುಹೊತ್ತಿಗೆಯನ್ನು ಪ್ರಕಟಿಸುವ ಆಶಯವಿದೆ ಎಂದು ಸ್ವಾಮೀಜಿ ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಸಮಾಜಗಳ ಮುಖಂಡರುಗಳಾದ ಷಡಾಕ್ಷರಯ್ಯಾ, ಕುಬೇರಪ್ಪ, ಶಶಿಧರ್ ಬಾಬು, ವಿಜಯಲಕ್ಷ್ಮಿ , ಗೀತಾ ಮುರುಗೇಶ್, ಜಯಶೀಲ, ಮಹಮ್ಮದ್ ಸಾಧಿಕ್ ಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದರೊಂದಿಗೆ ವಿವಿಧ ಸಮಾಜಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಎಸ್ ಜೆ ಎಂ ವಿದ್ಯಾಪೀಠದ ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಜಮುರಾ ಕಲಾವಿದ ಉಮೇಶ್ ಸಂಗಪ್ಪ ಪತ್ತಾರ್ ಅವರು ವಚನ ಗೀತೆಗಳನ್ನು ಹಾಡಿದರು. ಪ್ರಾಚಾರ್ಯ ಈಶ್ವರಪ್ಪ ಸ್ವಾಗತಿಸಿದರು. ಡಾ. ನವೀನ್ ಮಸ್ಕಲ್ ಕಾರ್ಯಕ್ರಮ ನಿರ್ವಹಿಸಿ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *