ಗುಳೇದಗುಡ್ಡ
(ಸೆಪ್ಟೆಂಬರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ಬಗ್ಗೆ ಶರಣ ತತ್ವ ಚಿಂತಕ ಪ್ರೊ. ಸಿದ್ಧಲಿಂಗಪ್ಪ ಬಸಪ್ಪ ಬರಗುಂಡಿ ಅವರ ಚಿಂತನೆ. ಕಾರ್ಯಕ್ರಮ ಬಸವ ರೇಡಿಯೋದಲ್ಲಿ ಏಪ್ರಿಲ್ 9 ನಡೆಯಿತು.)
ಮಠಾಧೀಶರುಗಳ ನೇತೃತ್ವದಲ್ಲಿ “ಬಸವ ಸಂಸ್ಕೃತಿ ಅಭಿಯಾನ” ಮಾಡಲು ಹೊರಟಿರುವುದು ಸ್ತುತ್ಯಾರ್ಹ. ಅಭಿಯಾನ ಬಸವನ ಬಾಗೇವಾಡಿಯಿಂದ ಪ್ರಾರಂಭವಾಗತ್ತಿರುವುದು ಒಳ್ಳೆಯದು.
ಅಭಿಯಾನ ವೈಚಾರಿಕ ಪ್ರಜ್ಞೆ ಬೆಳಸುವಂತಾಗಬೇಕು. ಶರಣರ ವಿಶಾಲವಾದ ಸಮಾಜದ ಕಲ್ಪನೆ ವ್ಯಕ್ತವಾಗಬೇಕು. ಜನಸಾಮಾನ್ಯರನ್ನು ಹೆಚ್ಚು ಒಳಗೊಳ್ಳುವಂತೆ ಅಭಿಯಾನವನ್ನು ರೂಪಿಸಬೇಕು. ಈ ಅವಕಾಶವನ್ನು ಬಳಸಿಕೊಂಡು ಲಿಂಗಾಯತ ಧರ್ಮವನ್ನು ಪುನಶ್ಚೇತನಗೊಳಿಸಬೇಕು.
ಶಾಲಾ ಕಾಲೇಜುಗಳ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಶಾಲೆಗಳಲ್ಲಿಯೇ ಏರ್ಪಡಿಸಿದರೆ ಉದ್ದೇಶ ಸಾರ್ಥಕವಾಗುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಯುವಕರಲ್ಲಿ ಮತ್ತು ಮಕ್ಕಳಲ್ಲಿ ಹೆಚ್ಚಿನ ಅರಿವನ್ನು ಮೂಡಿಸಬೇಕು.
ಇಷ್ಟಲಿಂಗ ಪೂಜೆಯ ಮಹತ್ವವನ್ನು ತಿಳಿಸದೆ ನಮ್ಮ ಜನರಲ್ಲಿ ದೇವರು ಮತ್ತು ಧರ್ಮದ ಬಗ್ಗೆ ಭಯ ಮೂಡಿಸಲಾಗಿದೆ. ಅದನ್ನು ದೂರ ಮಾಡುವ ಮಾದರಿಗಳನ್ನು, ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಬೇಕು. ನಾವೇ ದೇವರ ವಿಸ್ತೃತ ರೂಪ ಅನ್ನುವ ಸತ್ಯವನ್ನು ತಿಳಿಸಿಕೊಡುವ ಕೆಲಸ ಮಾಡಬೇಕು.
ಜನರ ಮನೆಮನೆಗೆ ಮಠಾಧೀಶರು ಮತ್ತು ಸಂಘಟಕರು ಹೋಗಬೇಕು ವಚನಗಳ ಅರಿವನ್ನು ಮೂಡಿಸಬೇಕು. ಅಭಿಯಾನದಲ್ಲಿ ಬಸವಣ್ಣನವರಿಗೆ ಹೆಚ್ಚಿನ ಆದ್ಯತೆ ಇರಬೇಕು. ಲಿಂಗಾಯತ ಧರ್ಮ ಹೇಗೆ ಬೇರೆ ಧರ್ಮಗಳಿಗಿಂತ ಭಿನ್ನ ಅನ್ನುವುದನ್ನು ತಿಳಿಸಿಕೊಡುವ ಕೆಲಸ ಆಗಬೇಕು. ಪ್ರತಿ ಮಠವೂ ಅನುಭವ ಮಂಟಪಗಳಗಬೇಕು ಹಾಗೆಯೇ ಮನೆಗಳೂ ಮಠಗಳಾಗಬೇಕು. ನಾವು ಹೇಳುವ ಆದರ್ಶಗಳಿಗೆ ನಾವು ಬದ್ಧರಾಗಿರಬೇಕು.
ಸುಳ್ಳು ಪರಂಪರೆಗಳನ್ನು ಪ್ರಶ್ನಿಸುವ ಧೈರ್ಯವನ್ನು ಜನರಲ್ಲಿ ಮೂಡಿಸಬೇಕು. ವಿವಿಧ ಜಾತಿಗಳಿಂದ ಬಂದಿರುವ ಮಠಾಧೀಶರು ಜಾತಿ ಗುರುಗಳಾಗಿದ್ದಾರೆ. ಜಾತಿ ಭಾವನೆ ಬದಿಗೊತ್ತಿ ಎಲ್ಲಾ ಉಪಪಂಗಡಗಳನ್ನು ಒಗ್ಗೂಡಿಸುವ ಕೆಲಸ ಮಾಡಬೇಕು.
ಪ್ರೊ. ಸಿದ್ಧಲಿಂಗಪ್ಪ ಬಸಪ್ಪ ಬರಗುಂಡಿ
ಪ್ರೊ. ಸಿದ್ಧಲಿಂಗಪ್ಪ ಬಸಪ್ಪ ಬರಗುಂಡಿ ಇವರು ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣವನ್ನು (ಬಿ. ಎ) ಹುಟ್ಟಿದ ಊರು ಗುಳೇದಗುಡ್ಡ ದಲ್ಲಿಯೇ ಮುಗಿಸಿ, ತಮ್ಮ ಸ್ನಾತಕೋತ್ತರ ಪದವಿಯನ್ನು (ಎಂ.ಎ) ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಮಾಡಿರುತ್ತಾರೆ. 1980 ರಲ್ಲಿ ಸ್ಥಳೀಯವಾಗಿ ವೀರಶೈವ ಪ್ರಗತಿಪರ ಯುವಕರ ಸಂಘ ಸ್ಥಾಪಿಸಿ ಅದರ ಕಾರ್ಯದರ್ಶಿಯಾಗಿ ಕೆಲಸ ಮಾಡಿರುತ್ತಾರೆ.1983 ರಿಂದ ಎರಡು ವರ್ಷಗಳ ಕಾಲ ಗುಳೇದಗುಡ್ಡದ ಭಂಡಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ,1985 ರಿಂದ 5 ವರ್ಷಗಳ ಕಾಲ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದ ಶ್ರೀ ಶಿವಯೋಗೀಶ್ವರ ಸರ್ವೋದಯ ಸಂಸ್ಥೆಯ ಶಿವಯೋಗೀಸ್ವರ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ತದನಂತರ 1990 ರಿಂದ 2014 ರವರೆಗೆ ಪ್ರಚಾರ್ಯರಾಗಿ ಕೆಲಸ ಮಾಡಿ ನಿವೃತ್ತಿಹೊಂದಿದರು. ಗುಳೇದಗುಡ್ಡದ ಭಂಡಾರಿ ಪದವಿಪೂರ್ವ ಕಾಲೇಜಿನಲ್ಲಿ ಪುನಃ 8 ವರ್ಷಗಳ ಕಾಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಅಲ್ಲಿಂದಲೂ ನಿವೃತ್ತಿ ಹೊಂದಿ ಈಗ ಅದೇ ಸಂಸ್ಥೆಯ ಪದವಿಪೂರ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಜೊತೆಗೆ ಇಂಡಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಮತ್ತು ಹತ್ತು ಹಲವು ಸಂಸ್ಥೆಗಳಲ್ಲಿ ಸದಸ್ಯ, ಕಾರ್ಯದರ್ಶಿ ಹಾಗೂ ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿದ್ದಾರೆ. ಶ್ರೀ ಅರವಿಂದ ಮಂಡಲದಲ್ಲಿ ಸುಮಾರು 25 ವರ್ಷಗಳ ಕಾಲ ಕಾರ್ಯದರ್ಶಿಯಾಗಿ, ಗುರುಭವನ ಕಟ್ಟಡ ಸಮಿತಿಯ ಸದಸ್ಯನಾಗಿ, ಕೆಲಸ ಮಾಡಿದ್ದಾರೆ. ಎರಡು ತಾಲ್ಲೂಕು ಸಾಹಿತ್ಯ ಸಮ್ಮೇಳನಗಳನ್ನು ಮಾಡಿದ್ದಾರೆ. ಹಲವು ಪುಸ್ತಕಗಳಿಗೆ ಸಂಪಾದಕರಾಗಿ ಕೆಲಸ ಮಾಡಿದ್ದು ಎರಡು ಪುಸ್ತಕಗಳನ್ನೂ ಹೊರತಂದಿದ್ದಾರೆ. ಇತ್ತೀಚಿಗೆ ವಚನ ಸಾಹಿತ್ಯ ಮತ್ತು ಶರಣರ ಆಚಾರ ವಿಚಾರಗಳತ್ತ ಹೆಚ್ಚು ಆಸಕ್ತಿ ಬಳಸಿಕೊಂಡಿದ್ದಾರೆ. ಇವರನ್ನು ಇದೇ ಏಪ್ರಿಲ್ 26 ರಂದು ಗುಳೇದಗುಡ್ಡದಲ್ಲಿ ನಡೆಯಲಿರುವ ತಾಲ್ಲೂಕು 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.