ಬೀದರ
ಲಿಂಗಾಯತ ಮಹಾ ಮಠದ ವತಿಯಿಂದ ಬಸವಕಲ್ಯಾಣ ತಾಲ್ಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ ವಚನ ವಿಜಯೋತ್ಸವ ಹಾಗೂ ಅಕ್ಕಮಹಾದೇವಿ ಜಯಂತಿ ನಿಮಿತ್ತ ಭಾನುವಾರ ಗುರು ವಚನ ಗ್ರಂಥದ ಭವ್ಯ ಮೆರವಣಿಗೆ ನಡೆಯಿತು.
ಒಂದೇ ತೆರನಾದ ಸೀರೆ ಧರಿಸಿದ್ದ ನೀಲಮ್ಮನ ಬಳಗದ 770 ಸಹೋದರಿಯರು ಏಕಕಾಲಕ್ಕೆ ಸಾಮೂಹಿಕವಾಗಿ ಅಕ್ಕನ ಯೋಗಾಂಗ ತ್ರಿವಿಧಿಯನ್ನು ಭಕ್ತಿ, ಶದ್ಧೆಯಿಂದ ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು.
ಅಲಂಕೃತ ವಾಹನದಲ್ಲಿ ಬಸವಣ್ಣ, ಅಕ್ಕಮಹಾದೇವಿ ಭಾವಚಿತ್ರ ಹಾಗೂ ಲಿಂಗಾಯತ ಧರ್ಮ ಗ್ರಂಥ ಇಡಲಾಗಿದ್ದರೆ, 770 ಅಮರಗಣಂಗಳ ಸಂಕೇತವಾಗಿ ಸಮವಸ್ತ್ರಧಾರಿ ಶರಣ-ಶರಣೆಯರು ತಲೆ ಮೇಲೆ ವಚನ ಗ್ರಂಥ ಹೊತ್ತು ಶಿಸ್ತಿನಿಂದ ಸಾಲಾಗಿ ಹೆಜ್ಜೆ ಹಾಕಿದರು.
ವಚನ ವಿಜಯೋತ್ಸವ ಗೀತೆ, ಶರಣರ ವಚನಗಳನ್ನು ಹಾಡುತ್ತಾ ಸಾಗಿದರು. ವಚನ ವಡಪುಗಳು ಎಲ್ಲರಲ್ಲಿ ಭಕ್ತಿ ಭಾವ ಉಕ್ಕಿಸಿದವು. ಅವುಗಳಿಗೆ ಮೈ ಮರೆತ ಜನ ಓಂ ಬಸವ ಘೋಷಣೆ ಕೂಗಿದರು.
ಪ್ರಭುದೇವ ಸ್ವಾಮೀಜಿ ಹಾಗೂ ಬಸವಪ್ರಭು ಸ್ವಾಮೀಜಿ ಮೆರವಣಿಗೆ ಮುಂಚೂಣಿಯಲ್ಲಿದ್ದರು. ಓಣಿ, ಓಣಿಗಳಲ್ಲಿ ಜನರು ನೀರು ಸುರಿದು ಅವರನ್ನು ಸ್ವಾಗತಿಸಿದರು. ಛತ್ರಿ, ಚಾಮರ, ಷಟ್‍ಸ್ಥಳ ಧ್ವಜಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಮುಖಂಡ ಅಣವೀರ ಕೊಡಂಬಲ್ ಷಟ್‍ಸ್ಥಲ ಧ್ವಜಾರೋಹಣಗೈದು ಮೆರವಣಿಗೆಗೆ ಚಾಲನೆ ನೀಡಿದರು.

ಅಕ್ಕನ ವಚನ ಓದಿ, ಅರ್ಥೈಸಿಕೊಳ್ಳಿ
ಅಕ್ಕ ಮಹಾದೇವಿ ಅವರ ವಚನಗಳನ್ನು ಎಲ್ಲರೂ ಓದಿ, ಅರ್ಥೈಸಿಕೊಳ್ಳಬೇಕು ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿದರು.
ಗೋರ್ಟಾ(ಬಿ) ಗ್ರಾಮದಲ್ಲಿ ನಡೆದ ವಚನ ವಿಜಯೋತ್ಸವ ಹಾಗೂ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಅಕ್ಕ ಅವರ ಜೀವನಾದರ್ಶಗಳು ಮನುಕುಲಕ್ಕೆ ಮಾದರಿಯಾಗಿವೆ ಎಂದು ತಿಳಿಸಿದರು.
ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ ಮಾತನಾಡಿ, ನಿರಾಕಾರ ದೇವನನ್ನೇ ತನ್ನ ಪತಿಯೆಂದು ಸ್ವೀಕರಿಸಿ, ಆಧ್ಯಾತ್ಮ ಶಿಖರವನ್ನೇರಿದ ಮಹಾ ಶರಣೆ ಅಕ್ಕ. ಜೀವನದಲ್ಲಿ ಸ್ತುತಿ ನಿಂದೆಗಳಿಗೆ ಹೆದರದೆ, ಸಮ ಚಿತ್ತದಿಂದ ಸಮಾಧಾನವಾಗಿ ಜೀವಿಸಬೇಕೆಂದು ಬೋಧಿಸಿದ್ದರು ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಅಕ್ಕ ಮಹಾದೇವಿ ಜಯಂತಿ ಹಾಗೂ ವಚನ ವಿಜಯೋತ್ಸವ ಮಠದ ವಾರ್ಷಿಕ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ಅಕ್ಕನ ವಚನಗಳಿಂದ ಮಹಿಳೆಯರ ಆತ್ಮವಿಶ್ವಾಸ ಹೆಚ್ಚುತ್ತದೆ. ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ. ಅಕ್ಕನ ಯೋಗಾಂಗ ತ್ರಿವಿಧಿ ಪಠಣದಿಂದ ಆಧ್ಯಾತ್ಮಿಕತೆಯ ವಿಕಾಸವಾಗುತ್ತದೆ ಎಂದು ತಿಳಿಸಿದರು.

ಅಕ್ಕ ಮಹಾದೇವಿ ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಿಸಬೇಕು ಎಂದು ಮುಖ್ಯಮಂತ್ರಿ ಅವರನ್ನು ಒಕ್ಕೊರಲಿನಿಂದ ಒತ್ತಾಯಿಸಲಾಯಿತು.
ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ರಚಿತ ಅಕ್ಕ ಅನ್ನಪೂರ್ಣತಾಯಿ ಜೀವನಚರಿತ್ರೆ ಗ್ರಂಥವನ್ನು ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರಿ ಸಾವಿತ್ರಿ ಸಲಗರ್, ಗುರುವಚನ ಗ್ರಂಥವನ್ನು ಹುಲಸೂರಿನ ಶಿವಾನಂದ ಸ್ವಾಮೀಜಿ ಹಾಗೂ ಬಸವಪ್ರಭು ಸ್ವಾಮೀಜಿ ಬರೆದ ಅಕ್ಕಮಹಾದೇವಿ ಚರಿತ್ರೆ ಕೃತಿಯನ್ನು ಪ್ರಭುದೇವ ಸ್ವಾಮೀಜಿ ಬಿಡುಗಡೆ ಮಾಡಿದರು.

ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ರಘುಶಂಖ ಭಾತಂಬ್ರಾ, ಸೀತಾ ಸಂಜೀವಕುಮಾರ ಮುಖ್ಯ ಅತಿಥಿಯಾಗಿದ್ದರು.
ಚನ್ನಬಸಪ್ಪ ಪತಂಗೆ ಅಧ್ಯಕ್ಷತೆ ವಹಿಸಿದ್ದರು. ಶ್ಯಾಮಲಾ ಎಲಿ, ಶ್ರೀದೇವಿ ಮಠಪತಿ, ಗೋದಾವರಿ ತಾಯಿ ಸಮ್ಮುಖ ವಹಿಸಿದ್ದರು.

ಸಾಹಿತಿ ರಮೇಶ ಮಠಪತಿ ಶ್ರೀಮಂತಪ್ಪ ರಾಜೇಶ್ವರೆ, ಶಿವಕುಮಾರ ಮಾಶೆಟ್ಟಿ, ಬಾಬುರಾವ್ ಪಟ್ನೆ, ಬಾಬುರಾವ್ ರಾಜೋಳೆ, ಗುರುನಾಥ ಹತ್ತೆ, ಸುಭಾಷ್ ಪತಂಗೆ, ಭರತರಾಜ ಪೊಲೀಸ್ ಪಾಟೀಲ, ಶಿವಪುತ್ರ ಕಣಜೆ, ಚಂದ್ರಕಾಂತ ಕಣಜೆ, ಜಗನ್ನಾಥ ಚಿಮ್ಮಾ, ಬಸವಣಪ್ಪ ಚಿಕುರ್ತೆ, ಭರತರಾಜ ಪತಂಗೆ, ಬಸವರಾಜ ರಾಜೋಳೆ, ದೇವೇಂದ್ರ ಪೊಲೀಸ್ ಪಾಟೀಲ, ಮಡಿವಾಳಪ್ಪ ಮಾಶೆಟ್ಟಿ, ಜಗದೇವಿ, ಇಂದುಮತಿ ಅಕ್ಕಣ್ಣ, ಮಹಾದೇವಿ ಕಾದೆಪುರೆ, ರೇಖಾ ಕಣಜೆ ಉಪಸ್ಥಿತರಿದ್ದರು.

ಪರುಷ ಕಟ್ಟೆಯ ಚನ್ನಬಸವಣ್ಣ ವಚನ ಗಾಯನ ಮಾಡಿದರು. ಗೋದಾವರಿ ರಾಜೋಳೆ ಸ್ವಾಗತಿಸಿದರು. ಸೋಮನಾಥಪ್ಪ ರಾಜೇಶ್ವರೆ ನಿರೂಪಿಸಿದರು. ಜಿಲ್ಲೆಯ ವಿವಿಧೆಡೆಯ ಬಸವ ಭಕ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.