ಸಿಂಧನೂರು
ಜಾಗತಿಕ ಲಿಂಗಾಯತ ಮಹಾಸಭಾ ರಾಯಚೂರು ಜಿಲ್ಲಾ ಘಟಕ ಮತ್ತು ಇಜೆ ಬಸವಪುರ ಗ್ರಾಮ ಘಟಕ ಮತ್ತು ಬಸವಪರ ಸಂಘಟನೆಗಳ ಸಹಯೋಗದಲ್ಲಿ ಏಪ್ರಿಲ್ 17ರಿಂದ ಪ್ರತಿದಿನ ಬೆಳಿಗ್ಗೆ ಸಿಂಧನೂರಿನ ನಟರಾಜ್ ಕಾಲೋನಿ, ಮತ್ತಿತರ ಮನೆಗಳಿಗೆ ಭೇಟಿ ನೀಡಿ ಮನೆಯವರಿಗೆ ಭಸ್ಮಧಾರಣೆ ಮಾಡಿ, ವಚನಗ್ರಂಥ ಹಾಗೂ ಮನವಿಪತ್ರ ಕೊಟ್ಟು ಬಸವಧರ್ಮ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ.

ಅಭಿಯಾನದಲ್ಲಿ ಕೆಳಗಿನ ವಿಷಯಗಳನ್ನು ಮನೆಯ ಹಿರಿಯರಿಗೆ, ಸದಸ್ಯರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆದಿದೆಯೆಂದು ಜಾ.ಲಿಂ. ಮಹಾಸಭಾ ಜಿಲ್ಲಾಧ್ಯಕ್ಷ ಪಿ.ರುದ್ರಪ್ಪ ಕುರಕುಂದ ಅವರು ಹೇಳಿದರು.

1) ಲಿಂಗಾಯತ ಧರ್ಮದ ಸಂಸ್ಥಾಪಕರು ಬಸವಾದಿ ಶರಣರು, ಅವರು ಕೊಟ್ಟ ವಚನಗಳೇ ಲಿಂಗಾಯತ ಧರ್ಮ ಸಂಹಿತೆ.
2) 2025ರ ಬಸವ ಜಯಂತಿಯನ್ನು ಸಂಸ್ಕಾರದ ಹಬ್ಬವಾಗಿ ಆಚರಿಸಬೇಕು.
3) ಸಮಾಜದಲ್ಲಿ ಉಪಜಾತಿಗಳ ತೊಡಕನ್ನು ದೂರಮಾಡಿಕೊಂಡು ಎಲ್ಲರೂ ಲಿಂಗಧರಿಸುವ ಮೂಲಕ ಅಖಂಡ ಲಿಂಗಾಯತ ತತ್ವವನ್ನು ಉಳಿಸುವ ಪ್ರಯತ್ನ ಮಾಡುವದು.
4) ಲಿಂಗ ಸಂಸ್ಕಾರ ಬಯಸುವವರು ಜಾಗತಿಕ ಲಿಂಗಾಯತ ಮಹಾಸಭಾವನ್ನು ಸಂಪರ್ಕಿಸುವುದು.
5) ಲಿಂಗಾಯತ ಸ್ವತಂತ್ರ ಧರ್ಮ ಆಗಿದ್ದರೆ ಇಂದಿನ ಜಾತಿ ಜನಗಣತಿ, ಮೀಸಲಾತಿಗಳ ಗೋಜಲು ಇರುತ್ತಿರಲಿಲ್ಲ.
6) ವೀರಶೈವ ಜಂಗಮರು ಸಹ ಧರ್ಮಗುರು ಬಸವಣ್ಣನವರ ಚರಜಂಗಮ ಪ್ರಚಾರಕರ ಸಂತತಿ ಎನ್ನುವದು.
ನಾವು ಮನೆಮನೆಗೆ ಭೇಟಿ ನೀಡಿದಾಗ ಕೆಲವರು ಚಂದಾ ಕೇಳಲು ಬಂದವರು ಎಂದು ಗ್ರಹಿಸಿದರು. ಚಂದಾ ಸಂಗ್ರಹಿಸಲು ಅಲ್ಲ ಎಂದು ತಿಳಿಸಿ, ಮನೆಯವರು ಧರ್ಮ ಸಂಸ್ಕಾರ ಪಡೆಯುವದೇ ನಮಗೆ ಕೊಡುವ ಕಾಣಿಕೆ ಎಂದು ಅವರಿಗೆ ತಿಳಿಸಲಾಗುತ್ತಿದೆ ಎಂದು ಮುಖಂಡ ಪಿ. ಬಸವರಾಜ ಹೇಳಿದರು.

ಏಪ್ರಿಲ್ 20ರಿಂದ 30ರವರೆಗೆ ಪ್ರತಿದಿನ ಸಾಯಂಕಾಲ ಆರ್. ಜಿ. ಎಂ. ಶಾಲೆಯ ಆವರಣದಲ್ಲಿ ನಡೆಯುವ ಬಸವಧರ್ಮದ ಪ್ರವಚನಕ್ಕೆ ಬರಲು ಇದೇ ಸಂದರ್ಭದಲ್ಲಿ ಜನರಲ್ಲಿ ವಿನಂತಿಸಲಾಗುತ್ತಿದೆ ಎಂದು ಬಸವ ಕೇಂದ್ರದ ಕರೇಗೌಡ ಕುರಕುಂದ ಹೇಳಿದರು.

30 ಏಪ್ರಿಲ್ ಬಸವ ಜಯಂತಿ ದಿನದವರೆಗೆ ಮನೆ ಮನೆಗೆ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ನೇತೃತ್ವ ವಹಿಸಿರುವ ಮುಖ್ಯಸ್ಥರಾದ ಬಸನಗೌಡ ಬಸಾಪುರ, ಅಮರೇಶ ಗುರಿಕಾರ, ಬಸವಲಿಂಗ ಬಾದರ್ಲಿ, ವೀರಯ್ಯ ಸ್ವಾಮಿಗಳು, ವೀರನಗೌಡ, ಮುದ್ದನಗೌಡ, ಚಂದ್ರಗೌಡ ಮತ್ತಿತರರು ಹೇಳಿದರು.