ಅಕ್ಕನ ಯೋಗಾಂಗ ತ್ರಿವಿಧಿ ಅಧ್ಯಾತ್ಮದ ಕೆನೆ: ಪ್ರಭುದೇವ ಸ್ವಾಮೀಜಿ

ಬೀದರ

ಅಕ್ಕಮಹಾದೇವಿ ವಚನಗಳಲ್ಲಿ ಬದುಕಿನ ಕೌಶಲ ಹಾಗೂ ಅಧ್ಯಾತ್ಮ ಸಾಧನೆಯ ಮಾರ್ಗ ಇದೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಲಿಂಗಾಯತ ಮಹಾ ಮಠದ ವತಿಯಿಂದ ನಗರದ ಬಸವಗಿರಿಯಲ್ಲಿ ಗುರುವಾರ ನಡೆದ 262ನೇ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಅಕ್ಕನ ಯೋಗಾಂಗ ತ್ರಿವಿಧಿ ಅಧ್ಯಾತ್ಮದ ಕೆನೆ ಎಂದು ಬಣ್ಣಿಸಿದರು.

ಕಿರಿಯ ವಯಸ್ಸಿನಲ್ಲೇ ಲಿಂಗಾಂಗ ಸಾಮರಸ್ಯಕ್ಕೇರಿದ ಮಹಾಶರಣೆ ಅಕ್ಕ. ಅಂದಿನ ದಿನಮಾನದಲ್ಲಿ ಬಯಸಿದ್ದನ್ನು ಪಡೆಯುವ ರಾಜನನ್ನೇ ಜಾಣ್ಮೆಯಿಂದ ಎದುರಿಸಿ ಗುರಿ ತಲುಪಿದ ದಿಟ್ಟೆ ಎಂದು ಹೇಳಿದರು.

ಮಹಾದೇವಿ ಅಕ್ಕನ ಧೈರ್ಯ, ಸಾಹಸ ಹಾಗೂ ಸಮಯ ಪ್ರಜ್ಞೆ ಮಹಿಳಾ ಕುಲಕ್ಕೆ ಸ್ಫೂರ್ತಿ. ಇಂದಿನ ಮಹಿಳೆಯರು ಅಕ್ಕನ ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಬೇಕು. ಅಕ್ಕನ ವಚನ, ಸಂದೇಶಗಳನ್ನು ಅರಿಯಬೇಕು. ಮಕ್ಕಳಿಗೂ ತಿಳಿಸಬೇಕು ಎಂದು ತಿಳಿಸಿದರು.

ಜಗತ್ತಿನ ಸರ್ವ ಚಟುವಟಿಕೆಗಳ ಮೂಲ ಸೂರ್ಯ. ಹಾಗೆಯೇ ಪಂಚೇಂದ್ರಿಯಗಳ ಚಟುವಟಿಕೆಗೆ ಮನಸ್ಸೇ ಮೂಲ. ಚಂಚಲವಾದ ಮನಸ್ಸನ್ನು ನಿಲ್ಲಿಸಿ, ಸಾಧನೆಯ ಶಿಖರವೇರುವ ಕಲೆಯನ್ನು ಅಕ್ಕನಿಂದ ತಿಳಿಯಬೇಕು ಎಂದು ಭಾಲ್ಕಿಯ ಮಹಾಲಿಂಗ ದೇವರು ನುಡಿದರು.

ಜೀವನದಲ್ಲಿ ಶಾಂತಿ, ನೆಮ್ಮದಿ ಪಡೆಯಲು ಶರಣ ಸಂಗಮಗಳು ಸಹಕಾರಿ. ಇದರಿಂದ ಒತ್ತಡ ಮುಕ್ತರಾಗಿ ಬದುಕಬಹುದು. ಯುವಕರು ಈ ಕಡೆ ಗಮನ ಹರಿಸಬೇಕು ಎಂದು ಉದ್ಘಾಟನೆ ನೆರವೇರಿಸಿದದಂತ ವೈದ್ಯ ನಾಗೇಶ ಪಾಟೀಲ ಹೇಳಿದರು.

ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ರಚಿತ ಅಕ್ಕ ಅನ್ನಪೂರ್ಣ ಚರಿತ್ರೆ ಪುಸ್ತಕವನ್ನು ನೀಲಮ್ಮನ ಬಳಗದ ಶೋಭಾವತಿ ಬಿರಾದಾರ ಬಿಡುಗಡೆ ಮಾಡಿದರು.

ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸೋಮನಾಥಪ್ಪ ರಾಜೇಶ್ವರೆ ಗೋರ್ಟಾ ಅವರನ್ನು ಶ್ರೀಮಠದಿಂದ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ರೋಟರಿ ಕ್ಲಬ್ ಆಫ್ ಬೀದರ ನ್ಯೂ ಸೆಂಚುರಿಯ ಅಧ್ಯಕ್ಷ ಶಿವಕುಮಾರ ಪಾಖಾಲ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಮೇಶ ಮಠಪತಿ ಉಪಸ್ಥಿತರಿದ್ದರು. ಚನ್ನಬಸವಣ್ಣ ಮತ್ತು ನೀಲಮ್ಮನ ಬಳಗದವರು ಪ್ರಾರ್ಥನೆಗೈದರು.

ರೇವಣಪ್ಪ ಮೂಲಗೆ ಹಾಗೂ ಡಾ. ಬಸವದೀಪ್ತಿ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಪ್ರಭಾವತಿ ಗೋರನಾಳೆ ಹಾಗೂ ಬಸವ ಜ್ಯೋತಿ ನಿಟ್ಟೂರೆ ಗುರುಪೂಜೆಗೈದರು. ಮಾಣಿಕಪ್ಪ ಗೋರನಾಳೆ ಸ್ವಾಗತಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
Leave a comment

Leave a Reply

Your email address will not be published. Required fields are marked *