ಬುದ್ದ, ಬಸವ, ಅಂಬೇಡ್ಕರ್ ಯಾವುದೇ ಜಾತಿಗೆ ಸೀಮಿತರಲ್ಲ: ತಂಗಡಗಿ

ಕೂಡಲಸಂಗಮ

ಬುದ್ದ, ಬಸವ, ಅಂಬೇಡ್ಕರ್ ಯಾವುದೇ ಜಾತಿಗೆ ಸೀಮಿತರಾಗಿರದೇ ಈ ಜಗತ್ತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕೂಡಲಸಂಗಮದ ಬಸವ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಕೂಡಲಸಂಗಮ ಅಭಿವೃದ್ದಿ ಪ್ರಾಧಿಕಾರದ ಸಹಯೋಗದಲ್ಲಿ ಅನುಭವ ಮಂಟಪ ಬಸವಾದಿ ಶರಣರ ವೈಭವ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಸಮಕಾಲಿನ ಸಂವೇದನೆ ಕುರಿತು ಜರುಗಿದ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ತಮ್ಮ ವಚನದ ಮೂಲಕ ಆಡಳಿತ ವ್ಯವಸ್ಥೆ ಕಲಿಸಿಕೊಟ್ಟಿದ್ದಾರೆ. ಅವರು ಹುಟ್ಟುಹಾಕಿದ ಅನುಭವ ಮಂಟಪ ಇಂದು ಸಂಸತ್ತಾಗಿ ನಡೆಯುತ್ತಿದೆ ಎಂದರು.

ಜಯಂತಿಗಳನ್ನು ಆಚರಣೆ ಮಾಡುವ ಉದ್ದೇಶ ಮಹಾಪುರುಷರ ಇತಿಹಾಸವನ್ನು ಯುವಕರಿಗೆ ಪರಿಚಯಿಸುವುದಾಗಿದೆ. ಬಸವಣ್ಣನವರ ವಚನಗಳನ್ನು ಇಡೀ ರಾಜ್ಯಕ್ಕೆ ಪರಿಚಯಿಸುವ ಕಾರ್ಯ ಮಾಡಿ ಯುವಕರಲ್ಲಿ ಪರಿಣಾಮ ಬೀರುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಅವರ ಆಚಾರ, ವಿಚಾರ, ವಚನಗಳ ಮೂಲಕ ಇತಿಹಾಸ ಸೃಷ್ಟಿಸಿ ಸಾಮಾಜಿಕ ನ್ಯಾಯ ಕೊಡುವ ಕೆಲಸ ಸರಕಾರ ಮಾಡುತ್ತಿದೆ. ಬಸವಣ್ಣನವರ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಅವರ ಆಚಾರ, ವಿಚಾರಗಳನ್ನು ದಿನನಿತ್ಯ ಚಿಂತನೆ ಮಾಡಿ ಅದರಂತೆ ಜೀವನ ನಡೆಸುತ್ತಿರುವವರು ಬಹಳ ಕಡಿಮೆ ಇದ್ದಾರೆಂದು ತಿಳಿಸಿದರು.

ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು 12ನೇ ಶತಮಾನದಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಹಾಕುವದರ ಜೊತೆಗೆ ಎಲ್ಲರನ್ನು ಎಲ್ಲ ಜನಾಂಗಗಳನ್ನು ಒಂದುಗೂಡಿಸುವ ಕಾರ್ಯ ನಡೆದಿದೆ. ಅದು ಇವತ್ತಿನವರೆಗೂ ಬಗೆಹರಿಯದೇ ಜಾತಿ, ಧರ್ಮ, ಘರ್ಷಣೆಗಳು ದಿನಂಪ್ರತಿ ನಡೆಯುತ್ತಿವೆ. ಮಾನವನನ್ನು ಮಾನವನನ್ನಾಗಿ ಕಾಣದ ಧರ್ಮ ಯಾವುದು ಎಂದರು.

ಬಸವಣ್ಣನವರು ಹಾಕಿ ಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕೆಂಬ ಉದ್ದೇಶದಿಂದ ಅವರ ತತ್ವಾದರ್ಶಗಳನ್ನು ಪರಿಚಯಿಸುವ ಕಾರ್ಯ ಈ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹುನಗುಂದ ಶಾಸಕ ಹಾಗೂ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಇತಿಹಾಸ ಪಟದಲ್ಲಿರುವಂತ ಐತಿಹಾಸಿಕ ಕೂಡಲಸಂಗಮದಲ್ಲಿ ಬಸವಾದಿ ಶರಣರ ವೈಭವವನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮ ಮಾಡಲು ಸರಕಾರ ಸರ್ವಧರ್ಮ ಸಂಸತ್ತು ಎಂಬ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಬಜೆಟ್‍ನಲ್ಲಿ ಘೋಷಿಸಿದೆ. ಈ ಹಿನ್ನಲೆಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಕೂಡಲಸಂಗಮದಲ್ಲಿ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಕಾರ್ಯಕ್ರಮದ ಆಚರಣೆಯ ಸದಸ್ಯರಾದ ಬೈಲೂರ ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಶ್ರೀ, ಮೈಸೂರು ಉರಿಲಿಂಗಪೆದ್ದಿ ಮಠದ ಪೂಜ್ಯ ಜ್ಞಾನಪ್ರಕಾಶ ಶ್ರೀ, ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಶ್ರೀ, ಇಳಕಲ್ಲಿನ ಗುರುಮಹಾಂತ ಶ್ರೀ ದಿವ್ಯ ಸಾನಿದ್ಯವನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಾಹಿತಿ ರಂಜಾನ ದರ್ಗಾ, ಡಾ. ಮೀನಾಕ್ಷಿ ಬಾಳಿ, ಡಾ. ಪುರುಷೋತ್ತಮ ಬಿಳಿಮಲೆ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ. ಸಿಇಓ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ, ಕೂಡಲಸಂಗಮದ ಅಭಿವೃಧ್ದಿ ಪ್ರಾಧಿಕಾರದ ಆಯುಕ್ತ ಮಹಾದೇವ ಮುರಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KrUBaygNRHP7UH6E1mcSRN

Share This Article
Leave a comment

Leave a Reply

Your email address will not be published. Required fields are marked *