ಬಸವಣ್ಣನವರ ಆಶಯದಂತೆ ಬಸವ ಜಯಂತಿ ನಡೆಯಲಿ

ತಲೆಗೆ ಕುಂಭ ಹೊರಿಸುವ ಕೆಲಸವಾಗುತ್ತಿದೆ ಹೊರತು ಬಸವಣ್ಣನವರ ವಿಚಾರಗಳನ್ನು ತುಂಬುವ ಕೆಲಸವಾಗುತ್ತಿಲ್ಲ

ಹೊಸಪೇಟೆ

ಬಸವ ಜಯಂತಿಯನ್ನು ಕರ್ನಾಟಕದಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೆಲವು ಕಡೆಗೆ ಬಸವ ಜಯಂತಿಯ ಆಚರಣೆಯನ್ನು ಉತ್ಸುಕತೆಯಿಂದ ಆಚರಿಸಿದರೆ, ಕೆಲವು ಕಡೆಗೆ ಬೇಜವಾಬ್ದಾರಿಯಿಂದ ಆಚರಿಸಿದ್ದುದು ಕಂಡು ಬಂದಿದ್ದು ಬೇಸರದ ಸಂಗತಿ.

ಬಸವಣ್ಣ ಹಾಗೂ ಶರಣರು ತಮ್ಮ ವಚನಗಳ ಮೂಲಕ ವ್ಯಕ್ತಪಡಿಸಿದ ಆಶಯವೇ ಬೇರೆ, ಇಲ್ಲಿ ಬಸವಣ್ಣನ ಅನುಯಾಯಿಗಳೆಂದುಕೊಂಡವರು ಆಚರಿಸಿದ ರೀತಿಯೇ ಬೇರೆ ಇದೆ. ಬಸವಣ್ಣ ತಮ್ಮ ಜೀವನದುದ್ದಕ್ಕೂ ಸಮಾಜದಲ್ಲಿದ್ದ ಯಾವ ಮೌಡ್ಯ, ಕಂದಾಚಾರಗಳನ್ನು ವಿರೋಧಿಸಿದರೋ ಅದೇ ಮೌಢ್ಯವನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತಿರುವುದು ಕಂಡುಬಂದಿದ್ದು ದುರಂತ.

ಬಸವಾದಿ ಶರಣರ ಹೆಸರಿನಲ್ಲಿ ಅವರ ಜಯಂತಿಯ ನೆಪದಲ್ಲಿ ವಚನಗಳನ್ನು ಪ್ರಚಾರ ಮಾಡಬೇಕಾದವರು ಆಧುನಿಕ ಕಾಲದ ಸೌಲಭ್ಯವನ್ನು ಬಳಸಿಕೊಂಡು ಅಶ್ಲೀಲ, ಅಸಂಬದ್ಧ, ಕರ್ಕಶ ಧ್ವನಿವರ್ಧಕಗಳ ವಿಜೃಂಭಣೆಯಿಂದ ಕುಣಿದು, ಕುಪ್ಪಳಿಸಿ, ಕಿರುಚಿ ಮೆರವಣಿಗೆ ನಡೆಸಿದ್ದು ವಿಪರ್ಯಾಸವೇ ಸರಿ. ಅಷ್ಟೇ ಅಲ್ಲದೆ ಬಸವಾದಿ ಶರಣರ ಜೀವನದ ಮಾದರಿಯನ್ನು ಅಪಮಾನಿಸಿ ನಾಗರೀಕ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗಿದೆ. ಶರಣರ ವಿಚಾರಗಳ ಪರಿವೇ ಇಲ್ಲದಂತೆ ಆಚರಣೆ ಮಾಡುವುದು ಯಾವ ಕಾರಣಕ್ಕೆ ಅಂತ ತಿಳಿಯುತ್ತಿಲ್ಲ.

ಇನ್ನೂ ಅನೇಕ ಕಡೆಗಳಲ್ಲಿ ವಿಪರೀತ ಪೂಜೆ, ಪುನಸ್ಕಾರಗಳನ್ನು ಕೈಗೊಂಡರೆ, ನಂದಿ ವಿಗ್ರಹಗಳಿಗೆ ಅಭಿಷೇಕ, ಪೂಜೆಗಳನ್ನು ಮಾಡಿ ಬಸವಣ್ಣನವರನ್ನು ನಂದಿಗೆ, ಎತ್ತಿಗೆ ಹೋಲಿಸುವ ಅಜ್ಞಾನವನ್ನು ಪ್ರದರ್ಶನ ಮಾಡುವ ಪ್ರಯತ್ನವು ನಡೆಯಿತು.

ಇನ್ನೂ ಸರ್ವಕಾಲಕ್ಕೆ ಗೌರವಿಸಲ್ಪಡುವ, ರೈತರ ಜೀವನಾಡಿ ಎತ್ತುಗಳ ಪೂಜೆ ಮಾಡಿ, ಹೂವಿನಿಂದ ಅಲಂಕಾರಮಾಡಿ ಬೀದಿಯಲ್ಲಿ ಮೆರವಣಿಗೆ ಮಾಡಿ ಕ್ರಾಂತಿಕಾರಿ ಬಸವಣ್ಣನವರನ್ನು ಮರೆಸುವ ಅಥವಾ ನಂದಿ ಮತ್ತು ಮಹಾತ್ಮ ಬಸವಣ್ಣ ಒಂದೇ ಎಂದು ನಂಬಿಸುವ ಯತ್ನ ವ್ಯವಸ್ಥಿತವಾಗಿ ನಡೆದದ್ದೂ ನಿಜ.

ಶರಣರ ಆದರ್ಶಗಳನ್ನು ಗಾಳಿಗೆ ತೂರಿ ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರ ತಲೆಯ ಮೇಲೆ ಕುಂಭ, ಕಳಶಗಳನ್ನು ಹೊರಿಸಿ ತನ್ನ ಅಟ್ಟಹಾಸವನ್ನು ಹಾಗೆ ಮುಂದುವರಿಸುತ್ತಿದೆಯೇ ವಿನಃ ಶರಣರ ಮುಖ್ಯ ಆದರ್ಶವಾದ ‘ಶಿರವೇ ಹೊನ್ನ ಕಳಶವಯ್ಯಾ’ ಎಂಬ ವಿಚಾರವಂತಿಕೆಯನ್ನು ಬಿತ್ತಿ ಬೆಳೆಸುತ್ತಿಲ್ಲ. ಸ್ತ್ರೀ ಅಸಮಾನತೆಯ ಸಂಕೇತವಾದ ಕುಂಭ ಹೊರಿಸಿ ಮಹಿಳೆಯರ ತಲೆಯಲ್ಲಿ ಶಾಶ್ವತವಾಗಿ ಮೌಡ್ಯವನ್ನು ಗಟ್ಟಿಗೊಳಿಸುವ ಕೆಲಸವು ನಡೆದಿದೆ.

ಅನೇಕ ಕಡೆಗಳಲ್ಲಿ ಅಕ್ಕನ ಬಳಗ, ಅಣ್ಣನ ಬಳಗಗಳು ಈ ಎಲ್ಲಾ ಸೂಕ್ಷ್ಮಗಳನ್ನು ಮರೆತು ಹೆಜ್ಜೆ ಹಾಕುವುದು, ಹಾಕಿದ್ದುದು ಆಶ್ಚರ್ಯದ ಸಂಗತಿಯಾಗಿದೆ. ಇಂತಹ ಅವೈಚಾರಿಕತೆಯನ್ನು ಯಾವ ಮಹಿಳೆಯರೂ ಖಂಡಿಸಲಿಲ್ಲ. ಯಾರೂ ಖಂಡಿಸಲಿಲ್ಲ. ಸಂಘಟನೆಗಳು ಹೊರಿಸಿದ ಕುಂಭಗಳನ್ನು ಹೊತ್ತು ಸಂಭ್ರಮಿಸುವುದರಲ್ಲಿ ಸಂತಸಪಟ್ಟುಕೊಳ್ಳುವುದು ಮುಂದುವರೆದು ಬಸವಣ್ಣ ಮತ್ತು ಶರಣರ ವಿಚಾರಗಳ ಗೈರು ಅವರಲ್ಲಿ ಇರುವುದು ಎದ್ದು ಕಾಣುತ್ತಿತ್ತು. ಮಹಿಳೆಯರ ತಲೆಗೆ ಕೇವಲ ಕುಂಭ, ಕಳಸಗಳನ್ನು ಹೊರಿಸುವ ಕೆಲಸವಾಗಿದೆ ಹೊರತು ಬಸವಣ್ಣನವರ ವಿಚಾರಗಳನ್ನು, ಸಮಾನತೆಯ ಆಶಯಗಳನ್ನು ತುಂಬಿ ಕಳಿಸಲು ಸಾಧ್ಯವಾಗಿಲ್ಲ.

ಇಂತಹ ಆಚರಣೆಗಳಲ್ಲಿ ಶರಣರ ಹೆಸರಿನ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು, ಮಠಗಳು, ಮಠಾಧೀಶರು ಪಾಲ್ಗೊಂಡು ವಿಜೃಂಭಿಸಿದರೇ ಹೊರತು ವೈಚಾರಿಕ ನೆಲೆಗಟ್ಟಿನಲ್ಲಿ ಬಸವಾದಿ ಶರಣರ ಜಯಂತಿಗಳನ್ನು ಆಚರಿಸಲು ಉತ್ಸುಕತೆಯನ್ನು ತೋರುತ್ತಿಲ್ಲ ಅಥವಾ ಅವರಾರಿಗೂ ಬೇಕಾಗಿಲ್ಲವೋ ಏನೋ? ಹಾಗಾದರೆ ಜಯಂತಿ ಎಂದರೇನು? ಅದರ ಸ್ವರೂಪವೇನು? ನಾವೆಲ್ಲ ಯೋಚಿಸಬೇಕಲ್ಲವೇ? ಬಸವಣ್ಣನವರ, ಶರಣರ ಜಯಂತಿಯಂದು ಅವರು ಬದುಕಿನುದ್ದಕ್ಕೂ ವಿರೋಧಿಸಿದ ವಿಚಾರಗಳನ್ನು ತಿರಸ್ಕರಿಸಿ, ಹೊಸದಾಗಿ ಕಟ್ಟಿಕೊಟ್ಟ ಸಿದ್ದಾಂತಗಳನ್ನು, ತತ್ವವನ್ನು ಅವರ ಜಯಂತಿಯ ನೆಪದಲ್ಲಿ ಸ್ಮರಿಸಿಕೊಳ್ಳುವುದು, ಪ್ರಚಾರ ಮಾಡುವುದು, ಬದುಕಿಗೆ ಅಳವಡಿಸಿಕೊಳ್ಳುವುದು, ಜನಸಾಮಾನ್ಯರ ಬದುಕಿಗೆ ಪರಿಚಯಿಸಿ ನಡೆಗೆ, ನುಡಿಗೆ ಅಳವಡಿಸುವುದಲ್ಲವೇ? ಮೌಡ್ಯ ವಿರೋಧಿತನ ತೋರದಿದ್ದರೆ ಶರಣರು ಹೇಗೆ ಜನಸಾಮಾನ್ಯರ ಬದುಕಿಗೆ ದೊರಕುವರು? ಅವರ ಆಶಯಗಳು ಹೇಗೆ ಜೀವನ ಮೌಲ್ಯವಾಗಿ ನೆಲೆಗೊಳ್ಳುವವು?

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
2 Comments
  • This is Basava philosophy. Superstition is against Basava theory. Dr. N. Dande has done good thing by bringing about the distinction between what is true Basava Jayanti and what is fake Basava Jayanti.

  • ಸನ್ಮಾನ್ಯ್ ಡಾಕ್ಟರ್ ದಂಡೆ ಅವರ ವಿಚಾರಗಳನ್ನು ನಾನು ಸಹಮತಿಸುತ್ತೇನೆ🙏🌹🌹

Leave a Reply

Your email address will not be published. Required fields are marked *