ಅಕ್ಕ ಬಯಲಾಗಿ ಒಂದು ವರ್ಷ

ಸರಕಾರಿ ಹುದ್ದೆ ತೊರೆದು ಸೈಕಲ್ ಮೇಲೆ ಬಸವ ತತ್ವ ಪ್ರಚಾರ ಶುರು ಮಾಡಿದ ಮಹಾನ್ ಚೇತನ

ಬೀದರ

ಅಕ್ಕ ಎಂದಾಕ್ಷಣ ನೆನಪಾಗುವುದು ಹನ್ನೆರಡನೆಯ ಶತಮಾನದ ಅಕ್ಕ ಮಹಾದೇವಿ. ನಂತರ ಈ ಶತಮಾನದ ಅಕ್ಕ ಅನ್ನಪೂರ್ಣತಾಯಿ. ಶರಣರ ಹೋಲಿಕೆ ಸಮಂಜಸವಲ್ಲ. ಆದರೂ, ಮಹಾದೇವಿಯಕ್ಕನಂತೆ ಧೈರ್ಯ, ಸಾಹಸ, ಆತ್ಮವಿಶ್ವಾಸದ ಪ್ರತೀಕ ಅಕ್ಕ ಅನ್ನಪೂರ್ಣತಾಯಿ. ಬಸವ ತತ್ವ ಅನುಷ್ಠಾನ, ಮಹಿಳಾ ಸಬಲೀಕರಣದಲ್ಲಿ ಅವರ ಪಾತ್ರ ಹಿರಿದಾಗಿದೆ.

ಅಪ್ರತಿಮ ಸಾಧಕನ ಸಾಧನೆಯೆಂದರೆ ಆತ ನಾಡಿಗೆ ನೀಡುವ ಕನಸು, ಗುರಿ ಮತ್ತು ತ್ಯಾಗ. ಅಕ್ಕನವರು ಪ್ರತಿಯೊಬ್ಬ ಮನುಷ್ಯನೂ ಶೋಷಣಾ ಮುಕ್ತನಾಗಬೇಕು. ಮೂಢಾಚಾರ, ಕಂದಾಚಾರಗಳಿಂದ ಹೊರ ಬರಬೇಕು. ವೈಚಾರಿಕವಾಗಿ ಶ್ರೀಮಂತನಾಗಬೇಕು ಎಂದು ಕನಸು ಕಂಡವರು. ಅಕ್ಕನವರ ಹೆಸರು ಸಮಾಜಕ್ಕೆ ಸ್ಫೂರ್ತಿಯ ಮಿಂಚು.

ಅಕ್ಕ ಅನ್ನಪೂರ್ಣತಾಯಿಯವರನ್ನು ನೆನೆಸಿಕೊಂಡರೆ ಸಾಕು ಏನೋ ಒಂದು ವಚನ ಮಿಂಚಿನ ಸಂಚಾರ!

ಕಿರಿಯರಾದಡೇನು ಹಿರಿಯರಾದಡೇನು ಅರಿವಿಂಗೆ ಹಿರಿದು ಕಿರಿದುಂಟೆ ಎಂಬಂತೆ ಅಕ್ಕ ಅನ್ನಪೂರ್ಣತಾಯಿಯವರು ಕಿರಿಯ ವಯಸ್ಸಿನಲ್ಲೇ ವೈರಾಗ್ಯ ನಿಲವು ತಾಳಿದರು. ಬಸವಾದಿ ಶರಣರ ಅನುಭಾವ ಪಥಕ್ಕೆ ಮಾರು ಹೋಗಿ ಬಸವ ತತ್ವ ಪ್ರಸಾರಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು. ಹದಿನೆಂಟರ ಹರೆಯದಲ್ಲೇ ಬಸವ ತತ್ವ ಪ್ರಚಾರ, ಬಸವ ಭಕ್ತರ ಸಂಘಟನೆಯಲ್ಲಿ ತೊಡಗಿಸಿಕೊಂಡರು.

ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಮಾತೆ ಮಹಾದೇವಿಯವರ ಅಚ್ಚಳಿಯದ ಪ್ರಭಾವದಿಂದ ಹಳ್ಳಿ ಹಳ್ಳಿಗಳಿಗೆ ಸಂಚರಿಸಿದರು. ಆರಂಭದ ದಿನಗಳಲ್ಲಿ ಈ ಕಾರ್ಯ ತುಂಬಾ ಕಷ್ಟಕರವಾಗಿತ್ತು. ಏನೇನೂ ಮೂಲಸೌಕರ್ಯಗಳು ಇರಲಿಲ್ಲ. ಸೈಕಲ್ ಮೇಲೆ ಪ್ರಯಾಣಿಸಿ ಬಸವ ತತ್ವದ ಪ್ರಾರ್ಥನೆ, ಪ್ರವಚನಗಳ ಸಭೆ ನಡೆಸಿ ತಡರಾತ್ರಿ ಮನೆ ಸೇರಬೇಕಿತ್ತು. ಅರಿವಿಲ್ಲದ ಜನತೆಗೆ ಶರಣರ ಪ್ರಗತಿಪರ ವಿಚಾರಗಳನ್ನು ತಿಳಿಸಿ, ಬಸವ ತತ್ವದತ್ತ ಸೆಳೆಯುವುದು ಸುಲಭವೇನೂ ಆಗಿರಲಿಲ್ಲ. ಆದರೆ, ಬತ್ತದ ಉತ್ಸಾಹ, ನಿರಂತರ ಪ್ರವಚನಗೈಯುತ್ತಾ ಜನಮನ ಗೆದ್ದರು.

ಒಂದೆರಡು ವರ್ಷಗಳಲ್ಲೇ ಅನ್ನಪೂರ್ಣ ಊರೂರುಗಳಲ್ಲಿ ಮನೆ ಮಾತಾದರು. ಜನ ಮನದಲ್ಲಿ ‘ಅಕ್ಕ’ನಾಗಿ ನೆಲೆ ನಿಂತರು. ಅಪೂರ್ವ ವಾಗ್ಮಿಗಳೆನಿಸಿದರು. ಸಮಯ ಸಾಲದೆನಿಸಿದಾಗ ಕೈತುಂಬಾ ಸಂಬಳ ತರುತ್ತಿದ್ದ ಸರ್ಕಾರಿ ಶಿಕ್ಷಕ ಹುದ್ದೆಗೆ ತಿಲಾಂಜಲಿ ನೀಡಿ, ಜೀವನವನ್ನು ಬಸವ ತತ್ವಕ್ಕೆ ಮುಡುಪಾಗಿಟ್ಟರು.

ಬಸವ ಭೂಮಿ ಬೀದರನ ಹಾರೂರಗೇರಿಯಲ್ಲಿ ಜನಿಸಿ, ಬೀದರದಲ್ಲಿಯೇ ಬಸವಗಿರಿ, ಬಸವ ಸೇವಾ ಪ್ರತಿಷ್ಠಾನಗಳನ್ನು ಹುಟ್ಟು ಹಾಕಿ, ಪ್ರವಚನ ಮತ್ತು ಸಾಹಿತ್ಯದ ಮೂಲಕ ಜ್ಞಾನ ಧಾರೆಯೆರೆಯುತ್ತಾ ಜನ ಜಾಗೃತಿಗೈದರು. ಅಕ್ಕನವರ ಸಂಸ್ಥೆಗಳು ಕೆಲವೇ ವರ್ಷಗಳಲ್ಲಿ ಬಸವ ತತ್ವದ ಪ್ರಯೋಗಶಾಲೆ ಎಂದು ಶರಣ ಸಂಕುಲದಿಂದ ಗುರುತಿಸಲ್ಪಟ್ಟದ್ದು ಅಕ್ಕನವರ ಸಾಧನೆ ಹಾಗೂ ಪ್ರತಿಭೆಗೆ ಸಾಕ್ಷಿ.

ವಚನ ಪಠಣ ಅಭಿಯಾನ ಆರಂಭಿಸಿ ಮನೆ-ಮನೆಗಳಲ್ಲೂ ವಚನಗಳು ಓದುವಂತೆ ಮಾಡಿದರು. ದಿನಕ್ಕೆ ಐದು ವಚನಗಳ ಓದು ಕಡ್ಡಾಯಗೊಳಿಸಿದರು. ಅಕ್ಕನವರ ಈ ಅಭಿಯಾನದಿಂದ ಪ್ರಭಾವಿತರಾದ ಜಿಲ್ಲೆಯ ಅಂದಿನ ಮಂತ್ರಿ ಮಹೋದಯರು ಸಹ ದೊಡ್ಡ ದೊಡ್ಡ ಸಭೆ, ಸಮಾರಂಭಗಳಲ್ಲಿ ದಿನಾಲು ಐದು ವಚನ ಓದಿದರೆ, ಬಿಪಿ, ಶುಗರ್ ಬರದೆಂದು ಹೇಳತೊಡಗಿ, ಹತ್ತಾರು ಸಾವಿರ ವಚನ ಗ್ರಂಥಗಳನ್ನು ಮುದ್ರಿಸಿ ಹಂಚಿದ್ದು ಅಕ್ಕನವರ ಪ್ರೇರಣೆ ಯಾವ ಮಟ್ಟದೆಂಬುದ್ದಕ್ಕೆ ನಿದರ್ಶನ.

ಬಸವಾದಿ ಶರಣರ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಯುವ ಉದ್ದೇಶದಿಂದ ಶರಣ ಉದ್ಯಾನ, ಬಸವಗಿರಿ, ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾ ಮಠ, ನೀಲಮ್ಮನ ಬಳಗ, ಲಿಂಗಾಯತ ಸೇವಾ ದಳ ಸಂಸ್ಥೆಗಳನ್ನು ಸ್ಥಾಪಿಸಿದರು. ವಚನಗಳ ಮಹತ್ವ ಸಾರಲು ವಚನಗಳಿಗೆ ಪರಮೋಚ್ಚ ಗೌರವ ಸಲ್ಲಬೇಕೆಂದು ವಚನ ವಿಜಯೋತ್ಸವ, ವಚನಗಳಿಗೆ ಪಟ್ಟಗಟ್ಟುವುದು, ಸಾಮೂಹಿಕ ವಚನ ಪಾರಾಯಣ, ವಚನಗಳನ್ನು ತಲೆ ಮೇಲೆ ಹೊತ್ತು ಮೆರೆಸುವುದು ಮೊದಲಾದ ನವ ನವೀನ ಪರಂಪರೆ ಹುಟ್ಟು ಹಾಕಿದರು.

ನಿರಂತರ ವಚನ ಪಠಣಕ್ಕೆ ‘ಗುರುವಚನ ಪರುಷಕಟ್ಟೆ’ ಎಂಬ ತಾತ್ವಿಕ ಶ್ರದ್ಧಾಕೇಂದ್ರ ಆರಂಭಿಸಿದರು. ಶಿವಯೋಗ ಸಾಧಕರ ಕೂಟದ ಮೂಲಕ ಜನರನ್ನು ಶಿವಯೋಗ ಸಾಧನೆಯಲ್ಲಿ ತೊಡಗಿಸಿದರು.

ಈ ನಾಡು ಕಂಡ ಅಪೂರ್ವ ಪ್ರವಚನಕಾರರು ಅಕ್ಕ ಅನ್ನಪೂರ್ಣತಾಯಿ. ಎಲ್‍ಕೆಜಿ ಟು ಪಿಜಿ ಎನ್ನುವಂತೆ ಎಲ್ಲ ವರ್ಗದ ಜನರನ್ನು ತಣಿಸುವ ಪ್ರವಚನಕಾರರಾಗಿದ್ದರು. ಅವರ ತಿಂಗಳುಗಟ್ಟಲೆ ಪ್ರವಚನಕ್ಕೆ ಜನ ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬರುತ್ತಿತ್ತು. ಅಕ್ಕಮಹಾದೇವಿ ಅವರ ಒಂದು ವಚನದ ಮೇಲೆ 116 ದಿನ ಪ್ರವಚನ ಮಾಡಿದ್ದು ಸಾರ್ವಕಾಲಿಕ ದಾಖಲೆ. ನಾಡಿನುದ್ದಕ್ಕೂ ಬಸವ ತತ್ವ ಪ್ರವಚನ ಮಾಡಿದ್ದಲ್ಲದೆ, ವಿದೇಶಗಳಲ್ಲೂ ಪ್ರವಚನ ಮಾಡಿ ಸೈ ಎನಿಸಿಕೊಂಡಿದ್ದರು.

ಶತ ಶತಮಾನಗಳುದ್ದಕ್ಕೂ ಲಿಂಗಾಯತ ಧರ್ಮ ಗ್ರಂಥದ ಜಿಜ್ಞಾಸೆ, ಚರ್ಚೆಗಳು ನಡೆದರೂ ಯಾವುದೇ ಸ್ಪಷ್ಟ ನಿಲುವು ತಳೆಯದಿರುವ ಈ ಸಮಾಜಕ್ಕೆ ‘ಗುರುವಚನ’ವೆಂಬ ಅಧಿಕೃತ ಲಿಂಗಾಯತ ಧರ್ಮ ಗ್ರಂಥ ಸಂಪಾದಿಸಿ ಪ್ರಕಟಿಸಿದರು. ಇದು ಅಕ್ಕನವರ ವಿಶೇಷ ಕೊಡುಗೆ. ಬಸವಣ್ಣನವರ ವಚನಗಳು, ಚನ್ನಬಸವಣ್ಣನವರ ಕರಣ ಹಸಿಗೆ, ಪ್ರಭುದೇವರ ಪದಮಂತ್ರಗೋಪ್ಯಗಳನ್ನೊಳಗೊಂಡ ಈ ಗ್ರಂಥ ನೀಡಿ ಸಮಾಜದ ಋಣ ತೀರಿಸಿದರು.

ಬಸವ ಸಂಪದ ಪ್ರಕಾಶನದ ಮೂಲಕ ಸಾವಿರಾರು ಗ್ರಂಥಗಳನ್ನು ಪ್ರಕಟಿಸಿ ಶರಣ ಲೋಕಕ್ಕೆ ಸಮರ್ಪಿಸಿದರು. ಅಕ್ಕನವರ ನಾಲ್ಕು ದಶಕಗಳ ಸಾರ್ಥಕ ಕಾರ್ಯಗಳನ್ನು ನೆನೆಯಲು ಪುಟಗಳು ಸಾಲವು. ಅಕ್ಕನವರಿಗೆ ಸಂದ ಪದವಿ-ಪುರಸ್ಕಾರಗಳಿಗೆ ಲೆಕ್ಕವಿಲ್ಲ.

ಅನಿರೀಕ್ಷಿತವಾಗಿ ಅನಾರೋಗ್ಯದಿಂದ ಅಕ್ಕನವರು ಲಿಂಗೈಕ್ಯರಾಗಿ 2025 ರ ಮೇ 23ಕ್ಕೆ ಒಂದು ವರ್ಷವಾಗುತ್ತಿದೆ. ಅಕ್ಕನವರಿಲ್ಲದ ಶರಣ ಲೋಕ ಬಡವಾಗಿದೆ. ತತ್ವ ಪ್ರಸಾರ ಕ್ಷೇತ್ರದಲ್ಲಿ ಶೂನ್ಯ ಆವರಿಸಿದೆ. ಅಕ್ಕನವರ ಸ್ಮರಣೋತ್ಸವದ ನಿಮಿತ್ತ ನನ್ನ ಕೆಲವು ನುಡಿಗಳನ್ನು ಅವರ ಚರಣಕ್ಕೆ ಸಮರ್ಪಿಸುತ್ತಲಿರುವೆ. ಮತ್ತೆ ಹುಟ್ಟಿ ಬನ್ನಿ ಅಕ್ಕಾ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
8 Comments
  • ಅಜ್ಜನವರ ಅಭೂತಪೂರ್ವ ಸಾಧನೆಗೆ ತುಂಬು ಹೃದಯದ ಅಭಿನಂದೆಗಳು. ಅವರ ಪುಣ್ಯ ಸ್ಮರಣೆ ಅರ್ಥಪೂರ್ಣ ಆಚರಣೆಗೆ ಬಸವಣ್ಣನವರು ಆಶೀರ್ವದಿಸಲಿ. ಶುಭಾಶಯಗಳೊಂದಿಗೆ. ಶರಣು ಶರಣಾರ್ಥಿ.

  • ಮಾತೆ ಅನ್ನಪೂರ್ಣ ಅಕ್ಕನವರನ್ನು ಕಳೆದುಕೊಂಡು ಬಸವ ಬಳಗ ಅನಾಥವಾಗಿದೆ

    • ಶರಣೆ ಅಣ್ಣ ಪೂರ್ಣ ತಾಯಿಯವರು ಲಿಂಗೈಕ್ಯರಾಗಿ ಒಂದು ವರ್ಷ ಕಳೆದಿದೆ ಅವರ ನೆನಪು ಸದಾ ಐಸ್ಮರಣೆಯ ಅವರು ಮಾಡಿದ ಪ್ರವಚನ ಬಸವ ತತ್ವ ಪ್ರಚಾರ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ ಗುರು ಬಸವ ತಂದೆಯವರು ಅವರಿಗೆ ಲಿಂಗೈಕ್ಯ ಭಾಗ್ಯವನ್ನು ಕೊಟ್ಟು ಕರುಣಿಸಲಿ ಶರಣು ಶರಣಾರ್ಥಿಗಳು

  • ಮೊದಲ ಪದದಿಮನದ ಕೊನೆಯ ಪಧವರೆಗೆ ಓದುಗರನ್ನು ಬಿಡದೇ ಕೊಂಡೊಯ್ಯುವ ಬರಹ. ಅಕ್ಕನವರ ಜೀವನವನ್ನು ಸರಳ ರೀತಿಯಲ್ಲಿ ಮನದಟ್ಟು ಮಾಡಿರುವಿರಿ. ಶರಣು ಶರಣಾರ್ಥಿಗಳು

  • ಅಕ್ಕನವರ ಕುರಿತು ಅರ್ಥಪೂರ್ಣ ಬರಹ. ಮರೆಯಲಾಗದ ವ್ಯಕ್ತಿತ್ವ ಅಕ್ಕನವರದು.
    ಆ ತಾಯಿಯ ಪ್ರೀತಿ ಮಮತೆ ವಾತ್ಸಲ್ಯಕ್ಕೆ ಸಾಟಿ ಇಲ್ಲಾ.
    ಶರಣು ಶರಣಾರ್ಥಿಗಳು🙏

Leave a Reply

Your email address will not be published. Required fields are marked *