ಹೊಸಪೇಟೆ
ಇಲಕಲ್ಲಿನ ರಂಗಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘದ ಕಲಾವಿದರು ದಿ. ಫಕೀರಪ್ಪ ವರವಿ ವಿರಚಿತ ಮಹಾಂತೇಶ ಗಜೇಂದ್ರಗಡ ಅವರ ನಿರ್ದೇಶನದ ‘ಮಾಯಾ ಮದಮರ್ಧನ ಅಲ್ಲಮಪ್ರಭು’ ನಾಟಕವನ್ನು ಅರ್ಥಪೂರ್ಣವಾಗಿ ಅಭಿನಯಿಸಿದರು.
ನಗರದ ಪಂಪ ಕಲಾಮಂದಿರದಲ್ಲಿ ರವಿವಾರ ನಡೆದ ನಾಟಕ ಪ್ರಭುಲಿಂಗ ಲೀಲೆಯ ನುಡಿಯಿಂದ ಆರಂಭವಾಯಿತು. ರಾಜಕುಮಾರಿ ಮಾಯಾದೇವಿ ಮದುಕೇಶ್ವರ ನೃತ್ಯ ಸೇವೆ ಮಾಡುವ ಸಂದರ್ಭದಲ್ಲಿ ಅಲ್ಲಮನ ಮದ್ದಳಿಯ ನಾದ ನೀನಾದಕ್ಕೆ ಬೆರಗಾಗಿ ಮನಸೋಲುತ್ತಾಳೆ.

ಆದರೆ ಮಾಯಾದೇವಿಯ ಸೌಂದರ್ಯದ ಅಹಂಕಾರವನ್ನು ಅಲ್ಲಮನು ತನ್ನ ಅದ್ಭುತವಾದ ಜ್ಞಾನದಿಂದ ಹೋಗಲಾಡಿಸುವ ಸಂದರ್ಭದಲ್ಲಿ ಅವರಿಬ್ಬರ ನಡುವೆ ನಡೆಯುವ ಚರ್ಚೆ ಪ್ರೇಕ್ಷಕರ ಗಮನ ಸೆಳೆಯಿತು.
ಅಲ್ಲಮ ಅನಿಮಿಷ ಯೋಗಿಯಿಂದ ಆತ್ಮಜ್ಞಾನವನ್ನು ಪಡೆದು ನಂತರ ಶಿವಯೋಗಿ ಸಿದ್ದರಾಮರಲ್ಲಿದ್ದ ಅಹಂಕಾರವನ್ನು ಮಣಿಸಿ ಕಲ್ಯಾಣ ಪಟ್ಟಣಕ್ಕೆ ಕರೆದುಕೊಂಡು ಹೋಗಿ ಬಸವೇಶ್ವರರ ದರ್ಶನ ಮಾಡಿದರು.
ಬಸವೇಶ್ವರರ ಚಳುವಳಿಗೆ ಅಲ್ಲಮನು ಕೈಜೋಡಿಸಿ ಅನುಭವ ಮಂಟಪದ ಮೊದಲ ಅಧ್ಯಕ್ಷರಾಗಿ ಮಡಿವಾಳ ಮಾಚಯ್ಯ, ಚನ್ನಬಸವಣ್ಣ, ಮುಕ್ತಾಯಕ್ಕ, ಇತರೆ ಶರಣರ ಒಡಗೂಡಿ ವಚನಗಳನ್ನು ರಚನೆ ಮಾಡುವ ಸಂದರ್ಭದಲ್ಲಿ ಅಕ್ಕಮಹಾದೇವಿಯ ಆಗಮನ ಪ್ರೇಕ್ಷಕರ ಕಣ್ಮನವನ್ನು ಸೆಳೆಯಿತು. ಕಲಾವಿದರ ಕಲಾ ನೈಪುಣ್ಯತೆಗೆ ಸರ್ವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಅಲ್ಲಮನ ಘನ ವ್ಯಕ್ತಿತ್ವ, ಬಸವೇಶ್ವರರ ಸಾಮಾಜಿಕ ಕಾಳಜಿ, ಚನ್ನಬಸವಣ್ಣನವರ ಅನುಭವ ನುಡಿ, ಮುಕ್ತಾಯಕ್ಕನ ನೈಜ ಭಕ್ತಿ, ಮಹಾದೇವಿಯ ಸತ್ ಸಂಕಲ್ಪ, ಮಡಿವಾಳ ಮಾಚಿದೇವರ ವೀರ ಗಣಾಚಾರಿ ವ್ಯಕ್ತಿತ್ವ, ಸಿದ್ದರಾಮನ ಸಾಮಾಜಿಕ ಸೇವಾಗುಣಗಳಿಗೆ ಜೀವ ತುಂಬಿ ಕಲಾವಿದರು 12ನೇ ಶತಮಾನದ ಅನುಭವ ಮಂಟಪವನ್ನು ನಿರ್ಮಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಂಗ ಕಲಾವಿದ ಗಾದಿಗನೂರು ಹಾಲಪ್ಪನವರು ರಂಗ ಕಲೆಯು ಜೀವಂತ ಕಲೆಯಾಗಿದೆ. ಈ ಕಲೆ ಜನರಲ್ಲಿ ಸತ್ಕಾರ್ಯ, ಸಂಸ್ಕಾರ, ಸದ್ಗುಣಗಳನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದ್ದು, ಅದನ್ನು ಬೆಳೆಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು ಎಂದು ಹೇಳಿದರು.
ಹಿರಿಯ ರಂಗ ಕಲಾವಿ ಮಾ.ಬಾ. ಸೋಮಣ್ಣ ಆಧುನಿಕ ದಿನಮಾನಗಳಲ್ಲಿ ರಂಗ ಕಲೆಯ ಬಗ್ಗೆ ಒಲವು ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ. ಸರ್ವರು ರಂಗ ಕಲೆಗೆ ಮಹತ್ವ ನೀಡಬೇಕೆಂದು ವಿನಂತಿಸಿಕೊಂಡರು.
ರಂಗಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘಕ್ಕೆ ಗಾದಿಗನೂರು ಹಾಲಪ್ಪ 5000, ಹೊಸಪೇಟೆ ನಗರದ ಬಸವ ಬಳಗದವರು 10000 ರೂ. ದೇಣಿಗೆಯನ್ನು ನೀಡಿದರು.

ಕಾರ್ಯಕ್ರಮದ ಸಾನಿಧ್ಯವನ್ನು ದರೂರಿನ ಕೊಟ್ಟೂರು ಸಂಸ್ಥಾನದ ಸಂಗಮೇಶ್ವರ ಶ್ರೀಗಳು ವಹಿಸಿದ್ದರು.
ರಂಗ ಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ರೇಷ್ಮಾ ಅಳಹುಂಡಿ, ಸಂಘದ ಇತರೆ ಕಲಾವಿದರು ಬಸವ ಬಳಗದ ಅಧ್ಯಕ್ಷರಾದ ಬಸವಕಿರಣ, ಉಪಾಧ್ಯಕ್ಷರಾದ ಮಧುರ ಚೆನ್ನ ಶಾಸ್ತ್ರಿ, ಹಾಗೆ ಮಾವಿನಹಳ್ಳಿ ಬಸವರಾಜ, ಮಹಾಬಲೇಶ್ವರ ರೆಡ್ಡಿ, ಪರಿಸರ ಸಂರಕ್ಷಣೆಯ ಸಮಿತಿಯ ಪದಾಧಿಕಾರಿಗಳು, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸೌಭಾಗ್ಯ ಲಕ್ಷ್ಮಿ, ಅಕ್ಕನ ಬಳಗದವರು, ನಗರದ ಇತರ ಸೇವಾ ಸಂಸ್ಥೆಗಳ ಸದಸ್ಯರು, ಹಂಪಾಪಟ್ಟಣದ ಶರಣಬಸವೇಶ್ವರ ಸೇವಾ ಟ್ರಸ್ಟಿನ ಎಚ್. ಶಿವಾನಂದ, ನಾಗರಾಜ್ ಗಂಟಿ, ಕೊಟ್ಟೂರು ಗೌಡ್ರು, ಬಡಿಗೇರ್ ಪಂಪಣ್ಣ, ಓ ಕೊಟ್ರೇಶ, ಹೊಸಪೇಟೆ ನಗರದ ಸಂಘ ಸಂಸ್ಥೆಯ ಸದಸ್ಯರು, ರಂಗ ಪ್ರೇಕ್ಷಕರು, ನಗರದ ನಾಗರಿಕ ಬಾಂಧವರು, ಸರ್ವರು ನಾಟಕವನ್ನು ನೋಡಿ ಪ್ರೋತ್ಸಾಹಿಸಿದರು.