ಸಾಣೇಹಳ್ಳಿ
ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದಲ್ಲಿ ರವಿವಾರ ನಡೆಯಿತು.
ದೀಕ್ಷೆ ನೀಡಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ‘ದೀಕ್ಷೆ’ ಎಂದರೆ ದೇವರ ಬಗ್ಗೆ ಇರುವಂಥ ಅಜ್ಞಾನವನ್ನು ಕಳೆದು ಸರಿಯಾದ ಜ್ಞಾನ ನೀಡುವುದು. ದೇವರ ಅನೇಕ ಹೆಸರುಗಳ ಹಿಂದೆ ಇರುವ ಶಕ್ತಿ ಒಂದೇ. ಅದೇ ದೇವರು, ಭಗವಂತ, ಚೈತನ್ಯ. ದೇವರು ಸರ್ವಜ್ಞ, ಸರ್ವಾಂತರ್ಯಾಮಿ, ಸರ್ವಶಕ್ತ. ದೇವರು ಸತ್, ಚಿತ್, ಆನಂದ, ನಿತ್ಯ, ಪರಿಪೂರ್ಣವಾದ ಲಕ್ಷಣಗಳನ್ನು ಹೊಂದಿರುತ್ತಾನೆ.

ದೇವರನ್ನು ಇಷ್ಟಲಿಂಗದ ರೂಪದಲ್ಲಿ ಕರಸ್ಥಳಕ್ಕೆ ತರುವುದೇ ಲಿಂಗದೀಕ್ಷೆ. ನಿಷ್ಠೆಯಿಂದ ಪೂಜಿಸಿದರೆ ಲಿಂಗವೇ ನಮಗೆ ಸರಿ-ತಪ್ಪು, ನೀತಿ-ಅನೀತಿಗಳು ಯಾವುವೆಂಬುದನ್ನು ತೋರುವುದು. ಪರಮ ಪತಿವ್ರತೆಗೆ ಗಂಡನೊಬ್ಬ ಎನ್ನುವಂತೆ ನಿಜ ಭಕ್ತನಿಗೆ ದೇವನೊಬ್ಬನೇ. ಪೂಜೆಗೆ ದೈಹಿಕ ಮತ್ತು ಮಾನಸಿಕ ಶುದ್ಧಿ ಮುಖ್ಯವಾದುದು. ಮನುಷ್ಯನ ಅಂಗಾಂಗಳಲ್ಲಿ ಯಾವುದೂ ಕನಿಷ್ಟವಲ್ಲ; ಎಲ್ಲವೂ ಶ್ರೇಷ್ಠವೇ.
ವಿಭೂತಿ ದುರ್ಗುಣಗಳನ್ನು ಸುಟ್ಟು ಹಾಕುವುದು. ವಿಧಿಲಿಖಿತವನ್ನು ಅಳಿಸಿ ಶಿವಲಿಖಿತವನ್ನು ಬರೆಯುವ ಸಾಮರ್ಥ್ಯ ವಿಭೂತಿಗೆ ಇದೆ. ದೀಕ್ಷೆಯನ್ನು ಪಡೆದು ನಿತ್ಯ ಪೂಜಿಸುತ್ತಿದ್ದರೆ ಮಾನಸಿಕವಾಗಿ ದೃಢತೆ ಹೊಂದಲು, ಅಂತರಂಗ-ಬಹಿರಂಗ ಶುದ್ದಿಯಾಗಲು ಸಾಧ್ಯವಿದೆ. ಲಿಂಗದೀಕ್ಷೆಯ ಮೂಲಕ ದೇವರ ಅರಿವಾದರೆ ಅವರು ದೇವರನ್ನು ಹುಡುಕಿಕೊಂಡು ಅನ್ಯ ಗುಡಿಗುಂಡಾರಗಳನ್ನು ಸುತ್ತುವುದಿಲ್ಲ. ತನ್ನ ತಾನರಿವುದೇ ಲಿಂಗಪೂಜೆಯ ಗುರಿ. ತನ್ನ ತಾನರಿಯವುದೇ ದೇವರನ್ನು ಅರಿಯುವ ಕ್ರಿಯೆ. ದೇವರು ಬೇರೆ ಎಲ್ಲೂ ಇಲ್ಲ; ತನ್ನೊಳಗೆ ಇದ್ದಾನೆಂದು ತಿಳಿದುಕೊಳ್ಳುವ ಮಾರ್ಗವೇ ಲಿಂಗಪೂಜೆ. ಇದರಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿ ದೊರೆತು ಬದುಕು ಕಳೆಗಟ್ಟುವುದು.

ಮನುಷ್ಯ ಒಳಗಣ್ಣನ್ನು ತೆರೆದುಕೊಳ್ಳಬೇಕು. ನಮ್ಮೊಳಗಡೆ ಒಂದು ಚೈತನ್ಯ ಇದೆ, ಬೆಳಕಿದೆ. ಇದರ ಪ್ರತಿರೂಪವಾಗಿ ಗುರುವಾದಂಥವರು ಇಷ್ಟಲಿಂಗವನ್ನು ಕರುಣಿಸುವರು. ಈಗ ನಿನ್ನಲ್ಲಿರುವಂಥ ಶಕ್ತಿ ಲಿಂಗರೂಪದಲ್ಲಿ ಹೊರಬರುವುದು. ಅದನ್ನು ನೋಡ್ತಾ ಸಾಕ್ಷಾತ್ಕಾರದ ಕಡೆ ಹೋಗುವುದೇ ಇಷ್ಟಲಿಂಗ ಪೂಜೆಯ ಉದ್ದೇಶ ಎಂದರು.
ಧಾರ್ಮಿಕ ವಿಧಿವಿಧಾನಗಳನ್ನು ಸಿರಿಮಠ, ನಂದೀಶ್ ನಡೆಸಿಕೊಟ್ಟರು.