ಕಲಬುರಗಿ

‘ನ್ಯಾಯನಿಷ್ಠುರಿ ಶರಣನಾರಿಗೂ ಅಂಜುವವನಲ್ಲ’ ಎಂಬ ಅಣ್ಣ ಬಸವಣ್ಣನವರ ವಚನದಂತೆ ತತ್ವನಿಷ್ಠರಾಗಿರುವ ಶಿವಶರಣಪ್ಪ ಎಸ್. ದೇಗಾಂವ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಆದರೆ ಸಮಾಜ ಸೇವೆಯಿಂದ ನಿವೃತ್ತರಾಗಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ ತಿಳಿಸಿದರು.
ಗೆಳೆಯರ ಬಳಗದ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಪ್ರಯುಕ್ತ, ಶಿವಶರಣಪ್ಪ ದೇಗಾಂವ ಅವರ ಅಭಿನಂದನ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಶಿವಶರಣಪ್ಪ ಅವರು ಕಾಯಕದಿಂದ ನಿವೃತ್ತಿಯಾಗಿರಬಹುದು. ಆದರೆ ಬಸವತತ್ವದಿಂದ ನಿವೃತ್ತಿ ಆಗಲಾರರು. ತತ್ವನಿಷ್ಠರಾಗಿರುವ ದೇಗಾಂವ ಅವರು ಸಮಾಜಮುಖಿ ವ್ಯಕ್ತಿಯಾಗಿದ್ದಾರೆ. ಎಲೆಮರೆಯ ಕಾಯಿಯಾಗಿ ಸಮಾಜಕ್ಕೆ ಬಸವ ಕೈಂಕರ್ಯ ಕೈಗೊಂಡ ದೇಗಾಂವ ಕೊಡುಗೆ ಅಪಾರ ಎಂದು ತಿಳಿಸಿದರು.

ಅತಿಥಿಗಳಾಗಿದ್ದ ರಾಷ್ಟ್ರೀಯ ಬಸವದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಗಾರ, ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ, ಬಸವಸೇವಾ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ರಾಜಶೇಖರ ಯಂಕಂಚಿ ಮಾತನಾಡಿ, ಶಿವಶರಣಪ್ಪ ದೇಗಾಂವ ಅವರು ಸಮಾಜದ ಆಸ್ತಿ. ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬದ್ಧ ಎನ್ನುವಂತಿದ್ದಾರೆ. ವೃತ್ತಿಯಿಂದ ಗುರುತಿಸಿಕೊಳ್ಳದೆ, ಸಮಾಜ ಸೇವೆಯಿಂದ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಇದೇ ವೇಳೆಯಲ್ಲಿ ಚೆನ್ನವೀರಪ್ಪ ಗುಡ್ಡಾ, ಬಿ.ಬಿ. ಪಾಟೀಲ, ಹಣಮಂತರಾಯ ಎಂ. ಬಿರಾದಾರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಪ್ರಗತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವಪರ ಮತ್ತು ಜನಪರವಾಗಿರುವ ಶಿವಶರಣಪ್ಪ ಅವರು ಪ್ರಾಮಾಣಿಕತೆ, ಬದ್ಧತೆ ಇರುವ ಒಬ್ಬ ನಿಷ್ಠಾವಂತ ವ್ಯಕ್ತಿ. ಬಸವತತ್ವಕ್ಕೆ ಚ್ಯುತಿ ಬಂದಾಗ ಅನೇಕ ಬಾರಿ ಗಣಾಚಾರ ತತ್ವ ಕೂಡ ಪ್ರದರ್ಶಿಸುವ ಪ್ರಗತಿಪರ ವಿಚಾರವುಳ್ಳ ಒಬ್ಬ ಸ್ನೇಹಜೀವಿಯಾಗಿದ್ದಾರೆ ಎಂದರು.
ಬಸವ ಬೆಳವಿ ಚರಂತೇಶ್ವರ ಮಠದ ಶರಣಬಸವ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ವೀರಶೈವ ಲಿಂಗಾಯತ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಲಿಂಗಪ್ಪ ಬಂಡಕ್, ಜಂಬಗಾ (ಬಿ) ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಶಿವಕುಮಾರ ಎಸ್. ಪಾಟೀಲ ವೇದಿಕೆಯಲ್ಲಿದ್ದರು.
ಹಣಮಂತ ಗುಡ್ಡಾ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ಕಲ್ಬುರ್ಗಿ, ಸಿದ್ಧರಾಮ ಹಂಚಿನಾಳ, ವೀರೇಶ ಮಾಲಿ ಪಾಟೀಲ, ಶಿವಶರಣಪ್ಪ ಕೋಳಾರ, ಕಲ್ಯಾಣಪ್ಪ ಪಾಟೀಲ, ಸಂಗಮೇಶ ನಾಗನಳ್ಳಿ ಇತರರಿದ್ದರು.